ಅವನ ಬೆವರ ಹನಿಯಲ್ಲಿ ಪುರುಷತ್ವದ ಕುರುಹಿತ್ತು
ಅವಳ ಕಣ್ಣೀರ ಕಥೆ ಆ ದಿಂಬಿಗೆ ಮಾತ್ರ ಗೊತ್ತಿತ್ತು

ದೇಹದ ಇಂಚಿಂಚೂ ಬಿಡದ ಹಾಗೆ ತಡಕಾಡಿ ಬಿಗಿದೆ
ಮೃಗಗಳ ಮಧ್ಯೆ ಮನುಷ್ಯಳಂತಾಗಿ ಪ್ರೀತಿಸಬೇಕಿತ್ತು

ಶವಗಳು ಶರಾಬಿನ ನಶೆಯಲಿ ಕೋಪವ ತಣಿಸುತ್ತಿವೆ
ಅವಳ ಕಣ್ಣೀರ ಹನಿಗಳಿಗೆ ಹರಾಜು ಇಡಬಾರದಿತ್ತು

ಸಂಬಂಧಗಳೆಲ್ಲ ಬಂಧನದಲ್ಲಿಟ್ಟು ಬಂಧಿಯಾಗಿಸಿದೆ
ಕತ್ತಲನ್ನೇ ಬೆಳಕೆಂದು ನಂಬಿ ಬಿಡುಗಡೆಯಾಗಬೇಕಿತ್ತು

ಮಾತಿನ ಸಂತೆಯಲ್ಲಿ ಸಿಕ್ಕ ಮೌನಕ್ಕೆ ಬೆಲೆ ಇಲ್ಲದಾಗಿದೆ
ಮೈ ಮರೆತ ಜಗದೊಳಗೆ ನಿಶಬ್ದವ ಹುಡುಕಬೇಕಿತ್ತು

ಬದುಕ ಬೆಂಕಿಯಲಿ ಸಿಕ್ಕು ಬೂದಿಯಾದವಳು ಕವಿತೆ
ನಿನ್ನ ನೀ ಭೇಟಿಯಾಗದೇ ನನ್ನನ್ನು ಸೇರಬಾರದಿತ್ತು.

✍️ಕವಿತಾ ಸಾಲಿಮಠ
ಬಾಗಲಕೋಟೆ