ಶ್ರಾವಣ ಬಂದಿದೆ
ಎಲ್ಲೆಲ್ಲೂ ಸಡಗರ ಸಂಭ್ರಮ ತಂದಿದೆ
ಸುರಿದ ಸೋನೆಯಿಂದ ಭುವಿ ಹಸಿರುಟ್ಟು ನಗುತಿದೆ

ಜನಮನದ ಉಲ್ಲಾಸಕೆ ನಾಗಪಂಚಮಿ ಮುನ್ನುಡಿ ಬರೆದಿದೆ
ನವ ವಧುಗಳ ತವರಿಗೆ ಕರೆಸಿದೆ

ಅರಳಿಟ್ಟು ತಂಬಿಟ್ಟು ಹುರಿಗಡಲೆ ಹಸಿಕಡಲೆ ಚಿಗಳೆಳ್ಳು,ಶೇಂಗಾ ಉಂಡೆ ನೈವೇದ್ಯ ನಾಗನಿಗೆ ಹಾಲನೆರೆಯುವ ಚಿತ್ರಣ ಕಂಡಿದೆ

ಮನೆ ಮನೆಯಲ್ಲಿ ಜೋಕಾಲಿ ತೂಗುತಿದೆ ಊರ ಗಿಡ-ಮರಗಳಲಿ ಜೋಕಾಲಿ ಜೀಕ್ಯಾಡಿವೆ

ಸಿಂಗಾರದ ಸಿರಿಜಡೆಗೆ ಹೂವು-ಹರಳ ಬಿಲ್ಲೆ ಗೊಂಡೆಯ ಇಳಿಬಿಟ್ಟು ಚಂದದ ಜರಿಯಂಚಿನ ಲಂಗ ದಾವಣಿ ತೊಟ್ಟು

ಕಿಲಕಿಲ ನಗುವ ಷೋಡಶಿ-ಕಿಶೋರರ ಸಂತಸಕೆ ಎಲ್ಲೆ ಎಲ್ಲುಂಟು
ಜೋಕಾಲಿ ಜೀಕುತ್ತ ಏರಿ ಇಳಿಯುತ್ತ ಉಂಡೆ-ಕೊಬ್ಬರಿ ಕಚ್ಚುವ ಸ್ಪರ್ಧೆ ಇರಲುಂಟು

ಜಪ-ತಪ ಆಚರಣೆ, ದೈವಿ ಉಪಾಸನೆ ಗಾಯನ ಭಜನೆ ಮಾಡಿವೆ ಮನೆ ಮನೆಗಳ ಶಿವ ಮಂದಿರ
ಲಕ್ಷ್ಮೀ-ಗೌರಿಯರ ಪೂಜೆ ಶ್ರಾವಣ ಪೂರ್ತಿ ಸಡಗರ

✍️ಶ್ರೀಮತಿ ರೇಖಾ ನಾಡಿಗೇರ
ಹುಬ್ಬಳ್ಳಿ