“ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು
ನಡು ಮಧ್ಯದಲಿ ಅಡಕೆ ತೆಂಗುಗಳ ಮಡಲು
ಸಿರಿಗನ್ನಡದ ಚಪ್ಪರವೆ ನನ್ನ ಜಿಲ್ಲೆ
ಇಲ್ಲಿಯೇ ಇನ್ನೊಮ್ಮೆ ಹುಟ್ಟುವೆನು ನಲ್ಲೆ”

ಚುಟುಕು ಬ್ರಹ್ಮನೆಂದೆ ಪ್ರಸಿದ್ಧರಾದ ದಿನಕರ ದೇಸಾಯಿಯವರು ಉತ್ತರ ಕನ್ನಡ ಜಿಲ್ಲೆಯ ಜನಮಾನಸದಲ್ಲಿ ಅಚ್ಚಳಿಯದೆ ಉಳಿದ ಅಚ್ಚು ಮೆಚ್ಚಿನ ಜೀವನಾಡಿ‌ ಕವಿ. ಅವರು ವರ್ಣಿಸಿ ಬರೆದಿರುವ ಹಲವಾರು ಚುಟುಕು‌- ಗಳು ಪ್ರತಿ ಯೊಬ್ಬರ ಸ್ಮೃತಿ ಪಟಲದಲ್ಲಿ ಸದಾ ಗುಂಯ್ ಗುಟ್ಟುವ ದುಂಬಿಯಂತೆ. ನಮ್ಮ ಜಿಲ್ಲೆಯೆಂದಾ ಕ್ಷಣ ನಮ್ಮವರ ನೆನಪಾಗದೇ ಇರದು.

ಮನುಷ್ಯ ಹುಟ್ಟಿದ ಮೇಲೆ ಅವನಿಗೆ ಒಂದು ನೆಲೆ ಬೆಲೆ ಬರುವುದು ಅವನ ಒಡನಾಟ ಹಾಗೂ ಬದುಕುವ ರೀತಿ. ನಾನು ನನ್ನಿಂದ ಎಂಬ ಹೆಸರಿಗೆ ಜೋತು ಬಿದ್ದವರೆಲ್ಲ ಶಾಶ್ವತ ವಾಗಿ ಉಳಿದಿಲ್ಲ ಈ ಮಣ್ಣಿನೊಳಗೆ. ಇರುವಷ್ಟು ಕಾಲ ತಮ್ಮ ಆತ್ಮ ಸಂತೋಷಕ್ಕಾ ದರೂ ಒಳಿತಿನೆಡೆಗೆ ಚಿಂತಿಸಿ ಬದುಕಬೇಕಾಗಿ ರುವುದು ಬಹುಮುಖ್ಯ.

ಹೊಟ್ಟೆಪಾಡು ಅಷ್ಟು ಸುಲಭವಾಗಿ ಬದುಕಲು ಬಿಡದು. ಹೊಟ್ಟೆ ಗೇಣುದ್ದ ಇದ್ದರೂ ಅದನ್ನು ತುಂಬಲಾಗದೇ ಜೀವನವೇ ಕಳೆದು ಹೋಗು ವುದೆಂದರೆ ಆಶ್ಚರ್ಯ ಪಡಬೇಕಿಲ್ಲ. ಎಲ್ಲರೂ ಒಂದಿಲ್ಲೊಂದು ಉದ್ದೇಶದಿಂದ ಈ ಭೂವಿಗೆ ಬಂದಿರುವುದು. ನಾನೇನು ಇದಕ್ಕೆ ಹೊರತಾ ಗಿಲ್ಲ. ಅನ್ನದ ಋಣ ಎಲ್ಲಿ ಕರೆದೊಯ್ಯುತ್ತದೆ ಯೋ‌ ಅಲ್ಲಿಗೆ ನಮ್ಮ ಪಯಣ. ಈ ಹಾಡು ನೆನಪಾಗದೆ ಇರದು…

“ತುತ್ತು ಅನ್ನ ತಿನ್ನೊಕೆ ಬೊಗಸೆ ನೀರು ಕುಡಿಯೊಕೆ ತುಂಡು ಬಟ್ಟೆ ಸಾಕುನಮ್ಮ ಮಾನ ಮುಚ್ಚೊಕೆ ಅಂಗೈಯಗಲ ಜಾಗಾ ಸಾಕು ಹಾಯಾಗಿರೊಕೆ
“ಹುಟ್ಟಿದ ಮನುಷ್ಯ ಒಂದೇ ಕಡೆ ಬಾಳೊಕಾಗಲ್ಲ, ಹುಟ್ಟಿದ ನದಿಯು ಒಂದೇ ಕಡೆ ನಿಲ್ಲೊಕಾಲ್ಲ” ಎಂಬಂತೆ

ಕಡಲನು ಅರಸುತ್ತ ಹೊರಟ ನದಿಯಂತೆ ಮನುಷ್ಯನ ಜೀವನ ಸಾಗುವುದು. ಹಾಗೆಯೇ ಯಲ್ಲಾಪುರ ಬದುಕು ಕಟ್ಟಲು ಬಂದವರಿಗೆ ಆಶ್ರಯ ತಾಣ. ಕಣ್ಣಾಡಿಸಿದಷ್ಟು ಸುತ್ತಲೂ ನಿಗರ್ಸದ ಒಡಲು. ಪ್ರಕೃತಿ ತನ್ನೆದೆಯಲ್ಲಿಟ್ಟು ಪೊರೆವ ರೀತಿಗೆ ಮನಸೋಲದವರಾರು. ನಮ್ಮೂರು ಶಾಂತ ಮನಸ್ಸುಳ್ಳ, ಸ್ನೇಹ, ಪ್ರೀತಿಯ ಮನಸಿಗರ ಊರು. ಐತಿಹಾಸಿಕ ಹಿನ್ನೆಲೆ ಉಳ್ಳ ಭಾಗ. ಯಲ್ಲಾಪುರ ತಾಲ್ಲೂಕಿನ ಇತಿಹಾಸ ಬಹು ಪ್ರಾಚೀನ. ರಾಮಾಯಣ, ಮಹಾಭಾರತದ ಕಾಲದಲ್ಲಿಯ ಕೆಲವು ಐತಿಹ್ಯಗಳಿವೆ. ಸಮೀಪ ದಲ್ಲಿ ಪಾಂಡವರ ಹೊಳೆಯೂ ಇದ್ದು ಪಾಂಡವ ರು ಸಹ ಕೆಲಕಾಲ ಇಲ್ಲಿ ವಾಸಿಸಿದ್ದರೆನ್ನಲಾಗಿದೆ. ಲಂಕಾ‌ ನರೇಶ ರಾವಣನನ ಸಹೋದರಿ ಶೂರ್ಪ ನಖಿಯು ಸೂಪಾ ತಾಲೂಕಿನ ಅಧೀನದಲ್ಲಿದ್ದ ಯಲ್ಲಾಪುರದಿಂದ ಮುಂಡಗೋಡದವರೆಗೆ ರಾಜ್ಯಭಾರ ಮಾಡುತ್ತಿದ್ದಳೆನ್ನಲಾಗಿದೆ. ಈಗಿನ ಯಲ್ಲಾಪುರದ ಬಹುಭಾಗ ಸ್ವಾದಿಯ ಅರಸರ ಆಳ್ವಿಕೆಗೆ ಒಳಪಟ್ಟಿತ್ತು. 1800ರವರೆಗೂ ಸೂಪಾ ತಾಲ್ಲೂಕಿನ ಮುಖ್ಯ ಸ್ಥಳವಾಗಿದ್ದು, ಇದನ್ನು 1859 ರಲ್ಲಿ ಸ್ವತಂತ್ರ ತಾಲ್ಲೂಕೆಂದು ಘೋಷಿಸ ಲಾಯಿತು. ಭಾರತ ಸ್ವಾತಂತ್ರ್ಯಕ್ಕಾಗಿ ಈ ಭಾಗದ ಜನತೆ ಮಾಡಿದ ತ್ಯಾಗ ಅನುಪಮ ಹಾಗೂ ಅವಿಸ್ಮರ ಣೀಯ.

ಉತ್ತರ ಕನ್ನಡ ಜಿಲ್ಲೆಯ 12 ತಾಲೂಕುಗಳಲ್ಲಿ ಯಲ್ಲಾಪುರಕ್ಕೆ ವಿಶೇಷವಾದ ಸ್ಥಾನವಿದೆ. ದಕ್ಷಿಣ ಕ್ಕೆ, ನೈಋತ್ಯಕ್ಕೆ ಅಂಕೋಲ, ಪಶ್ಚಿಮ ಮತ್ತು ವಾಯುವ್ಯಕ್ಕೆ ಕಾರವಾರ, ಉತ್ತರಕ್ಕೆ ಹಳಿಯಾಳ ತಾಲ್ಲೂಕುಗಳು ಈಶಾನ್ಯದಲ್ಲಿ ಧಾರವಾಡ ಜಿಲ್ಲೆ ಯ ಕಲಘಟಗಿ ತಾಲ್ಲೂಕು ಸುತ್ತುವರಿದಿವೆ. ಅಚ್ಚಹಸಿರಿನ ಮಲೆನಾಡು, ತಂಪಾದ ವಾತಾವರ ಣದೊಂದಿಗೆ ಸಸ್ಯ ಶ್ಯಾಮಲೆಯು ಹೇರಳವಾದ ಪ್ರದೇಶ. ಇಲ್ಲಿಯ ಬಹುತೇಕ ಜನ ಕೃಷಿಯನ್ನೆ ಅವಲಂಬಿಸಿದ್ದಾರೆ. ಭತ್ತವನ್ನು ಆಹಾರ ಬೆಳೆ ಯಾಗಿ ನಂಬಿಕೊಂಡ ರೆ,ಅಡಿಕೆ ತೆಂಗು, ಏಲಕ್ಕಿ, ಕಾಳ ಮೆಣಸು, ಬಾಳೆ, ಗೊಡಂಬಿ, ಮುಂತಾದ ವು ವಾಣಿಜ್ಯ ಬೆಳೆಯಾಗಿದೆ. ಇಲ್ಲಿ ಅನೇಕ ವಿಧ ವಾದ ಜನಾಂಗಗಳಿದ್ದು ಅವುಗಳಲ್ಲಿ ಹವ್ಯಕ, ಗೌಡ, ಒಕ್ಕಲಿಗ, ಸಿದ್ದಿ, ಕುಣಬಿ, ಗೌಳಿ, ಮರಾಠಿ, ಹೀಗೆ ಹಲವು ವಿಭಿನ್ನ ಜನಾಂಗದವರೂ ವಾಸ- ವಾಗಿದ್ದಾರೆ. ಯಲ್ಲಾಪುರವನ್ನು ಸಕಲ ಸಂಕಷ್ಟ ಗಳಿಂದ ಪೊರೆವ ಗ್ರಾಮದೇವಿಯರ ಕೃಪಾ ಕಟಾಕ್ಷೆಯಲ್ಲಿ ಬೆಳೆದುನಿಂತ ಪುಟ್ಟಪುರವಿದು. ಗ್ರಾಮ ದೇವಿಯ ಜಾತ್ರೆ ಪ್ರತಿಮೂರು ವರ್ಷಗ- ಳಿಗೊಮ್ಮೆ ಸಂಭ್ರಮಾಚರಣೆಗಳೊಂದಿಗೆ ನೆರವೇರುತ್ತದೆ.

ಬೇಡ್ತಿನದಿ ಈಶಾನ್ಯ ದಿಕ್ಕಿನಿಂದ ನೈಋತ್ಯಕ್ಕೆ ಹರಿದು ಅಂಕೋಲದ ದಕ್ಷಿಣದಲ್ಲಿ ಅರಬ್ಬೀ ಸಮುದ್ರ ಸೇರುತ್ತದೆ. ಕಾಳೀನದಿ ಉತ್ತರ ಮತ್ತು ವಾಯುವ್ಯದ ಗಡಿಯಾಗಿ ಹರಿಯು ತ್ತದೆ. ಬಹಳ ವರ್ಷಗಳ ಹಿಂದೆ ವಿದೇಶಗಳಿಗೆ ರಫ್ತುಮಾಡುವ ಮ್ಯಾಂಗನೀಸ್ ಕಲ್ಲುಗಳು ಬಿಸಗೋಡ ಹಾಗೂ ತಳಕೆಬೈಲ ಗಳಲ್ಲಿ ದೊರೆಯುತ್ತಿತ್ತೆಂಬುದಕ್ಕೆ ಸಾಕ್ಷಿ ಪುರಾವೆಗಳು ಈಗಲೂ ಲಭ್ಯ.

ಗಾಜಿನ ಹರಳು ಗಳನ್ನು ತಯಾರಿಸಲು ಅನು- ಕೂಲವಾದ ಮಣ್ಣು ಸಹ ಹುತ್ಕಂಡದ ಸಮೀಪ ದೊರೆಯು ವುದೆಂದು ಭೂವಿಜ್ಞಾನ ಸಂಶೋಧನೆ ಯು ತಿಳಿಸುತ್ತದೆ. ಬ್ರಿಟಿಷರು ಬೇಟೆಯಾಡಲು ಬಂದಾಗ ವಾಸಿಸು ತ್ತಿದ್ದ ಬಂಗಲೆಯ ಅವಶೇಷ ಗಳನ್ನು ಇಲ್ಲಿ ಕಾಣಬಹುದು. ಕಾನನದಲ್ಲಿ ಬಿದಿರು, ಶ್ರೀಗಂಧ ತೇಗ, ಮತ್ತಿ, ಬೀಟೆ, ಹಾಗೂ ಇತರ ಅಮೂಲ್ಯ ವೃಕ್ಷ ಸಂಪತ್ತಿದೆ.

ಕಿರವತ್ತಿಯ ಕಟ್ಟಿಗೆಯ ಡಿಪೋ ಹಿಂದೊಂದು ಕಾಲದಲ್ಲಿ ರಾಜ್ಯದಲ್ಲಿ ಯೇ ಹೆಸರಾಗಿದ್ದನ್ನು ಮರೆಯು- ವಂತಿಲ್ಲ. ನೈಸರ್ಗಿಕ ಜೇನುತುಪ್ಪ ಹೆರಳವಾಗಿ ಸಿಗುತ್ತೆ. ಯಲ್ಲಾಪುರ ಗುಡ್ಡಗಾಡಿನ ಪ್ರದೇಶದಲ್ಲಿ ಹಾಸು ಹೊಕ್ಕಾದ ಸಮೃದ್ಧ ಹಸಿರೆಲೆಯ ಸೊಪ್ಪ ನ ಬೆಟ್ಟಕ್ಕೆ ಹೆಸರು ವಾಸಿ.

ಪಶ್ಚಿಮ ಘಟ್ಟಗಳ ಸೆರಗಿನಲ್ಲಿರುವ ಈ ಪ್ರದೇಶ ವು ಹೇರಳ ಸಂಖ್ಯೆಯ ಝರಿ-ತೊರೆಗಳಿಂದ ಕೂಡಿದ್ದು, ಮನಸ್ಸಿಗೆ ಮುದ ನೀಡುವ ಹತ್ತು ಹಲವು ಜಲಪಾತಗಳನ್ನು ತನ್ನ ಒಡಲೊಳಗೆ ಬಚ್ಚಿಟ್ಟುಕೊಂಡಿದೆ. ಯಲ್ಲಾಪುರ ಜಲಪಾತಗಳ ತವರೂರು ಎಂದರೆ ತಪ್ಪಾಗದು. ಪ್ರಮುಖವಾ ದುವೆಂದರೆ ಸಾತೊಡ್ಡಿ ಮತ್ತು ಮಾಗೋಡು ಸುಪ್ರಸಿದ್ಧ ಜಲಪಾತಗಳು. ಇವಲ್ಲದೇ, ಅಜ್ಜಿ ಗುಂಡಿ, ಬೆಣ್ಣೆಜಡ್ಡಿ, ಕಂಚಿನಗದ್ದೆ, ದಬ್ಬೇ- ಸಾಲು ಜಲಪಾತಗಳು ಇನ್ನೂ ಎಲೆ ಮರೆಯ ಕಾಯಿಗಳಂತೆ ಇವೆ.

ಬಹುಶಃ ಇವುಗಳನ್ನು ತಲುಪಲು ಸರಿಯಾದ ದಾರಿ ಇಲ್ಲದಿರುವುದ ರಿಂದಲೇ ಏನೋ ಇವು ಇನ್ನೂ ಬೆಳಕಿಗೆ ಬಂದಿಲ್ಲ. ಮಾಗೋಡು ಜಲಪಾತವಂತೂ ಕಣ್ಮನ ಸೆಳೆವ ಪ್ರವಾಸಿ ತಾಣ.ಈ ತಾಣಕ್ಕೆ ಹೊಗುವ ದಾರಿಯ ಲ್ಲಿ ಸಿಗುವ ಕವಡೀಕೆರೆ ಮಹಾಭಾರತದ ಪಾಂಡವರು ಬಂದಿದ್ದರೆಂಬು ದಕ್ಕೆ ಸಾಕ್ಷಿಯಂತಿದೆ.

ಚಂದಗುಳಿಘಂಟೆ ಗಣಪತಿ ಪ್ರಸಿದ್ಧ ಯಾತ್ರಾಸ್ಥಳ, ಜೇನ್ ಕಲ್ ಗುಡ್ಡದ ಪ್ರಕೃತಿ ಸೌಂದರ್ಯ ನಯನ ಮನೋ ಹರ, ಇದು ಕೂಡ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ.

ಯಲ್ಲಾಪುರ ಇದು ಭೌಗೋಳಿಕವಾಗಿ ಎಲ್ಲರ ಮನಸೂರೆಗೊಳ್ಳುವಂತಹ ತಾಣ. ವರ್ಷದುದ್ದ ಕ್ಕೂ ಹೆಚ್ಚು ಬೇಸಿಗೆ, ಹೆಚ್ಚು ಮಳೆ, ಹೆಚ್ಚು ಚಳಿ ಯನ್ನು ಸಮನಾಗಿ ಹಂಚಿಕೊಂಡು ತಾಪಮಾನ ವನ್ನು ಹೀರಿಕೊಂಡು ಸಮೃದ್ಧಿಯ, ಶಾಂತತೆಯ ನ್ನು ಕಾಪಾಡಿಕೊಂಡು ಬೆಳೆದ ಸರ್ವಧರ್ಮ ಸಮನ್ವತೆಯ ತಾಣವೆಂದರೆ ತಪ್ಪಾಗದು.

ಮಲೆನಾಡಿಗೆ ಮೈಯೊಡ್ಡಿ ಹಸಿರುಡುಗೆಯ ತಾಣ ದಲಿ ಮೈದುಂಬಿ ಹರಿವ ಜಲಧಾರೆಗಳನ್ನ ಒಡಲೊಳಗೆ ಬಚ್ಚಿಟ್ಟು, ವರುಣನ ಆರ್ಭಟಕೆ ಹಾಲ್ನನೊರೆಯ ಚಿಮ್ಮುತ್ತ ಜಲಪಾಗಳನ್ನು ಸೃಷ್ಟಿಸಿ ಪ್ರವಾಸಿಗರನ್ನು ತನ್ನೆಡೆಗೆ ಕೈಬೀಸಿ ಕರೆವ ಹೃದಯವಂತ ಊರೆಂದರೆ ತಪ್ಪಾಗದು. ಹೀಗಾಗಿ ಯಲ್ಲಾಪುರ “ಜಲಪಾತಗಳ ತಾಣ” ಎಂದೇ ಪ್ರಸಿದ್ದಿ ಯಾಗಿದೆ. ಕಣ್ಣುರೆಪ್ಪೆ ಹಾಯಿಸಿದಷ್ಟೂ ಹಸಿರುಡುಗೆ, ಭತ್ತ ಬೆಳೆವ ಹೊಲಗಳು, ತೆನೆ ಹೊತ್ತು ನಿಂತಷ್ಟು ರೈತನಿಗೆ ಹಬ್ಬದ ವಾತಾವರಣ. ಅವನ ಸಂಭ್ರಮಕ್ಕೆ ಕೊನೆಯಿಲ್ಲ. ಮಲೆನಾಡು ವನಸಿರಿಯ ಒಡಲು..

(ಸಶೇಷ)

 ಶ್ರೀಮತಿ ಶಿವಲೀಲಾ ಹುಣಸಗಿ
ಶಿಕ್ಷಕಿ, ಯಲ್ಲಾಪೂರ