ಮನೆಯ ಮುಂದೆ ಬಂದ
ಹಾವಾಡಿಗ ಬುಟ್ಟಿಯಿಂದ
ಹಾವು ತೆಗೆಯುತ್ತ ಬೇಡಿದ
“ನಾಗರಪಂಚಮಿಯಿಂದು
ಹಾವಿಗೊಂದಿಷ್ಟು ಹಾಲು
ಸ್ವಲ್ಪ ದಕ್ಷಿಣೆ ಹಣ ಕೊಡಿ”

ಮಹಾಜಿಪುಣಿ ಮನೆಯೊಡತಿ
ಮುಖಸಿಂಡರಿಸಿ ನುಡಿದಳು..
“ಹಲ್ಲುಕಿತ್ತ ಹಾವಿಗೆ ಹಾಲನು
ಕೊಟ್ಟು ಪೂಜಿಸುವ ಪದ್ದತಿ
ನಮ್ಮನೆಯಲಿಲ್ಲ ಮುಂದೆನಡಿ.”

ತಲೆಯಾಡಿಸಿ ಮುಗುಳ್ನಗುತ
ಹಾವಾಡಿಗ ಮೆಲ್ಲ ನುಡಿದ..
“ಸರಿ ಅರ್ಥವಾಯಿತು ಬಿಡಿ..”

ಮನೆಯೊಡತಿ ಕೋಪದಲಿ
ಮುಖಗಂಟಿಕ್ಕಿ ಕೇಳಿದಳು..
“ಏನು ಅರ್ಥವಾಗಿದ್ದು ನಿನಗೆ.?”

ಧಡೂತಿ ಮನೆಯೊಡತಿಯ
ಹಿಂದೆ ಹ್ಯಾಪುಮೋರೆಯಿಟ್ಟು
ನಿಂತಿದ್ದ ಅವಳ ಪತಿರಾಯ
ನರಪೇತಲ ನಾರಾಯಣನ
ಕಡೆ ಹಾಗೇ ಕೈತೋರುತ್ತಾ..
ನುಡಿದ ಹಾವಾಡಿಗ ಮೆಲ್ಲಗೆ..

“ನಿಮ್ಮ ಮನೆಯಲ್ಲಿ ಹಲ್ಲುಕಿತ್ತ
ಹಾವಿಗೆ ಹಾಲಿಡದ ಪದ್ಧತಿ
ಇಹುದೆಂದು ಯಾರಿಗಾದರೂ
ತಿಳಿವುದು ನೋಡಿದರೆ ನಿಮ್ಮ
ಗಂಡನ ಸ್ಥಿತಿಗತಿ ಪರಿಸ್ಥಿತಿ..!”

✍️ಎ.ಎನ್.ರಮೇಶ್,ಗುಬ್ಬಿ.