ಮಾತು ಹೆಚ್ಚಾದರೆ ಅತಿಯಾಯಿತು ಅಂತೀಯಾ
ತುಸು ಕಡಿಮೆಯಾದರೆ ಕಡಿಮೆಯಾಯಿತು ಅಂತೀಯಾ

ನಿನ್ನ ಕಿವಿಗೆ ಬಿದ್ದದ್ದು ನನ್ನ ಮಾತೋ ಮತ್ತೇನೋ
ಸ್ವಲ್ಪ ಗಡಿಬಿಡಿಯಾದರೆ ಘಾಬರಿಯಾಯಿತು ಅಂತೀಯಾ

ರತ್ನಖಚಿತ ನಗು ಸೂಸುವ ಕಿರು ಮಲ್ಲಿಗೆ ಹೂ ನೀನು
ರವಿ ಕಾಣದೆ ಹೋದರೆ ಕತ್ತಲೆಯಾಯಿತು ಅಂತೀಯಾ

ನೆಲದ ಮೇಲೆ ನಡೆವ ನಾವು ನೆಲಕೆಂದೋ ಋಣಿಗಳು
ನೆಲ ಕ್ಷಣ ಕಂಪಿಸಿದರೆ ಪ್ರಾಣಹೋಯಿತು ಅಂತೀಯಾ

ಹೆಚ್ಚು ಕಡಿಮೆಯೆಂಬುದದೇನು ಕಣ್ಣರಿಯದ್ದೂ ಅಲ್ಲ
ಜಾಲಿ ಕಣ್ತೆರೆದು ನೋಡೆಂದರೆ ಹೊತ್ತಾಯಿತು ಅಂತೀಯಾ

✍️ವೇಣು ಜಾಲಿಬೆಂಚಿ
ರಾಯಚೂರು.