1.ಪೂಜಾಫಲ..!

ಇಂದು ಇವತ್ತು ಬೆಳ್ಳಂಬೆಳಿಗ್ಗೆ
ನಾನಿನ್ನೂ ಬಿಟ್ಟೆದ್ದಿರಲಿಲ್ಲ ಹಾಸಿಗೆ
ಬಳಿಗೆ ಬಂದ ನನ್ನವಳು ಹಾಗೆ
ಬಿದ್ದೇ ಬಿಟ್ಟಳು ನನ್ನ ಅಡಿಗಳಿಗೆ
ಪಾದಗಳ ಒತ್ತಿಕೊಂಡಳು ಕಣ್ಣಿಗೆ
ಕರಗಿದೆ ನನ್ನವಳ ಆ ಪತಿಭಕ್ತಿಗೆ.!
ಹಾಗಾಗಿ ಇಂದು ನನ್ನದೇ ಅಡಿಗೆ.!

2.ನಿದರ್ಶನ.!

ಇಂದು ಗುಂಡಣ್ಣನವರ ಮನೆಯಲ್ಲಿ
ಭೀಮನಮಾವಾಸೆ ಬಲುಜೋರು.!
ಇದಕೆ ಸಾಕ್ಷಾತ್ ಸತ್ಯ ನಿದರ್ಶನ..
ಗುಂಡಣ್ಣನ ಬಕ್ಕತಲೆ ಮೇಲ್ಭಾಗದಲ್ಲಿ
ಎದ್ದಿದೆ ದೊಡ್ಡದೊಂದು ಬೋರು..!!

3.ಹಬ್ಬ ವಿಶೇಷ.!

ಇಂದು ಭೀಮನಮಾವಾಸ್ಯೆ
ಇಂದಿಲ್ಲ ನಮ್ಮ ಮನೆಯಲಿ
ಕಲಹ ಜಗಳದ ಸಹವಾಸ
ಮುನಿಸು ಬೈಗುಳಗಳ ತ್ರಾಸ
ಬೆಳಗಿನಿಂದ ರಾತ್ರಿವರೆಗೂ
ನನ್ನವಳಿಂದ ಮಂದಹಾಸ
ಕಾರಣ ಇಂದು ದಿನಪೂರಾ..
ನನ್ನದೇ ಎಲ್ಲ ಮನೆಗೆಲಸ.!

4.ನಿತ್ಯ ಭೀಮನಮಾವಾಸೆ.!

ಕೆಲವು ಮನೆಗಳಲ್ಲಿ ದಿನವೂ
ಸತಿಯಿಂದ ಪತಿದೇವರಿಗೆ
ಜಗಳ ಬೈಗುಳಗಳ ಅರ್ಚನೆ
ಕುಹಕ ಕಟಕಿ ಸಹಸ್ರನಾಮ
ಮಾತುಮಾತಿಗೆ ಮಂಗಳಾರತಿ
ಕಹಿಕಷಾಯದ ಕಾಫಿತೀರ್ಥ
ಬಾಯಿಗೂ ಇಡಲಾಗದಂತಹ
ನೀರಸ ಪ್ರಸಾದ ನೈವೇದ್ಯ
ನಿತ್ಯಸತ್ಯ ಪತಿಪೂಜೆ ಪ್ರತಿಘಳಿಗೆ

5.ನಡುರಾತ್ರಿ ಪೂಜೆ.!

ನಮ್ಮ ಪಕ್ಕದ ಮನೆಯಲ್ಲೀಗ
ನಡುರಾತ್ರಿ ಹನ್ನೆರಡು ಘಂಟೆಗೆ
ನಡೆದಿದೆ ಸಹಸ್ರನಾಮದೊಂದಿಗೆ
ಭೀಮನಮಾವಾಸೆಯ ಆಚರಣೆ.!
ಪತಿಯ ನಿಲ್ಲಿಸಿ ಹೊಸ್ತಿಲಿನಾಚೆಗೆ
ಕೊಡಪಾನ ನೀರಿನ ಪ್ರೋಕ್ಷಣೆ…
ಕಾರಣ ಪಾನಮತ್ತ ಪತಿದೇವರು
ತೀರ್ಥಯಾತ್ರೆ ಮುಗಿಸಿ ಹೊರಗೆ
ಬಂದಿಹರು ಈಗತಾನೆ ಮನೆಗೆ.!

✍️ಎ.ಎನ್.ರಮೇಶ್ ಗುಬ್ಬಿ.