ಕನ್ನಡ ನವೋದಯ ಕಾಲದ ಮುಖ್ಯ ಕವಿ-ಗಳಲ್ಲಿ ಒಬ್ಬರಾಗಿರುವ ಆನಂದಕಂದ ರವರದು ಶುದ್ಧ ಜನಪದ ಶೈಲಿ. ಇದ್ದುದನ್ನು ಇದ್ದ ಹಾಗೆ, ಸಹಜ ತೆಗೆ ಕೆಡಕು ತಾಗದಂತೆ ಮೂಲರೂಪಕ್ಕೆ ಮತ್ತಷ್ಟು ಜೀವ ತುಂಬಿ ಚಿತ್ರಿತ ವಾಗಿರುವ ಅವರ ಜಾನ ಪದ ಪ್ರಭಾವಿತ ಕವಿತೆಗಳು ನಾಡವರ ನಾಲಿಗೆ ಯ ಮೇಲೆ ನಲಿದು ಜನಪ್ರಿಯವಾದವು. ಆನಂದ ಕಂದರ ಜನಪದ ರೀತಿಯ ಕವಿತೆಗಳು ಜಾನಪದವೇ ಎನ್ನುವಷ್ಟು ಜನಾನುರಾಗಿಯಾ ಗಿವೆ. ಈ ಜನಪ್ರಿಯತೆಗೆ ಮುಖ್ಯ ಕಾರಣ ಜಾನ ಪದದ ಧಾಟಿ ಆದರೂ ಆ ಕಾಲಕ್ಕೆ ಆನಂದ ಕಂದರ ಗೀತೆಗಳನ್ನು ಹಾಡಿ ಖ್ಯಾತಿ ಪಡೆದ ‘ಸಾವಿರ ಹಾಡಿನ ಸರದಾರ’ ರೆನಿಸಿದ ಹುಕ್ಕೇರಿ ಬಾಳಪ್ಪನವರೂ ಒಂದು ಕಾರಣ. ಜನಪದ ಹಾಡುಗಾರ ಹುಕ್ಕೇರಿ ಬಾಳಪ್ಪನವರು ಆನಂದ ಕಂದರ ಹಲವಾರು ಕವನಗಳನ್ನು ಅವಿಸ್ಮರಣೀ ಯವೆಂಬಂತೆ ರಸಪೂರ್ಣವಾಗಿ ಹಾಡಿ ತೋರಿಸಿ ದ್ದಾರೆ.

‘ಆನಂದಕಂದ’ ಕಾವ್ಯನಾಮದ ಬೆಟಗೇರಿ ಕೃಷ್ಣಶರ್ಮ ಅವರ ಜಾನಪದ ಆಸಕ್ತಿಗೆ ಮೂಲ ಕಾರಣ ಅವರು ಬೆಳೆದ ಪರಿಸರ ಮತ್ತು ತಾಯಿ ಯ ಪ್ರಭಾವ. 1900 ಏಪ್ರಿಲ್ 16 ರಂದು ಗೋಕಾಕ ತಾಲ್ಲೂಕಿನ ಬೆಟಗೇರಿ ಎಂಬ ಹಳ್ಳಿ ಯಲ್ಲಿ ಜನಿಸಿದ ಬೆಟಗೇರಿ ಕೃಷ್ಣ ಶರ್ಮರು. ಮನೆಯಲ್ಲಿಯ ಹಬ್ಬ-ಹರಿದಿನಗಳ ಆಚರಣೆ, ಪುರಾಣ ಪುಣ್ಯ ಕಥೆಗಳ ಶ್ರವಣ, ಜಾನಪದದ ನಿಕಟ ಸಂಪರ್ಕ ಅವರಿಗೆ ದಕ್ಕಿತು. ಈ ಪ್ರಭಾವದ ಕುರಿತು ಆನಂದಕಂದರು ‘ನನ್ನ ಸಾಹಿತ್ಯ ಕೃಷಿ ಯ ಸಾರ ಸತ್ತ್ವ’ (1960) ಎಂಬ ಲೇಖನದಲ್ಲಿ ಹೀಗೆ ಹೇಳುತ್ತಾರೆ. “ನಮ್ಮ ಹಳ್ಳಿಯ ರೈತರು ನಮ್ಮ ತಾಯಿಯ ಗುಣಗಳ ನ್ನು ಮನವರಿಕೆ ಮಾಡಿಕೊಂಡಿದ್ದರು.ಮಹತ್ವದ ಕಾರ್ಯಗಳಿಗೆ ಪಯಣ ಹೊರಟಾಗ, ನಮ್ಮ ತಾಯಿಯಿಂದ ಹರಕೆ ಪಡೆಯಲು ಬರುತ್ತಿದ್ದ ರು. ಹೊಲಗಳಿಗೆ ಕೂರಿಗೆ ಸಾಗಿಸುವಾಗ, ಬೀಜಗಳಿಗೆ ಆಕೆಯ ಕೈಯನ್ನು ಮುಟ್ಟಿಸಿ-ಕೊಂಡು ಹೋಗುತ್ತಿದ್ದರು. ಬೆಳಗಿನ ಐದು ಗಂಟೆಗೆ ಎದ್ದು ಮನೆಗೆಲಸ ಮಾಡುತ್ತ ಮೆಲುದನಿಯಲ್ಲಿಯೇ ಹಾಡುಗಳನ್ನು ಗುಣಗುಣಿಸುತ್ತಿದ್ದಳು. ಶ್ರೀಕೃಷ್ಣನ ಬಾಲ ಲೀಲೆಗೆ ಸಂಬಂಧಿಸಿದ ಕೆಲವು ಸಾಂಗತ್ಯ ಗೀತ, ಲಾವಣಿ ಗಳನ್ನು ಆಕೆ ಹೇಳುತ್ತಿದ್ದಳು. ತುಂಬ ಸೊಗಸಾದ ಹಾಡುಗಳವು ಆಕೆಯೊಂದಿಗೆ ಅವೂ ಹೋಗಿ ಬಿಟ್ಟವು.” ಎಂದು ನೊಂದಿದ್ದಾ ರೆ. “ಮನೆಯಲ್ಲಿ ತುಂಬಿದ ಬಳಗ,ಮದುವೆ, ಮುಂಜಿ, ಶೋಭನ, ಸೀಮಂತ, ಬಸಿರು, ಬಾಣಂತಿತನ, ಹುಟ್ಟಿದ ಹಬ್ಬ, ನಾಮಕರಣ, ಜವುಳ ಇವೆಲ್ಲ ಆಗಾಗ ನಡದೇ ಇರುವವು. ಈ ಸಂಪ್ರದಾಯಗಳೂ ನನ್ನ ಮನಸಂಸ್ಕಾರಕ್ಕೆ ಕಾರಣವಾದವು” ಎಂಬುವು ದನ್ನು ಬೆಟಗೇರಿ ಅವರು ಜ್ಞಾಪಿಸಿಕೊಳ್ಳುತ್ತಾರೆ.

ಜತೆಗೆ ಅವರು ಹುಟ್ಟಿ ಬೆಳೆದ ಪರಿಸರವಂತೂ ಜಾನಪದದ ರಸಘಟ್ಟಿಯಾದುದು. ಆ ಕಾಲದ ಲಾವಣಿ, ಬಯಲಾಟಗಳು ಅವರನ್ನು ತೀವ್ರ ವಾಗಿ ಸೆಳೆದುಕೊಂಡಿವೆ. “ಹಳ್ಳಿಯ ಏಕನಾದ ದಂತಹ ಬಾಳಿನಲ್ಲಿ ವೈವಿಧ್ಯ ತಂದುಕೊಳ್ಳುವು ದಕ್ಕಾಗಿ ಹಳ್ಳಿಯ ರೈತರು ಸಾರ್ವಜನಿಕವಾಗಿ ಗೊಂದಲಿಗರಿಂದಲೂ, ಎಲ್ಲಮ್ಮನ ಜೋಗಿಯ ವರಿಂದಲೂ ಕಥೆಗಳನ್ನು ಹೇಳಿಸುವರು. ಕಿಳ್ಳಿ ಕೇತರ ಗೊಂಬೆಯ ನೆರಳಾಟಗಳನ್ನಾಡಿಸುವ ರು. ಹಲಿಗೆ, ಕರಡಿ ಮಜಲುಗಳನ್ನು ಮಾಡಿಸಿ, ಲಾವಣಿಕಾರರಿಂದ ಲಾವಣಿ ಪದ ಗಳನ್ನು ಹೇಳಿ ಸುವರು. ಕೃಷ್ಣಪಾರಿಜಾತ, ರಾಧಾನಾಟ, ರೂಪಸಿಂಗ ಸಂಗ್ಯಾಬಾಳ್ಯಾ ಮೊದಲಾದ ಬಯಲಾಟಗಳನ್ನು ಆಡಿಸುವರು. ನನ್ನ ಚಿಕ್ಕತನ ದಲ್ಲಿ ನನಗೆ ದೊರೆತ ಇಂತಹ ಸಂದರ್ಭಗಳನ್ನು ಒಮ್ಮೆಯೂ ಕಳೆದುಕೊಂ ಡಂತೆ ನನಗೆ ಜ್ಞಾಪಕ ವಿಲ್ಲ” ಎನ್ನುವಲ್ಲಿ ಆನಂದಕಂದರು ತಮ್ಮ ಕಾಲದ ಜಾನಪದ ಪರಿಸರವನ್ನು ತುಂಬಾ ಗಾಢವಾಗಿ ಪ್ರಭಾವಿಸಿ ಕೊಂಡ ಹಿನ್ನೆಲೆ ಸ್ಪಷ್ಟವಾಗುತ್ತದೆ.

ಆನಂದಕಂದರು ಕಳೆದ ಶತಮಾನದ 20ನೇ ದಶಕವು ಭಾರತವು ಸ್ವಾತಂತ್ರ್ಯಕ್ಕಾಗಿ ತವಕಿಸು ತ್ತಿದ್ದ ಕಾಲದಲ್ಲಿ ರಾಷ್ಟ್ರೀಯತೆಗೆ ಆಕರ್ಷಿತರಾ ದರು. ರಾಷ್ಟ್ರೀಯತೆಯ ಜಾಗ್ರತೆಗೆ ಪ್ರೇರಕವಾ ಗುವ ಅನೇಕ ಹಾಡುಗಳನ್ನು ಈ ಅವಧಿಯಲ್ಲಿ ರಚಿಸಿದರು. ರಾಷ್ಟ್ರೀಯ ಪದ್ಯಾವಲಿ(1921), ಗಾಂಧಿsಗೀತ ಸಪ್ತಕ (1921) ರಾಷ್ಟ್ರೀಯ ಪದ್ಯ ಮಾಲೆ(1921)ಯ ಹಾಡುಗಳು ಭಾವ ತೀವ್ರತೆ ಮತ್ತು ಗೇಯತೆ ಯಿಂದೊಡಗೂಡಿ ಜನತೆಯಲ್ಲಿ ದೇಶಾಭಿಮಾನ ಪ್ರಜ್ವಲಿಸುವಂತೆ ಮಾಡಿದವು. ಮುಖ್ಯವಾಗಿ ಈ ಹಾಡುಗಳು ಹೆಜ್ಜೆ ಹಾಕುತ್ತ ತಾಳಮೇಳ ದೊಂದಿಗೆ ಹಾಡುತ್ತ ಪಥ ಸಂಚಲನ ಮಾಡಲು ತುಂಬಾ ಹೊಂದುತ್ತಿ ದ್ದವು. ಈ ಕಾರಣ ವಾಗಿ ಈ ಹಾಡುಗಳನ್ನು “ಹೆಜ್ಜೆಯ ಹಾಡು” ಗಳೆಂದು ಕರೆಯುತ್ತಿದ್ದರು.

1938ರಲ್ಲಿ ಆರಂಭಿಸಿದ ‘ಜಯಂತಿ’ಯಲ್ಲಿ ಮೊದಲ ಪುಟದಲ್ಲಿ ಪ್ರಕಟವಾಗುತ್ತಿದ್ದ ಆನಂದ ಕಂದರ ಕವಿತೆಗಳು ಜಾನಪದವನ್ನೇ ಹೆಚ್ಚಾಗಿ ಪ್ರಭಾವಿಸಿಕೊಂಡಿವೆ. ನವೋದಯ ಕಾವ್ಯದ ಆರಂಭದಿಂದಲೂ ಕಾವ್ಯ ಕೃಷಿಗೆ ತೊಡಗಿದ ಅವರ ರಚನೆಗಳು ಜನಪದರ ಬದುಕನ್ನೇ ಚಿತ್ರಿ ಸಿವೆ. ಜಯಂತಿಯ ಮೊದಲ ಸಂಚಿಕೆ (ಮೇ – 1938)ಯಲ್ಲಿ ‘ನಡೆಸಾಗು ಜೊತೆಗೂಡಿ’, ಜುಲೈ 1938ರ ಸಂಚಿಕೆ 3ರ ‘ನೋಡು, ಬರುವ ಸುಗ್ಗಿಯಾಟ’, ಆಗಸ್ಟ್ 1938 ರ ಸಂಚಿಕೆ 4 ರ ‘ನಾಗರ ಪಂಚಮಿ’ ಗೀತೆಗಳು ಹಳ್ಳಿಗರ ಬದುಕಿನ ಸಂದರ್ಭವನ್ನು ಚಿತ್ರಿಸಿವೆ.

ಆನಂದಕಂದ ಅವರ ಹದಿಮೂರು ಕವನ ಸಂಕಲನಗಳಲ್ಲಿ ಮುಖ್ಯವಾಗಿ ‘ನಲ್ವಾಡುಗಳು’ ಸಂಕಲನ ಜಾನಪದದ ಪರಿಪೂರ್ಣ ಸೊಗಡಿ ನಿಂದ ಕೂಡಿದೆ. ಉಳಿದ ಮುದ್ದನಮಾತು (1926), ಅರುಣೋದಯ (1926), ಕಾರ ಹುಣ್ಣಿಮೆ(1956) ವಿರಹಿಣಿ(1956), ಒಡ ನಾಡಿ(1956) ಮೊದಲಾದ ಸಂಕಲನಗಳಲ್ಲಿ ಜಾನಪದ ರೂಪ, ಶೈಲಿ, ವಸ್ತು ಒಳಗೊಂಡಿವೆ.

ಹಳ್ಳಿಗರ ಹಾಡುಗಳು
ಬೆಟಗೇರಿ ಕೃಷ್ಣಶರ್ಮ ಅವರು ಜಾನಪದ ಕಾರ್ಯವನ್ನು 1929 ರಲ್ಲಿ ಬೆಳಗಾವಿ ಸಾಹಿತ್ಯ ಸಮ್ಮೇಳನದಲ್ಲಿ ಜನಪದ ತ್ರಿಪದಿಗಳನ್ನು ಹಾಡು ವುದರೊಂದಿಗೆ ಆರಂಭ ಮಾಡಿದರು. ಅವುಗಳ ಸೊಬಗು ಸೌಂದರ್ಯದ ಜೊತೆಗೆ ಜಾನಪದದ ಶಕ್ತಿ ಸಾಮಥ್ರ್ಯವನ್ನು ಎತ್ತಿ ತೋರಿದರು. ‘ಹಳ್ಳಿಯ ಹಾಡುಗಳು’ ಜಾನಪದವನ್ನು ಹೆಚ್ಚು ಪ್ರಸಿದ್ಧಿಗೆ ತರಲು ಸಹಾಯಕಾರಿಯಾಯಿತು. 1922ರಲ್ಲಿ ಬೆಟಗೇರಿಯವರು ಸಂಗ್ರಹಿಸಿದ ‘ಕೆರೆಗೆ ಹಾರ’ ಜನಪದ ಗೀತೆಯು ಅವರಿಗೆ ಹೆಸರು ಹಾಗೂ ಕೀರ್ತಿ ತಂದಿತು. ‘ಕೆರೆಗೆ ಹಾರ’ ವನ್ನು 1925 ರಿಂದ ತಮ್ಮ ಸಾಹಿತ್ಯಕ ಕಾರ್ಯ ಕ್ರಮಗಳಲ್ಲಿ ವಿವರಿಸಿ, ಧಾಟಿ ಹಾಗೂ ಭಾವಪೂ ರ್ಣವಾಗಿ ಹಾಡಿ ತೋರಿಸುತ್ತಿದ್ದರು. ಈ ಹಾಡು ಕೋಲು ಪದದಲ್ಲಿ ಹೆಣೆದುಕೊಂಡಿದೆ.

“ಸವದತ್ತಿ ತಾಲ್ಲೂಕಿನ ಊರಾಗಿರುವ ಯರಗಟ್ಟಿ ಯ ಹೂಗಾರ ಮನೆತನದ ಹೆಣ್ಣು ಮಗಳನ್ನು ಶ್ರೀ ಕೃಷ್ಣಶರ್ಮರ ಹುಟ್ಟೂರಾದ ಬೆಟಗೇರಿಯಲ್ಲಿ ರುವ ಹೂಗಾರ ಮನೆತನದ ಕಲ್ಲಯ್ಯ ಎಂಬವವ ನಿಗೆ ಮದುವೆ ಮಾಡಿ ಕೊಟ್ಟಿದ್ದರು. ಹಬ್ಬ ಹುಣ್ಣಿ ವೆ ಗಳ ರಾತ್ರಿಗಳಲ್ಲಿ ಹೆಣ್ಣು ಮಕ್ಕಳ ಹಾಡುಗಳು ನಡೆಯುತ್ತಿದ್ದವು. ಕೃಷ್ಣಶರ್ಮರು ಗುಂಪಿನಲ್ಲಿ ಕುಳಿತು ಕೇಳಿ ಕಂಠಪಾಠ ಮಾಡಿ ಬರೆದು ಬಳಿಕ ತಮ್ಮ ಮನೆಗೆ ಕರೆಯಿಸಿ ಮತ್ತೆ ಹಾಡಿಸಿ, ಸರಿ ಯಾಗಿ ನೋಡಿ, ಸಂಗ್ರಹಿಸಿದರು. ಈ ಹಾಡು ಬೆಟಗೇರಿ ಅವರಿಗೆ ಜಾನಪದ ಶೈಲಿಯನ್ನೇ ಕಲಿಸಿತು.” ಎನ್ನುತ್ತಾರೆ ಡಾ.ನಿಂಗಣ್ಣ ಸಣ್ಣಕ್ಕಿಯ ವರು.
ನಲ್ವಾಡುಗಳು

ಆನಂದಕಂದರ ‘ನಲ್ವಾಡುಗಳು’ ಆಡುನುಡಿ ಯ ಸಹಜ ರೂಪಕತೆಯಿಂದ ಕಾವ್ಯವನ್ನು ಸರಳಗೊ ಳಿಸುತ್ತ ಜನಸಾಮಾನ್ಯರ ನಾಲಿಗೆ ಯ ಮೇಲೂ ನಲಿಯುವಂತೆ ಮಾಡಿವೆ. ‘ನಲ್ವಾಡುಗಳು’ ಸಂಕಲನವು ಇಪ್ಪತ್ತೆರಡು ಪ್ರೀತಿ ಗೀತೆಗಳನ್ನು ಜಾನಪದದಲ್ಲಿ ರೂಪಿಸಿದ ಸಂಕಲನ. ಇಲ್ಲಿ ಬೆಟಗೇರಿ ಅವರು ಅಪ್ಪಟ ಜನಪದ ಕವಿಯಂತೆ ಕಾಣುತ್ತಾರೆ. ಶುದ್ದ ಜಾನಪದಕ್ಕೆ ಇವರ ಕವಿತೆ ಗಳು ಪ್ರಧಾನವಾಗಿ ತೋರುತ್ತವೆ. ಜನಪದ ಭಾಷೆ, ಛಂದಸ್ಸು, ನುಡಿಗಟ್ಟು ಮತ್ತು ಜನಪದದ ವಿವಿಧ ಲಯಗಳೆಲ್ಲವನ್ನೂ ಯಶಸ್ವಿಯಾಗಿ ‘ನಲ್ವಾಡುಗಳು’ ಸಂಕಲನ ಕವಿತೆಗಳಲ್ಲಿ ತಂದಿ ದ್ದಾರೆ.
ಗೋದಿ ಬೀಜಕ್ಕಂತ ಗೋಕಾಂವಿಗ್ಹೋಗಿದ್ದೆ
ಸಾದಗಪ್ಪಿನ ಸವಿಹೆಣ್ಣ
ಸಾದಗಪ್ಪಿನ ಸವಿಹೆಣ್ಣ ನೋಡುತಲೆ
ಗೋದಿ ಬಿತ್ತಿಗಿಯ ಮರತೆನೊ
ಜನಪದ ತ್ರಿಪದಿಗಳಲ್ಲಿ ಕಂಡು ಬರುವ ಶೈಲಿ, ರೂಪ, ವಸ್ತು ಬೆಟಗೇರಿ ಅವರ ಕವಿತೆಗಳಲ್ಲಿ ಸ್ಥಾನ ಪಡೆದಿವೆ. ‘ನಲ್ವಾಡುಗಳು’ ಸಂಕಲನದ ನಮ್ಮೂರ ಜಾತ್ರಿ ಬಲು ಜೋರಾ, ಬೆಣ್ಣಿಯಾಕಿ, ಬುತ್ತಿ ತೂಗೊಂಡು ಹೋಗ್ತಿನಿ ಹೊಲಕ, ಯಾರೋ ಏನೋ ಬರತಾರಂತ, ಹಿಂಗ್ಯಾಕ ನೋಡತಾನ, ಚಿನ್ನತ್ತಿಯ ಮಗ, ಬಡವರ ಮಗಳು, ಗೌಡರ ಮನೆ ಸೊಸಿ, ಗೆಣತಿ, ಏನ ಮಾಡ ಅಂತೀ, ಬೆಳವಲ ಒಕ್ಕಲತಿ ಮೊದಲಾದ ಕವಿತೆಗಳು ಹೆಸರೇ ಸೂಚಿಸುವಂತೆ ಜನಪದ ಸಂಸ್ಕೃತಿಗೆ ಸೇರಿದ್ದು, ಅಲ್ಲಿನ ವಸ್ತು, ಲಯ, ಸೊಗಸು ಸೌಂದರ್ಯ ಗಳನ್ನು ಪಡೆದುಕೊಂಡಿದೆ ಎನ್ನುವುದಕ್ಕಿಂತ ಜಾನಪದವೇ ಆಗಿದೆ ಎಂದು ಗುರುತಿಸಲು ಸಾಧ್ಯ.
ಗರಡಿಯ ಹುಡುಗರ ಹುರುಪು ಅದೇನ
ಕರಡಿ – ಹಲಿಗಿ ಮಜಲಿನ ಮೋಜೇನ
ಬಯಲಾಟದ ಸುಖಕಿಲ್ಲ ಸಮಾನ
ಕೇಳಿಲ್ಲೇನು ಲಾವಣಿ ಗೀಗೀ ಹಾಡು
ಯಾತಕವ್ವಾ ಹುಬ್ಬಳ್ಳಿ ಧಾರ್ವಾಡs!
ಹೀಗೆ ಜನಪದರಿಂದ ಪಡೆದುಕೊಂಡು ಬಂದ ಲಾವಣಿ, ಗೀಗಿ ಹಾಡುಗಳ ಸವಿ ಇರಲು ಆಧುನಿಕ ಕಾವ್ಯದ ಬಿಗುತನ ಏಕೆ ಎಂಬ ಸಹಜ, ಸರಳ ಮತ್ತು ಕಲ್ಮಶವಿಲ್ಲದ ಭಾವನೆ ಗಳ ಸಮೃದ್ಧತೆದೆಡೆಗೆ ಕವಿಯ ಕಾವ್ಯ ಹರಿದಿದೆ. ‘ನಮ್ಮ ಹಳ್ಳಿಯೂರs ನಮಗ ಪಾಡs ಯಾತಕವ್ವಾ ಹುಬ್ಬಳ್ಳಿ ಧಾರ್ವಾಡ’ ಎಂಬ ಆನಂದಕಂದ ಜನಪ್ರಿಯ ಈ ಗೀತೆ ಅವರ ಒಟ್ಟು ಕಾವ್ಯ ಧೋರಣೆಯನ್ನು ಪ್ರಕಟಿಸುತ್ತದೆ.

ಊರ ಮುಂದ ತಿಳಿನೀರಿನ ಹಳ್ಳ
ಬೇವು ಮಾವು ಹುಲಗಲ ಮರಚೆಳ್ಳ
ದಂಡಿಗುಂಟ ನೋಡು ನೆಳ್ಳs ನೆಳ್ಳs
ನೀರ ತರುವಾಗ ಗೆಣತ್ಯಾರ ಜೋಡs
ಯಾತಕವ್ವಾ ಹುಬ್ಬಳ್ಳಿ – ಧಾರ್ವಾಡs
ಆಧುನಿಕತೆಯ ಸೋಗಿನಲ್ಲಿ ವಾಸ್ತವದ ಬದುಕು ಅನುಭವಿಸುವ ವಂಚಿತ ಸಮುದಾ ಯದ ನೋವು ನಿರಾಸೆಗಳನ್ನು ಈ ಮೂಲಕ ಅಭಿವ್ಯಕ್ತ ಪಡಿಸುವ ಕವಿ ಗ್ರಾಮ ಸಂಸ್ಕೃತಿಯ ತಾಜಾತನ, ಅದರ ಸಹಜತೆಗೆ ಮಾರುಹೋಗಿ ಅದರಲ್ಲಿ ಬದುಕಿನ ಅಂತಿಮ ಸಾರ್ಥಕತೆಯ ನ್ನು ಪ್ರಕಟಿಸಿ ದ್ದಾರೆ. ಬೇಂದ್ರೆ, ಕುವೆಂಪು ಅವರಂತೆ ಭಾಷೆಯ ನ್ನು ಹೇಗೆ ಬೇಕೊ ಹಾಗೆ ಹಿಂಜುವುದಕ್ಕೆ, ಹಿಂಡು ವುದಕ್ಕೆ ಕೃಷ್ಣಶರ್ಮರು ಹೋಗಿಲ್ಲ. ಭಾವ ವನ್ನು ಸ್ಪಷ್ಟಪಡಿಸುವ ಶಕ್ತಿಯನ್ನು ಬೆಟಗೇರಿ ಯವರ ಭಾಷೆ ಜಾನಪದದಿಂದ ಪಡೆದಿದೆ. ಸಂಭಾಷಣೆ ಯ ರೀತಿಯೂ ಜನಪದರ ಮಾತಿನ ಯಥಾವತ್ತ ರೂಪವಾಗಿದೆ. ಚೆಲುವೆ ಹೆಣ್ಣನ್ನು ಒಲಿದು ತಂದ ಅಣ್ಣನಿಗೆ ತಂಗಿ ಕೇಳುವ ಮಾತು ಗಮನಿಸಿ,
“ಹೇಳು ಹ್ಯಾಂಗಿವಳು ನಿನ್ನ ಮೆಚ್ಚಿದಳು
ಮಾಟ ಮಾಡಿದೇನೋ”
‘ಎಲ್ಲಿಂದೀಕೀನ ಕರೆತಂದೆಣ್ಣಾ ಯಾರು ಹೇಳು ಈಕಿ’
ಎಂಬ ಮಾತಿನಲ್ಲಿ ಸಹಜತೆ ಇದೆ. ಜನಪದರ ಆಡುನುಡಿಯಲ್ಲಿ ಬಳಕೆಯಾಗುವ ಪಡೆನುಡಿ, ಗಾದೆ, ನಾಣ್ನುಡಿಗಳ ರೂಪಗಳು ಆನಂದಕಂದ ರ ಕಾವ್ಯದಲ್ಲಿಯೂ ಬೇಂದ್ರೆಯವರ ಕಾವ್ಯದಂತೆ ತುಂಬಿಕೊಂಡಿವೆ.
ಉಟ್ಟಾಳು ಹಸಿರು ಪತ್ತಲಾ
ಪತ್ತಲಲ್ಲ ಹೂವಿನ್ಹಿತ್ತಲಾ (ನಾಜೂಕದ ನಾರಿ)
‘ಕೊರದ್ಹಾಂಗ ಕರಿಯ ಕುಡಿಹುಬ್ಬಾ’
(ನಾಜೂಕದ ನಾರಿ)
‘ಮುಂಗುರುಳು ಹಾರ್ಯಾಡುವ ಹಣಿ
ಚೆಲ್ವಿಕೆಯ ಖಣೀ’ (ಬೆಣ್ಣಿಯಾಕಿ)
‘ಕಲ್ಲಿನೊಳಗ ಮಲ್ಲಿಗಿ ಅರಳೀತ? ಹೇಳು ಎಲ್ಲಿ ಯಾಕಿ’ (ಯಾರು ಹೇಳು ಈಕಿ?)
‘ಹುಣ್ಣಿವಿ ಗೌರಿಯ ಚಲುವಿಗೆ ಈಕಿಯ ಎದುರು ಸೋಲೆ ಸೋಲ’ (ಯಾರು ಹೇಳು ಈಕಿ?)
‘ಚಂದೂ ಮಾಮನ ಮಗಳಿವಳೇನೋ ಹಾಂಗ ನಗಿಯ ರೀತಿ’ (ಯಾರು ಹೇಳು ಈಕಿ)
‘ಅನ್ನ ಕುಮಾರನ ಬಸುರಿಯದಾಳೌ ನಮ್ಮ ಭೂಮಿದೇವಿ
ಬಯಕಿಯ ಊಟಾ ಉಣಿಸಬೇಕs ಬಂದೈತಿ ಸೀಗಿ ಹುಣ್ಣಿವಿ!’ (ಸೀಗಿ ಹುಣ್ಣಿವಿ)
‘ತಿಳಿಯಿದ್ದ ಒರತಿಯs ನೀರು ಕಲಿಕ್ಯಾವs’
(ನಲ್-ವಾಡುಗಳು)
ಹೀಗೆ ಅನೇಕ ರೂಪಗಳು ಮಾತಿನ ಮೋಡಿ ಯಿಂದ ಜಾನಪದರ ಶಕ್ತಿ ಸೌಂದರ್ಯ, ಮಾತಿನ ಶೈಲಿ ಸಿದ್ದಿ ಬೆಟಗೇರಿಯವರ ಕಾವ್ಯದಲ್ಲಿ ಸಮೃದ್ಧಗೊಂಡಿವೆ.
‘ನಾ ಸಂತಿಗೆ ಹೋಗಿನ್ನಿ – ಆಕಿ ತಂದಿದ್ದಾಳೋ ಬೆಣ್ಣಿ;
ಹಿಂಡು ಹೆಣ್ಣಿನಾಗಕಿಯs ಸರಿ ಒಂದು ಸವಿಸಕ್ಕರಿ ಕಣ್ಣಿ
(ಬೆಣ್ಣಿಯಾಕಿ)
ಬಿಳಿ ಬಿಳಿ ಬಿಳಿ ದೋತರೇನ-
ಹೊಳಿ ಹೊಳಿಯುವ ಅಂಗಿಯೇನ,
ಜರದಂಚಿನ ಪಟಕಾ ಸುತ್ತಿ
(‘ಚಿನ್ನತ್ತಿಯ ಮಗ’ )
ತೊಂಡಿದುಟಿಯ ಮ್ಯಾಲ್ ಮಲಗಿದ್ದರು ನಗಿ ಕಾಣಲಿಲ್ಲೊ ಹಲ್ಲಾ
ಕಿರಿಗುಣಿ ಕೂಡಿಯಿತ್ತೊ ಗಲ್ಲಾ
(ಬಡವರ ಮಗಳು)
‘ಹೆಜ್ಜೆ ಹೆಜ್ಜೆಗೂ ಘಿಲಿಘಿಲಿ, ಘಿಲಿಘಿಲಿ ಗೆಜ್ಜಿಯ ಕುಣಿಸುತ ಬರುವಾಕಿ’
(ಗೌಡರ ಮನಿಸೊಸಿ),
ಹೆಂಗಸು ಜಲಮಾ ಕೊಟ್ಟನ್ಯಾಕ ಶಿವ ಅಂತ ಮನಸಿನೊಳಗ –
ಹಾಂಗs ಉರಿಯತೈತಿ ಕೊರಗ
(ಗೆಣತೀ ಏನ ಮಾಡ ಅಂತೀ ಪು. 39),
ಬುತ್ತೀ ತೊಗೊಂಡು ಹೋಗ್ತಿನಿ ಹೊಲಕ
ನಾ ಬರ್ತೀನಿ ಹೊತ್ತು ಮುಣುಗುದಕ
ಹೊಳಿ ದಂಡೀ ಮ್ಯಾಗ ನಮ್ಮ ಹೊಲಾ
ಬೆಳೆದು ನಿಂತೈತಿ ಬಿಳಿ ಜೋಳ ನಿಲಾ
(ಬೆಳವಲ ಒಕ್ಕಲತಿ)
ದೇವರದೆಂತಾ ಹೊಡ್ಡಸ್ತಿಕೆ ಬಿಡು ನನ್ನ ದೊರಿಯ ಮೇಲs
ನನ್ನ ಹೊರತು ಇನ್ನೊಂದು ಹೆಣ್ಣ ಮ್ಯಾಲಿಲ್ಲ ಅವಗ ಖ್ಯಾಲ
(ದೇವರ ದೇವರು)
ನಮ್ಮೂರ ಜಾತ್ರಿ ಬಲು ಜೋರಾ,
ಕರಿಯಾಕs ಬಂದಾರs ತವರವರಾ
(ನಮ್ಮೂರ ಜಾತ್ರಿ)
ಹೈನದೆಮ್ಮಿ ನೋಡ ಹಾಲ ಸಮುದರಾ
ಎಷ್ಟು ತಿನ್ನಾಕಿ ನೀ ಕೆನಿಕೆನಿ ಮಸರಾ
(ಯಾತಕವ್ವಾ ಹುಬ್ಬಳ್ಳಿ ಧಾರ್ವಾಡ)

ಹೀಗೆ ಜನಪದ ಜೀವನದ ವೈವಿಧ್ಯಮಯ ಚಿತ್ರಣ ವನ್ನು ಕಣ್ಣಿಗೆ ಕಟ್ಟುವಂತೆ ಆನಂದಕಂದ ರು ‘ನಲ್ವಾಡುಗಳು’ ಸಂಕಲನದ ಕವಿತೆಗಳಲ್ಲಿ ಕಂಡರಿ ಸಿದ್ದಾರೆ. ಇಲ್ಲಿ ಉತ್ತರ ಕರ್ನಾಟಕದ ಬೆಳಗಾವಿ- ಧಾರವಾಡ-ವಿಜಯಪುರ ಭಾಗದ ಕನ್ನಡ ಭಾಷಾ ಪ್ರಭೇಧವನ್ನು ತಮ್ಮ ಕವಿತೆಗ ಳಲ್ಲಿ ಬಳಸಿಕೊಂಡಿ ದ್ದಾರೆ. ಸತ್ವಪೂರ್ಣ ಜಾನಪದೀಯ ಭಾಷೆ ಇಲ್ಲಿದೆ. ಒಟ್ಟಿನಲ್ಲಿ ‘ಆನಂದಕಂದ’ರ ಕವಿತೆಗಳು ಕನ್ನಡದ ನವೋದಯ ಕಾವ್ಯ ಸಂದರ್ಭದಲ್ಲಿ ಜಾನಪದ ವನ್ನು ಅದರ ಮೂಲ ತನದಿಂದಲೇ ಎತ್ತಿಕೊಂಡಷ್ಟು ಪ್ರಭಾವಕ್ಕೆ ಒಳಗಾಗಿವೆ. ಜನಪದ ಭಾಷೆ, ಛಂದಸ್ಸು, ನುಡಿಗಟ್ಟು ಮತ್ತು ಜನಪದರ ವಿವಿಧ ಲಯ ಗಳೆಲ್ಲವನ್ನು ಹಾಗೂ ಅವರ ಬದುಕಿನ ಕ್ರಮ ವನ್ನು ಅವರ ಕವಿತೆ ಗಳು ಯಶಸ್ವಿಯಾಗಿ ತನ್ನದಾಗಿಸಿಕೊಂಡಿವೆ. ಬೇಂದ್ರೆ, ಮಧುರ ಚೆನ್ನರಂತೆ ಜಾನಪದದ ಮಹತ್ವಪೂರ್ಣ ಸಾಧಕರಾಗಿ ಬೆಟಗೇರಿ ಕೃಷ್ಣಶರ್ಮರು ನವೋದಯ ಕಾವ್ಯದ ಸಂದರ್ಭದಲ್ಲಿ ಎದ್ದು ಕಾಣುತ್ತಾರೆ.

✍️ಡಾ.ಪ್ರಕಾಶ ಗ.ಖಾಡೆ. ನವನಗರ,ಬಾಗಲಕೋಟ