ನಾಡಿನ ದೇವಾಲಯಗಳಲ್ಲಿ ಹಲವು ಕಡೆ ದೇವಾಲಯಗಳು,ದೇವಾಲಯಗಳ ಸಂಕೀರ್ಣ ವನ್ನೇ ನೋಡಬಹುದು. ಆದರೆ ವಿವಿಧ ಕಾಲ ಘಟ್ಟಗಳ ಲ್ಲಿ ಪ್ರಮುಖ ಕೇಂದ್ರವಾಗಿದ್ದ ಕಾಲದ ಹೊಡೆತಕ್ಕೆ ಸಿಕ್ಕು ತನ್ನ ವೈಭವವನ್ನು ಕಳೆದು- ಕೊಂಡಿರುವ ಊರೊಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಅಸಂದಿಯ ಲ್ಲಿದೆ.

ಇತಿಹಾಸ ಪುಟದಲ್ಲಿ ಕದಂಬರು – ಗಂಗರು – ಹೊಯ್ಸಳರು – ವಿಜಯನಗರ ಕಾಲದಲ್ಲಿ ಪ್ರಮುಖ ಕೇಂದ್ರವಾಗಿತ್ತು. ಇಲ್ಲಿ ಸುಮಾರು 17 ಶಾಸನಗಳು ದೊರೆತಿದ್ದು ಅಸಂದಿ – ಅಸಂದಿ ನಾಡು ಎಂದೇ ದಾಖಲಾಗಿದೆ. ಕದಂಬರ ಕಾಲ ದಲ್ಲಿ (469) ಇಲ್ಲಿ ದತ್ತಿ ನೀಡಿದ ಉಲ್ಲೇಖವಿದ್ದು ನಂತರ ಗಂಗರ ಕಾಲದಲ್ಲಿ ಒಂದು ಶಾಖೆ ಇಲ್ಲಿಂದ ಲೇ ಆಡಳಿತ ನಡೆಸಿದ್ದು ಅಸಂದಿ ಗಂಗರು ಎಂದೇ ಪ್ರಸಿದ್ದಿ ಪಡೆದಿದ್ದರು. ಇಲ್ಲಿ ಗಂಗರ ಕಾಲದ 795, 899, 972, 1091, 1191 ರ ಶಾಸನ ಹಾಗು ವೀರಗಲ್ಲುಗಳು ದೊರೆತಿದೆ. ಇನ್ನು ನಂತರ ಹೊಯ್ಸಳರ ಕಾಲದಲ್ಲಿ ಬಲ್ಳೇಶ್ವರ ದೇವಾಲಯ ನಿರ್ಮಿಸಿದ ಉಲ್ಲೇಖ ಹಾಗು ವಿಜಯನಗರ ಕಾಲದಲ್ಲಿ 1542 ರಲ್ಲಿ ಅಚ್ಯುತ ರಾಯ ಸುಂಕ ವಿನಾಯತಿ ಶಾಸನವಿದೆ. ಇಲ್ಲಿನ ಶಾಸನಗಳಲ್ಲಿ 13 ದೇವಾಲಯದ ಉಲ್ಲೇಖ ವಿದೆ (ಗಂಗೇಶ್ವರ, ಬ್ರಹ್ಮೇಶ್ವರ, ವೇದೇಶ್ವರ, ಮಾದೇಶ್ವರ, ಜಗದೀಶ್ವರ, ಬಲ್ಲೇಶ್ವರ, ಕೋಟೇ ಶ್ವರ, ನಖರೇಶ್ವರ, ದೇಕೇಶ್ವರ). ಬಹುತೇಕ ದೇವಾಲಯಗಳು ನಾಶವಾಗಿದ್ದು ನಮಗೆ ಈಗ ಸಿಗುವುದು ನಾಲ್ಕು ದೇವಾಲಯ ಮಾತ್ರ.

ಗಂಗೇಶ್ವರ – ಬ್ರಹ್ಮೇಶ್ವರ ದೇವಾಲಯ

ಕ್ರಿ.ಶ-1191 ರಲ್ಲಿ ಅಸಂದಿ ಗಂಗರ ಬೊಮ್ಮರಸ ನು ತನ್ನ ತಂದೆ ತಾಯಿಯ ಹೆಸರಲ್ಲಿ ಗಂಗೇಶ್ವರ ಹಾಗು ಬ್ರಹ್ಮೇಶ್ವರ ಎಂಬ ಜೋಡಿ ದೇವಾಲಯ ನಿರ್ಮಾಣ ಮಾಡಿ ರಾಜಗುರು ಕ್ರಿಯಾಶಕ್ತಿ ದೇವನಿಗೆ ಸಮರ್ಪಿಸಿದ ಉಲ್ಲೇಖ ವಿದೆ. 1216 ರಲ್ಲಿ ಈ ದೇವಾಲಯಕ್ಕೆ ದತ್ತಿ ನೀಡಿದ ಉಲ್ಲೇಖ ವಿದೆ. ಎರಡು ದೇವಾಲಯಗಳು ಒಂದೇ ಮಾದರಿ ಯಲ್ಲಿದ್ದು ಗರ್ಭಗುಡಿ, ಅಂತರಾಳ ಹಾಗು ಮುಖ ಮಂಟಪವನ್ನು ಹೊಂದಿದೆ. ಗರ್ಭಗುಡಿ ಯಲ್ಲಿ ಗಂಗೇಶ್ವರ ಶಿವಲಿಂಗವಿದೆ. ಇನ್ನೊಂದು ಗರ್ಭಗುಡಿಯಲ್ಲಿ ಶಿವಲಿಂಗ ಇಲ್ಲ. ಇನ್ನು ಮುಖಮಂಟಪದಲ್ಲಿ ಸುಮಾರು 40 ಕಂಭ ಗಳಿದ್ದು ಕಕ್ಶಾಸನವಿದೆ. ಇಲ್ಲಿನ ವಿತಾನದಲ್ಲಿನ ರಾಮಾಯಣದ ಕಥೆಗಳು ಹಾಗು ಅಷ್ಟದಿಕ್ಪಾಲ ಕರ ಕೆತ್ತೆನೆ ಸುಂದರವಾಗಿದೆ.

ಬಲ್ಲೇಶ್ವರ – ವೀರಭದ್ರ ದೇವಾಲಯ

ಮೂಲತ: ಈ ದೇವಾಲಯವನ್ನು ಹೊಯ್ಸಳ ದೊರೆ ಎರಡನೇ ವೀರಬಲ್ಲಾಳನ ಕಾಲದಲ್ಲಿ 1206 ರಲ್ಲಿ ನಿರ್ಮಾಣವಾಗಿದ್ದು ಬಲ್ಲೇಶ್ವರ ಎಂದೇ ಉಲ್ಲೇಖಗೊಂಡಿದೆ. ಮೂಲತ: ತ್ರಿಕುಟಾ ಚಲ ದೇವಾಲಯವಾದ ಇದು ಮೂರು ಗರ್ಭಗುಡಿ, ಅಂತರಾಳ, ನವರಂಗ ಹಾಗು ಮುಖಮಂಟಪವನ್ನು ಹೊಂದಿದ್ದು ಪೀಠದ ಆದಾರದ ಮೇಲೆ ಇಲ್ಲಿ ಶಿವಲಿಂಗ, ಸೂರ್ಯ ಹಾಗು ಹರಿಹರನ ಶಿಲ್ಪ ಈ ಮೊದಲು ಇದ್ದು ಈಗ ಗರ್ಭಗುಡಿಯಲ್ಲಿ ಬಲ್ಲೇಶ್ವರ ಶಿವಲಿಂಗದ ಬದಲಾಗಿ ನಂತರ ಕಾಲದ ಸುಮಾರು ಐದು ಅಡಿ ಎತ್ತರದ ಕತ್ತಿ ಹಾಗು ಡಾಲುಗಳನ್ನ ಧರಿಸಿರುವ ವೀರಭದ್ರನ ಶಿಲ್ಪವಿದೆ. ಸೂರ್ಯನ ಬದಲಾಗಿ ಯೂ ವೀರ ಭದ್ರನ ಶಿಲ್ಪವಿದೆ. ಇನ್ನು ಇಲ್ಲಿನ ಕಟಾಂಜನದ ಲ್ಲಿರುವ ಹಲವು ವಾದ್ಯಾಗಾರರ ಜೊತೆಯಲ್ಲಿ ನರ್ತಿಸುವ ನಟರಾಜನ ಸುಂದರ ಕೆತ್ತೆನೆ ಇದ್ದರೆ ವಿತಾನದಲ್ಲಿನ ಅಷ್ಟದಿಕ್ಪಾಲಕರ ಕೆತ್ತೆನೆ ಗಮನ ಸೆಳೆಯುತ್ತದೆ. ಇನ್ನು ಹೊರಭಾಗದ ಪ್ರವೇಶ ದಲ್ಲಿ ತ್ರಿವಿಕ್ರಮನ ಕೆತ್ತೆನೆ ಸುಂದರವಾ ಗಿದೆ. ಇನ್ನು ಇಲ್ಲಿ ಯುಗಾದಿಯ ನಂತರ ನಡೆಯು ವ ಕೆಂಡೋತ್ಸವಕ್ಕೆ ವಿವಿಧ ಬಾಗದಿಂದ ಅಪಾರ ಪ್ರಮಾಣದಲ್ಲಿ ಜನ ಸೇರುತ್ತಾರೆ.

ಚಂಡಿಕೇಶ್ವರ ದೇವಾಲಯ

ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ಈ ದೇವಾಲಯ ನಿರಾಲಂಕರವಾಗಿದ್ದು, ಎರಡು ಗರ್ಭಗುಡಿ, ಅಂತರಾಳ ಹಾಗು ಮುಖಮಂಟ ಪವನ್ನು ಹೊಂದಿದೆ. ದೇವಾಲಯ ಅವನತಿಯ ಅಂಚಿಗೆ ಸಾಗಿದ್ದು ಗರ್ಭಗುಡಿಯಲ್ಲಿ ಸುಮಾರು 3 ಅಡಿ ಎತ್ತರದ ಚಂಡಿಕೇಶ್ವರಿ ಮೂರ್ತಿ ಇದೆ. ಶಿಲ್ಪ ಅಪಸ್ಮಾರ ಪುರುಷನ ಮೇಲೆ ಇದ್ದು ರುಂಡ ಮಾಲೆ ಧರಿಸಿದ್ದು ಕೈಗಳಲ್ಲಿ ರುಂಡ ಹಾಗು ಪಾನ ಪಾತ್ರೆ ಇದ್ದು ಹಸನ್ಮುಖಿಯಾಗಿ ಇರುವುದು ವಿಶೇಷ. ಕೆಳ ಭಾಗದಲ್ಲಿ ಕುಬ್ಜ ಕೆತ್ತೆನೆ ಇದ್ದು ಸ್ಥಳೀಯವಾಗಿ ಚಂಡಿಕೇಶ್ವರಿ ಮಕ್ಕಳಲ್ಲಿ ಸೌಮ್ಯ ಳಾದಳು ಎಂಬ ನಂಬಿಕೆ ಇದೆ. ಇಲ್ಲಿನ ಎರಡು ಗರ್ಭಗುಡಿಯಲ್ಲಿ ಶಿವ ಲಿಂಗವಿದ್ದು ವಿತಾನದಲ್ಲಿ ನ ಅಷ್ಟ ದಿಕ್ಪಾಲಕರ ಕೆತ್ತೆನೆ ಇದೆ. ಇಲ್ಲಿ ನವೀಕ ರಣ ಸಂದರ್ಭದಲ್ಲಿ ಕೇಶವ ಶಿಲ್ಪ ಸಿಕ್ಕಿದೆ.

ಇಲ್ಲಿ ವಿಜಯನಗರ ಕಾಲದ ರಂಗನಾಥ ದೇವಾಲಯ ಇದ್ದು ಹಾಗು ಅಲಲ್ಲಿ ಹಲವು ಶಿವಲಿಂಗಗಳು ಸಿಕ್ಕಿದ್ದು ಅಂಜನೇಯ ದೇವಾಲಯ ಹಾಗು ಆವರಣದಲ್ಲಿ ವೀರಗಲ್ಲು ಗಳು ಹಾಗು ದಾನ ಶಾಸನಗಳು ಸಿಕ್ಕಿದೆ.

ಇನ್ನು ಹಲವೆಡೆ ಹಲವು ಶಿಲ್ಪಗಳು ಅಲಲ್ಲಿ ಕಂಡು ಬರಲಿದ್ದ ವೈಭವದಿಂದ ಮೆರೆದ ನಂತರ ಕಾಲ ದಲ್ಲಿ ಕಾಲದ ಓಟಕ್ಕೆ ಸಿಕ್ಕು ಚಿಕ್ಕ ಗ್ರಾಮ ವಾಗಿ ತನ್ನದೇ ವೈಭವ ಸಾಕ್ಷಿಗಳ ಪುನಶ್ಚೇತನಕ್ಕೆ ಕಾದು ಕುಳಿತ ಇತಿಹಾಸದ ಕೊಂಡಿಯಂತಿದೆ. ಇನ್ನಾದರು ಇದರ ಉತ್ಕನನ ನಡೆದಲ್ಲಿ ಹಲವು ಕುರುಹು ಸಿಕ್ಕೀತು.

ತಲುಪುವ ಬಗ್ಗೆ : ಕಡೂರಿನಿಂದ ಸುಮಾರು 22 ಕಿ.ಮೀ ದೂರದಲ್ಲಿದ್ದು ಕಡೂರು– ಹಿರೇನ ಲ್ಲೂರು – ಅಸಂದಿ ತಲುಪಬಹುದು.

✍️ಎನ್.ಎಸ್.ಶ್ರೀನಿವಾಸಮೂರ್ತಿ 
ಬೆಂಗಳೂರು