ವಚನಕಾಗಿ ಸತಿ ಮಾರಿದವನ ಏನೆಂದು ಕರೆಯಲಿ
ಮೋಜಿಗಾಗಿ ಪಣಕೆ ಇಟ್ಟವನ ಏನೆಂದು ಕರೆಯಲಿ

ಕಪಟವ ತಿಳಿಯದೆ ಮುಗ್ಧತೆಯಲಿ ತನು ಅಪಿ೯ಸಿದಳು
ನಿಜ ಅರಿಯದೆ ಶಿಲೆ ಮಾಡಿದವನ ಏನೆಂದು ಕರೆಯಲಿ

ಮಾತೃ ವೈಭವದಿ ಪ್ರಕೃತಿ ಸೊಬಗ ನೋಡ ಬಯಸಿದಳು
ದಯೆ ಇಲ್ಲದೆ ಕಾಡಿಗೆ ಕಳಿಸಿದವನ ಏನೆಂದು ಕರೆಯಲಿ

ರಾಜ ವೈಭವದಿ ಮೆರೆಯುತ ಕನಸ ಲೋಕದಿ ಮಲಗಿದಳು
ಇರುಳಲಿ ಸುಖ ತೊರೆದು ಹೋದವನ ಏನೆಂದು ಕರೆಯಲಿ

ನಿರಾಭರಣ ಸುಂದರಿ ಚಿನ್ನದ ಜಿಂಕೆಗೆ ಆಸೆ ಪಟ್ಟಳು
ರೂಪಕೆ ಮರುಳಾಗಿ ಕದ್ದವನ ಏನೆಂದು ಕರೆಯಲಿ

ಸಂತಸದ ಗಳಿಗೆಯ ನಿರೀಕ್ಷೆಯಲಿ ಬದುಕನು ಸಾಗಿಸಿದಳು
ಮನದ ಬಯಕೆಗಳ ಅರಿಯದವನ. ಏನೆಂದು ಕರೆಯಲಿ

ತಮ್ಮ ದಾಹಕಾಗಿ ಅಬಲೆಯನು ಬಲಿ ಪಶು ಮಾಡಿದರು
“ಪ್ರಭೆ”ಯ ಪ್ರಬಲತೆ ತಿಳಿಯದವನ ಏನೆಂದು ಕರೆಯಲಿ

✍️ಪ್ರಭಾವತಿ ಎಸ್ ದೇಸಾಯಿ
ವಿಜಯಪುರ