ಗುಂಡುಂಡ ತೇಜ ಕಣ್ಣಂಚಿನಲಿ ಮಿಂಚು
ಗಲ್ಲದಾ ಗುಳಿಗಳ ಕಚಗುಳಿ
ರಸರಾಜನರ್ತನದಂತೆ ಗಾಂಭೀರ್ಯ
ಸಂಪಿಗೆಯ ನಾಸಿಕ ಚೆಲುವ
ಕೇಸರಿ ನಿಲುವಂಗಿ ತಲೆ ಮ್ಯಾಲೊಂದು ಪೇಟ
ಅಲಕ್ಷಿತನಂತೆ ಕುಳಿತಿರುವನಲ್ಲ!

ಯಾರೀತ! ಆವ ದೇಶ? ಇದೇನು ವೇಷ
ಏನ್ ಚೆಂದ ಮೈಕಟ್ಟು ನೋಟ
ಹೆಂಗಳೆಯರನೇಕ ತಿಂದುಂಡವರಂತೆ
ಮಿಕ ಮಿಕ ನೋಡಿಕೊಂಡರು
ತಮ್ಮನಸ್ಸಿನ ಕನ್ನಡಿಯೊಳಗೆ ತೇಲಾಡಿದಂತೆ
ವಿಫಲ ಪ್ರಯತ್ನ ಗೋಳಾಟ !

ತಾತ್ಸಾರ ಮತ್ತಪಹಾಸ್ಯದಿಂದ ಕೆಲವರ್ !
ಮುಸು ಮುಸು ಮುಸುಕಾಡಿದರು
ಇವನಾರೋ ದಾರಿತಪ್ಪಿ ಬಂದವನೆಂಬಂತೆ
ಗೇಲಿ ಮಾಡಿ ಆಡಿ ನಸುನಕ್ಕರು
ಓ ಭಾರತೀಯನೆಂಬ ಕೀಳರಿಮೆ ಕಡೆನೋಟ
ಇವಯೇನ ಮಾತನಾಡುವ ?

ಮಾತೃಭೂಮಿಯ ಮೇಲೆ ಕತ್ತಲೆಯ ಆಲಿಂಗನ
ನಿದ್ದೆಯಿಂದೆದ್ದು ಬಂದವನಂತೆ ಬಂದ ನಾ
ಪಡುವಲ ದೇಶದ ನವತರುಣನ ಅಬ್ಬರಕೆ
ತರುಲತೆ ಬಳ್ಳಿ ಹೂಗಳರಳಿ ನಿಂತವು
ತಾತ್ಸಾರದ ನಡುವೆ ವಿಶ್ವ ವಿದೂಷಕರೆಲ್ಲ
ಕಿವಿಗೊಟ್ಟರು ಮಾತಿನ ಕರತಾಡನಕೆ

ಬಾನು ಭುವಿಗಳೆಲ್ಲ ಬೆಳಗಿದವು ಫಳಪಳನೆ
ಸರ್ವಧರ್ಮ ಸಹಿಷ್ಣುತೆಯ ಸಾರದಲಿ
ಪಂಡಿತ ಪಾಮರರೆಲ್ಲ ಎದ್ದು ನಿಂತು ಕೈಮುಗಿದರು
ಧನ್ಯತೆಯ ಭಾವದಲಿ ಸ್ನೇಹ ಸೂಸುತ
ವಿಶ್ವ ಸರ್ವಧರ್ಮ ಸಮ್ಮಿಳನಕೆ ಕಳಶವಾದರು
ಹಾಡಿಹೊಗಳಿದವು ವಿಶ್ವಕೋಶಗಳೆಲ್ಲ

ಹುಲಿಯಂತೆ ಘರ್ಜಿಸಿದರು ಗುರುಕಾರುಣ್ಯದ ಸಾರ
ಕಾಣ್ಕೆಯಿತ್ತರು ತಾಯ್ನೆಲದ ಋಣಭಾರ
ವಿಶ್ವಭೂಪಟದಿ ಬೆಳಗಿದರು ಚಿರಸ್ಥಾಯಿಯಾಗಿ
ಭಾರತವೆಂದರೆ ಗೌರವ ಭಾವನೆ ಬರುವಂತಾಗಿ
ಯುವಪೀಳಿಗೆಗೆ ಸ್ಫೂರ್ತಿ ಕಳಶವಾದರು
ಅವರೇ ಭೈರಾಗಿ ಸ್ವಾಮಿವಿವೇಕಾನಂದರು ಶ್ರೀಧರ ಗಸ್ತಿ ಧಾರವಾಡ

✍️ಶ್ರೀಧರ ಗಸ್ತಿ
ಧಾರವಾಡ