ಪ್ರತಿ ನಿನ್ನ ಹೆಜ್ಹೆಯಲಿ
ನಾನು ಒಂದು ಹೆಜ್ಜೆ
ಹಿಂದೆ ನಡೆದೆ
ಪ್ರತಿ ಮೊದಲ ಹೆಜ್ಜೆ ಇಡುವಾಗ
ಹಿಂದೆಮುಂದೆ ನೋಡಿದೆ
ಒಮ್ಮೊಮ್ಮೆ ಕಾಲು ಕೀಳದೆ
ಇದ್ದಲ್ಲಿಯೇ ಉಳಿದೆ
ನೀನು ಮುಂದಾಗಲು
ನಾನು ಹಿಂದೆ ಸರಿದೆ

ನೀನೇ ಮುಂದೆಂದು
ತಿಳಿಯುತ್ತಲೇ ನೀ ನಡೆದೆ
ಒಂದು ಹೆಜ್ಜೆ ಹಿರಿದಾಗಿಸಲು
ಮತ್ತೊಂದು ಹೆಜ್ಜೆ ಕಿರಿದಾಗಿಸಿದ್ದು
ಯಾರಿಗೂ ಕಾಣಲೇ ಇಲ್ಲ

ನಡೆದ ಭೂಮಿ ಮೌನವಾಗಿತ್ತು
ನೋಡಿಯೂ ನೋಡದಂತೆ ಸುಮ್ಮನಿತ್ತು

ಒಂದು ಹೆಜ್ಜೆಯಲ್ಲೇ ಬಲಿಯಾದ ಬಲಿ
ಭೂಗತನಾದದ್ದು ಆ ಹೆಜ್ಜೆಯ ಮಹಿಮೆಯೆ..!
ಪಾತಾಳ ಆಳಿದನೆಂದು ಲೋಕ ಹೇಳಿದ್ದು
ಬೇರೆಯ ಮಾತುಬಿಡು..!

ಒಂದು ವೇಳೆ…,
ಆ ಹೆಜ್ಜೆ ನಾನಿರಿಸಿದ್ದರೆ‌.‌
ಲೋಕ ಪ್ರಳಯವಾಗುತ್ತಿತ್ತೆ..?!
ಭುವಿಯ ಕುಟುಂಬಗಳು
ಅಲ್ಲೋಲ ಕಲ್ಲೋಲವಾಗುತ್ತಿತ್ತೆ..?!
ಮಾನವಂತರ ಮಾನ ಹರಾಜಾಗುತ್ತಿತ್ತೆ..?!

ಚಿಕ್ಕ ಪ್ರಶ್ನೆಯೊಂದು ಬೃಹದಾಕಾರವಾಗಿ
ಬೆಳೆದು ನಿಂತದ್ದು
ಉತ್ತರವಿಲ್ಲದ ಪ್ರಶ್ನೆಯಾಗಿಯೇ ಬೆಳೆದದ್ದು..
ವಿಪರ್ಯಾಸ..!

ಉತ್ತರ ಹುಡುಕ ಹೋಗಿ ಬಳಲಿ
ನಾ ಬೆಂಡಾಗಿದ್ದು
ಪ್ರಶ್ನೆಯ ತಂಟೆಗೆ ಹೋಗದೆ
ಹೆಜ್ಜೆ ಹಿಂದೆ ಸರಿಸಿದ್ದು
ಹಳೆಯ ಮಾತಾದರೂ..
ಹಳೆಯದಲ್ಲಬಿಡು..!
ಯಾವಾಗಲೂ ಹೊಸದೆ..!

ಈಗ….,
ಒಂದು ಹೆಜ್ಜೆ ಹಿಂದಿರಿಸಿ
ಅಚ್ಚುಕಟ್ಟಾಗಿ ಜೀವನ
ನಿರ್ವಹಿಸುವದರಲ್ಲಿ ಪಳಗಿದ್ದೇನೆ.
ಎಷ್ಟೆಂದರೆ…
ಮತ್ತೊಬ್ಬರಿಗೆ ತರಬೇತಿ ಕೊಡುವಷ್ಟು..!!

ಶ್ರೀಮತಿ ಅನಸೂಯ ಜಹಗೀರದಾರ
ಕೊಪ್ಪಳ