ಸಾಹಿತ್ಯ ಸಂಗೀತ ವೇದಾಂತ ಮತ್ತು ವಿಜ್ಞಾನ ಇವುಗಳ ತಿಳುವಳಿಕೆಯನ್ನು ತನ್ನೊಳಗೆ ಅರಗಿಸಿಕೊಂಡು ಪುತಿನ ಅವರ ಸೃಜನಶೀಲ- ತೆಯು ಕನ್ನಡಿಗರ ಪಾಲಿಗೆ ಒದಗಿದ ದೊಡ್ಡ ಅದೃಷ್ಟವೇ ಸರಿ. ಕಾವ್ಯ ಗೀತ ರೂಪಕ ಲಲಿತ ಪ್ರಬಂಧ ಹಾಗೂ ಕಾವ್ಯಮೀಮಾಂಸೆಯ ಬರಹಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಅವರು ಒತ್ತಿರುವ ಛಾಪು ಅಭಿನಂದನೀಯ ಗಮನಾರ್ಹ.

“ಭವಸಮುದ್ರವನ್ನು ಮಥಿಸಿ ಭಾವವನ್ನು ಪಡೆಯುವುದೇ ಕವಿಯ ಕಸುಬು” ಎನ್ನುವ ಪುತಿನ ಅವರು ಕಾವ್ಯದ ಓದುವಿಕೆಯ ಪ್ರಕ್ರಿಯೆ ಯಲ್ಲಿ “ಸೃಜನಶಕ್ತಿಯ 2 ಪ್ರತಿಭಾ ಪ್ರಕಾರಗಳು ವರ್ತಿಸುತ್ತವೆ ಕವಿಯಲ್ಲಿ ಕಾರಯಿ ತ್ರಿಯಾಗಿ ಸಹೃದಯರಲ್ಲಿ ಭಾವಯಿತ್ರಿ ಯಾಗಿ ಒಂದು ಇನ್ನೊಂದರ ಕೈಗನ್ನಡಿ ಎನ್ನಬಹುದು” ಎಂದು  ಹೇಳುತ್ತಾರೆ. ಇಂತಹ ಭಾವುಕ ಮನದ ಪ್ರಬುದ್ಧ ಕವಿ ತನ್ನ ಸಾಂಗತ್ಯ ದಲ್ಲಿನ ಕವಿಹೃದ ಯಗಳನ್ನು ಹೇಗೆ ಪರಿಭಾವಿಸಿ ರಬಹುದು ಅವರನ್ನು ಭಾವ ಶಬ್ದಗಳಲ್ಲಿ ಹೇಗೆ ವರ್ಣಿಸಿರ ಬಹುದು ಎಂದು ನೋಡುತ್ತಾ ಹೊರಟಾಗ …..

ಗಣೇಶ ದರ್ಶನ ಕವನ ಸಂಕಲನದಲ್ಲಿನ ಕವಿ ಬೇಂದ್ರೆಯವರನ್ನು ಕುರಿತ ಕವಿತೆ:

ಭವ್ಯ ಸುಂದರ ಕಾವ್ಯವನ್ನು ರಚಿಸಿದ ಬೆಡಗು ಹಾಡಿನ ಗುಂಗು ಊಹೆಯ ನವೋನವ ಗೇಯತೆಯನ್ನು ಭಾವನೆಯ ಉದಾರತೆಯನ್ನು ತಂದ ಸಿರಿಗನ್ನಡದ ಕವೀಶ್ವರ ಸುಹೃದ್ವರ ಈ ಬೇಂದ್ರೆ

ಎನ್ನುತ್ತಾರೆ.

ಯಾರ್ಯಾರ ಕೀಳ ಆಸೆಗಳಿಗೊ ಶಾಪಕ್ಕೊ ದುಷ್ಕೃತಿಯ ನಿಷ್ಕೃತಿಗೆ ಕನ್ನಡ ತಾಯಿ ತನ್ನ ನಾಡಿನಲ್ಲಿ ಅವಗಣನೆಗೀಡಾಗಿ ಅಮಂಗಳೆ 
ಎಂದೆನಿಸಿದ್ದ ವೇಳೆಯಲ್ಲಿ ಹಿರಿಮೆ ಇಲ್ಲದೆ ರೂವಿಲಿಯಂತೆ  ಬವಣೆ ಪಡುತ್ತಿರುವಾಗ ತನ್ನ ಸ್ವಂತಿಕೆಯ ಜೊತೆಗೆ ದಿವ್ಯತೆಯನ್ನು ಅಳವಡಿಸಿ ತಪೋವಿಪಾಕತೆಯೇ ಒದಗಿತೆಂಬಂತೆ ಕಾವ್ಯ ರಚಯಿಸಿ  ಭೂಮಿಗೆ ಇದು ಸೋಜಿಗ ಎಂದು ಜನ ಬೆರಗಾಗುವಂತಹ ಸುಂದರ ರೂಪವನ್ನು ಕನ್ನಡಕ್ಕಿತ್ತವರು, ಗಾಳಿಗೂ ಬಾಳು ಕೊಟ್ಟ ರೂವಾರಿಯಾದ ದತ್ತರಾಮ ಸಿದ್ಧರಾಮ ಎಂದು ವರ್ಣಿಸುತ್ತಾರೆ. ಈ ಸುಂದರ ಕಡೆಯ ಸಾಲು ಗಳನ್ನು ನೋಡಿ: 

ಹಿರಿಮೆಯ ನೀಗಿ ಹೆಸರನಳಿದು ರೂವಿಲಿಯಾಗಿ ಬನ್ನಪಡುತಿರಲು, ತಪೋವಿಪಾಕಮೊದವಿತೆನೆ 
ತನ್ನತೆಯ ಜೊತೆಗೆ ದಿವ್ಯತೆಯನಳವಡಿಸಿ ತಿರೆಗೆ ಸೋಜಿಕಮೀಕೆ ಎಂದು ಜನ ಬೆರಗಾಗೆ 

ರೂಪವನ್ನಿತ್ತ ರಾಮನಾದೆಯೈ  ದತ್ತರಾಮ
ಗಾಳಿಗೂ ಬಾಳೀವ ರೂವಾರಿ, ಸಿದ್ಧರಾಮ

ಕನ್ನಡ ತೀವ್ರ ನಿಕೃಷ್ಟ ಸ್ಥಿತಿಗೆ ಹೋಗಿದ್ದಾಗ ಕನ್ನಡ ತಾಯಿ ಕನಸಿನಲ್ಲಿ ಬೇಂದ್ರೆಯವರ ಜೊತೆ ನಡೆಸುವ ಸಂವಾದದ ಕವನ ಇಲ್ಲಿ ನೆನಪಾಗು ತ್ತದೆ. ಹಾಗೆಯೇ ಸಮರದೋಪಾದಿ ಯಲಿ ಅಂದಿನ ಕವಿಗಳು ಕನ್ನಡದುನ್ನತಿಗಾಗಿ ಪಟ್ಟ ಕಷ್ಟ ಇಟ್ಟ ಹೆಜ್ಜೆಗಳ ನೆನಪಾಗುತ್ತದೆ ಮನದಲ್ಲಿ ಕೃತಜ್ಞತಾ ಭಾವ ತಾನೇತಾನಾಗಿ ಮೂಡುತ್ತದೆ. ಪುತಿನ ಅವರ ಮೂಲಕ ಬೇಂದ್ರೆಯವರಿಗೆ ಕನ್ನಡ ನಾಡು ನುಡಿ ನಮನವನ್ನು ಸಲ್ಲಿಸು ವಂತಿದೆ  ಈ ಕವನ.  

ಮುಂದೆ “ಇರುಳ ಮೆರುಗು” ಕವನಸಂಕಲನ ದಲ್ಲಿ “ತೀನಂಶ್ರೀಯವರನ್ನು ನೆನೆದು” ಈ ಕವಿತೆಯಲ್ಲಿ ದೂರಾದ ತೀ.ನಂ.ಶ್ರೀ ಯವರ ಬಗೆಗಿನ ತಮ್ಮ ಭಾವವನ್ನು ಅವರ ಅಗಲುವಿ ಕೆಯ ದುಃಖವನ್ನು ಹೀಗೆ ಹೇಳುತ್ತಾರೆ.

ಕನ್ನಡ ಪಾಂಡಿತ್ಯಕ್ಕೆ ಒಂದು ಸೀಮೆ ಮೇರೆ ಎಂದರೆ ಶ್ರೀ ತೀ.ನಂ.ಶ್ರೀ ಎನ್ನುವಷ್ಟು ಪಾಂಡಿತ್ಯ ಕ್ಕೆ ಹೆಸರಾಗಿದ್ದವರು  ಈಗ ಮನ್ನಣೆ ಕಾಣುತ್ತಿ ರುವ ವೇಳೆಯಲ್ಲಿ ನಗುಮೊಗದ ಕಳೆಯನ್ನು ಮಾತ್ರ  ಬಿಟ್ಟು ಜೊತೆ ಇರದೆ ಎಲ್ಲಿ ಹೋದಿರಿ ಎಂದು ಹಲುಬುತ್ತಾರೆ.

ಸಂತಸದಲ್ಲಿ ಹಿಗ್ಗುತ್ತಾ ಕೊರಗಿನಲ್ಲಿ ಕುಗ್ಗುತ್ತಾ ಇಂಥವರ ಗೆಳೆತನವೇ ಜೀವನದ ಪರಮ ಸೌಭಾಗ್ಯ ಎಂದೆನಿಸುವಂತೆ ಮಾಡಿದ, ಅಂತ ರಂಗವನ್ನು ತೆರೆದು ಸಹ ಭಾವವನ್ನು ತೋರಿದ ಮಿತ್ರ ನನ್ನನ್ನೇ ಒಂಟಿಯಾಗಿಬಿಡುವ ಮನ ನಿನಗೆ ಹೇಗೆ ಬಂತು ಎಂದು ದುಃಖದಿಂದ ಪ್ರಶ್ನಿಸು ತ್ತಾರೆ. 

ಅವರ ಸ್ನೇಹ ಸೌಜನ್ಯದ ಪ್ರೀತಿ ವಿಶ್ವಾಸದ ಅರಿವಿದ್ದ ಇವರು ನಾ ಬರುವ ವೇಳೆಗೆ ಆ ಜಾಗವನ್ನು ಹಸನು ಗೈಯಲೆಂದು ನನಗಿಂತ ಮುಂಚೆಯೇ ಹೊರಟಿರಬೇಕು ಎಂದು ಭಾವಿಸುತ್ತಾರೆ.  

ಇಂದು ಬರೀ ನೆನಪಾಗಿರುವ  ಕನವರಿಸುವ  ತೀನಂಶ್ರೀ ಅವರು ಸರಸ್ವತಿಯ ನೆಲೆಗೆ ಹೋಗಿ ದ್ದಾರೆ ಆ ದಿವ್ಯ ಸಭೆಯೊಳಗೆ ಅವರಿಗೆ ಸನ್ಮಾನ ಗೈಯ್ಯಲಾಗುತ್ತಿದೆ ಎಂದೇ ಯೋಚಿಸುತ್ತಾರೆ. ಈ ಕಡೆಯ ಸಾಲುಗಳ ಓದು: 

ಇಂದು ಬರಿ ನೆನವಾದೆ  ಬರಿ ದುಗುಡವಾದೆ  
ಕವಿತೆ ಕನವರಿಸುತಿದೆ; 
ನೀ ಸಂಜೆಯಧಿದೇವಿ ಸರಸ್ವತಿಯ ನೆಲೆಗೆ ಹೋದೆ 
ಸಲ್ಲುತ್ತಿದೆ ಆ ದಿವ್ಯ ಸಭೆಯೊಳಗೆ ನಿನಗೆ ಮರ್ಯಾದೆ.

ಈ ಸಾಲುಗಳಲ್ಲಿ ಅವರಿಗೆ ತೀ.ನಂ.ಶ್ರೀಯವರ ಬಗ್ಗೆ ಇದ್ದ ಅದರ ಅಭಿಮಾನಗಳು ಪದ ತೋರಣಗಳ ಆಗಿದೆ ಅವರೆಡೆಗಿನ ಸ್ನೇಹ, ವಿಶ್ವಾಸಗಳು ಪಡಿನೆಳಲಾಗಿ ಆವರಿಸಿದೆ. ಆತ್ಮೀಯತೆಯ ಪರಾಕಾಷ್ಠೆಯನ್ನು ತೋರಿಸುವ ಸುಂದರ ಸಾಲುಗಳು.

ಮತ್ತಷ್ಟು ಕವಿಗಳ ಬಗೆಗಿನ ಪುತಿನ ಕೃತಿಗಳನ್ನು ಮುಂದಿನ ಅಂಕಣದಲ್ಲಿ ಸಾದರಪಡಿಸುವೆ.  ಪುತಿನ ಅವರ ಕವಿಯ ಬಗೆಗಿನ ಈ ಸಾಲುಗ ಳೊಂದಿಗೆ ಅಂಕಣಕ್ಕೆ ವಿರಾಮ ಹೇಳೋಣ:

ಎಚ್ಚರದಿರವಿಗೆ ಹುಚ್ಚರ ಬಗೆ_
ಯಚ್ಚೊತ್ತುವ ಸಾಹಸ ಕವಿಗೆ ಅಚ್ಚರಿಗೊಳಿಸುವ ಅಚ್ಚಾಚ್ಚರ ಮನ ಮುಚ್ಚುಮರೆಯೆ ಸರಿ ಕಡುಭವಿಗೆ 

✍️ಸುಜಾತಾ ರವೀಶ್ 
ಮೈಸೂರು