ಗಾಳಿಯನ್ನು ಆಹ್ಲಾದಿಸಿ ಆಹ್ವಾನಿಸಿದ ಅಪ್ರತಿಮ ಪೂರ್ವಸೂರಿಗಳ ಘನವಾದ ಪರಂಪರೆಯೇ ನಮ್ಮ ಕನ್ನಡ ಸಾಹಿತ್ಯಕ್ಕಿದೆ.

ಕಡಲಿಗೆ ಬಂತು ಶ್ರಾವಣಾ|ಕುಣಿಧ್ಹಾಂಗ ರಾವಣಾ|
ಕುಣಿದಾವ ಗಾಳಿ| ಭೈರವನ
ರೂಪತಾಳಿ |

ಎಂದು ಗಾಳಿಯನ್ನು ಭೈರವನಿಗೆ ಸಮೀಕರಿಸಿ ಹಾಡಿದ ಬೇಂದ್ರೆಯವರು ಗಾಳಿಯೊಂದಿಗಿನ ಅದ್ವೈತದ ಸಾಂಗತ್ಯವನ್ನು ಶ್ರಾವಣದ ಆವರ ಣದಲ್ಲಿಟ್ಟು ಆನಂದಿಸಿದವರು.

ಜೇಡರದಾಸಿಮಯ್ಯನವರು:

‘ಇಳೆ ನಿಮ್ಮ ದಾನ; ಬೆಳೆ ನಿಮ್ಮ ದಾನ; ಸುಳಿದು ಸೂಸುವ ಗಾಳಿ‌ ನಿಮ್ಮ ದಾನ’

ಎಂದು ಹಾಡಿ ಗಾಳಿಯೊಂದಿಗಿನ ತಮ್ಮ ಸಾವ ಯವ ಆಧ್ಯಾತ್ಮಿಕ ಸಂಬಂಧವನ್ನು ಸಾಮಾನ್ಯೀ ಕರಣಗೊಳಿಸಿದ್ದಾರೆ. ಭೂಮಿ,ಅಗ್ನಿ, ವಾಯು, ನೀರು, ಆಕಾಶ ಎಂಬ ಪಂಚಭೂತಗಳಲ್ಲಿ ಅಗ್ರ ಸ್ಥಾನ ಸಲ್ಲಬೇಕಾದದ್ದು‌ ಕೂಡ ಗಾಳಿಗೇ. ಗಾಳಿ ಯೊಂದಿಲ್ಲದಿದ್ದರೆ ಪಂಚಭೂತಗಳು ಪರಿಪೂ ರ್ಣತೆಯನ್ನನುಭವಿಸಲು ಸಾಧ್ಯವಿಲ್ಲ. ಇವು ಒಂದರ ಮೇಲೊಂದು ಹೆಗಲ ಮೇಲೆ ಕೈಹಾಕಿ ಮೈತ್ರಿ ಮಾಡಿಕೊಂಡೇ ಜನ್ಮತಾಳಿರುವಂತೆ ಕಂಡರೂ ಇವುಗಳ ನಡುವಿನ ಅಂತರ್ಧ್ಯಾನ ವಾಗಿ ಗಾಳಿಗೊಂದು ಅನನ್ಯ ಸ್ಥಾನವಿದೆ.

ಬೀಸಿದರೆ ಬಿರುಗಾಳಿ, ಸುಳಿದರೆ ತಂಗಾಳಿ, ಮೀರಿದರೆ ಸುಂಟರಗಾಳಿ, ಬೀರಿದರೆ ಕುಳಿ- ರ್ಗಾಳಿ ಹೀಗೆ ಈ ಜಗತ್ತಿನಲ್ಲಿ ಮೂರ್ತವಾಗಿ ಒಡಲುಗೊಳ್ಳದಿದ್ದರೂ ಒಡಲುಗೊಂಡವರ ಜಗನ್ನಾಟಕ ರಂಗದಲ್ಲಿ ವೈವಿಧ್ಯಮಯ ಪಾತ್ರಗ ಳನ್ನು ನಿಭಾಯಿಸುತ್ತಿರುವ ಮಾಯಾವಿ, ಈ ಗಾಳಿಯೆಂಬ ಆವಿ. ಮೊದಲೇ ಕೈಗೆ ಸಿಗದ ಈ ಗಾಳಿಯೆಂಬ, ಗಿರಕಿಯಾಡಿಸುವ ಗಿರಾಕಿಯ ನ್ನು ಕಾವ್ಯದ ಆತ್ಮದೊಳಗಿಳಿಸುವ ಕವಿ ಕಾಯ್ಕಿಣಿ ಯವರ ಸಾಹಸ ಬಣ್ಣಿಸಲಸದಳ. ಈ ಗಾಳಿ ಯೆಂಬ ಅಭಂಗದ ಗೂಳಿಯು ಸಮಕಾಲೀನ ಸೂಕ್ಷ್ಮ ಸಂವೇದನಾಶೀಲ ಕವಿವರ್ಯ ಜಯಂತ್ ಕಾಯ್ಕಿಣಿಯವರನ್ನೂ ಕಾಡದೇ ಬಿಟ್ಟಿಲ್ಲ ಎಂಬು ದಕ್ಕೆ ಅವರು ‘ಸಂಚಾರಿ’ ಚಲನಚಿತ್ರಕ್ಕಾಗಿ ರಚಿಸಿದ ‘ಗಾಳಿಯೇ ನೋಡು ಬಾ…’ ಗೀತೆಯೇ ನಿದರ್ಶನ ವಾಗಿದೆ. ಈ ಹಾಡುಗಬ್ಬ ಪ್ರಾರಂಭ ವಾಗುವುದೇ ಹೀಗೆ-

‘ಗಾಳಿಯೇ ನೋಡು ಬಾ ದೀಪದ 
ನರ್ತನ 
ರಾತ್ರಿಯೇ ನೀಡು ಬಾ ಮಾಯದ ದರ್ಪಣ

ಕಾಲನಂತೆ ತಣ್ಣಗೆ ಹಾರಿ ಹೋಗುವ ಗಾಳಿಯ ನ್ನು ಕವಿಯಿಲ್ಲಿ ಆಹ್ವಾನಿಸುತ್ತಿರುವ ಸಂದರ್ಭ ವೇ ವಿಸ್ಮಯವನ್ನುಂಟು ಮಾಡುತ್ತದೆ. ಮನೆ ಯಲ್ಲೊಂದು ಶುಭ ಸಮಾರಂಭವನ್ನೇರ್ಪಡಿಸಿ ಬಂಧು ಬಾಂಧವರನ್ನು ಕರೆದು ಸಂಭ್ರಮಿಸು ವಂತೆ ಕಾಯ್ಕಿಣಿಯವರು ಗಾಳಿಗೊಂದು ಅಭೂತಪೂರ್ವ ಆಮಂತ್ರಣವನ್ನು ನೀಡುತ್ತಿ ರುವುದು ದೀಪದ ನರ್ತನವನ್ನು ಕಣ್ತುಂಬಿಕೊ ಳ್ಳಲು ಎನ್ನುವುದೇ ಕವಿತೆಗೊಂದು ಮಾಂತ್ರಿಕ ಸ್ಪರ್ಶವನ್ನು ನೀಡಿದೆ. ಠಕ್ಕನ ಕೈಗೆ ಕೀಲಿಯನ್ನು ಕೊಡುವ ಕವಿಯ ಚತುರತೆಯೂ ಈ ಸಾಲಿನ ಹಿಂದಿರು ವುದು ಸೃಜನಶೀಲತೆಗೆ ಬುದ್ಧಿವಂತಿ ಕೆಯ ಅಲಂಕಾರ ಮಾಡಿದಂತಿದೆ.

ಗಾಳಿಯ ಮೂಲಕ ಕಾಣದ ಕೈಗಳ ಧೀಮಂತಿಕೆ ಯನ್ನು ಕುರಿತು ತಪಸ್ಸನ್ನು ಮಾಡಿದ ನವೋದ ಯ ಸಂದರ್ಭದ ಮೈಸೂರು ಮಲ್ಲಿಗೆಯ ಕವಿ ಕೆ.ಎಸ್.ನರಸಿಂಹಸ್ವಾಮಿಯವರು:

ದೀಪವು ನಿನ್ನದೆ, ಗಾಳಿಯು ನಿನ್ನದೆ,
ಅರದಿರಲಿ ಬೆಳಕು
ಕಡಲು ನಿನ್ನದೆ, ಹಡಗು ನಿನ್ನದೆ,
ಮುಳುಗದಿರಲಿ ಬದುಕು

ಎಂದು ಪ್ರಾರ್ಥಿಸುತ್ತಾರೆ. ಗಾಳಿಯ ಸಹಜ ಸ್ವರೂಪ ಹಾಗೂ ವಿಶಿಷ್ಟ ಲಕ್ಷಣವನ್ನು ಸೂಚ್ಯ ವಾಗಿ ಅಭಿವ್ಯಕ್ತಿಸುವ ನರಸಿಂಹಸ್ವಾಮಿಯ ವರ ಈ ಸಾಲುಗಳು ಗಾಳಿಯ ಮುಂದೆ ನಮ್ಮನ್ನೂ ವಿನೀತರಾಗುವಂತೆ ಮಾಡಿಬಿಡು ತ್ತವೆ. ಗಾಳಿಯ ಇಂತಹ ಸತ್ಯದ ಅರಿವಿದ್ದೇ ಜಯಂತ್ ಕಾಯ್ಕಿಣಿ ಯವರು ಕವಿತೆಗೆ ಮುಕುಟವೆಂಬಂತೆ ಈ ಸಾಲ ನ್ನು ಕೆತ್ತಿರುವುದು ಅವರಲ್ಲಿರುವ ಅಪ್ರತಿಮ ಕಾವ್ಯೋದ್ಯೋಗದ ಪ್ರತಿಭೆಗೆ ನಿದರ್ಶನವಾಗಿದೆ.

ಇದು ಪ್ರೀತಿಯನ್ನು ಬಣ್ಣಿಸಲು ಕವಿ ಹೆಣೆದಿ ರುವ ಅಖಂಡ ರೂಪಕ. ಎಡೆಬಿಡದೇ ಕಾಡುವ ಕೊಂಡೆಯರನ್ನು ಹತ್ತಿರ ಕರೆದು ಸಂತೈಸಿ ಎಲ್ಲ ಸವಾಲು ಗಳ ಮಧ್ಯೆ ಅದ್ವೈತವಾಗಿ ನರ್ತಿಸುತ್ತಿ ರುವ ಒಲುಮೆಯನ್ನು ಕಣ್ತುಂಬಿಕೊಂಡು ಧನ್ಯತೆ ಯ ದಾಸರಾಗಿಬಿಡಿ ಎಂದು ಹೇಳುವ ಆಯಾಮ ಒಂದೆಡೆಯಾದರೆ, ನಿನ್ನಲ್ಲಿಯೇ ಐಕ್ಯವಾಗಿ ನಾಟ್ಯಶಾಸ್ತ್ರದ ಪರಿಧಿಗೂ ನಿಲುಕ ದಂತೆ ನರ್ತಿಸುತ್ತಿರುವ ಒಲುಮೆಯ ಬೆಳಕನ್ನೊಮ್ಮೆ ಕಂಡು ಸಂಭ್ರಮಿಸಿ ಬಿಡು ಎಂದು ಪ್ರೇಮಾರಾಧ ನೆಗಾಗಿ ಗೆಳೆಯ ಗಾಳಿಯನ್ನು ಆಹ್ವಾನಿಸುವ ಹೆಬ್ಬಯಕೆಯ ಆಯಾಮವು ಮಗದೊಂದೆಡೆಗೆ ಈ ಕವಿತೆಯ ನ್ನು ಜನ್ನ ಹೇಳುವಂತೆ ಪೊಸ ಬಾಸಿಗವನ್ನಾಗಿ ಕಟ್ಟಿವೆ. ಈಗಾಗಲೇ ಬಾಡಿ ಹೋಗದಂತೆ ಕನ್ನಡಿ ಗರ ಮುಡಿಯನ್ನಲಂಕರಿಸಿ ರುವ ಈ ಗೀತೆಯೊ ಳಗಿನ ಒಲುಮೆಯ ಪೂಜೆ ಯೇ ನಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡು ತ್ತದೆ. ಅದೇ ಉಸಿರು, ಹೃದಯ, ಪ್ರೀತಿ, ಬೆಳದಿಂಗಳು, ಪ್ರಾಣ, ಸುಧೆ, ಸಾವು, ನೆರಳು, ಅಗಲಿಕೆ, ನೋವು, ಸರಸ, ವಿರಸ, ಚೆಲ್ಲಾಟ ಎಂದೆಲ್ಲಾ ಶಬ್ದಸೂತಕದ ಕ್ಲೀಷೆಗೊಳಗಾಗಿರುವ ಒಲುಮೆಗೊಂದು ನವ ನವೀನ ಅಲೋಚನೆ ಆಲಾಪನೆಯನ್ನು, ವರದಿಗಾರಿಕೆ, ಚಂದಾದಾರಿ ಕೆಯ ಸ್ವರೂಪವನ್ನು ಕಟ್ಟಿ ಕೊಟ್ಟಿರುವ ಹೆಗ್ಗಳಿಕೆ ಕವಿ ಜಯಂತ್ ರವರದು. ಚಲನಚಿತ್ರ ಗೀತ ಸಾಹಿತ್ಯಕ್ಕೊಂದು ಅಪೂರ್ವ ಹಾಗೂ ಉದಾತ್ತ ಮಾದರಿಯೊಂದನ್ನು ನಿರ್ಮಿಸಿದ ಕಾಯ್ಕಣಿ ಯವರಿಗೆ ನಾವು ಕೃತಜ್ಞತೆಗಳನ್ನು ಸಲ್ಲಿಸಲೇ ಬೇಕು.

ಬೇಂದ್ರೆಯವರು ಮುಗಿಲ ಮಾರಿಗೆ ರಾಗರತಿ ಯೆಂದು ಹಾಡಿದರೆ ಕಾಯ್ಕಿಣಿ ಯವರು ಈ ಸಂಜೆ ಯಾಕಾಗಿದೆ ಎಂದು ಹಾಡಿ ಪರಂಪರೆ ಯ ಹೆಜ್ಜೆಗಳ ಜಾಡನ್ನು ಅರಸುತ್ತಾರೆ. ಕೆ.ಎಸ್. ನಿಸಾರ್ ಅಹಮ್ಮದ್ ರವರು ಸಂಜೆ ಐದರ ಮಳೆ ಎಂದು ಹಾಡಿ ಮಳೆಯಲ್ಲಿ ಮಿಂದರೆ, ಕಾಯ್ಕಿಣಿಯವರು ‘ಮಳೆ ನಿಂತು ಹೋದ ಮೇಲೆ’ ಎಂದು ಹಾಡಿ ಸೊಬಗಿನ ಸೋನೆ ಧರೆಗಿಳಿದು ವಿರಮಿಸಿದ ನಂತರದ ಒಲುಮೆ ಯ ಜಗತ್ತಿನೆಡೆಗೆ ಆಸಕ್ತಿಯನ್ನು ತಾಳುತ್ತಾರೆ. ಪ್ರೇಮ ದ ಮಾಧುರ್ಯದ ಬನಿಯನ್ನು ಹನಿ ಹನಿಯಾಗಿ ಸವಿಯಲು ಬೇಕಾದ ಸಕಲ ಪದಾ ರ್ಥಗಳನ್ನು (ಪದ + ಅರ್ಥ) ಲೀಲಾಜಾಲ ವಾಗಿ ಸೃಜಿಸುವ ಕಾಯ್ಕಿಣಿಯವರ ಕಾವ್ಯಮೀಮಾಂಸೆಗೆ ಮರುಳಾಗದವರೇ ಇಲ್ಲ. ವರ್ತಮಾನದ ಯುವ ಜನಾಂಗದ ತಲ್ಲಣಗಳನ್ನು ಆಧುನಿಕ ಯಂತ್ರ ಯುಗದ ಪರಿಭಾಷೆಯಲ್ಲಿ ಅಭಿವ್ಯಕ್ತಿ‌ಸುವ ಕವಿಯ ಮಾಂತ್ರಿಕ ಕಾವ್ಯಕೃಷಿ ಕಣ್ಣಮುಂದೆಯೇ ಪ್ರೀತಿಯ ಮಾಯಾಲೋಕವೊಂದನ್ನು ಸೃಷ್ಟಿಸಿ ಬಿಡುತ್ತದೆ ಎನ್ನುವುದಕ್ಕೆ ‘ಗಾಳಿಯೇ ನೋಡು ಬಾ’ ಗೀತೆಯೇ ಸಾಕ್ಷ್ಯ ನುಡಿಯುತ್ತದೆ. ಪ್ರೀತಿ ಯನ್ನು ‘ಓ ಆಜಾರೆ‘ ಎಂದು ಕರೆದು ನುಡಿ ತೋರಣದ ಮುಖೇನ ಅದಕ್ಕೊಂದು ವಿಭಿನ್ನ ದಿರಿಸು ಹಾಗೂ ಅವತಾರಗಳೆರಡನ್ನೂ ದಯ ಪಾಲಿಸಿ ಪ್ರೇಮಿಗಳ ಪುನರ್ಜನ್ಮಕ್ಕೆ ಕಾರಣವಾ ಗುವ ಕವಿಯೆಂದೇ ಹೆಸರಾಗಿರುವ ಕಾಯ್ಕಿಣಿ ಯವರ ಕಾವ್ಯ ವ್ಯಾಮೋಹ ವರ್ತಮಾನದ ಸಂಚಲನ ವಾಣಿಜ್ಯೋದ್ಯಮವಾಗಿ ಬೆಳೆದಿರುವ ಕನ್ನಡ ಸಿನೇಮಾಗೆ ದಕ್ಕಿರುವುದು ಭಾಗ್ಯದ ಬಾಗಿಲನ್ನು ತೆರೆದಂತಾಗಿದೆ. ಅಜ್ಞಾನ, ಅಂಧ ಕಾರಗಳೆಂದರೆ ಭಯಭೀತರಾಗಿ ದಿಕ್ಕೆಡುವವರ ಕೈಗೆ ಮಾಯದ ದರ್ಪಣವನ್ನು ನೀಡಿ ನಿಜದೊ ಲುಮೆಯ ಪೂಜಾರಿಗಳನ್ನಾಗಿ ಪರಿವರ್ತಿಸಿ ದೀಕ್ಷೆ ನೀಡುವ ಕವಿಯ ಕಾವ್ಯಭಕ್ತಿ ಮುಗ್ಧತೆಯನ್ನು ಪ್ರೀತಿಸುವ ಸಕಲರನ್ನೂ ಸೇರಿಸಿ ಕಮ್ಮಟ ವನ್ನೇ ರ್ಪಡಿಸಿದೆಯಿಲ್ಲಿ. ರಾಗಂರವರು ‘ಕಪಟನಿಗೆ ಕಾವ್ಯ ದಕ್ಕುವುದಿಲ್ಲ’ ಎಂದು ಹೇಳುವ ಮಾತು ಕಾಯ್ಕಿಣಿಯವರು ಹಾಡಿದ ಒಲವಿಗೂ ಅಷ್ಟೇ ಮಾರ್ಮಿಕವಾಗಿ ಸಮೀಕರಿ ಸಲ್ಪಡುತ್ತದೆ ಎಂಬುದು ಕಾಕತಾ ಳೀಯವೇನೂ ಅಗಿರಲಾರದು. ಗಾಳಿ ಮತ್ತು ರಾತ್ರಿಗಳು ಒಲವಿ ನಂತೆ ಸದಾ ಸರಳವಾಗಿ ದಕ್ಕದ ಈ ಜಗತ್ತಿನಂತ ರಂಗದ ಅಲೆಗಳು. ಈ ಭೃಂಗಗಳನ್ನರಸಿ ಹೊರಟ ಕವಿಗೆ:

ನಿನ್ನಂತೆ ಕಾಡಿಲ್ಲ ಇನ್ನಾರು ನನ್ನ 
ನಿನ್ನಿಂದ ಈ ಪಾಡು ಇನ್ನೂನು ಚನ್ನ 

ಎಂದೆನಿಸಿರುವುದು ಸಹಜ ಹಾಗೂ ಸ್ವಾಭಾವಿ ಕವೇ ಆಗಿದೆ. ಇದಕ್ಕಾಗಿಯೇ ಅಕ್ಕಮಹಾದೇವಿ ಆತ್ಮಸಾಂಗತ್ಯಕ್ಕೆ ನೀ ಎನಗುಂಟು ಹಾಡಿರ ಬೇಕು. ನೀನು ಎನ್ನವುದಿಲ್ಲಿ ವ್ಯಷ್ಟಿಯನ್ನು ಪ್ರತಿ ನಿಧಿಸು ವುದಕ್ಕಿಂತ ಸಮಷ್ಟಿಯ ಕಾರ್ಯಕಾರ ಣವನ್ನು ಸಂಕೇತಿಸುತ್ತಿರುವುದು ವಿಶಿಷ್ಟವಾಗಿ ಕಾಣುತ್ತದೆ. ಈ ಸಾಲುಗಳು ಪ್ರೇಮಿಯನ್ನು ಕುರಿ ತಾಗಿದೆ ಎಂಬುದಕ್ಕಿಂತ ನಲ್ಲೆಯೊಳಗಿನ ನಲುಮೆ ಯನ್ನು ವ್ಯಾಖ್ಯಾನಿಸಿದಂತಿದೆ ಎನ್ನುವುದೇ ಸೂಕ್ತವೆನಿಸುತ್ತದೆ. ಕಾಡುವಿಕೆ ಯು ಪ್ರೀತಿಯ ಲಕ್ಷಣವಾಗಿರುವಂತೆ ಯೇ ಮಾಯೆಯ ಸ್ವರೂಪ ವಾಗಿಯೂ ಧನ್ಯತೆಯ ನ್ನನುಭವಿಸಿದೆ. ಕವಿ ಜಯಂತರು ಇದನ್ನೇ ತಮ್ಮ ‘ಅನಿಸುತಿದೆ ಯಾಕೋ ಇಂದು’ ಗೀತೆಯಲ್ಲಿ ‘ಆಹಾ! ಎಂಥ ಮಧುರ ಯಾತನೆ’ ಎಂದು ಬಣ್ಣಿಸಿದ್ದಾರೆ. ಮುಂದುವ ರೆದು ‘ಕೊಲ್ಲು ಹುಡುಗಿ ಒಮ್ಮೆ ನನ್ನ‘ ಎಂಬ ಸಾಲುಗಳ ಹಿಂದಿರುವುದು ಕೂಡ ಇದೇ ಕಾಡುವಿಕೆಯ ಬಯಕೆ. ಕಾಡುವಿಕೆಯಲ್ಲಿ ರುವ ಪರಮ ಸುಖ ವನ್ನು ಒಲವಿನ ಹಕ್ಕಿಗಳ ಕಂಠ ದಿಂದಲೇ ಒಮ್ಮೆ ಆಲಿಸಬೇಕು. ಅವರು ಚಿಗುರನ್ನುಂಡ ಕೋಗಿಲೆಯಂತೆ ಇಂಪಾಗಿ ಹೇಗೆ ಹಾಡಬಹುದು ಎಂಬು ದಕ್ಕೆ ಈ ಕವಿತೆ ತರ್ಕಬದ್ಧ ಪ್ರಾಕಲ್ಪನೆ ಯೊಂದನ್ನು ರೂಪಿಸಿದೆ.

ಇದೇ ಕವಿಯ ‘ಮಳೆ ನಿಂತು ಹೋದ ಮೇಲೆ ಹನಿ ಯೊಂದು ಕಾಡಿದೆ‘ ಎಂಬ ಗೀತೆಯಲ್ಲಿ ಯೂ ಸಹ ಕಾಡುವಿಕೆ ಕಾವ್ಯವಾಗಿ ಹರಿದಿರು ವುದನ್ನು ಗಮನಿಸಬಹುದು.

ಸಂಚಾರಿ ಮನ ಸೆರೆಯಾದ ಕ್ಷಣ
ಎದೆ ಗೂಡಲ್ಲಿ ಚಂದ್ರೋದಯ

ಸದಾ ಸಂಚಾರಿಯಾಗಿರುವ ಮನವೆಂಬ ಮರ್ಕಟವನ್ನು ಸೆರೆಹಿಡಿಯುವ ಕೈಂಕರ್ಯ ಇಂದು‌ ನಿನ್ನೆಯದಲ್ಲ. ಒಲವು ಹೇಗೆ ಧ್ಯಾನವಾ ಗಬಲ್ಲ ದೆಂಬುದನ್ನು ನಟಿಸಿ ತೋರುವಂತಿರುವ ಸಾಲು ಗಳಲ್ಲಿ ಚಂದ್ರೋದಯದ ಬೆಳಕೂ ಹರಡಿಕೊಂಡು ಕುವೆಂಪುರವರ ‘ಸೂರ್ಯೋ ದಯ ಚಂದ್ರೋದಯ ದೇವರ ದಯೆ ಕಾಣೊ‘ ಎಂಬ ಸಾಲನ್ನು ನೆನಪಿಗೆ ತರುವಂತೆ ಮಾಡು ತ್ತದೆ. ಅಲ್ಲಿ ದೇವರ ಭಾಗ್ಯವಾಗಿ ಬರುವ ಚಂದ್ರೋದಯವು ಇಲ್ಲಿ ಹೃದಯ ವೊಂದು ಒಲುಮೆಯೊಳಗೆ ಸೆರೆಯಾಗುವ ಬಾಂಧವ್ಯ ದಿಂದೊಡಗೂಡಿ ಬೆಳಕಾಗಿದೆ. ಬೆಳದಿಂಗಳನ್ನು ಕುಡಿಯುವ ಚಕೋರಿಯಂತಾ ದರೆ ಸಾಕು, ಪ್ರೇಮದಿಂದು ದಿಸುವ ಈ ಆತ್ಮ ಸುಖವನ್ನನುಭ ವಿಸಲು. ಮುಸ್ಸಂಜೆಯ ಬಿಡುಗಡೆಯಾದಾಗ ಚಂದ್ರೋದಯವಾಗು ವುದು ಪ್ರಕೃತಿ ಸಹಜ ಪ್ರಕ್ರಿಯೆ. ಆದರೆ ಈ ಕವಿತೆಯಲ್ಲಿ ಮನವೊಲಿದು ಸೆರೆಯಾದಾಗ ಅದು ಸಂಭವಿಸುವುದು ಕವಿ ಸೃಷ್ಟಿಸುವ ವೈರುಧ್ಯದ ಚಮತ್ಕಾರೋಕ್ತಿಗೆ ಉದಾಹರಣೆ ಯಾಗಿದೆ. ಬಂಧನವೇ ಬಿಡುಗಡೆ ಯಾಗುವ ಅಪೂರ್ವ ಅದ್ವೈತದ ಪ್ರತಿಪಾದನೆ ಸಮ್ಮೋಹ ನಗೊಳಿಸುವಂತಿದೆ. ಬಿಡುಗಡೆಯೇ ಬಂಧನ ವಾಗಬೇಕೆನ್ನುವುದು ಕಾವ್ಯಲೋಕ ನಂಬಿಕೊಂಡು ಬಂದಿರುವ ಸಾಂಪ್ರದಾಯಿಕ ಅನುಗಮನ ಪದ್ಧತಿ. ಈ ಸಿದ್ಧಮಾದರಿಯನ್ನು ಮೀರಿ ಮರು ರೂಪಿಸುವ ನಿಗಮನ ಪದ್ಧತಿ ಕವಿಯದು. ಚಂದ್ರೋದಯವು ಅಷ್ಟಾದಶ ವರ್ಣನೆಗಳಲ್ಲಿಯೇ ರಮಣೀಯವಾದುದು.

ಹಿಂದೆ ಈ ಅಷ್ಟಾದಶ ವರ್ಣನೆಗಳನ್ನು ಕಡ್ಡಾ ಯವಾಗಿ ತಂದರೆ ಮಾತ್ರ ಅದೊಂದು ಮಹಾ ಕಾವ್ಯ ವೆನಿಸಿಕೊಳ್ಳುತ್ತಿದ್ದ ಕಾಲ ಒಂದಿತ್ತು. ಈಗ ಕಾವ್ಯಗಂಗೆಯಲ್ಲಿ ಸಾಕಷ್ಟು ಜಲ ಹರಿದು ಹೋಗಿದೆ. ಆದರೂ ಪಳೆಯುಳಿಕೆಯೆಂಬಂತೆ ಹೊಸಗನ್ನಡದ ಇಂತಹ ಕವಿತೆಗಳಲ್ಲಿ ಅಲ್ಲಲ್ಲಿ ಸೂರ್ಯೋ ದಯ ಚಂದ್ರೋದಯಗಳು ಕಾಣಿಸಿಕೊಂಡು ಸಹೃದಯರನ್ನು ಮುದಗೊಳಿ ಸುತ್ತವೆ. ಕವಿ ಜಯಂತರ ಈ ಕವಿತೆಯಲ್ಲಿ ಚಂದ್ರೋದಯ ವೊಂದು ಪ್ರೇಮೋತ್ಸವದ ರೂಪಕ, ಒಲವಿನ ಮಹಾನವಮಿಯ ಉದ್ದೀಪಕ.

ಸಿಹಿಯಾದ ಅಲೆ ಶುರುವಾದಾಗಲೇ
ನಿಜ ಸಂಗಾತಿ ನೀನಾದೆಯ
ಕನಸು ತಾಜಾ ಇದೆ
ನನಸು ಬೆರೆಸೋಣ
ಅದೇ ಪ್ರೀತಿಯ ಲಕ್ಷಣ …….

ಸಿಹಿಯನ್ನೇ ಆರಾಧಿಸುವುದು ಪ್ರೇಮಿಗಳ ಸ್ವಾರ್ಥ. ಕಟ್ಟಿದ ತಾಜಾ ಕನಸುಗಳನ್ನು ನನಸಾಗಿ ಸಬೇಕೆನ್ನುವುದು ಧರ್ಮಾರ್ಥ. ಸಾಧ್ಯವಾಗದಿ ದ್ದರೂ ಸತಿಪತಿಗಳೊಂದಾಗಿರು ವುದೇ ಹಿತವಾ ಗಿರುವ ಭಕ್ತಿಯ ಪರಮಾರ್ಥ. ಇದು ಪಂಪನ ‘ಬೆಳಗುವೆನಿಲ್ಲಿ ಲೌಕಿಕಮನ್ ಅಲ್ಲಿ ಜಿನಾ ಗಮಂ‘ ಎಂಬ ಉಕ್ತಿಯಂತೆ ಪ್ರೇಮಿಗಳನ್ನು ಒಲವಿನ ಲೌಕಿಕದಿಂದ ಭಕ್ತಿಯ ಆಗಮಿಕದತ್ತ ಕರೆದೊ ಯ್ಯಬಲ್ಲ ಸೆಳಕಾಗಿ ಈ ಸಾಲುಗಳು ನನ್ನನ್ನು ಸೆಳೆಯುತ್ತವೆ. ವ್ಯಾಮೋಹ ದ ಆತ್ಯಂತಿ ಕತೆಯೇ ಭವದೊಳ ಗಿನ ಯೋಗದ ಆದಿಬಿಂದು ಎನ್ನುವ ಸತ್ಯಾವ ತಾರ ಈ ಕವಿತೆಯದ್ದು. ಬದುಕು ಸಿಹಿಯಾಗಿದೆ ಎಂದವರೆಲ್ಲರೂ ಒಂದಲ್ಲ ಒಂದು ಬಗೆಯ ಪ್ರೀತಿಯ ಸೆಳೆತಕ್ಕೊಳಗಾದ ವರೇ. ಅದು ಪ್ರೇಮಿಯೊಂದಿಗಿನ ಸಾಂಗತ್ಯವಿರ ಬಹುದು; ಹೊಸದಾಗಿ ಕೊಂಡ ಸೈಕಲ್, ಕಾರು ಸೇರಿ ಥಳುಕು-ಬಳುಕಿನ ಲೋಕದ ಚರಾಚರಗಳ ಜೊತೆಗಿನ ಸ್ನೇಹವಿರಬಹುದು; ಹೊತ್ತು ಮೆರೆಸಿದ ತಾಯಿ ಅಥವಾ ಹೆತ್ತು ಸಲುಹುವ ಮಗುವಿನ ಮೇಲಿನ‌ ಮಮತೆಯಿರಬಹುದು; ಗಿಡ, ಮರ, ಪ್ರಾಣಿ, ಪಕ್ಷಿ ಹೀಗೆ ಎದುರಾದ ಸಕಲತೆಯಲ್ಲಿ ಯೂ ಹೊಸತನವನ್ನು ಕಂಡು ಘನೀಭವಿಸಿ ಕೊಂಡ ಅನುರಾಗವಿರಬಹುದು ಹೀಗೆ ಲೋಕೋ ಭಿನ್ನ ರುಚಿಗೆ ಹೊಂದುವ ಹಾಗೆ ಒಲವಿನ ವಿಭಿನ್ನ ಸ್ವರೂಪಗಳನ್ನು ಆಚರಿಸುವ ವರೆಲ್ಲರಿಗೂ ಬದುಕು ಅಮೃತವಾ ಗಿಯೇ ದಕ್ಕುತ್ತದೆ.

ಕವಿ ಕಾಯ್ಕಿಣಿಯವರ ಕಾವ್ಯಕನ್ನಿಕೆಗೂ ಆ. ಸಿಹಿ ಅಲೆಯಾಗಿ ಒಲಿದವನಲ್ಲಿ ಕಂಡದ್ದು ಸ್ವಭಾವೋಕ್ತಿಯೇ ಆಗಿದೆ.

ಹೆಸರನ್ನು ಸಹ ಮರೆವಂಥ ಭಯ
ಇದು ಏನಿಂಥ ಆಕರ್ಷಣೆ
ಮರುಳಾದಾಗಲೇ ಮರುಜನ್ಮವಿದೆ
ಬಿಗಿ  ಮೌನಾನೆ ಸಂಭಾಷಣೆ
ಒಗಟು ಒಂದಾಗಿದೆ
ಜೊತೆಯ ಬಿಡಿಸೋಣ
ಅದೇ ಪ್ರೀತಿಯ ಲಕ್ಷಣ

ಕೆಲವೊಮ್ಮೆ ದಿಢೀರಾಗಿ ಒಲವು ತರುವ ನಡುಕ ಅಂಥಿಂಥಹುದಲ್ಲ. ಮರೆವು ಇದರ ಪರಿಣಾಮ ಗಳಲ್ಲೊಂದು. ಮೈಮನಗಳನ್ನು ಆವರಿಸಿ ಕೊಂಡು ಮರೆಸುವುದು ಒಲವಿನ ಲಕ್ಷಣ ವೆಂದು ಸಮರ್ಥಿಸುವ ಕವಿಯು, ಇಂತಹ ಮರೆಯುವಿಕೆ ಹಾಗೂ‌ ಮರುಳಾಗುವಿಕೆಗಳೇ ಪ್ರೇಮಾರಾಧಕರ ಪುನರ್ಜನ್ಮದ ಕಾರ್ಯಕಾರ ಣಗಳಾಗಿವೆಯೆಂಬ ಒಲವಿನ ತಾತ್ವಿಕತೆಯನ್ನೂ ಹಾಡಾಗಿಸುತ್ತಾರೆ‌. ನಿಜ ಮೋಹ-ವ್ಯಾಮೋಹ ಗಳ ಸೀಮೋಲ್ಲಂಘ ನ ಮಾಡಿ ಮುಗ್ಧತೆಯ ಮರುಳನ್ನಪ್ಪಿಕೊಂಡಾ ಗಲೇ ನಿಜದೊಲುಮೆ ಯ ದರ್ಶನಾನಂದವನ್ನು ದಕ್ಕಿಸಿಕೊಳ್ಳಲು ಸಾಧ್ಯವಿದೆ. ಅನುರಕ್ತಿಯ ನೆಲೆ ಯಲ್ಲಿ ಇದೇ ಪುನರ್ಜನ್ಮದ ಲೋಕ. ಹಾಗೆಂದು ಇದೇನು ಪ್ಲೇಟೋ ಪ್ರತಿಪಾದಿಸುವ ಆದರ್ಶ ರಾಜ್ಯವಲ್ಲ. ಅಲ್ಲಿ ಕವಿ-ಕಲಾವಿದರಿಗೆ ಸ್ಥಾನವಿರ ಲಿಲ್ಲ. ಆದರೆ ಈ ಪ್ರೇಮಲೋಕದಲ್ಲಿ ಪ್ರೇಮಿಗಳೊಂ ದಿಗೆ ಕವಿ-ಕಲಾವಿದರನ್ನು ಬಿಟ್ಟು ಬೇರಾರೂ ಇಲ್ಲ. ಮರುಜನ್ಮವಾಗಿ ಕಣ್ಣುತೆರೆದಾ ಗ ಮರುಳಾದವರು ಈ ಲೋಕದೊಳಗಿನ ಅನಭಿಷಕ್ತ ದೊರೆಗಳಾಗುತ್ತಾರೆ ಎನ್ನವುದೇ ಅಂತಿಮ ಸತ್ಯ. ಹೌದು ಕಾವ್ಯ ಕಟ್ಟುವ ಕಲೆಯೂ ಒಲವಿನಂತೆ ಒಂದು ಮರುಳಾಗುವಿ ಕೆಯೇ. ಇದರಿಂದಲೇ ಅಲ್ಲವೇ ಕವಿಗೆ ಮರುಜನ್ಮ. ಹೀಗಾಗಿ ಪ್ರೇಮಲೋಕದಲ್ಲಿಯೇ ಕವಿ- ಕಲಾ ವಿದರಿಗೂ ಮಹತ್ವದ ಸ್ಥಾನವಿದೆ. ಇಂತಹ ಪ್ರೇಮಲೋಕ ದಲ್ಲಿರುವ ಕವಿಗಳ ಸಾಲಿನಲ್ಲಿ ರುವ ನವನವೋನ್ಮೇಷಶಾಲಿ ಕವಿಯೆಂದರೆ ಜಯಂತ್ ಕಾಯ್ಕಿಣಿ ಯವರು. ಮೌನವನ್ನೂ ಸಂಭಾಷಣೆಯನ್ನಾಗಿ ಸುವ ಕುಸುರಿ ಕಾವ್ಯಕಲೆ ಕವಿ ಜಯಂತರದು. ಇದೇ ಮೌನ ಒಲವಿನಾರಾ ಧಕರ ತಪಸ್ಸೂ ಹೇಗಾಗ ಬಲ್ಲದು ಎಂಬುದಕ್ಕೆ ಕಾವ್ಯದಲ್ಲಿ ಉತ್ತರವಿದೆ. ಬಿಗಿಮೌನವನ್ನೂ ಮಾತಾಗಿಸುವ ಈ ಜಗತ್ತಿನ ಅಪೂರ್ವ ಮಾಂತ್ರಿ ಕನೆಂದರೆ ಈ ಒಲವು. ಮಾತಿಗಿಳಿದರೆ ಎಲ್ಲಿ ಶಬ್ದಸೂತಕವಾಗಿ ಬಿಡುವುದೋ ಒಲವು ಎಂಬ ಭಯ ಒಲವಿನ ಅನುಯಾಯಿಗಳದ್ದು. ಇದೇ ಕಾರಣಕ್ಕಾಗಿ ಯೇ ಮೌನ ಅವರ ಸಂಭಾಷಣೆ ಯಾಗಿ ಜೊತೆಗಾರ ನಾಗಿಬಿಡಬಲ್ಲದು ಬಯಸಿ ದಾಗ. ಶಬ್ದಗಳಿಗಂಜು ವ ಪ್ರೇಮಿಗಳ ಹಾದಿಯೇ ನೂ ಹೂವಿನ ಹಾಸಿಗೆಯದ್ದಲ್ಲ.

ವಚನಕಾರ ಅಲ್ಲಮ:

ಪದವನರ್ಪಿಸಬಹುದಲ್ಲದೇ ಪದಾರ್ಥವನರ್ಪಿಸಬಾರದು

ಎಂದು ಹೇಳಿರುವುದು ಇದೇ ಉದ್ಧೇಶಕ್ಕಾಗಿ. ಭಕ್ತಿಯ ಪ್ರಪಂಚದಲ್ಲಿನ ಶರಣರಂತೆ, ಒಲವಿನ ಲೋಕದೊಳಗಿನ ಪ್ರೇಮಾರಾಧಾಕರೂ ಕೂಡ ನುಡಿದು ಸೂತಕಿಗಳಾಗದವರೇ ಎಂಬುದು ಘನತೆಯನ್ನು ಎತ್ತಿಹಿಡಿಯುವಂತಹುದಾಗಿದೆ. ದುರ್ದೈವ,, ಶಬ್ದಸೂತಕವೇ ಇಂದು ನವಯುಗದ ಪ್ರೇಮವನ್ನಾಳುತ್ತಿದೆ. ಕ್ಷುಲ್ಲಕ ಮಾತಿಗೂ ಪ್ರೇಮಿ ಗಳ ಆತ್ಮಹತ್ಯೆ, ಕೊಲೆ, ಅಪಹರಣ, ವಿಚ್ಚೇದನ ದಂತಹ ದುರಾಚಾರ ಗಳು ವಿಜೃಂಭಿಸುತ್ತಿವೆ. ಆಧುನಿಕ ಜಗತ್ತಿನ ಇಂತಹ ಅಪಸವ್ಯಗಳಿಗೆ ಮದ್ದಾಗಬಲ್ಲ ನಿಜದೊಲುಮೆಯ ಸೂತ್ರಗಳು ಜಯಂತ್ ಕಾಯ್ಕಿಣಿಯವರ ಕಾವ್ಯದಲ್ಲಿ ಹೇರಳ ವಾಗಿ ದೊರೆಯುತ್ತವೆ. ಆಶ್ರಯಿಸುವು ದೊಳಿತು. ಹಾಡಿನ ಮೂಲಕ ಸೊಬಗಿನ ಸೋನೆಯನ್ನೇ ರಸಿಕರ ಎದೆಯೊಳಗಿಳಿಸುವ ಸೋನು ನಿಗಮ್ ಹಾಗೂ ಶ್ರೇಯಾಗೋಶಾಲ ರ ಜೋಡಿ ಈ ಯುಗಳ ಗೀತೆಗೆ ದನಿಯಾ ಗಿರುವುದು ಭಾವಾ ಲಾಪಕ್ಕೆ ಆರ್ದ್ರತೆಯನ್ನೊ ದಗಿಸಿದೆ. ಇದ ಕಾರಣ ಸ್ಥಳ ಹಾಗೂ ಕಾಲವನ್ನು ಮೀರಿದ ತೇವಾಂಶ ಕವಿತೆಯನ್ನಾಳಿದ ಭಾವನೆ ಗಳಲ್ಲಿ ಮಡುಗಟ್ಟಿ ತಣಿರಸದ ಕೊಳವಾಗಿ ಒಲವಿನ ಬನಿಯನ್ನು ಕೇಳುಗರೆದೆಯೊಳಗೆ ಸಿಂಪಡಿಸುತ್ತದೆ. ಬಿ.ಎಂ. ಹನೀಫ್ ಅವರು ಅನುವಾದಿಸಿದ ಖಲೀಲ್ ಗಿಬ್ರಾನನ ಸಾಲುಗಳಿವು:

ಸಮುದ್ರವನ್ನು ಸೇರುವ ಮುಂಚೆ
ನದಿ ಭಯದಿಂದ ನಡುಗುತ್ತದಂತೆ!…..
ಆಕೆಯ ಎದುರು ಸುವಿಶಾಲ ಸಾಗರ
ಸೇರಿಕೊಳ್ಳಬೇಕಿದೆ
ಶಾಶ್ವತವಾಗಿ ಕಣ್ಮರೆಯಾಗಲು
ಇದರ ಹೊರತಾಗಿ ಬೇರೆ ಏನೂ ಇಲ್ಲ

ನನಗಿಲ್ಲಿ ಕಾಣುತ್ತಿರುವುದು ಕವಿ ಜಯಂತರ ಕವಿತೆಯಲ್ಲಿನ ಹೆಸರು ಮರೆಸುವಂತಹ ಭಯವೇ. ನದಿಯೊಂದು ಸಾಗರ ಸೇರುವಾ ಗಿನ ತಲ್ಲಣಗಳಿಗೂ, ಒಲವಿನಾಕೆಯು ಅನುರಾಗ ದೊಳಗೆ ಒಂದಾಗುವಾಗಿನ ತಹತ ಹಿಕೆಗಳಿಗೂ ಒಂದು ಹದಭರಿತ ಸಮೀಕ ರಣವಿದೆ. ಒಲುಮೆ ಯ ಪ್ರತಿಮೆಯನ್ನು ಎರಕ ಹೊಯ್ಯುವಲ್ಲಿ ಕವಿ ಗಳಿಬ್ಬರದೂ ಸಮತಾವಾದ. ಮುಂದುವರೆದು ಗಿಬ್ರಾನ್ ಹಾಡುತ್ತಾನೆ –

ಎದುರಿಸಲೇಬೇಕು ನದಿ
ಸಮುದ್ರ ಸೇರುವ ಅಪಾಯವನ್ನು
ಆಗ ಮಾತ್ರ ಭಯ ಇಲ್ಲವಾಗುವುದು
ಆಗಲೇ ನದಿಗೆ ಗೊತ್ತಾಗುವುದು
ಅದು ಸಮುದ್ರದಲ್ಲಿ ಕಣ್ಮರೆ ಆಗುವುದಲ್ಲ
ಸ್ವತಃ ಸಮುದ್ರವೇ ಆಗುವುದು.

ಕವಿ ಕಾಯ್ಕಿಣಿಯವರ ಕವಿತೆಯ ರಾಗಿಣಿಗೂ ತನ್ನ ಭಯವನ್ನು ಶೂನ್ಯವಾಗಿಸಿಕೊಳ್ಳಲು ಇರುವುದು ಒಂದೇ ದಾರಿ. ಅದು ಒಲವೆಂಬ ಸಮುದ್ರವನ್ನು ಸೇರಿ ಅನುರಾಗವೆಂಬ ಸಾಗರ ವೇ ಆಗಿಹೋಗುವುದು. ಇದು ಕವಿತೆ ಕಟ್ಟಿ ಕೊಡುವ ಅಪರೂಪದ ಕೂಡಲಸಂಗಮ.
ಇದನ್ನೇ ಕುವೆಂಪುರವರು ತಮ್ಮ ಅನಿಕೇತನ ಕವಿತೆಯಲ್ಲಿ:

ಅನಂತ ನೀ ಅನಂತವಾಗು
ಆಗು ಆಗು ಆಗು ಓ ನನ್ನ ಚೇತನ
ಆಗು ನೀ ಅನಿಕೇತನ

ಎಂದು ಹಾಡಿದ್ದಾರೆ.

ಇದು ವ್ಯಷ್ಟಿಯಿಂದ ಸಮಷ್ಟಿಯೆಡೆಗಿನ ಅನಂತ ವಾಗುವಿಕೆಯ ಪ್ರಯಾಣವೂ ಹೌದು; ಇಹದಿಂದ ಪರಾತ್ಪರ ದೆಡೆಗೆ ತುಡಿಯುವ ಸಂವಹನವೂ ಹೌದು; ಖಂಡತೆಯಿಂದ ಅಖಂಡ ತೆಯೆಡೆಗಿನ ಸೆಳೆತದ ಪ್ರತಿಮೆಯೂ ಹೌದು. ಏಕ ತಾರಿಗಳು ಇದನ್ನು ಕಣ್ಮರೆಯಾಗು ವಿಕೆಯೆಂಬ ವಿಸ್ಮೃತಿಯಿ ದು ಎಂದು ಹೀಗಳೆಯಬಹುದು. ಇಂದು ಇದನ್ನೇ ನಂಬಿ ದ್ವಂದ್ವದೊಳಗೇ ತೇಲಾಡಿ ಒಂದಾಗುವು ದರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಗಳಿಗೆ, ಅವಾಂತರಗಳಿಗೆ ಲೆಕ್ಕವಿಲ್ಲ. ಸಮುದ್ರವಾಗುವು ದರಲ್ಲಿಯ ಪರಮ ಸುಖ ನದಿಯಾಗಿ ಭಯ ಪಡುವುದಲ್ಲಿ ಸಿಗಲು ಹೇಗೆ ಸಾಧ್ಯವಿದೆ. ನಾನೂ ಒಲವಿನ ಪಕ್ಷಪಾತಿಯಾಗಿರುವುದ ರಿಂದ ಸರ್ವರೂ ಸಾಗರವಾಗಬೇಕೆಂಬುದೇ ನನ್ನ ಹೆಬ್ಬಯಕೆ. ಇದು ಕವಿ ಕಾಯ್ಕಿಣಿಯವರ ಧೀಮಂತ ಕೊಡುಗೆ; ಖಲೀಲ್ ಗಿಬ್ರಾನ್ ನ ಬಿಡಿಸಬಹುದೆಂದು ತೋರುವ ಬಿಡಿಸಲಾಗದ ಮುಂಡಿಗೆ.

✍️ಚಂದ್ರಶೇಖರ ಹೆಗಡೆ
ಕನ್ನಡ ಸಹಾಯಕ ಪ್ರಾಧ್ಯಾಪಕರು
ಸ.ಪ್ರ.ದ.ಕಾಲೇಜು,ಬೀಳಗಿ