ಹೆಸರಿಡೋದು ಅಂದಕೂಡ್ಲೆ ನನಗ ನೆನಪಾ ಗೋದು ಸಣ್ಣ ಕೂಸಿನ್ನ ತೊಟ್ಟಿಲದಾಗ ಹಾಕಿ ತೂಗಿ, ಸ್ವಾದ್ರತ್ತಿ ಕೈಲೆ ಕೂಸಿನ ಕಿವ್ಯಾಗ ಐದು ಹೆಸರ ಹೇಳಿಸಿ, ಅಲ್ಲೆ ಸುತ್ತ-ಮುತ್ತ ಇದ್ದ ಹೆಂಗಸೂರು ಆಕಿ ಬೆನ್ನಿನ ಮ್ಯಾಲೆ ದಬ-ದಬ ಅಂತ ಬಡದು ಖುಷಿಪಡೋ ಸಂಭ್ರಮದ ಸಂಪ್ರದಾಯ. ಪ್ರತಿ ಮನಷ್ಯಾಗೂ ಒಂದು ಹೆಸರಂತ ಇರ್ಲೇಬೇಕು, ಇಲ್ಲಾಂದ್ರ ಆ ಮನಷ್ಯಾನ ಏನಂತ ಹೇಳಿ ಕರೀಬೇಕು? ಹೌದಲ್ಲೋ. ಸಣ್ಣ ಕೂಸಿದ್ದಾಗ ನಾಮಕರಣ ಶಾಸ್ತ್ರ ಮಾಡಿ ಒಂದ ಹೆಸರಂತ ಇಟ್ಟರೂ, ಭಾಳ ಸಲ ಆ ಕೂಸಿನ್ನ ಏನೇನೂ ಅಡ್ಡಹೆಸರು ಇಟ್ಟು ಕರೀತೀವಿ ಅನ್ನೋದು ಎಲ್ಲಾರೂ ಒಪ್ಪೋ ಮಾತು. ಅದು ನಮ್ಮ ಪ್ರೀತಿ-ವಾತ್ಸಲ್ಯದ ಮಹಿಮಾನೂ ಆಗಿರ್ತದ. ಪಾಪು, ಕೂಸು, ಪುಟ್ಟ, ಮಾಣಿ, ಗುಂಡ, ಪುಟ್ಟಿ, ಬೇಬಿ, ಹೀಂಗ ಹೆಸರುಗಳ ಪಟ್ಟಿ ಮುಂದುವರಿತದ.

ಸ್ವಲ್ಪ ಮಂದಿಗೆ ಮುಂದ ಅದೇ ಹೆಸರು, ನಿಕ್ ನೇಮ್ ಆಗಿ ಉಳಕೊಂಡು ಬಿಟ್ಟಿರೋದನ್ನು ನೋಡ್ತೀವಿ. ನಮ್ಮ ಮೌಶಿಗೆ ‘ಸರಸ್ವತಿ’ ಅಂತ ಛಂದದ ಹೆಸರಿ ಟ್ಟಿದ್ದರೂ ಆಕಿ ಕೂಸಿದ್ದಾಗ ‘ಬೇಬಿ’ ಅಂತ ಕರೀತಿ ದ್ದದ್ದು ಹಂಗೇ ಮುಂದು ವರೆದು, ಆಕಿಗೆ ಮದುವಿ ಯಾಗಿ-ಮಕ್ಕಳಾಗಿ, ಮೊಮ್ಮಕ್ಕಳು ಹುಟ್ಟಿದಾಗ ಲೂ ಆಕಿ ‘ಬೇಬಿ’! ಸ್ವಲ್ಪ ಮಂದಿಗೆ ಮನ್ಯಾಗ ಕರೆಯೋ ಹೆಸರು ಒಂದು, ಗೆಳ್ಯಾರು-ಗೆಳತೇರು ಕರೆಯೋ ಹೆಸರು ಇನ್ನೊಂದು, ಹೀಂಗ ಇರ್ತದ. ಮನ್ಯಾಗ ಮನಿ ದೇವ್ರ ಹೆಸರನ್ನ, ಇಲ್ಲಾ ಕೂಸು ಹುಟ್ಟೋ ಮೊದಲು ಹರಕಿ ಹೊತ್ತಿದ್ದ ದೇವರ ಹೆಸರನ್ನು ಆ ಕೂಸಿಗೆ ಇಟ್ಟು ಕರೀತಿರ್ತಾರ. ಹೆಣ್ಣುಮಕ್ಕಳಿ ಗೆ ತವರುಮನಿ ಹೆಸರ ಜೋಡಿ, ಮದಿವಿ ದಿನ ಲಗ್ನದ ಶಾಸ್ತ್ರ ಎಲ್ಲ ಮುಗಿಸಿ, ಹೆಣ್ಣೊಪ್ಪಿಸೊ ಹೊತ್ತಿನ್ಯಾಗ ಅತ್ತಿ ಮನಿಯವರು ಇನ್ನೊಂದು ಹೆಸರಿಡೋ ದನ್ನು ನಮ್ಮ ಕಡೆ ನೋಡೀನಿ. ಪಾಪ, ಆ ಸೊಸಿಗೆ ಹೆಸರು ಬದಲಾಯಿಸೋ ದು ಪಸಂದ ಇರ್ತದೋ, ಇಲ್ಲೋ ಯಾರೂ ಕೇಳಂಗಿಲ್ಲ. ಇನ್ನು ಸ್ವಲ್ಪ ಮಂದಿ ತಮಗ ಇಟ್ಟಿದ್ದ ಹೆಸರನ್ನು ‘ನೋಟರಿ’ ಹತ್ರ ಬದಲಾಯಿಸಿಕೊ ಳ್ಳೋದನ್ನೂ ನೋಡ್ತೀವಿ. ತಮಗಿಟ್ಟಿದ್ದ ಹೆಸರು ಪಸಂದ ಇಲ್ಲಂತ ಬದಲಾಯಿಸೋ ದನ್ನು ನೋಡಿದಾಗ ನಾವು ಸಾಲಿಯೊ ಳಗ ಓದಿದ್ದ ‘ಜಾತಕ ಕತೆ’ಗಳ ಒಂದು ಕಥಿ ನೆನಪಾಗ್ತದ.
‘ಪಾಪಕ’ ಅನ್ನೋ ಹುಡುಗನಿಗೆ ತನ್ನ ಹೆಸರು ಒಂಥರಾ ‘ಅಪಶಕುನ’ ಅನ್ನಿಸಿ ಅದನ್ನು ಬದಲಾಯಿ ಸ್ಕೋತೀನಿ ಅಂತ ತನ್ನ ಗುರು ‘ಬೋಧಿಸತ್ವ’ಗ ಕೇಳತಾನ. ಮೊದಲು ನಾಲ್ಕಾರು ಊರು ತಿರುಗಿ, ಹೆಚ್ಚಿನ ಅನುಭವ- ಜ್ಞಾನ ತೊಗೊಂಡು ಆಮ್ಯಾಲೆ ಹೆಸರು ಬದಲಾ ಯಿಸ್ಕೋವಂತಿ ಅಂತ ಗುರು ಹೇಳ್ತಾರ. ‘ಪಾಪಕ’ ಊರೂರು ತಿರುಗಿ, ‘ಧನಪಾಲಿ’ ಅನ್ನೋ ಹೆಸರಿನ ಅತಿ ಬಡ ಹೆಂಸಗನ್ನ ಮತ್ತ ‘ಜೀವಕ’ ಅಂತ ಹೆಸರಿಟ್ಟು ಕೊಂಡ್ರೂ ಮರಣಿಸಿದ್ದ ವ್ಯಕ್ತಿಯನ್ನು ನೋಡಿ, “ಹೆಸರಿನೊಳಗ ಏನದ, ಅದು ಬದುಕಿನ ಯಾವ ಆಗುಹೋಗಿಗೂ ಕಾರಣ ಆಗಂಗಿಲ್ಲ” ಅಂತ ಅರ್ಥ ಮಾಡ್ಕೊಂಡು ‘ತಕ್ಷಶಿಲಾ’ದ ಗುರುಕುಲಕ್ಕ ವಾಪಾಸು ಬರ್ತಾನ. ಮನುಷ್ಯಾನ ಹೆಸರಿನ ಹಿಂದಿನ ತತ್ವ ಏನ ಇರಲಿ, ಪ್ರತಿಯೊಬ್ಬರಿಗೂ ನಾಮಕರಣ ಮಾಡಿ ಇಟ್ಟ ಹೆಸರು, ಸಾಲ್ಯಾಗ ಹಚ್ಚಿದ ಹೆಸರು, ಅಫಿಶಿಯಲ್ ಹೆಸರು ಅಂತ ಇರೋದ್ರ ಜೊತಿಗೆ ಅಡ್ಡಹೆಸರುಗಳು ಇರ್ತಾವ ಲ್ಲೇನು?

ನಾವೆಲ್ಲರೂ ಸಾಲಿ- ಕಾಲೇಜಿ ನ್ಯಾಗ, ಆಫೀಸಿ ನ್ಯಾಗ, ಆಜು-ಬಾಜು ಮನಿ, ಗುಡಿ, ಮಾರ್ಕೆಟ್- ಬಜಾರದಾಗ ಇನ್ನೊಬ್ಬರಿಗೆ ಏನಾರ ಹೆಸರು ಇಟ್ಟಿರ್ತೀವಿ, ಇಲ್ಲಾ ನಾವು ಇಡಿಸಿಕೊಂಡಿರ್ತೀ ವಲ್ಲ, ಅದೇ ನಾವು – ನೀವು ಮಾಡೋ ‘ನಾಮಕರಣ’! ಭಾಳ ಎತ್ತರಿ ದ್ದವರಿಗೆ ‘ಲಂಬು’, ಗಿಡ್ಡಯಿದ್ದವರಿಗೆ ‘ಛೋಟು’, ‘ಕುಳ್ಳ- ಕುಳ್ಳಿ’, ಅವರವರ ಮೈ ಬಣ್ಣದ ಮ್ಯಾಲೆ ‘ಕರಿಯ’, ‘ಬಿಳಿಯ’, ‘ಬಿಳಿಭರಡಿ’ (ಬಿಳಿ ಜೊಂಡಿಗ್ಯಾ/ಬಿಳಿಜಿರಲೆ), ಅವರವರ ಮೈಕಟ್ಟಿನ ಮ್ಯಾಲೆ ‘ಟೆಡ್ಡಿಬೇರ್’, ‘ಗುಂಡಮ್ಮ’, ‘ಕಡ್ಡಿ ಪೈಲ್ವಾನ’, ‘ಗಳ’(ಬಿದಿರು), ಉದ್ದನೆ ಹೆರಳಿದ್ದ ಹುಡುಗಿಗೆ ‘ನಾಗವೇಣಿ’, ಕೂದಲಿಲ್ಲದವರಿಗೆ ‘ಬೋಡ’, ಹಲ್ಲಿಲ್ಲದವರಿಗೆ ‘ಬೊಚ್ಚಬಾಯಿ’/ ‘ಗುಬ್ಬಚ್ಚಿ ಬಾಯಿ’, ಎಳೆಕೂಸು ಇದ್ದರ ಎಳೆ ಬತ್ತಿ, ಇಲ್ಲ ಕೂಸು ಗುಂಡು-ಗುಂಡುಗ ಇದ್ರ ‘ಹೂಬತ್ತಿ’ ಅಂತನೋ, ಇನ್ನೂ ಹೀಂಗ ಏನೇನೋ ಅಡ್ಡ ಹೆಸರಿಟ್ಟಿರ್ತದ. ಒಬ್ಬ ಮನಷ್ಯಾ ನ ‘ಲುಕ್ಸ್’ ನೋಡಿ ಹೆಸರಿಡೋದು ಭಾಳ ಸಹಜ ಅನಸ್ತದ. ಆದ್ರ ನಮ್ಮ ಸುತ್ತಮುತ್ತಲಿನ ಜನರ ಸ್ವಭಾವ ವನ್ನು ಸೂಕ್ಷ್ಮ ಆಗಿ ನೋಡಿಕೋತ ಇದ್ದು, ಅವರು ಇನ್ನೊಬ್ಬರ ಜೋಡಿ ವ್ಯವಹರಿ ಸೋದು ಆಗಲಿ ಇಲ್ಲ ಅವರ ನಡವಳಿಕಿಯಿಂದ ನಮಗ ಅಥವಾ ನಮ್ಮ ಹತ್ತಿರದವರಿಗೆ ಮನಸಿಗೆ ಬ್ಯಾಸರ ಆಗಿದ್ರ ಮಾತ್ರ ಆ ವ್ಯಕ್ತಿಗೆ ಭಾರೀ, ಭಾರೀ ಹೆಸರುಗಳ ನಾಮಕರಣನೇ ಆಗ್ತದ ಅನ್ನೋದು ಅಷ್ಟೇ ಖರೇ ಅದ.

ನಾನೊಂದು ನಾಕನೆತ್ತಿ-ಐದನೆತ್ತಿ ಕಲೀಬೇಕಾದ್ರ ಈ ನೈಲಾನ್, ಪಾಲಿಸ್ಟರ್ ಬಟ್ಟಿಯಿಂದ ಮಾಡಿದ ಬಣ್ಣ-ಬಣ್ಣದ ಗುಲಾಬಿ ಹೂವಾ ಮುಡುಕೊ ಳ್ಳೋ ಫ್ಯಾಷನ್ ಸುರುವಾಗಿತ್ತು. ನನ್ನ ಮತ್ತು ನಮ್ಮಕ್ಕಂದಿರ ಹತ್ರಾನೂ ಒಂದೆರಡು ಇಂಥಾ ಹೂ ಇದ್ವು. ರಾಜ್ಯೋತ್ಸವ, ಮಕ್ಕಳ ದಿನಾಚರಣೆ ಕಾರ್ಯಕ್ರಮದಾಗ ಡ್ಯಾನ್ಸ್ ಮಾಡಿದಾಗ ಹುಡುಗೀರೆಲ್ಲ ಇದ ಹೂವಾ ಮುಡ್ಕೋತಿದ್ವಿ. ನಮ್ಮ ಮಗ್ಗಲ ಮನಿ ಸುಮಾ (ನಮಗೆಲ್ಲ ಆಕಿ ‘ಸೋಗಲಾಡಿ ಸುಮ್ಮಕ್ಕ’) ಆಗ್ಲೇ ಕಾಲೇಜು ಕಟ್ಟಿ ಹತ್ತಿದ್ಲು. ಆಕಿ ಹತ್ರ ಈ ನೈಲಾನ್, ಪಾಲಿಸ್ಟರ್ ಬಟ್ಟಿಯಿಂದ ಮಾಡಿದ ಒಂದು ಐದಾರು ಹೂವಾ ಇದ್ವು. ನಾವೇನಾದ್ರೂ ಹೋಗಿ, “ಡ್ಯಾನ್ಸಿನ ಡ್ರೆಸ್ಸಿಗೆ ಮ್ಯಾಚಿಂಗ್ ಹೂವ ಬೇಕಾಗ್ಯದ, ಕೊಡು ಸುಮ್ಮಕ್ಕ” ಅಂತ ಕೇಳಿದ್ರ ಕೊಡ್ತಿರಲಿಲ್ಲ. ತಾನು ದಿನಾ ಕಾಲೇಜಿಗೆ ಹೋಗೋಮುಂದ, ಮಳ ಉದ್ದದ ತನ್ನ ಮಂಡ ಕೂದಲದಿಂದ ಒಂದು ಹೆರಳು ಹಾಕ್ಕೊಂಡು, ಬಲಗಿವಿ ಹಿಂದ ಒಂದು ಪಾಲಿಸ್ಟರ್ ಗುಲಾಬಿ ಹೂ ಚುಚ್ಚಗೊಂಡು, ಮ್ಯಾಕ್ಸಿ ಹಾಕ್ಕೊಂಡೋ, ಲಂಗ-ದಾವಣಿ ಹಾಕ್ಕೊಂಡೋ ಸೋಗು ಮಾಡಿಕೋತ ಹೋಗ್ತಿದ್ಲು. ಇದನ್ನ ನೋಡಿ ನಾವೆಲ್ಲರೂ ಸೇರಿ ಆಕಿಗೆ ‘ಬಾಡದ ಹೂ’ ಅಂತ ಹೊಸ ಹೆಸರಿಟ್ವಿ. ಭಾಳ ದಿವಸದ ಮ್ಯಾಲೆ ನಾವೆಲ್ಲ ತನಗ ‘ಬಾಡದ ಹೂ’ ಅಂತ ಹೆಸರಿಟ್ಟಿದ್ದು ಆಕಿಗೆ ಗೊತ್ತಾಗಿ ಆ ಗುಲಾಬಿ ಹೂಗಳನ್ನು ಮುಡ್ಕೊಳ್ಳೋದು ಬಿಟ್ಟ ಬಿಟ್ಟಳು. ಆಕಿ ಬಿಟ್ರ ಏನಾತು ನಾವು ಬಿಡಬೇ ಕಲ್ಲ! ಒಂದು ದಿನ ಹೀಂಗ ಮನೀ ಮುಂದು ಆಕಿ ಸೋಗ ಮಾಡಿಕೋತ ಕಾಲೇಜಿಗೆ ಹೊಂಟಿದ್ದು ನೋಡಿ, “ಯಾಕ ಸುಮ್ಮಕ್ಕ, ‘ಬಾಡದ ಹೂ’ ಏನಾರ ಒಣಗಿಹೋತೇನು? ಈಗೀಗ ಮುಡ್ಕೋ ವಲ್ಲೆಲ” ಅಂತಂದು ಕಿಸಕ್ಕನೆ ನಕ್ಕಿದ್ವಿ.

ನಮ್ಮನ್ಯಾಗ ಗುಡಿಗೊಳಿಗೆ ಹೋಗೋದು ಮೊದಲಿನಿಂದಲೂ ಬಂದ ರೂಢಿ. ನಾವೆಲ್ಲರೂ ಆಗಾಗ ಗುಡಿಗೆ ಹೋಗಿ ದೇವರ ದರ್ಶನ ಮಾಡ್ಕೊಂಡು, ತೀರ್ಥ, ಗಂಧ, ಪ್ರಸಾದ ಎಲ್ಲ ತೊಗೊಂಡು ಬರ್ತಿದ್ವಿ. ಹೀಂಗೆ ಹೋಗ್ತಿದ್ದ ಒಂದು ಗುಡಿಯೊಳಗ ಸೊರಗಿದ ಮೈಕಟ್ಟಿನ, ವಯಸ್ಸಾ ದ ಪೂಜಾರಿಯೊಬ್ಬರು ತೀರ್ಥ ಕೊಡಲಿಕ್ಕೆ ಕೂತಿರುತಿದ್ರು.ತೀರ್ಥ ತೊಗೊಂಡಾ ದ ಮ್ಯಾಲೆ ನಾವು ಗಂಧ ಕೊಡ್ರಿ ಅಂತ ಕೇಳಿದ್ರ, “ತೀರ್ಥದ ತಟ್ಟೆಗೆ ಕಾಸು ಹಾಕಿ, ನಂತರ ಗಂಧ ಕೊಡುವ” ಅಂತ ಅಂತಿದ್ರು. ಸಾಲಿ-ಕಾಲೇಜಿನ ಹುಡುಗೂರು ಅನ್ನೋ ಅಸಡ್ಡೆನೂ ಇತ್ತು. ದೇವರಿಗೆ ಹಚ್ಚಿದ ಗಂಧದ ಪರಿಮಳಾ ಎಂಥಾದಂದ್ರ, ಭಕ್ತಿಯಿಂದ ಒಂದು ಹನಿ ಹಚ್ಚಿಕೊಂಡರೆ ಮನಸ್ಸಿಗೆ ಅದೇನೋ ಖುಷಿ ಆಗ್ತಿತ್ತು. ತಮ್ಮ ಪರಿಚಯದ ವರು ಬಂದ ಕೂಡ್ಲೆ ತುಳು ಭಾಷಾದೊಳಗ ಮಾತಾಡ್ಕೋತ ತೀರ್ಥಕೊಡೋದೇನು, ಗಂಧ- ಹೂವು, ಪಂಚಕಜ್ಜಾಯ ಕೊಡೋದೇನು ಭಾರಿ ನಡೀತಿತ್ತು.ಇದನ್ನೆಲ್ಲ ನೋಡಿ ನನಗ,ನಮ್ಮಕ್ಕಗ ಬೇಜಾರಾಗ್ತಿತ್ತು. ಅದೇನೋ ಅಂತಾರಲ್ಲ, “ದೇವ್ರ ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ” ಅನ್ನೋ ಹಂಗ ಇತ್ತು. ಪ್ರತಿಸಲ ತೀರ್ಥದ ತಟ್ಟಿಗೆ ರೊಕ್ಕ ಹಾಕಿ ಗಂಧ ತೊಗೊಂಡು ಬರ್ತಿದ್ದ ನಮಗ ಸಿಟ್ಟು ಬಂದು ಆ ಪೂಜಾರಿಗೆ ಒಂದು ಹೆಸರಿಟ್ವಿ, ‘ಬಾಡಿ ಬಸವಳಿದ ಬಳ್ಳಿ’! ಆ ಗುಡಿಯೊಳಗ ಇನ್ನೊಂದಿ ಬ್ಬರು ಪೂಜಾರ ರಿದ್ದರು. ಅವ್ರದೂ ಹೆಚ್ಚು-ಕಮ್ಮಿ ಇದೇ ಕಥೀನ ಆಗಿತ್ತು. ತುಳು ಭಾಷಾದಾಗ ಮಾತಾಡಿದ್ರೇನೇ ಹೆಚ್ಚಿನ ಮರ್ಯಾದಿ. ಇವರಿಬ್ಬ ರಿಗೂ ಏನಾರ ಹೆಸರಿಡಬೇಕಂತ ಅಂದ್ಕೊಂಡಾಗ, ಅವರ ಹೇರ್ ಸ್ಟೈಲ್ ಸಹಾಯಕ್ಕ ಬಂದಿತ್ತು. ಆ ಪೂಜಾ ರಿಗಳಿಬ್ಬರೂ ತಮ್ಮ ಉದ್ದವಾದ ಕೂದಲನ್ನು ಮ್ಯಾಲಕತ್ತ ಬಾಚಿ, ತಲಿಮ್ಯಾಲೆ ಗಂಟು ಕಟ್ಟಿ ಕೋತಿದ್ರು. ಅವರ ಲುಕ್ಕು ಥೇಟ್ ‘ಕ್ಲಿಯರ್ ಟೋನ್’ ಕ್ರೀಮಿನ ಜಾಹೀರಾತಿನ್ಯಾ ಗಿನ ಮಾಡೆಲ್ ತನ್ನ ಕೂದಲನ್ನ ಕಟ್ಟಿಕೊಂಡ ಹಂಗ ಇರೋದು ನೋಡಿ ಅವರಿ ಬ್ಬರಿಗೂ ಹೆಸರಿಡೋ ಶಾಸ್ತ್ರ ಆಗಿತ್ತು. ‘ಕ್ಲಿಯರ್ ಟೋನ್ 1’, ‘ಕ್ಲಿಯರ್ ಟೋನ್ 2’!

ಇನ್ನು ಸಾಲಿ, ಕಾಲೇಜಿನ್ಯಾಗ ಕಲೀತಿರಬೇಕಾದ್ರ ನಾವು-ನೀವು ಮಾಡಿದ ನಾಮಕರಣಗಳ ಪಟ್ಟಿ ಸ್ವಲ್ಪ ದೊಡ್ಡದಾಗೇ ಇರ್ತದ. ಯಾಕಂದ್ರ ಟೀನೇಜಿನ ಹುಡುಗೂರು-ಹುಡುಗೇರಿಗೆ ಅವ್ರು ಮಾಡೋದೆಲ್ಲ ಹುಡುಗಾಟನ ಅನ್ನಸ್ತದ. ಹುಡುಗೂರು ಕಾಲೇಜಿನ್ಯಾಗಿನ ಹುಡುಗೇರನ್ನ ಸೊಟ್ಟ ಕಣ್ಣಿಂದ ನೋಡೋದು, ಕಮೆಂಟ್ ಪಾಸ್ ಮಾಡೋದು ಎಲ್ಲಾ ಕಾಮನ್. ಇದ್ರ ಜೋಡಿ ಹುಡಿಗೇರು, ಆ ಹುಡುಗೂರ ಮ್ಯಾಲೆ ಸಿಟ್ಟಿಗೇಳೋದು, ಅವ್ರನ್ನ ನೋಡಿ ತಮ್ಮ-ತಮ್ಮೊ ಳಗೆ ಏನೋನೋ ಗುಸು-ಗುಸು ಮಾತಾಡ್ಕೊಂ ಡು ಹಲ್ಲು ಕಿಸಿಯೋದು ನಡದೇ ಇರ್ತದ. ಇದೆಲ್ಲದರ ನಡುವೆ ಪಾಠ, ಲ್ಯಾಬೋರೇಟರಿ, ಪ್ರಾಕ್ಟಿಕಲ್ಸ್, ಲೈಬ್ರೆರಿ ಅಂತ ಓಡಾಡಿಕೊಂಡಿ ರ್ತಾರ. ಮತ್ತ ಸಮಯ- ಸಂದರ್ಭಕ್ಕ ತಕ್ಕಂಗ ತಮ್ಮ ಗೆಳ್ಯಾರು-ಗೆಳತೇರಿಗೆ, ಮಾಸ್ತರ-ಲೆಕ್ಚರರಿಗೆ ಮನಸ್ಸಿಗೆ ಬಂದಂಗ ಹೆಸರಿಡೋದು ಅವರೆಲ್ಲರ ಆದ್ಯ ಕರ್ತವ್ಯನೇನೂ ಅನ್ಕೊಂಡಂಗ ಕಂಡು ಬರ್ತದ. ನಾವೂ ಇದನ್ನೇ ಮಾಡಿದ್ವಿ. ಇದೇನು ಸಾಲಿ-ಕಾಲೇಜಿಗೆ ಓದ್ಲಿಕ್ಕೆ ಹೋಗ್ತದೋ, ಇಲ್ಲಾ ಅಲ್ಲಿ ಎಲ್ಲಾರಿಗೂ ಹೊಸ- ಹೊಸ ಹೆಸರಿಟ್ಟು ಹಲ್ಲು ಕಿಸಿಯೋದಕ್ಕೋ ಅಂತ ಅನ್ಸಬಹುದು. ಆದ್ರ ನಾವಿಟ್ಟ ಅದೆಷ್ಟೋ ಹೆಸರುಗಳು, ನಾವು ಕಲೀತಿದ್ದ ಪಾಠದಿಂದಲೇ ಹುಟ್ಟಿಕೊಂಡಿ ದ್ವಲ್ಲದೇ, ಹೊಸ ರೂಪಾನೂ ತೊಗೊಂಡಿದ್ವು.

‘Sooty Flame’, ’Concentrated Sulfuric Acid’,’ ’Diluted Hydrogen chloride’ ಅನ್ನೋ ಹೆಸರುಗಳನ್ನು ಕೆಮಿಸ್ಟ್ರಿ ಲ್ಯಾಬಿನಿಂದ ತೊಗೊಂಡಿದ್ರ, Zoology ಲ್ಯಾಬಿನ ‘ಸ್ಮಾಲ್ ಮೈಕ್ರೋಸ್ಕೋಪ್ (ಎಸ್.ಎಂ) ‘ಬಿಗ್ ಮೈಕ್ರೋಸ್ಕೋಪ್’, ‘ಫಾರ್ಮ್ಯಾಲಿನ್’ ದ್ರಾವಣ ನಾಮಕರಣದ ಲಿಸ್ಟಿಗೆ ಸೇರಿಕೊಂಡಿದ್ವು.

ಇನ್ನು Origin of Life, Evolution ಪಾಠ ದಾಗ ಓದಿದ್ದ ವಿಜ್ಞಾನಿ Charles Darwin (Father of Evolution), ಆಗಿನ ಕಾಲಮಾನ ಆಗಿದ್ದ Paleozoic Era, Mesozoic Era, ಇವೂ ಸಹಿತ ಹೆಸರಾಗಿ ರಾರಾಜಿಸಿದ್ದವು. ಈ ಹೆಸರು ಗಳನ್ನಿಡಲಿಕ್ಕೆ ಏನಾರ ಒಂದು ಹಿನ್ನೆಲಿ ಇರಬೇಕು ಅಂತ ಅನ್ನಿಸಿರಬಹುದು. ಕೆಮಿಸ್ಟ್ರಿ ಲ್ಯಾಬಿನ್ಯಾಗ ಬೈ-ಮಿಸ್ಟೇಕ್ ಆಸಿಡ್ ನುಂಗಿದ ಹುಡುಗಿಗೆ ಎಲ್ಲಾರು Con H2SO4 ಅಂದ್ರ, ನೀರು ಅಂತ ತಿಳಕೊಂಡು ‘ಫಾರ್ಮ್ಯಾಲಿನ್’ ಕುಡಿದ ನಮ್ಮ ಲೆಕ್ಚರರ್ ಒಬ್ಬರು ‘ಫಾರ್ಮ್ಯಾ ಲಿಂಗಂ’ ಆಗಿದ್ರು. ಸಣ್ಣ ವಯಸ್ಸಿಗೇ ಸ್ವಲ್ಪ ಜಾಸ್ತಿನೇ ಅನ್ನೋಹಂಗ ಕೂದಲ ಉದುರಿದ ಹುಡುಗ ವಿಜ್ಞಾನಿ ‘ಡಾರ್ವಿನ್’ ಆಗಿದ್ರ, ಲುಕ್ಸ್ ನ್ಯಾಗ ’ಮಂಗನಿಂದ ಮಾನವ’ ಅನ್ನೋ ಥಿಯರಿಗೆ ಉದಾಹರಣೆ ಅನ್ನಬಹುದಾಗಿದ್ದ Zoology ಲ್ಯಾಬಿನ ಅಟೆಂಡರ್ ಮತ್ತು ಅವನ ಮಗ ‘Paleozoic- Mesozoic’ ಅಂತ ನಾಮ- ಕರಣ ಮಾಡಿಸಿ ಕೊಂಡಿದ್ರು. ಅಪ್ಪ ಪಾಪದವ. ತನ್ನ ಪಾಡಿಗೆ ಕೆಲಸ ಮಾಡ್ಕೊಂಡಿದ್ರ, ಮಗ ಮಾಡೋ ಕೆಲಸೆಲ್ಲ ಮಂಗ್ಯಾನಾಟಗಳೇ ಆಗಿದ್ದವು.

ಇವೆಲ್ಲದರ ಜೋಡಿ ನಮ್ಮ ಮೇಜರ್ ಸಬ್ಜೆಕ್ಟ್ ಆಗಿದ್ದ ಬಾಟನಿ, ಹೆಸರುಗಳ ಭಂಡಾರನ ನಮ್ಮ ಮುಂದ ತೆರದಿಟ್ಟಿತ್ತು.ಪ್ರತಿಯೊಂದು ಗಿಡ-ಮರ, ಬಳ್ಳಿಗಳ ಮಾಹಿತಿ ಸಂಗ್ರಹ ಮಾಡೋದು, Botanical Nomenclature ಬಗ್ಗೆ ಓದ್ತಾಯಿದ್ದ ನಮಗ ಹೆಸರಿನ ಲಾಟರಿನೇ ಹೊಡದಂಗ ಆಗಿತ್ತು.ಗಿಡ-ಬಳ್ಳಿಗಳ ಗುಣಧರ್ಮ ಗಳನ್ನು ಓದಿ, ವಿಂಗಡಿಸಿ, ಅವುಗಳ ವೈಜ್ಞಾನಿಕ ಹೆಸರು ಕಂಡುಹಿಡಿಲಿಕ್ಕೆ ನೂರಾರು ಫ್ಯಾಮಿಲಿ ಹೆಸರು, ಸಾವಿರಾರು ಸಬ್-ಫ್ಯಾಮಿಲಿ, ಆರ್ಡರ್, ಸಬ್-ಆರ್ಡರ್ ಗಳು ಅಂತೆಲ್ಲ ಕಂಡುಕೊಂಡು, ಯಾವ Genus ಮತ್ತು Species ಅಂತ ವೈಜ್ಞಾನಿಕ ಹೆಸರು ಗೊತ್ತು ಮಾಡಿಕೊಳ್ಳೋ ಕೆಲಸ ಅದಾಗಿತ್ತು. ಇಷ್ಟೆಲ್ಲ ಮಾಡೊವಾಗ, ಆ ಗಿಡ-ಮರಗಳ ಗುಣಧರ್ಮ ಗಳನ್ನ ನಮ್ಮ ಸುತ್ತ- ಮುತ್ತಲಿನ ಮನುಷ್ಯಾರ ನಡವಳಿಕೆಗೆ ಹೋಲಿಸಿ ಅದಕ್ಕ ತಕ್ಕಂಗ ಅವರಿಗೆ ನಾಮಕರಣ ಮಾಡೋದು ನಮಗೆಲ್ಲ ಭಾಳ ಸಸಾರ ಆಗಿ ಬಿಟ್ಟಿತ್ತು. ಇದನ್ನ ಆಧಾರಾಗಿಟ್ಟು ಕೊಂಡು ನಮ್ಮ ಕಾಲೇಜಿ ಒಂದು ಹುಡುಗನಿಗೆ ನಾವಿಟ್ಟದ್ದ ಹೆಸರು ಪಾರ್ಥೇನಿಯಂ! ನಮ್ಮ ಜೊತಿ ಓದ್ತಾಯಿದ್ದ ಆ ಹುಡುಗ ಲೈಬ್ರೆರಿ, ಕ್ಯಾಂಟೀನ್, ಸ್ಟಡಿಸೆಂಟರ್ ಹೀಂಗ ಎಲ್ಲಾ ಕಡೆ ಕಾಣಿಸಿಕೊಳ್ಳೋದ್ರ ಜೊತಿಗೆ ಲೇಡೀಸ್ ಹಾಸ್ಟೆಲ್ನ ಮುಂದ ಎಡತಾಕೋದು ಹುಡುಗೇರಿ ಗೆಲ್ಲ ಕಿರಿಕಿರಿಯಾಗತಿತ್ತು. ‘ಪಾರ್ಥೇನಿಯಂ’ ಗಿಡದ ಗುಣ ಏನು? “ಎಲ್ಲ ಕಡೆಯೂ ಕಂಡು ಬರುವ, ಅಲರ್ಜಿ ಉಂಟು ಮಾಡಬಹುದಾದ ಸಸ್ಯ”, ಹೌದಲ್ಲೋ. ಮನಷ್ಯರಿಗೆ ಅಲರ್ಜಿ, ರೋಗಗಳು ಬರೋಹಂಗ ಈ ಗಿಡ-ಮರಗಳಿ ಗೂ ರೋಗ ಗಳು ಬರ್ತಾವಲ್ಲೇನು? ಇವುಗಳ ಬಗ್ಗೆ ತಿಳಿಸಿ ಕೊಡೊ Plant Pathology ಓದಿದಾಗ ನಮಗ ಗೊತ್ತಾಗಿದ್ದು ಗಿಡದಾಗಿನ ಎಲಿಗೊಳಿಗೆ ಬರೋ ‘Powdery Mildew’ ಅಂದ್ರ, ‘ಬಿಳಿ ಬಣ್ಣದ ಬೂದು (Fungus) ರೋಗ’ ಅಂತ. ದಿನಾಲೂ ಕಾಲೇಜಿ ಗೆ ಬರೋವಾಗ ಮಾರಿಗೆ ಬೂದು- ಬೂದಾಗಿ ಪೌಡರ್ ಹಚ್ಚಿ ಕೊಂಡು ಬರ್ತಿದ್ದ ನಮ್ಮ ಪ್ಯಾಥೊಲೊಜಿ ಲೆಕ್ಚರರ್, ಗಿಡದ ಎಲಿಗೊಳಿಗೆ ಬರೋ ಈ ರೋಗದ ಡಿಟೇಲ್ಸ್ ಹೇಳಿದಾಗ, ಕ್ಲಾಸಿನ್ಯಾಗ ಕೂತಿದ್ದ ನಮ್ಮೆಲ್ಲರ ಕಣ್ಣು ಮುಂದನ ಆ ಎಲ್ಲ ಗುಣ-ಲಕ್ಷಣಗಳು ಕಂಡು, ಮನಸ್ಸಿನ್ಯಾಗ ಮೂಡಿದ ಚಿತ್ರ ಏನಿರ ಬಹುದು ಅಂತ ಗೊತ್ತಾಗಿ ರಬೇಕಲ್ಲ. ಆಮ್ಯಾಲೆ ಅವರಿಗೆ ‘Powdery Mildew’ ಅನ್ನೋ ಹೆಸರು ಖಾಯಂ ಆತು!

ಈ ಬಾಟನಿನ್ಯಾಗ ಇನ್ನೊಂದು ವಿಶೇಷೇನಪಾ ಅಂದ್ರ, ಗಿಡ-ಮರ ವಿಂಗಡನೆ ಮಾಡೋದ್ರಾ ಗೂ ಒಂದು ನಿಯಮ ಪಾಲಿಸ್ತಾರ. ಭಾಳಷ್ಟು ಫ್ಯಾಮಿಲಿ ಹೆಸರುಗಳ ಕೊನಿಗೆ ‘acae’ಅಂತನೆ ಇರ್ತದ. ಉದಾಹರಣೆಗೆ Magnoliacae (ಸಂಪಿಗೆ ಹೂ ಫ್ಯಾಮಿಲಿ), Anacardiacae (ಮಾವಿನಹಣ್ಣಿನ ಫ್ಯಾಮಿಲಿ) ಇತ್ಯಾದಿ. ಇದನ್ನೆಲ್ಲ ಓದಿದ ನನ್ನ ಗೆಳತೇರು ನಮ್ಮ ಕಾಲೇಜಿನ್ಯಾಗಿನ ಹುಡುಗನೊ ಬ್ಬನಿಗೆ ಇಟ್ಟಿದ್ದ ಹೆಸರು ಹೆಣ್ಣೇಸಿ (ಹೆಣ್+acae)! ಅವನ ಗುಣಧರ್ಮಗಳು ಏನೇನು ಆಗಿದ್ದವು ಅಂತ ಗೆಸ್ ಮಾಡಬಹುದು. ಯಾವಾಗಲೂ ಹುಡುಗೇರ ಗುಂಪಿನ್ಯಾಗೇ ಇದ್ದು, ಲೇಡೀಸ್ ರೂಮಿನ ಹತ್ತಿರನೋ ಇಲ್ಲ ಲೇಡಿಸ್ ಹಾಸ್ಟೆಲ್ ಹತ್ತಿರನೋ ಕಾಣಿಸಿಕೊಳ್ತಿದ್ದ ಆ ಹುಡುಗನಿಗೆ ತನಗ ಈ ಹೆಸರಿಟ್ಟಿದ್ದು ಗೊತ್ತಾಗಿ ಹೆಣ್ಣುಮಕ್ಕ ಳಂಗ ಕಣ್ಣೀರು ಹಾಕಿದ್ದನಂತ! ಈ ನಾಮಕರ ಣದ ಕೆಲಸ ಎಷ್ಟು ಸುಲಭ ಅಂತ ಅನ್ನಿಸಿದ್ರೂ, ಆ ಹೆಸರಿನ ಮೂಲ ಏನು ಅಂತು ತಿಳ್ಕೊಂಡಾಗ, ಅದನ್ನ ‘ಕ್ರಿಯೇಟಿವಿಟಿ’ ಅನ್ನ ಬೇಕೋ ಅಥವಾ ‘ಹುಡುಗಾಟದ ಪರಮಾವಧಿ’ ಅನ್ನಬೇಕೋ ಅದು ಹೆಸರಿಟ್ಟವರಿಗೆ, ಹೆಸರಿಡಿಸಿ ಕೊಂಡವರಿಗೆ ಬಿಟ್ಟಿದ್ದು.

ನಾವು ಸಣ್ಣವರಿದ್ದಾಗ ನಮ್ಮಜ್ಜಿ ಮಹಾಭಾರತ ಕಥಿ ಹೇಳಿಕೋತ ನಮ್ಮ ದೊಡ್ಡಪ್ಪಗ ಅವರ ಕಾಲೇಜಿನ ಗೆಳ್ಯಾರು ‘ಭೀಷ್ಮಾಚಾರಿ’ ಅಂತ ಕರೀತಿದ್ರು ಅಂತ ಹೇಳಿದ್ಲು. ಪಾಪ, ನಮ್ಮ ದೊಡ್ಡಪ್ಪ ಪ್ರತಿವರ್ಷ ಪರೀಕ್ಷದೊಳಗ ಫೇಲ್ ಆಗಿ-ಆಗಿ, ಮುಂದಿನ ಕ್ಲಾಸಿಗೆ ಹೋಗಲಿಕ್ಕೇ ಆಗಿರಲಿಲ್ಲಂತ. ಅವರಿದ್ದ ಕ್ಲಾಸಿನ್ಯಾಗ ಅವರೆ ‘ಸೀನಿಯರ್ ಸಿಟಿಜೆನ್’ (ಇದು ನಾವು ಕಾಲೇಜಿನ್ಯಾಗ ಇದ್ದಾಗ ಇಟ್ಟಿದ್ದ ಹೆಸರು)! ಹೀಂಗಾಗಿ ಅವರು ಇಡೀ ಕಾಲೇಜಿಗೆ ‘ಭೀಷ್ಮ ಪಿತಾಮಹ’ ಆಗಿದ್ರು. ಅಂದ್ರ ಈ ನಾಮಕರಣ ಪದ್ಧತಿ ಹಿಂದಿನಿಂದಲೂ ನಡಕೊಂಡು ಬಂದಿದ್ದ ಲ್ಲದೇ, ಹೀಂಗೇ ಮುಂದುವರಕೊಂಡು ಹೋಗ್ತದ ಅನ್ನೋದಂತೂ ಗ್ಯಾರೆಂಟಿ. ಈ ಹೆಸರಿಡೋ ಕೆಲಸ ಬರೀ ಸ್ವಾದ್ರತ್ತಿ (ಹುಡುಗಿಯರು) ಮಾಡೋದಾಗಿರದೆ, ಸ್ವಾದರ ಮಾವಂದಿರೂ ( ಹುಡುಗರೂ) ಈ ಕೆಲಸ ಮಾಡ್ತಾರ ಅನ್ನೋದು ಎಲ್ಲಾರಿಗೂ ಗೋತ್ತೇ ಅದ.

ಯೂನಿವರ್ಸಿಟಿನ್ಯಾಗ ಓದೋವಾಗ ನಮ್ಮ ಕ್ಲಾಸಿನ ಕೆಲವು ಹುಡುಗೂರು ನಮ್ಮ ಪ್ರೊಫೆಸರ್ ಒಬ್ಬರಿಗೆ ‘ಡಾಬರ್’ ಅಂತ ಕರೀತಿದ್ರು. ಅವ್ರು ದಿನಾಲೂ ತಲಿಗೆ ತೆಪ-ತೆಪ ಎಣ್ಣಿ ಹಚಗೊಂಡು ಚಪ್ಪಟಾಗಿ ಕೂದಲ ಬಾಚಿಕೊಳ್ಳುತ್ತಿದ್ದದ್ದನ್ನು ನೋಡಿ ಈ ಹೆಸರಿಟ್ಟಿ ರಬಹುದು ಅಂತ ತಿಳ ಕೊಂಡಿದ್ದ ನಮಗ ಅದು ‘ಡಾಬರ್ ಮನ್’ ಅನ್ನೋ ಹೆಸರನ್ನು ಸಣ್ಣದಾಗಿಸಿ ‘ಡಾಬರ್’ ಅಂತಾರ ಅನ್ನೋದು ಗೊತ್ತಾಯಿತು. ಮಾತು- ಮಾತಿಗೂ ಸಿಟ್ಟಿಗೆದ್ದು ಧನಿಯೇರಿಸಿ ಬಯ್ಯೂದು ಆ ಪ್ರೊಫೆಸರ್ ಅವರ ಒಂದು ಪ್ರಮುಖ ಲಕ್ಷಣ ಆಗಿದ್ದು ನೆನಪಾಗಿತ್ತು. ನಾವೂ ಈ ಪರಂಪರಾ ನ ಮುಂದುವರೆಸಿಕೊಂಡು ಹೋದ್ವಿ. ನಮಗ ‘ಎಕಾನಾಮಿಕ್ ಬಾಟನಿ’ ಕಲಿಸಿಕೊಂಡಿದ್ದ ಪ್ರೊಫೆಸರ್ ಒಬ್ಬರು ಅಕ್ಕಿಯ ಬ್ಯಾರೆ-ಬ್ಯಾರೆ ತಳಿಗಳ ಬಗ್ಗೆ ಹೇಳಿಕೊಟ್ಟು, ’ಜವಾನಿಕಾ’, ‘ಜಪಾನಿಕಾ’ ಅಂತ ಎರಡು ವೆರೈಟಿ ಇರ್ತದ ಅಂತ ಹೇಳಿದ್ರು.ಆಗ್ಲೇ ರಿಟೈರಮೆಂಟಿಗೆ ಬಂದಿದ್ದ ಅವರು ಸ್ವಲ್ಪ ಕಿರಿಕಿರಿ ಮನುಷ್ಯ. ಕೈ ಬಿಚ್ಚಿ ಮಾರ್ಕ್ಸ ಕೊಡತಿರಲಿಲ್ಲ. ಪ್ರತಿಯೊಂದು ವಿಷಯಕ್ಕೂ “ನಮ್ಮ ಕಾಲದಾಗ ಹಂಗಿತ್ತು. ನಿಮ್ಮ ಕಾಲದಾಗ ಹಿಂಗಿದ್ರೂ, ನೀವು ಸರಿಯಾಗಿ ಕಲಿಯಂಗಿಲ್ಲ” ಅಂತ ಬೈಯ್ಕೋಂಡು ಇರ್ತಿದ್ರು. ಹುಡುಗೂರೆಲ್ಲ ಅವರಿಗೆ ‘ಜವಾನಿಕಾ- ಜಪಾನಿಕಾ’ ಅಂತ ಹೆಸರಿಟ್ಟಿದ್ದನ್ನು ನೋಡಿ, ನಾನು ಮತ್ತು ನನ್ನ ಗೆಳತಿ ಅದನ್ನು ಸ್ವಲ್ಪ ಟ್ರಿಮ್ ಮಾಡಿ ‘ಜವಾನಿ’ ಅಂತ ಮಾಡಿದ್ವಿ. ಮೊದಲೇ ಮುದುಕ ಮನುಷ್ಯಾ, ಸುಮ್ಮ-ಸುಮ್ಮನೆ ಸಿಟ್ಟಿಗೆದ್ದು ನಮಗೇನಾದ್ರೂ ಬೈದಿದ್ದ ದಿನ,
“ಯಹಾಂ, ವಹಾಂ ಸಾರೇ ಜಹಾಮೆ ತೇರಾ ರಾಜ ಹೈ, ‘ಜವಾನಿ’ ವೋ ‘ದಿವಾನಿ’ ತು ಜಿಂದಾಬಾದ್”
ಅಂತ ಸಿನೆಮಾ ಹಾಡನ್ನು ಹಾಡಿ, ನಮಗ ನಾವ ಸಮಾಧಾನ ಮಾಡ್ಕೋತಿದ್ವಿ. ಹೀಂಗ ಹೆಸರಿಟ್ಟು ಅದರ ಜೊತಿಗೆ ಒಂದು ಹಾಡು ಹಾಡೋದನ್ನು ಸ್ವಲ್ಪ ದಿನ ಮುಂದುವರೆಸಿಕೊಂಡು ಹೋದ್ವಿ. ಮುಂದೊಂದು ದಿನ ಅದು ನಮಗೂ ತಿರುಗು ಬಾಣ ಆತು! ಬಯೋಟೆಕ್ ಸ್ಪೆಷಲ್ಸ್ ಓದ್ತಿದ್ದ ನಾವು ಮೂವರು ಗೆಳೆತೇರು ‘ಡಿಪಾರ್ಟ- ಮೆಂಟ್ ಡೇ’ ಅಂತ ಭಾರೀ ಖುಷಿಯಿಂದ ‘ಇಳಕಲ್ ಸೀರಿ’ ಉಟಗೊಂಡು ಹೋದಾಗ, ಜೆನಿಟಿಕ್ಸ್ ಸ್ಪೆಷಲ್ಸ್ ನ ಹುಡುಗೂರಿಂದ ನಮಗೂ ನಾಮಕರಣ ಆಗಿತ್ತು, “ಸುವ್ವಿ, ಸುವ್ವಕ್ಕ, ಸುವ್ವಲಾಲಿ”! ಅದ್ರ ಜೋಡಿ,

“ಸುವ್ವಿ, ಸುವ್ವಕ್ಕಲಾಲಿ, ಸುವ್ವಲಾಲಿ, ಜಾಣೆ ಜಾಗರದ ಹೆಣ್ಣೆ ಸುವ್ವಲಾಲಿ”

ಅನ್ನೋ ಜಾನಪದ ಗೀತೆನೂ ಹಾಡಿದ್ದರು. ಇದಕ್ಕ ನಾವು ಹೆಂಗ ಉತ್ತರ ಕೊಡಬೇಕು ಅಂತ ಯೋಚನಿ ಮಾಡತಿ ರಬೇಕಾದ್ರ, ಆ ಹುಡುಗೂ ರೊಳಗೊಬ್ಬ ನಮ್ಮದ ಕ್ಲ್ಯಾಸಿನ್ಯಾಗ ಓದ್ತಿದ್ದ ಒಬ್ಬ ಹುಡುಗೀಗೆ ಹಿಂದೊಮ್ಮೆ ತನಗ ಸಿಕ್ಕಿದ್ದ ಸೀಟ್ ಬಿಟ್ಟುಕೊಟ್ಟಿ ದ್ದು ಗೊತ್ತಾಯಿತು. ಅವನಿಗೆ ‘ಕರ್ಣ’ ಅಂತ ನಾಮಕರಣ ಮಾಡಿದ್ದಲ್ಲದೇ,
“ಆ ಕರ್ಣನಂತೆ ನೀ ದಾನಿಯಾದೆ, ಇನ್ನೊಂದು ಜೀವಕೆ ಆಧಾರವಾದೆ”
ಅನ್ನೋ ಹಾಡು ನಾವೂ ಹಾಡಿದ್ವಿ. ಆದ್ರ ಆ ಹುಡುಗೀಗೆ ‘ಕುಂತಿ’ ಅಂತ ನಾಮಕರಣ ಮಾಡ ಲಿಲ್ಲ! ಮುಂದೆಲ್ಲ ನಾವು ಮಾಡುತ್ತಿದ್ದ ನಾಮ ಕರಣ ಹಾಡಿಗೆ ಸೀಮಿತ ಆಗಿರದೆ, ನಾವು ಓದ್ತಾ ಇದ್ದ ಬಯೋಟೆಕ್, ಜೆನಿಟಿಕ್ಸ್ ಜೊತಿಯಾಗಿಸಿ ಕೊಂಡು ‘ಜೀನಿಕ್’ ಆಗಿತ್ತು.

ನಾವು ಲೇಡೀಸ್ ಹಾಸ್ಟೆಲಿನಲ್ಲಿದ್ದಾಗ ಜೊತೆಗಿ ದ್ದ ನೂರಾರು ಹುಡುಗೇರು, ಅವರು ಮಾಡಿದ ಸಾವಿರಾರು ನಾಮಕರಣಗಳು ಕೇಳಿಬರ್ತಿದ್ವು. ಹೀಂಗ ಒಂದು ಹುಡುಗಿಗೆ ‘ಉಶ್ ಕುಮಾರಿ’ ಅಂತ ಯಾರೋ ಹೆಸರಿಟ್ಟಿದ್ರು. ಅದ್ರ ಹಿಂದಿನ ಕಾರಣ ಏನಂದ್ರ,ಆ ಹುಡುಗಿ ಆಗಲೆ ಎಂ.ಎ, ಎಂ.ಫಿಲ್ ಮುಗಿಸಿ,ಯು.ಪಿ.ಎಸ್.ಸಿ. ಪರೀಕ್ಷೆಗೆ ತಯಾರಿ ನಡೆಸಿದ್ದಳು. ಯಾವಾಗ್ಲೂ ತನ್ನ ರೂಮಿನ್ಯಾಗ ಓದಿಕೊಳ್ತಿದ್ದ ಆಕಿ, ಹೊರಗಡೆ ಏನಾರ ಸ್ವಲ್ಪ ಗದ್ದಲ, ಸಪ್ಪಳ ಕೇಳ್ಸಿದರ ಸಾಕು, ಒಳಗಿನಿಂದಲೇ “ಉಶ್”, “ಉಶ್” ಅನಕೋತ ಕೂಗುತಿದ್ದಳು. ಆಗ ಮಾತಾಡಿಕೋತ ಗದ್ದಲ ಮಾಡ್ತಿದ್ದವರು ಸುಮ್ಮನಾಗ್ತಿದ್ರೂ ಆಕಿಗೆ ‘ಉಶ್ ಕುಮಾರಿ’ ಅಂತ ನಾಮಕರಣ ಮಾಡಿ, ಹಿಂದಿ ನಿಂದ ಆಡಕೊಂಡು ನಗತಿದ್ರು. ಹಾಸ್ಟೆಲ್ಲಿ ನ್ಯಾಗ ಉಪಯೋಗಸಲಿಕ್ಕೆ ಬೇಕಾಗೋ ಸಣ್ಣ-ಸಣ್ಣ ಸಾಮಾನುಗಳಿಗೂ ಇನ್ನೊಬ್ಬರ ಮ್ಯಾಲೆ ಡಿಪೆಂಡ್ ಆಗ್ತಿದ್ದ ಹುಡುಗೇರಿಗೆ ಪ್ಯಾರಾಸೈಟ್ (ಪರಾವಲಂಬಿ) ಅಂತನೂ, ತಲಿ ತುಂಬ ಹೇನು ಸಾಕಿಕೊಂಡು, ಪರ-ಪರ ಅಂತ ತಲಿ ತುರಿಸಿ ಕೊಳ್ತಾ ಅವುಗಳ ಜೊತಿಗೆ ಹೊಂದಾಣಿಕೆ ಮಾಡ್ಕೊಂಡು ಇದ್ದಂಥ ಹುಡುಗೇರಿಗೆ ‘ಸಿಂಬಯಾಸಿಸ್’ (ಜೋಡಿಜೀವ) ಅಂತ ಹೆಸರಿಟ್ಟಿತ್ತು. ಸ್ವಲ್ಪ ಡೇರಿಂಗ್ ಇದ್ದವರು ‘ಕರ್ತವ್ಯಂ’ ಅಂತ ಕರೆಸಿಕೊಂಡ್ರ, ನೋಡಲಿಕ್ಕೆ ಸಾಫ್ಟ ಅನ್ನೋಹಂಗ ಇದ್ದು, ಯಾರಾರ ಏನಾದ್ರೂ ತಪ್ಪು-ಅನ್ಯಾಯ ಮಾಡಿದಾಗ, ಅವರ ಎದುರು ಧನಿ ಎತ್ತಿ ನಿಂತು, ಹೋರಾಟ ಕ್ಕಿಳಿದವರು ‘ದಾಮಿನಿ’ ಅಂತ ಕರೆಸಿಕೊಂಡಿ ದ್ರು. ಗೆಳ್ಯಾರು-ಗೆಳತೇರ ಸಪೋರ್ಟ ಇರಲಾರದೆ ಹೋರಾಟಕ್ಕ ನಿಂತವರು ‘ಒಂಟಿಜೀವ’ ಅಂತನೂ ನಾಮಕರಣ ಮಾಡಿಸಿಕೊಂಡಿದ್ರು.

ನಮ್ಮಗಳ ಮ್ಯಾಲೆ ಸಿನಿಮಾಗಳು ಪ್ರಭಾವ ಬೀರಿದ್ದವು ಅನ್ನೋದಂತೂ ಒಪ್ಪಿಕೊಳ್ಳಲೇ ಬೇಕು. ಯಾಕಂದ್ರ, ಭಾರಿ ಸ್ಟ್ರಿಕ್ಟ್ ಆಗಿದ್ದ ನಮ್ಮ ವಾರ್ಡನ್ನಿನ ಧ್ವನಿ ಕೇಳಿಸಿದಕೂಡ್ಲೇ, “ಬುಲ್ ಡಾಗ್…ಬುಲ್ ಡಾಗ್” ಅನ್ನೋ ಸಿನಿಮಾ ಡೈಲಾಗ್ ನಮ್ಮ ಕಿವಿಯೊಳಗ ಗುಂಯ್ ಗುಡು ತಿತ್ತು. ಆ ಸಿನೆಮಾದಾಗ ‘ಬುಲ್ ಡಾಗ್’ ಅಂತ ಕರೆಸಿಕೊಳ್ಳೋ ಬಾಸ್ ನೆನಪಾಗುತಿದ್ರು.
ಇನ್ನು ‘ಗಣೇಶನ ಮದುವೆ’ ಸಿನೆಮಾದಾಗ ನಾಯಿಗೆ ’ರಮಣ ಮೂರ್ತಿ’ಯಂತ ಹೆಸರಿಟ್ಟು ಗಣೇಶ ತನ್ನ ಮನೆ ಮಾಲೀಕನನ್ನ ಗೋಳಿಟ್ಟು ಕೊಂಡಿದನ್ನು ನೆನಪು ಮಾಡಿಕೊಂಡ್ರ, ನಾವು ನಮ್ಮ ಮನ್ಯಾಗಿನ ನಾಯಿಗಳಿಗೆ ಮಾಡಿದ ನಾಮಕರಣನೂ ನೆನಪಾಗ್ತದ. ನಾನು ಹೈಸ್ಕೂಲ್ ಮುಗಿಸೋತನಕ ನಮ್ಮ ಮನ್ಯಾಗ ನಾಯಿ ಸಾಕಿದ್ವಿ. ಜಡ್ಜ ಆಗಿ ಕೆಲಸ ಮಾಡ್ತಿದ್ದ ನಮ್ಮಪ್ಪಗ ಟ್ರಾನ್ಸಫರ್ ಆಗ್ತಿದ್ದ ಕೆಲವು ಊರಾಗ, ಊರ ಹೊರಗೊಂದು ಕೋರ್ಟು, ಮಗ್ಗಲದಾಗ ನಮಗ ಒಂದು ಕ್ವಾರ್ಟರ್ಸು, ಅಲ್ಲೇ ಒಂದು ಸಣ್ಣ ಜೇಲು, ಧೂರದಾಗ ಬಸ್ ಸ್ಟಾಂಡ್, ಹೀಂಗ ಇದ್ದು ನಮಗ ಮಂದಿ ಸಂಪರ್ಕ ಭಾಳ ಕಡಿಮೆ ಇತ್ತು. ಇಂಥಾ ಊರಾಗ ಇದ್ದಾಗೆಲ್ಲಾ ನಾಯಿ ಸಾಕ್ಕೊಂಡಿದ್ವಿ. ಮುದಿ, ಕಾಳಿ, ಚಂದ್ರು, ಫಂಡಿ, ಕೆಂದ, ನಿಕ್ಕು, ಬಗೀರಾ… ಲಿಸ್ಟ್ ಭಾಳ ದೊಡ್ಡದ ಅದ. ‘ಫಂಡಿ’ಯ ಪೂರ್ತಿ ಹೆಸರು ‘ಪಂಡರಿ ಬಾಯಿ’! ನಮ್ಮಣ್ಣ ಅದಕ್ಕ ಯಾಕ ಆ ಹೆಸರಿ ಟ್ಟಿದ್ನೋ ಗೊತ್ತಿಲ್ಲ, ಆದ್ರ ಮುಂದೊಂದು ದಿನ ಅದು ಸಿನೆಮಾದಾಗ ಪಂಡರಿಬಾಯಿ ಹೆಂಗ ಮಮತಾಮಯಿ ತಾಯಿ ಪಾತ್ರ ಮಾಡ್ತಿದ್ದರೋ ಅದನ್ನ ಮೀರಿಸೋವಂಥ ತಾಯಿ ಹೃದಯ ತನ್ನದು ಅನ್ನೋದನ್ನು ಸಾಬೀತು ಮಾಡಿತ್ತು. ಒಂದಿನ ಅದು ರೋಡಿನ ಮ್ಯಾಲೆ ಮುಂದು- ಮುಂದು ಹೋಗೋ ಮುಂದ, ನಾಲ್ಕೈದು ತಿಂಗಳಿನ ಅದರ ಮರಿನೂ ಹಿಂದ ಓಡಿತ್ತು. ಸ್ಪೀಡಾಗಿ ಬಂದ ಮೋಟಾರು ಬೈಕಿನ ಗಾಲಿ ಮರಿ ಮ್ಯಾಲೆ ಹರದು ಅದು ಸತ್ತುಹೋಗಿ ಬಿಡ್ತು. ಮುಂದ ಓಡಿ ಹೋಗಿದ್ದ ಫಂಡಿಗೆ ತನ್ನ ಮರಿ ಸತ್ತುಹೋಗಿದ್ದು ಗೊತ್ತಿರಲಿಲ್ಲ. ಆಮ್ಯಾಲೆ ಎರಡು-ಮೂರು ದಿನ ಕುಂಯ್, ಕುಂಯ್ ಅನಕೋತ ಆ ಮರೀನ್ನ ಹುಡುಕಾಡ್ದೇ ಇರೋ ಜಾಗನೇ ಇರಲಿಲ್ಲ. ಹೆಸರಿಗೆ ತಕ್ಕಂಗ ‘ಪಂಡರಿ ಬಾಯಿ’ ಆಗಿತ್ತು. ಅದಾಗಿ ಸ್ವಲ್ಪ ದಿವ್ಸಕ್ಕ ಒಂದು ದಿನ ‘ಮುದಿ’ಗೂ ಪೆಟ್ಟಾಗಿ, ಮನಿ ತನಕನೂ ಬರಲಿಕ್ಕಾದೆ ರೋಡಿನ ಬಾಜೂನೆ ಮಲಗಿತ್ತು. ನಾನು, ನಮ್ಮಣ್ಣ ನೋಡ್ಲಿಕ್ಕೆ ಹೋದ್ವಿ. ನಮ್ಮನ್ನು ನೋಡಿ ಕುಂಯ್, ಕುಂಯ್ ಅಂದು ಬಾಲ ಅಲ್ಲಾಡಿಸಿತು. ಅದರ ತೊಡಿ ಮುರುದು ಹೋಗಿ ದ್ದನ್ನು ನೋಡಿ ಮನಿಗೆ ಬಂದ ನಾನು, “ಅವ್ವ, ‘ಮುದಿ’ ನಾಯಿ ‘ದುರ್ಯೋಧನ’ ಆಗ್ಯದ” ಎಂದು ಅತಗೋತ ಹೇಳಿದಾಗ, ತಾನು ಹೇಳಿದ ‘ಮಹಾಭಾರತ’ ಕಥಿಯಿಂದ ‘ಮುದಿ’ ನಾಯಿಗೆ ಹೊಸ ಹೆಸರಿಟ್ಟದನ್ನು ನೋಡಿ ನಮ್ಮಜ್ಜಿ ನಕ್ಕರೂ, ಅತಗೋತ ನಿಂತಿದ್ದ ನನ್ನನ್ನು ಸಮಾಧಾನ ಮಾಡಿದ್ರು.

ನಮಗ ಸೋಶಿಯಲ್ ಲೈಫ್ ಭಾಳ ಕಡಿಮೆಯಿ ದ್ದದ್ದರಿಂದ, ಸಣ್ಣ ವಯಸ್ಸಿಗೇ ಪುಸ್ತಕ, ಪೇಪರ್ ಓದೋ ಹವ್ಯಾಸ ಬೆಳದು, ಕನ್ನಡ ಭಾಷಾದ ಮ್ಯಾಲೆ ಹಿಡಿತ ಸಿಕ್ಕಿತ್ತು. ಆಗ ನಾನು ಮಾಡ್ತಿದ್ದ ಒಂದ ಕೆಲಸ ಅಂದ್ರ, ಪ್ರತಿಯೊಂದು ಹೆಸರು, ನಂಬರ್,ಮಗ್ಗಿನೆಲ್ಲ ಉಲ್ಟಾಮಾಡಿ ಹೇಳೋದು. ‘ದುಂಒ’, ‘ಡುರಎ’, ‘ರುಮೂ’,’ಲ್ಕುನಾ’. . . ಇದರ ಜೋಡಿ ನಾವು ಇಡತಿದ್ದ ಹೆಸರು, ಅಡ್ಡ ಹೆಸರುಗಳೂ ಉಲ್ಟಾ ಆದವು. ಆವಾಗ್ಲೇ ನಮ್ಮನಿಗೆ ಇಪ್ಪತ್ತು ದಿನದ ನಾಯಿಯ ಮರಿ ಯನ್ನು ತೊಗೊಂಡು ಬಂತು. ‘ನಾಯಿ ಕುನ್ನಿ (ಮರಿ)ಗೆ’ ಏನು ಹೆಸರಿಡಬೇಕು ಅಂತ ಒಂದೆರಡು ದಿನ ಯೋಚನಿ ಮಾಡಿ, ಕುನ್ನಿ ಅನ್ನೋದನ್ನ ಉಲ್ಟಾ ಮಾಡಿ ‘ನಿಕ್ಕು’ ಅಂತ ಹೆಸರಿಟ್ವಿ. ಇಪ್ಪತ್ತು ದಿನದ ಕುನ್ನಿಯಾಗಿ ಮನಿಗೆ ಬಂದಿದ್ದ ‘ನಿಕ್ಕು’ ೧೨-೧೩ ವರ್ಷ ನಮ್ಮ ಮನಿಯ ಸದಸ್ಯನಾ ಗಿದ್ದು, ಈಗ ನಮ್ಮ- ನಮ್ಮ ಮಕ್ಕಳಿಗೆ ಹೇಳೋ ಕಥಾಪ್ರಸಂಗದೊಳಗ ಬಂದು ಹೋಗ್ತದ. ನಮ್ಮ ಮನಿ ಮುಂದ ಓಡಾಡಿ ಕೊಂಡಿದ್ದ ಮೊಳ ಉದ್ದ ಮಾರಿಯ ನಾಯಿಗೆ ‘ಕುದುರೆಮೋತಿ’ ಅಂತ ಹೆಸರಿಟ್ಟಿದ್ರ, ನಮ್ಮಕ್ಕನ ಮಗಳು ಕಪ್ಪು ಬಣ್ಣದ ನಾಯಿಗೆ ‘ಬಗೀರಾ’ ಅಂತ ಕರದಾಗ ‘ಜಂಗಲ್ ಬುಕ್’ನ ಕಪ್ಪುಚಿರತಿ ನೆನಪಾಗಿತ್ತು. ಇಲ್ಲಿ ಅಮೇರಿಕಾ ದಾಗ ಒಮ್ಮೆ ನನ್ನನ್ನು ನೋಡಿ ತನ್ನ ಸಣ್ಣ ಧನಿಯೊಳಗ ಎರಡು-ಮೂರು ನಿಮಿಷ ಬಿಡದೇ ಬೊಳಗಿದ ಸಣ್ಣ ಸೈಜಿನ ‘ಚಿವೌವಾ’ ನಾಯಿನ್ನ ನೋಡಿ, “ಭಲೆ, ಬಹದ್ದೂರ ಗಂಡು” ಅಂದಿದ್ದೆ.

ನಮ್ಮ ಈನಾಮಕರಣ ಪ್ರಕ್ರಿಯಾ ಬರಿ ಮನುಷ್ಯ ರಿಗೆ, ಪ್ರಾಣಿಗೊಳಿಗೆ ಸೀಮಿತ ಆಗಿಲ್ಲ. ನಮ್ಮನ್ಯಾ ಗಿನ ಸ್ಟೀಲ್ ಭಾಂಡಿ(ಪಾತ್ರೆ)ಗೊಳೂ ನಮ್ಮಿಂದ ಹೆಸರು ಇಡಸಿಕೊಂಡಾವ. ನಾವು ಸಣ್ಣೋರಿದ್ದಾ ಗ, ನಮ್ಮ ಮನಿ ಮುಂದ ತಿಪ್ಪಣ್ಣ ಅಂತ ಒಬ್ಬ ವಯಸ್ಸಾದ ಮನುಷ್ಯಾ ಭಾಂಡಿ ಮಾರಲಿಕ್ಕೆ ಬರ್ತಿದ್ದ. ನಮುವೆಲ್ಲ ಹಳೇ ಬಟ್ಟಿ ಕೊಟ್ಟು ಭಾಂಡಿ ಖರೀದಿ ಮಾಡೋದ್ರೊಳಗ ನಮ್ಮಜ್ಜಿ ಅಗದಿ (ಭಾರಿ) ಎಕ್ಸ್ಪರ್ಟ. ಹಂಗ ತೊಗೊಂಡ ಪಾತ್ರಿ ಗೊಳೆಲ್ಲ ‘ತಿಪ್ಪಣ್ಣನ ಗುಂಡಿ’ (ಗುಂಡು ತಳದ ಪಾತ್ರೆ),’ತಿಪ್ಪಣ್ಣನ ಭೋಗೋಣಿ’ (ಡಬರಿ), ‘ತಿಪ್ಪಣ್ಣನಕೊಳಗ’ (ಕೊಳದಪ್ಪಲೆ) ಅಂತ ಹೆಸರಿಡಿಸಿಕೊಂಡು ಈಗಲೂ ನಮ್ಮಮ್ಮನ ಮನಿಯ ಅಡಗಿಮನ್ಯಾ ಗ ಅವ. ನಮ್ಮಮ್ಮ ಇವತ್ತಿಗೂ ‘ತಿಪ್ಪಣ್ಣನ ಗುಂಡಿ’ಯೊಳಗ ಹಾಲು ಹೆಪ್ಪು ಹಾಕ್ತಾಳ. ಜೊತಿಗೆ ಹಾಲು ಕಾಸಲಿಕ್ಕೆ ‘ಶಾರದಾ ಮಾಮಿ’ ಗುಂಡಿನೇ ಆಗಬೇಕು. ನಮ್ಮ ಮಾಮಾನ ಹೆಣ್ತಿ (ನಮ್ಮಮ್ಮನ ವೈನಿ) ತಂದುಕೊಟ್ಟಿದ್ದ ಪಾತ್ರಿ ಅದು. ಅಮ್ಮನ ಮನಿಗೆ ಕೆಲಸಕ್ಕೆ ಬರೋ ರಾಧಾಗೂ ಈ ಹೆಸರುಗಳು ಚಿರಪರಿಚಿತ. ಹಿತ್ತಲ್ದಾಗ ಮುಸುರಿ ತೊಳಕೋತ ಕೂತಾಕಿಗೆ,“ಏರಾಧಾ,ಶಾರದಾ ಮಾಮಿ ಗುಂಡಿ ತೊಳ್ಕೊಡು” ಅಂದ್ರ ಯಾವ ಪಾತ್ರಿ ಕೇಳಲಿಕ್ಕೆ ಹತ್ತ್ಯಾರ ಅಂತ ಗೊತ್ತಾಗ್ತದ. ಇನ್ನು ನಮ್ಮಪ್ಪ, ಇವತ್ತಿಗೂ ಅಡಕಿ ಪುಡಿ ಮಾಡಿ ಇಡೋ ಡಬ್ಬಿ ಅಂದ್ರ ಅದು ‘ವರದಾಚಾರ ಬಾಟಲಿ’. ಹಳೇ ಕಾಲದ ಗಾಜಿನ ಹಾರ್ಲಿಕ್ಸ್ ಬಾಟಲಿ ಮಾಟದ (ಶೇಪಿನ) ಆ ಸ್ಟೀಲ್ ಬಾಟಲಿನ ಆಗಲೇ ಬೆಂಗಳೂರಿನ್ಯಾಗ ಸೆಟಲ್ ಆಗಿದ್ದ ನಮ್ಮ ಬಳಗ ದ ವರದಾಚಾರಿ, ಮೂವತ್ತೈದು ವರ್ಷಗಳ ಹಿಂದ ನಮ್ಮಣ್ಣನ ಮುಂಜವಿಗೆ ಬಂದಾಗ ತಂದು ಕೊಟ್ಟಿದ್ರು. ಇವೆಲ್ಲ ಪಾತ್ರಿಗೊಳ ಜೋಡಿ, ಬೇಬಿ ಮಲ್ಲಿ ತೂಕ (ಮುಚ್ಚಳ ಇರೊ ಹಿಡಿ ಪಾತ್ರೆ), ‘ಬಿಳಿಯವ್ವನ ಮನಿ ಬುಟ್ಟಿ’ (ಬಿಳಿಯವ್ವ ಅಂದ್ರ ನಮ್ಮಮ್ಮನ ಅಮ್ಮ, ಬೆಳ್ಳಗಿನ ಮೈಬಣ್ಣದ ಆಕಿಗೆ ‘ಬಿಳಿಯವ್ವ’ ಅಂತ ಕರೆದರೆ, ನಮ್ಮಜ್ಜಗ ‘ಬಿಳಿತಾತ’ ಅಂತ ಕರೀತಿದ್ವಿ) ಹೀಂಗ ಹೆಸರಿಡಿಸಿ ಕೊಂಡ ಬ್ಯಾರೆ-ಬ್ಯಾರೆ ಭಾಂಡಿ ಸಾಮಾನ ಅವ. ಈ ಹೆಸರಿಡೋ ಗುಣ, ನಮ್ಮಮ್ಮಗ ಆಕಿ ತವರು ಮನಿಯಿಂದ ಬಂತೋ ಏನೋ? ಯಾಕಂದ್ರ, ನಮ್ಮಜ್ಜಿಮನಿ ಹೈದ್ರಾಬಾದಿನ್ಯಾಗ ‘ಶ್ರೀರಾಮುಲು, ‘ಜಯ ರಾಮುಲು’ ಅಂತ ಎರಡು ದೊಡ್ಡ ಹಿತ್ತಾಳಿ ಹಂಡೆಗೊಳಿದ್ದವು. ಅವುಗಳ ಮ್ಯಾಲೆ ತೆಲುಗು ಭಾಷಾದಾಗ ಈ ಹೆಸರುಗಳನ್ನೂ ಹಾಕಿಸಿದ್ದರು! ಬಿಳಿಯವ್ವ, ತಿಪ್ಪಣ್ಣ, ವರದಾಚಾರಿ, ಶಾರದಾ ಮಾಮಿ, ಬೇಬಿ…. ಇವರಾರೂ ಈಗ ಇಲ್ಲದಿದ್ದರೂ, ಅವರ ಹೆಸರಿಟಕೊಂಡು ಕರೆಸಿ ಕೊಳ್ಳೋ ಭಾಂಡಿಗೋಳು ಅವರೆಲ್ಲರನ್ನ ನಮ್ಮ ಮನಸಿ ನ್ಯಾಗ ಉಳಸ್ಯಾವ. ನಮ್ಮಿಂದ ನಾಮ ಕರಣ ಮಾಡಿಸಿಕೊಂಡ ಭಾಂಡಿ ಸಾಮಾನಿನ್ಯಾಗ ಒಂದು ಕ್ಲಾಸಿಕ್ ಹೆಸರು ಅಂದ್ರ ‘ಭಿಕ್ಷದವರ ಭೋಗೋಣಿ’ (ಭಿಕ್ಷುಕರ ಡಬರಿ)! ಒಂದು ಲೀಟರ್ ಅಳತಿಯ ಅಲ್ಯುಮಿನಿಯಂ ಪಾತ್ರಿ ಅದು. ನಮ್ಮೂರ ಜಾತ್ರಿಯೊಳಗ ಖರೀದಿ ಮಾಡಿತ್ತೋ ಏನೋ, ಗೊತ್ತಿಲ್ಲ. ೨-೩ ವರ್ಷ ಕ್ಕೊಮ್ಮೆ ಊರಿಂದೂರಿಗೆ ಟ್ರಾನ್ಸಫರ್ ಆಗ್ತಿದ್ದ ನಮ್ಮ ಜೊತಿ ಭಾಳ ಊರು, ಊರು ತಿರುಗಿ, ಪ್ಯಾಕಿಂಗ್ ನ್ಯಾಗ ಅಲ್ಲಲ್ಲಿ ನೆಗ್ಗಿ ಹೋಗಿತ್ತು. ಅದನ್ನ ನಮ್ಮ ನಾಯಿಗೊಳಿಗಂತ ಜ್ವಾಳದ ಹಿಟ್ಟಿನ ಗಂಜಿ ಮಾಡ್ಲಿಕ್ಕೆ ಕಟ್ಟಿಗಿ ಒಲಿ ಮ್ಯಾಲೆ ಹೆಚ್ಚಾಗಿ ಬಳಸ್ತಿದ್ದಿದ್ದರಿಂದ ಅದು ಕರಕ (ಕಪ್ಪು) ಆಗಿ ‘ಭಿಕ್ಷದವರ ಭೋಗೋಣಿ’ ಅಂತ ನಾಮಕರಣ ಮಾಡಿಸಿಕೊಂಡಿತ್ತು. ಅಕಸ್ಮಾತ್ ನಾಯಿಗೋಳ ಕಿವಿಗೆ ಆ ಹೆಸರೇನಾದ್ರೂ ಬಿದ್ರ, ಅವು ನಿಂತಲ್ಲೆ ಬಾಲ ಅಲ್ಲಾಡಿ ಸತಿದ್ವು. ಆ ಪಾತ್ರಿ ಅಷ್ಟು ಪಾಪ್ಯುಲರ್ ಆಗಿತ್ತು.

ಈ ಅಮೆರಿಕಾಗ ಬಂದು ನೋಡಿದಾಗ ನಮ್ಮ ಸುತ್ತ-ಮುತ್ತ ಹೊಸ ಮಂದಿ, ಹೊಸ ವಿಷಯ ಗಳು ಕಂಡು ಹೊಸ-ಹೊಸ ಹೆಸರುಗಳು ಹುಟ್ಟಿ ಕೊಂಡವು. ‘ದೇಸಿ,’ ‘ಗುಜ್ಜು’, ‘ಮಲ್ಲು’, ‘ಚಿಂಕು’, ‘ಕಾಳು’, ‘ಕರಿ’, ‘ಬಿಳಿ’, ‘ಮೆಕ್ಕು’ ಅನ್ನೋ ಹೆಸರು ಗಳು ಇಲ್ಲಿ ಮೊದಲಿನಿಂದಲೂ ಬಳಕಿಯೊಳಗ ಇದ್ದಿದ್ದು ನಮ್ಮ ಲಿಸ್ಟಿಗೂ ಸೇರಿ ಕೊಂಡವು. ಕೆಲಸ, ಮದುವಿ, ಮನಿ- ಮಕ್ಕಳು ಅನ್ನೋ ಜವಾಬ್ದಾರಿ ಜೊತಿಗೆ ಸಾತ್ವಿಕ- ದೈವಿಕ, ಆಧ್ಯಾತ್ಮಿಕ-ಧಾರ್ಮಿಕ ಚಿಂತನೆಗಳು ಜಾಸ್ತಿ ಯಾಗಿ, ನಾವು ಇಡುವ ಹೆಸರಿಗಳೂ ದಿಕ್ಕು ಬದಲಾಯಿಸಿದವು. ಈ ದೇಶದ ಮೂಲನಿವಾಸಿ ಗಳಿಗೆ ‘ಮೂಲ ಮೃತ್ತಿಕೆ’ ಅನ್ನೋ ನಾಮಕರಣ ಮಾಡೋದರ ಜೊತಿಗೆ, ಹಲವಾರು ಹೆಸರು ಗಳಿಗೆ ‘ಈಶ್ವರ’-‘ಈಶ್ವರಿ’ ಸೇರಿಕೊಂಡವು. ಪೊಲೀಸ್ ಕಾರು ಕಂಡ ತಕ್ಷಣ “ಮಾಮ/ಮಾಮಿ” ಅನ್ನುತ್ತಿದ್ದ ನಾವು ಈಗ ಅವರಿಗೆ ‘ಕಾಪೇಶ್ವರ’-‘ಕಾಪೇಶ್ವರಿ’ ಅಂತ ಕರೀತೀವಿ. ಹೈವೇಯೊಳಗ ಹೈ ಸ್ಪೀಡಿನಲ್ಲಿ ಓಡಾಡೋ ಟ್ರಕ್, ‘ಟ್ರಕ್ಕೇಶ್ವರ’ ಅಂತ ಕರೆಸಿಕೊಂಡ್ರ, ಒಂದಿಷ್ಟೂ ಅಂಜಿಕಿ ಯಿಲ್ಲದೆ ರೋಡಿನ ಅಕ್ಕ-ಪಕ್ಕ ಹಲ್ಲು ಮೇಯ್ಕೊಂಡು ಓಡಾಡೋ ಜಿಂಕಿ, ಯಾವಾಗ ಹಾರ್ಕೊಂಡು ಕಾರಿನ ಮುಂದ ಬರ್ತದೋ ಅನ್ನೋ ಯೋಚನಿ ಹುಟ್ಟಿಸೋದ್ರ ಜೊತಿಗೆ ’ಜಿಂಕೇಶ್ವರ’ಅಂತ ಹೆಸರಿಡಿಸಿಕೊಂಡದ. ಹೀಂಗ ಒಂದು ದಿನ ಕಾರಿನಾಗಿ ಹೊಂಟಾಗ, ಹಿಂದಿನ ಸೀಟಿನಲ್ಲಿ ಕೂತಿದ್ದ ಮಗ, “ಅಮ್ಮ, ನೋಡಲ್ಲಿ ‘ಗುದ್ದೇಶ್ವರ” ಅಂದಕೂಡ್ಲೆ ತಿರುಗಿ ನೋಡಿದ್ದೆ. ನಮ್ಮ ಕಾರಿನ ಬಾಜೂನ್ಯಾಗ ಭಾರಿ ಸ್ಪೀಡಿನಿಂದ ಲೈನ್ ಬದಲಿಸಿ ಹೊಂಟಿದ್ದ ಕಾರು ಎಲ್ಲೋ ಗುದ್ದಿಸಿಕೊಂಡಿತ್ತು. ದೊಡ್ಡದಾಗಿ ಡೆಂಟ್ ಆಗಿದ್ದು ಕಾಣಿಸಿ ಮಗನ ಮಾತಿನ ಅರ್ಥ ಆಗಿತ್ತು! ಹಿಂದಿನಿಂದಲೂ ನಡಕೊಂಡು ಬಂದಿದ್ದ ಈ ನಾಮಕರಣ ಪದ್ಧತಿ ಹೀಂಗೇ ಮುಂದುವರ ಕೊಂಡು ಹೋಗ್ತದ ಅನ್ನೋದು ಖಾತ್ರಿ ಅನಿಸಿತ್ತು.

ನಾವು-ನೀವು ಮಾಡೋ ಈ ನಾಮಕರಣದ ಬಗ್ಗೆ ಯೋಚನಿ ಮಾಡಿದಾಗ, ಈ ರೀತಿ ಅಡ್ಡಹೆಸರು ಗಳನ್ನು ನಾವ್ಯಾಕ ಇಡತೀವಿ? ಅದರಿಂದ ನಮಗ ಆಗೋ ಲಾಭ ಏನು? ಹೆಸರಿಡಿಸಿಕೊಂಡವರಿಗೆ ಆಗೋ ಲುಕ್ಸಾನು ಏನು? ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡರೂ, ಅವುಕ್ಕೆಲ್ಲ ಸಮಂಜಸವಾದ ಉತ್ತರ ಹೇಳಲಿಕ್ಕೆ ಆಗಂಗಿಲ್ಲ. ಆದ್ರೂ ಈ ಹೆಸರಿಡೋ ಕೆಲಸ ಮಾತ್ರ ನಿರಂತರವಾಗಿ ನಡಕೊಂಡು ಹೋಗೇ ಹೋಗ್ತದ. ಆಗೊಮ್ಮೆ- ಈಗೊಮ್ಮೆ ಈ ಯೋಚನಿಗಳ ಜೊತಿಗೆ ನಮ್ಮ ಪರಿಚಯದ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರು ಹಾಡಿದ್ದ ಹಾಡೂ ನೆನಪಾಗ್ತದ.
“ಜಿಂದಗೀ, ಹಸನೆ ಗಾನೆ ಕೆ ಲಿಯೆ ಎಕ ಪಲ್, ದೋ ಪಲ್ | ಇಸೆ ಖೋನಾ ನಹೀಂ, ಖೋಕೆ ರೋನಾ ನಹೀಂ | ಜಿಂದಗೀ….”.
ಅಂಧಂಗ, ಅವರು ಹಾಡಿದ ಈ ಹಾಡು ಕೇಳಿ ನಾವು ಅವರಿಗಿಟ್ಟ ಹೆಸರು ‘ಜಿಂದಗಿ’!
✍️ಸರಿತಾ ನವಲಿ
ಸಾಹಿತಿಗಳು, ನ್ಯೂಜರ್ಸಿ ಅಮೇರಿಕಾ
ಹೆಸರಿನ ರಾಮಾಯಣವನ್ನೇ ಉಣಬಡಿಸಿದ ಲೇಖಕಿ ಯವರಿಗೆ ವಂದನೆಗಳು. ಅಚ್ಚುಕಟ್ಟಾದ ನಿರೂಪಣೆಗೆ ಧಾರವಾಡದ ಭಾಷೆ ಮೆರಗನ್ನು ತಂದಿದೆ.
LikeLiked by 1 person
ಭಾಳ ಛಲೋ ಬರದೀರಿ……
ಹೆಸರ ಹೆಸರಕಾಯಿ ಒಡದರ ಪುಟ್ಟಿಕಾಯಿ ತಿಂದರ ಸೌತಿಕಾಯಿ……
ಅಂತಾನೂ ಹೆಸರ ಹೇಳದ ಕಾಡಿಸಿದ್ದುಂಟು
LikeLike