ನಮ್ಮಪ್ಪ ಬೆಳ್ಳಗಿನ ಹಿಮಾಲಯವಲ್ಲ
ಗಾಳಿ ಮಳೆಗೆದೆಯೊಡ್ಡಿ ನಿಂತ
ಪಶ್ಚಿಮ ಘಟ್ಟದ ಕಡಿದಾದ ಬೆಟ್ಟ
ಮೇಲು ಕೀಳಿನ ಕೆಸರ ಮೆತ್ತಲಿಲ್ಲ ನಮ್ಮ ಕನಸುಗಳನ್ನೆಂದೂ ತುಳಿಯಲಿಲ್ಲ
ನಡೆ ಮುಂದೆ ಎಂದ ಅಪ್ಪ
ಎಡವಿ ಬಿದ್ದಾಗ ಎದ್ದು ನಿಲ್ಲಿಸಿದ
ವಿಡಂಬನೆ ವಿಮರ್ಶೆ ವ್ಯಂಗ್ಯ ಟೀಕೆ
ಎಂದೂ ಬರಿದಾಗದ ಬತ್ತಳಿಕೆ
ಸೈದ್ಧಾಂತಿಕ ಜಗಳ ಎಲ್ಲಿಯವರೆಗೆ
ಹೊಸ ವಿವಾದ ಹುಟ್ಟುವವರೆಗೆ
ನಂಬಿದ ತತ್ವಕ್ಕೆ ಯಾವತ್ತೂ ಬದ್ಧ
ಅನ್ನಲೂ ಅನಿಸಿಕೊಳ್ಳಲೂ ಸದಾ ಸಿದ್ಧ
ಹಾವು ಚೇಳಿನ ಕದನ
ಕುತೂಹಲದ ಕಥನ
ಕನ್ನಡಮ್ಮನ ಅಕ್ಷರ ದೀಪ
ಸರಳಜೀವಿ ಅಪರೂಪ
ಇಂದಿನ ಮಿತ್ರ ನಾಳಿನ ಶತ್ರು
ಸೆಡ್ಡು ಹೊಡೆದವ ಮುಂದೊಮ್ಮೆ ಆಪ್ತ
ನಾವಂತೂ ಯಾವತ್ತೂ ನಿರ್ಲಿಪ್ತ
ಹಪಾಹಪಿಯಿಲ್ಲದ ಜೀವ
ಪುಸ್ತಕಗಳೇ ಜೀವನ
ತಣ್ಣಗಿನ ನೆರಳಿನ ದೊಡ್ಡ ಆಲದ ಮರ
ನಮ್ಮ ನೆತ್ತಿಗೆ ಯಾವತ್ತೂ ಆಸರ
(ಚಂಪಾ ಅಧ್ಯಕ್ಷತೆಯಲ್ಲಿ ಜರುಗಿದ ಮೈಸೂರಿನ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಾಚಿಸಿದ ಕವನ)
✍️ ಶ್ರೀಮತಿ.ಮೀನಾ ಪಾಟೀಲ
ಬೆಂಗಳೂರು