“ಕೆ.ಎಸ್.ನರಸಿಂಹಸ್ವಾಮಿ” ಇದು ಮಲ್ಲಿಗೆಯ ಕವಿ ನರಸಿಂಹಸ್ವಾಮಿಯವರ ಬಗೆಗಿನ ತಮ್ಮ ಭಾವನೆ ಗಳನ್ನು ಸುಮತೀಂದ್ರ ನಾಡಿಗರು ನಿರೂಪಿಸುವ ಕವನ.

ನವಿರು ಭಾವಗಳ ಜೀವನ ಜೀವನ್ಮುಖಿ ಕವನ ಗಳ ಕವಿ ಕೆ.ಎಸ್.ನರಸಿಂಹಸ್ವಾಮಿಯವರ ಇಂತಹ ಕಷ್ಟಗಳಿಗೂ ಸೋಲದ ನಗುನಗುತ್ತ ಲೇ ಇರುವ ಸ್ವಭಾವವನ್ನು ಕವಿ “ತಲೆಯ ಮೇಲಿದ್ದರೂ ಬಂಡೆ ನಿಮ್ಮ ನಗುವ ಮುಖವ ಕಂಡೆ” ಎಂಬ ಪದ ಸಾಲುಗಳಲ್ಲಿ ವರ್ಣಿಸುತ್ತಾ ಬೆಳದಿಂಗಳ ಕಡಲಲ್ಲಿ ಸಾಕ್ಷಾತ್ ಶಾರದೆಯೆ ನಡೆಸುವ ಕಾವ್ಯ ನೌಕೆಯ ಸಹಪಯಣಿಗರು ನೀವು ಎಂದು ಹೇಳುತ್ತಾರೆ.
ತಾಯಿ ಶಾರದೆಯ ವೀಣೆಯ ದನಿ ಯ ಜತೆಗೆ ಹೂಗಳ ಕಂಪು ಗಾಳಿಯ ಕಂಪು ಮತ್ತು ಬೆಳ್ಳನೆ ಅಲೆಗಳು ಸುತ್ತುವರೆದಿತ್ತು ಅಷ್ಟಾದರೂ ಎಷ್ಟೋ ಕಷ್ಟಗಳನ್ನುಂಡರೂ ನಿಮ್ಮ ಜೀವ ಸದಾ ನಗು ನಗುತ್ತಲೇ ಇತ್ತು ಎನ್ನುತ್ತಾರೆ. ಮಲ್ಲಿಗೆಯ ಕವಿ ಹಾಡಿದ ಹಾಡಿಗೆ ಶಾರದೆಯೇ ಬೆಳದಿಂಗಳಾದರೆ ಕವಿಯೇ ಹುಣ್ಣಿಮೆಯ ಚಂದಿರನಂತೆ ಎನ್ನುವ ಹೋಲಿಕೆ ನೀಡುತ್ತಾರೆ.

ಕೆಲವೊಮ್ಮೆ ನರಸಿಂಹಸ್ವಾಮಿಯವರದು ಬರೀ ಒಲುಮೆಯ ಗೀತೆಗಳು ಎಂಬ ಆರೋಪವೂ ಕೇಳಿಬಂದಿತ್ತು ಅದಕ್ಕೆ ಈ ಉತ್ತರ ಕೊಡುತ್ತಾರೆ.
ಬಿಸಿಲಿನ ಕಾವ್ಯದ ಹಾಗೆಯೇ ಬೇಕು ಬೆಳದಿಂಗಳು ಕೂಡ
ಕಾರ್ಮೋಡದ ಆರ್ಭಟ ದಂತೆಯೇ ಹಿಂಜಿದ ಬಿಳಿಮೋಡ
ಖಿಂ ಖಿಲಿ ಖಿಲಿಲಿಲಿ ಹಾಡಿನ ಜೊತೆಗೆ ಕುಹೂಕುಹೂ ಚಿಲಿಪಿಲಿ
ಪಾಪಪುಣ್ಯಗಳ ಚಿಂತನೆ ಉರಿಗೆ ಚಡಪಡಿಸುವವರೂ ಇರಲಿ ಬಿಡಿ
ಸಮಕಾಲೀನ ಕವಿ ಮಿತ್ರನಿಗೆ ಎಂತಹ ಸಾಂತ್ವನದ ನುಡಿಗಳು ಇವು!
ಕಡೆಯ ಸಾಲುಗಳಲ್ಲಿ ಕೆಎಸ್ ನ ಅವರನ್ನು ಮಹಾಂತ ಮಹಾಭಾಗ ಎಂದು ಬಣ್ಣಿಸುತ್ತಾ ಮಾನವ ಹೃದಯದ ಕರೆಗೆ ಕಿವಿಗೊಟ್ಟಿರಿ ಒಲವು ನೋವು ನಲಿವು ಕರುಣೆಯ ಭಾವಗಳನ್ನು ಕಾವ್ಯವಾಗಿಸಿ ಹಾಡಾಗಿಸಿದಿರಿ ಎನ್ನುತ್ತಾರೆ. ನೀವು ಕೊಟ್ಟ ಕಾವ್ಯ ಸದಾ ತಾರುಣ್ಯದ ಕಾವ್ಯ ಎನ್ನುತ್ತಾ ಆದಿಕವಿ ಪಂಪನಿಗೂ ಮಲ್ಲಿಗೆ ಪ್ರಿಯ ಹಾಗೆ ಮಲ್ಲಿಗೆಯ ಕಾವ್ಯವನ್ನೇ ಕನ್ನಡನಾಡಿಗೆ ಕೊಟ್ಟ ನೀವು ಅವನದೇ ವಂಶದವರು ಎಂದು ಹೊಗಳು ತ್ತಾರೆ.
ಒಂದೇ ರಂಗದವರಲ್ಲಿ ಪರಸ್ಪರ ಪೈಪೋಟಿ ಸ್ಪರ್ಧೆ ಹೊಟ್ಟೆಕಿಚ್ಚು ಮತ್ಸರಗಳೇ ಸಾಮಾನ್ಯ ಎನ್ನುವಂತಹ ಸಂಧರ್ಭದಲ್ಲಿ ಸಮಾನ ಸಾಹಿತ್ಯಾ ಸಕ್ತ ಮನಸ್ಸುಗಳನ್ನು ಸಮಕಾಲೀನ ಕವಿಗಳನ್ನು ನಿರ್ವಂಚನೆಯಿಂದ ಹಾಡಿ ಹೊಗಳಿರುವ ಉದಾ ಹರಣೆಗಳು ಬಹಳ ಕಡಿಮೆ. ಆ ನಿಟ್ಟಿನಲ್ಲಿ ಈ ಕವನ ಕವನದ ಹಿಂದಿನ ಭಾವ ಅನುಪಮ ಅಸದೃಶವಾಗಿ ನಿಲ್ಲುತ್ತದೆ.

ಒಂದು ಕಾಲದಲ್ಲಿ ಲಂಕೇಶ್ ರವರು ನಾಡಿಗರ ಆಪ್ತ ಸ್ನೇಹಿತರು. ಕಾಲನ ಸುಳಿಯಲ್ಲಿ ಬರು ಬರುತ್ತ ಸ್ನೇಹವು ಜಗಳಗಳಾಗಿ ಮಾರ್ಪಟ್ಟು ಅವರವರದೆ ಬಣಗಳಾಗಿ ಇಬ್ಬರೂ ತಮ್ಮ ತಮ್ಮ ವಲಯಗಳಲ್ಲಿ ಶ್ರೇಷ್ಠರಾಗಿ ಗುರುತಿಸಿ ಕೊಂಡಿದ್ದು ಇತಿಹಾಸ. ಹಿಂದಿನ ಸ್ನೇಹದ ಛಾಪು ಉಳಿದಿದ್ದರೂ ಒಬ್ಬರ ನ್ನೊಬ್ಬರು ಮರೆತೇ ಹೋದ ಹಾಗೆ ಇದ್ದದ್ದು ನಿಜ. ಅದನ್ನೇ ಈ ಕವನದಲ್ಲಿ ತುಂಬಾ ಮಾರ್ಮಿಕವಾಗಿ ಹೇಳುತ್ತಾರೆ. ತಾವಿಬ್ಬರೂ ಸ್ನೇಹಿತರಾಗಿದ್ದು ಕೆಲವೊಮ್ಮೆ ಅಣ್ಣ ತಮ್ಮಂದಿರ ಹಾಗೆ ಜಗಳವಾಡಿ ದ್ದೆವು ಎನ್ನುತ್ತಾರೆ. “ಹುಟ್ತಾ ಹುಟ್ತಾ ಅಣ್ಣ ತಮ್ಮಂದಿರು ಬೆಳೀತಾ ಬೆಳೀತಾ ದಾಯಾದಿಗಳು” ಅನ್ನುವ ಗಾದೆ ನೆನಪಿಗೆ ತರುತ್ತದೆ. ಕೆಲವೊಮ್ಮೆ ಕೋಪ ದ್ವೇಷಕ್ಕೆ ಸಿಕ್ಕಿದ ರೂ ನಂತರ ಮನಸ್ಸು ಮಾಗಿ ಪಕ್ವವಾದಾಗ “ಎಂಥ ಹುಚ್ಚು ಅದು” ಎಂದು ತಮ್ಮನ್ನೇ ತಾವು ಹಾಸ್ಯ ಮಾಡಿಕೊಂಡು ನಗುತ್ತಾರಂತೆ. ಮಾತಾಡದಿದ್ದರೂ ಸಂಪರ್ಕವಿಲ್ಲ ದಿದ್ದರೂ ಸ್ನೇಹ ಮನದೊಳಗೆ ತುಂಬಿದ್ದು ಕಣ್ಣಲ್ಲಿ ಹೊರಸೂಸುತ್ತದೆ ಎನ್ನುತ್ತಾರೆ. ಅವರವರದೇ ಲೋಕದಲ್ಲಿ ಮಗ್ನರಾಗಿ ಒಬ್ಬರನ್ನೊಬ್ಬರು ಪರಿಗಣಿಸದ ಸ್ಥಿತಿಯನ್ನು ಹೀಗೆ ಹೇಳುತ್ತಾರೆ ಕವಿ.
ಅವನು ಏರಿದನು ಒಂದು ಪರ್ವತ
ಇವನು ಏರಿದನು ಇನ್ನೊಂದ
ಅವನು ಕೂಗಿದರೆ ಇವನಿಗೆ ಕೇಳದು
ಮಾತೇ ಮುಟ್ಟದು ಅಲ್ಲಿಂದ
ಹೌದು ನಮ್ಮದೇ ಒಂದು ವಲಯವನ್ನು ಸೃಷ್ಟಿಸಿ ಕೊಂಡು ಸ್ವಮಗ್ನರಾದಾಗ ಬೇರೆಯ ವರ ಪರಿವೆ ಯೂ ಇರುವುದಿಲ್ಲ, ಅವರ ಮಾತೂ ಕೇಳುವು ದಿಲ್ಲ ನಮಗೆ ನಾವೇ ಶ್ರೇಷ್ಠ ಎಂಬ ಇಗೋ ಬಂದು ಬಿಟ್ಟಿರುತ್ತದೆ.

ಒಂದೊಮ್ಮೆ ಇದ್ದ ಸ್ನೇಹದ ಕುರುಹುಗಳು ಮರೆ ಯಾಗುವ ಸ್ಥಿತಿ ಈಸಾಲುಗಳಲ್ಲಿ ಅರ್ಥಪೂರ್ಣ ವಾಗಿ ಧ್ವನಿಸಿದೆ.
ದೂರದಲ್ಲಿರುವ ಮಸುಕು ಛಾಯೆಗಳು ಅಷ್ಟೇ ಉಳಿದಿದೆ ಗುರುತು
ನೆನಪಿನ ತೋಟಗಳೆಲ್ಲೋ ಹೋಗಿವೆ ಬೆಳೆಸಿದವರ ಮರೆತು
ಆದರೆ ಕಾಲ ಒಂದೇ ಸಮನೆ ಇರುವುದಿಲ್ಲ. ಈಗ ನಮಗೆ ಯಾವುದು ಅತಿಮುಖ್ಯ ಎನಿಸಿರುತ್ತದೆ ಅದು ಗೌಣ ಎಂದೆನಿಸಿ ಹಿಂದಿನದೇ ಸ್ನೇಹ ಪ್ರೀತಿ ಮಮತೆಗಳಿಗೆ ಹಾತೊರೆಯುವ ಕಾಲ ಮತ್ತೆ ಬಂದೇ ಬರುತ್ತದೆ. ಕಾಲಚಕ್ರದ ಉರುಳಾಟದಲ್ಲಿ ಮತ್ತೆ ಮೊದಲಿನ ಸ್ಥಾನಕ್ಕೆ ಬಂದು ನಿಂತಿರುತ್ತೇವೆ.
ಅದನ್ನೇ ಕವಿತೆಯ ಕೊನೆಯ ಸಾಲುಗಳಾಗಿ ಕವಿ ಹೇಳಿರುವುದು ಹೀಗೆ.
ಬೇಸರವಾಗಿದೆ ಪರ್ವತ ವಾಸ
ಜರಿದಿದೆ ಇಳಿಯುವ ದಾರಿ
ಎರಡೂ ಪರ್ವತ ಕುಸಿಯುತ್ತಾವೆ
ಕಾಲನು ಬಹಳ ಉದಾರಿ.
ಒಂದೊಮ್ಮೆ ಮತ್ತೊಮ್ಮೆ ಬೇಕು ಎಂದೆನಿಸಿದ ರೂ ದೂರವಾದ ಸ್ನೇಹ ಮತ್ತೆ ಮರಳಲು ಮನ ಗಳು ಒಂದುಗೂಡಲು ಅಸಾಧ್ಯ ಎನ್ನುವುದು ಬಹಳ ಮಾರ್ಮಿಕವಾಗಿ ಉದಾಹರಿಸಲ್ಪಟ್ಟಿದೆ ಇಲ್ಲಿ.

ಹಾಗೆಯೇ ತಮ್ಮ ಗೆಳೆಯ ಲಂಕೇಶ್ಗೆ “ನೀನು ನಂಬಿರಲಿಲ್ಲ” ಎಂಬ ಮತ್ತೊಂದು ಕವಿತೆಯ ನ್ನು ಸಹ ಬರೆದಿದ್ದಾರೆ ನಾಡಿಗರು. ಅದರ ಕೆಲ ಸಾಲುಗಳು:
ಕಡೆಗೂ ಒಗಟಾಗಿ, ಗೊರಟದ ಹಾಗೆ ಒರಟಾಗಿ ಉಳಿದವನೇ
ದಂತಕತೆಯಾದವನೆ ಯಾದವರ ಕಲಹಕ್ಕೆ ಆದಿಯಾದವನೆ
ಕಡೆಗೂ ರಾಕ್ಷಸ ಮಹಿಮೆ ಉಳಿಸಿಕೊಂಡವನೇ
ಏನೆಲ್ಲಾ ಆದವನೇ ನಿನಗೆ ನಮಸ್ಕಾರ

ಕವಿ ಎಚ್ಚೆಸ್ವಿ ಅವರಿಗೆ ಅರವತ್ತು ವರ್ಷ ತುಂಬಿ ದಾಗ ಕಾಲ ಮಹಾರಾಯ ಎಂಬ ಕವನ ನಮನ ಮಾಡುತ್ತಾರೆ.
ನಿಮ್ಮ ಚಿತ್ರೋದ್ಯಾನ ಫಲವಂತವಿರಲಿ
ಪ್ರಜ್ಞಾ ಲೋಕದಲಿ ನವನವೋನ್ಮೇಷ
ಅಪೂರ್ವ ವಸ್ತು ನಿರ್ಮಾಣಕ್ಕೆ, ಕೊಡಲಿ ಹುಮ್ಮಸ್ಸು
ನಿಮಗೆ ಗೊತ್ತಿದೆ ಬೇಕಾದದ್ದು ಉಗ್ರ ತಪಸ್ಸು
ತಪಸ್ಸಿಗೆ ಬೇಕಾದದ್ದು ಏಕಾಗ್ರ ಮನಸ್ಸು.
ಆಪ್ತ ಗೆಳೆಯ ಮೇಕಪ್ ನಾಣಿಯವರ ಕಾಲ ಶಾಂತವಾದಾಗ “ಬರೀ ನೆನಪು” ಎಂಬ ಕವನ ದ ಮೂಲಕ ಅವರಿಗೆ ನಮನ ಸಲ್ಲಿಸುತ್ತಾರೆ. ಬುಧವಾರ ದಿನ ಇವರೊಡನೆ ಮಾತನಾಡಿದ್ದ ಇದ್ದಕ್ಕಿದ್ದಂತೆ ಗುರುವಾರ ದೂರವಾದ ಮಿತ್ರನ ಮರಣದ ವಾರ್ತೆ ಅವರನ್ನು ದಿಙ್ಮೂಢರನ್ನಾಗಿ ಸುತ್ತದೆ.

ಇದ್ದಕ್ಕಿದ್ದ ಹಾಗೆ ಎದ್ದು ಹೋಗಿ ಬಿಡಲು ನಿನ್ನನ್ನು ಯಾರೂ ಕರೆಯದಿದ್ದರು ಎಂದು ಕೇಳುವ ಈ ಸಾಲುಗಳ ನೋಡಿ:
ಪರಲೋಕದಲ್ಲಿ ಅರ್ಜೆಂಟಾದ ಕೆಲಸ ಏನಿತ್ತು?
ಕೈಲಾಸಂ ಶ್ರೀರಂಗ ಸಂಸ ಪರ್ವತವಾಣಿ ಕರೆದಿದ್ದರೆ?
ಲಂಕೇಶ ಕರೆದಿದ್ದನೆ? ನಿನ್ನ ಗಂಟೇನು ಹೋಗುತ್ತಿತ್ತು
ಈಗ ಪುರುಸೊತ್ತಿಲ್ಲ ಅಂತ ಹೋಗುವುದನ್ನು ತಡೆದಿದ್ದರೆ?
ಕವನದ ಕಡೆಯ ಸಾಲುಗಳು ನಿಜಕ್ಕೂ ಮನಸ್ಸಿ ನಲ್ಲಿ ಅನುರಣಿಸುತ್ತವೆ. ವಿಷಾದದ ಛಾಯೆ ಆವರಿಸುತ್ತದೆ.
ದಿನವೂ ಎದ್ದು ಮೇಕಪ್ಪು ಮಾಡಿಕೊಳ್ಳುವ ಹೊತ್ತು
ನೆನಪಾಗುತ್ತೀಯ ಗೆಳೆಯ
ಈಗ ಬರೀ ನೆನಪಾಗಿ ಮಾತ್ರ ಉಳಿದಿದ್ದೀಯ.
ಮುನ್ನುಡಿಯಲ್ಲಿ ನಾಡಿಗರೇ ಹೇಳುವಂತೆ “ಕಾವ್ಯ ಒಂದು ರೀತಿಯ ದೂತ ಅಥವಾ ದೂತಿಯ ಅಥವಾ ಗೆಳೆಯ ಗೆಳತಿಯ ಮೂಲಕ ಸಂಪರ್ಕಿ ಸುವ ಕೆಲಸವನ್ನು ಮಾಡುತ್ತದೆ. ಆ ಕೆಲಸ ಅಂತ ರಂಗದ ಪಾತಳಿಯಲ್ಲಿ ನಡೆಯುತ್ತದೆ. ಆ ಕೆಲಸ ವನ್ನು ಕಾವ್ಯ ಮಾಡುವುದರಿಂದ ನಾವು ಕವಿತೆ ಗಳನ್ನು ಪ್ರೀತಿಸುತ್ತೇವೆ, ಕವಿಗಳನ್ನು ಪ್ರೀತಿಸು ತ್ತೇವೆ. ಅವರ ಮೂಲಕ ನಮ್ಮ ಆತ್ಮೀಯ ಸಂಬಂಧಗಳನ್ನು ಬೆಳೆಸಿಕೊಳ್ಳುತ್ತೇವೆ.

ಹೀಗೆ ನಾಡಿಗರ ಕಾವ್ಯದ ಮೂಲಕ ಬೇರೆ ಕವಿಗಳ ವಿಷಯವನ್ನು ಅರಿಯುವುದರ ಮೂಲಕ ಆ ಸಂಬಂಧಗಳ ಹೊಸ ಆಯಾಮ ವನ್ನು ಅರಿತಂತೆ ಆಗಿದೆಯಲ್ಲವೇ? ತಿಳಿಯದ ಹೊಸದೊಂದು ಲೋಕಕ್ಕೆ ಪಯಣಗೊಂಡಂತೆ ಆಗಿದೆ ತಾನೇ?
✍️ಸುಜಾತಾ ರವೀಶ್
ಮೈಸೂರು
ಅಂಕಣದ ಪ್ರಕಟಿಸಿದ್ದಕ್ಕಾಗಿ ಧನ್ಯವಾದಗಳು ಸಂಪಾದಕರಿಗೆ
ಸುಜಾತಾ ರವೀಶ್
LikeLike