ಅದೆಷ್ಟು ಬಾರಿ ಕೂಗಿದರು ನೀ ಬರಲಾರೆ ಗೊತ್ತಿದ್ದೂ ಕರೆಯುವೆ
ಕೈ ಮೀರಿದ ಸಮಯ ಮರಳದೆಂದು ತಿಳಿದೂ ಮತ್ತೇ ಮರೆಯುವೆ

ಆ ತಾರೆ ಬಾನು ಗುಡುಗು ಮಿಂಚುಗಳ ನಿನಗಾಗಿ ಮಾತಾಡಿಸಿದೆ
ಮಳೆ ಬಂದಾಗ ನಿನ್ನ ಕಣ್ಣೀರೆಂದುಕೊಂಡು ನಾನೂ ಅತ್ತಿರುವೆ

ಪುರುಸೊತ್ತು ಇದ್ದಾಗ ನಿನ್ನದೇ ಹುಡುಕಾಟಿವಿದೆ ಈ ಹೃದಯಕೆ
ಉಸಿರಾಡುತ್ತ ಈ ಜೀವ ನೀನಿಟ್ಟ ಹೆಸರಿನೊಂದಿಗೆ ಇನ್ನೂ ಬದುಕುತ್ತಿರುವೆ

ಕೊಟ್ಟವನಿಗೆ ಕಸಿವ ಹಕ್ಕಿದೆ ಹೀಗೆನ್ನುತ್ತದೆ ಇಲ್ಲಿಯ ಅನುಭವಿ ಜಮಾನಾ
ನನಗೇನೇ ಯಾಕೆ ನಿಷ್ಠುರ ನಿಷ್ಕರುಣಿ ಸಮಯವೆಂದು ಯೋಚಿಸುತ್ತಿರುವೆ

ಏಕಾಂಗಿಯ ಚಣಗಳ ಜೊತೆಗೆ ಸುಡುವ ನೋವು ಈ ಎದೆಯೊಳಗೆ
ಕೆಂಡ ಹುದುಗಿಸಿ ಮೇಲೆ ಹಸಿರೆಲೆ ಹೊದಿಸಿ ಹೊತ್ತಿದ ಹೊಗೆಯ ಕುಡಿಯುತ್ತಿರುವೆ

ಸಂಚಿತ ಕರ್ಮಕೆ ಯಾರು ಹೊಣೆ ಅವರದೇ ಪಾಡು ವಿಧಿಯಿಲ್ಲ ಅನು
ಒಂದಂತೂ ಸತ್ಯ ಒಂದಲ್ಲ ಒಂದು ದಿನ ನಿನ್ನಲ್ಲಿಗೆ ನಾ ಬಂದೇಬರುವೆ

(ಬಾಲ್ಯದಲ್ಲಿಯೇ ನಮ್ಮನ್ನೆಲ್ಲ ಅಗಲಿದ ನನ್ನಪ್ಪನ ಮಡಿಲಿಗೆ ಈ ಗಜಲ್ ಅರ್ಪಣೆ)

✍️ಅನಸೂಯ ಜಹಗೀರದಾರ 
ಕೊಪ್ಪಳ