ಅಪ್ಪಾ…ಎಂದರೆ ಎರಡಕ್ಷರ!?
ಅಲ್ಲಲ್ಲಾ…ಅದು ಜೀವ ಭೂಗೋಳದ ಮಹಾ ಮಂತ್ರ!

ಅಪ್ಪಾ…ನೀ ಉಸಿರು ಹಂಚಿದವನು..!
ಬೆಳಕಿನ ಪರಂಪರೆಯ ಹಾಡು ಹಾಡಿದವನು..!
ಅಪ್ಪಾ…ನೀ ತೊಟ್ಟ ಬಟ್ಟೆ ಹರಿದಿತ್ತು!
ನಮ್ಮ ಬಟ್ಟೆ ಮಿರ ಮಿರ ಮಿಂಚುತಿತ್ತು!
ಯಾಕಪ್ಪಾ..?
ನಾವು ಮಿಂಚಲು ನೀನು ಹರಕು ಬಟ್ಟೆ ತೊಡಬೇಕಾ?

ಅಪ್ಪಾ…ನೀನು ನಮಗೂ ಮುಂಚೆ
ಗಡದ್ದಾಗಿ ಊಟ ಮಾಡಿದ್ದು ನಾ ನೋಡಲಿಲ್ಲ..!
ನಮ್ಮ ಊಟವಾದ ಮೇಲೆ
ನಿನ್ನ ಹೊಟ್ಟೆ ತುಂಬಿಸಿಕೊಂಡು
ತುಂಬು ಚಂದಿರನಂತೆ ನಗು ಬೀರುತ್ತೀಯಾ…!
ಯಾಕೆ ಅಪ್ಪಾ…?
ನಾವು ಊಟ ಮಾಡಿದ ಮೇಲೆಯೇ
ನೀನು ಊಟ ಮಾಡಬೇಕಾ?
ಇದು ಯಾವ ದೇಶದ ಕಾನೂನು ಅಪ್ಪಾ..?

ಅಪ್ಪಾ… ನೀನು ಯಾವ ದೇಶಕ್ಕೆ ಮಂತ್ರಿಯಾಗಿದ್ದೆ!? ರಕ್ಷಣಾ ಸಚಿವನಾಗಿದ್ದೆ!?
ನಮ್ಮನು ನಿನ್ನ ಕಣ್ರೆಪ್ಪೆಯೊಳಗೇ ಇಟ್ಟು ಕಾಯುತಿರುವೆ..!
ಯಾಕಪ್ಪಾ…?
ನಿನಗೂ ನೆಮ್ಮದಿಯ ನಿದಿರೆಯನು
ದಯಪಾಲಿಸಲಿಲ್ಲವೆ ಆ ಭಗವಂತ..!?

ಅಪ್ಪಾ.. ನಿನ್ನೆದೆ ಅದೆಷ್ಟು ಸಮುದ್ರಗಳ
ನೀರು ಕುಡಿದಿದೆಯೋ..!?
ಎಷ್ಟು ಕಷ್ಟ ಕೊಟ್ಟರೂ
ನೀನು ಕರಗಿ ಕರಗಿ ನೀರಾಗುವೆಯಲ್ಲ…!
ಮತ್ತೆ ಮತ್ತೆ ಸನಿಹಕೆ ಬಂದು
ಮುತ್ತನಿಡುವ ಅಲೆಯಾಗುವೆಯಲ್ಲ…!

ಅಪ್ಪಾ… ನಿನ್ನ ಸಂಭ್ರಮ
ನಾ ನೋಡಲಿಲ್ಲ!
ನಿನ್ನ ಯೌವ್ವನ
ನಾ ಅದಕ್ಕೆನೋಡಲಿಲ್ಲ!
ನಿನ್ನ ಬಿರುಕೆಂಬುದನೂ
ನಾ ಕಾಣಲಿಲ್ಲ!

ಮತ್ತೆ ಮತ್ತೆ ಪ್ರಾರ್ಥಿಸುವೆ
ಭಗವಂತನೆ ನಿನ್ನಲ್ಲಿ ಇಷ್ಟೇ
ಹುಟ್ಟಿಸು ನನ್ನ ತಂದೆಗೆ
ತಂದೆಯಾಗಿ!
ಎತ್ತಿ ಮುದ್ದಾಡಲು
ನನ್ನ ತಂದೆಯನು
ಮಗನಾಗಿ!

✍️ವೇಣು ಜಾಲಿಬೆಂಚಿ
ರಾಯಚೂರು.