ಹೆಂಗರುಳಿನ ಮಮತಾಮೂರ್ತಿ
ಸಾಮಾನ್ಯ ಭಾವನೆ ಏನಪ್ಪಾ ಅಂದರೆ ಅಮ್ಮ ನೆಂದರೆ ವಾತ್ಸಲ್ಯದ ಕಡಲು. ಅಪ್ಪ ಶಿಸ್ತು ಜಾಸ್ತಿ ಸಲಿಗೆ ಕಡಿಮೆ ಅಂತ. ಆದರೆ ನನ್ನಪ್ಪ ನೊಡನೆ ಒಡನಾಟ ಜಾಸ್ತಿ ನನಗೆ. ಭಯವಿತ್ತು ಆದರೆ ತಪ್ಪು ಮಾಡಿದಾಗ ಮಾತ್ರ. ಕೋಪ ಬಂದಾಗ ಎಷ್ಟು ಕಠಿಣವಾಗಿ ವರ್ತಿಸುತ್ತಿದ್ದರೋ ಅಷ್ಟೇ ನಂತರ ಕಾರುಣ್ಯದ ಮೂರ್ತಿ ಸಹ. ಹೆಚ್ಚು ಸಿಟ್ಟು ಬರಿಸದೇ ವಿಧೇಯಳಾಗಿರುತ್ತಿದ್ದ ನನಗೆ ಹೆದರುವ ಪ್ರಸಂಗಾನೂ ಕಮ್ಮಿ ಮತ್ತೆ ತುಂಬಾ ಸೂಕ್ಷ್ಮ ಸಂವೇದಿ ನನ್ನ ಅಣ್ಣ. ಹೆಂಗರಳು ಸಹ. ಅದಕ್ಕೆ ಪೂರಕವಾಗಿ ಈ ಸಂದರ್ಭಗಳನ್ನು ನೆನಪಿಸಿಕೊಳ್ಳಬೇಕು.

ನಾನು ಐದಾರು ವರ್ಷದವಳು. ಅಣ್ಣಾ ಮದರಾಸಿಗೆ ಆಗಾಗ ಕೆಲಸದ ಪ್ರಯುಕ್ತ ಹೋಗು ತ್ತಿದ್ದರು. ಅಲ್ಲಿ ಚಿಕ್ಕ ಮಕ್ಕಳು ಉಡುವ ಪುಟ್ಟ ಸೀರೆ ದೊರೆಯುತ್ತಿತ್ತು. ಪಕ್ಕದ ಮನೆಯವರ ನನ್ನದೇ ವಯಸ್ಸಿನ ಅವರ ಮಗಳಿಗೆ ಅದನ್ನು ತಂದು ಕೊಡಿ ಎಂದಾಗ ಈ ಬಾರಿ ಆ ಕಡೆ ಹೋಗಲ್ಲ, ಮುಂದಿನ ಸಾರಿ ತಂದು ಕೊಡುವೆ ಎಂದರು. ಯಾಕೆ ಹೀಗೆ ನೆಪ ಹೇಳಿದರು ಎಂದು ಅಮ್ಮನಿಗೆ ಅರ್ಥವಾಗಲಿಲ್ಲ. ಅಣ್ಣನನ್ನು ಕೇಳಿದಾಗ “ಅವರ ಮಗಳಿಗೆ ತಂದುಕೊಟ್ಟು ಸುಜಾತಂಗೆ ತರದಿದ್ರೆ ಪಾಪ ಅವಳಿಗೆ ಎಷ್ಟು ಬೇಸರವಾಗಬಹುದು ಊಹಿಸಿದ್ದೀಯಾ? ಮುಂದಿನ ಬಾರಿಯ ಷ್ಟು ಹೊತ್ತಿಗೆ ದುಡ್ಡು ಹೊಂದಿಸಿಕೊಂಡು ಇಬ್ಬರಿಗೂ ತರ್ತೀನಿ” ಅಂದಿದ್ದನ್ನ ನಾನೇ ಕೇಳಿಸಿಕೊಂಡಿದ್ದೆ. ಅವರು ದುಡ್ಡು ಕೊಟ್ಟು ತರಿಸಿಕೊಂಡ ರು, ನಮ್ಮ ಅಣ್ಣನ ಬಳಿ ದುಡ್ಡಿಲ್ಲ ಅದಕ್ಕೆ ತರಲಿಲ್ಲ ಎಂದು ಅರ್ಥ ಮಾಡಿಕೊಳ್ಳುವ ವಯಸ್ಸು ಖಂಡಿತ ಅದಾಗಿರ ಲಿಲ್ಲ. ನಂತರ ಸ್ವಲ್ಪ ದೊಡ್ಡವಳಾದ ಮೇಲೆ ಅವರ ಆ ಸೂಕ್ಷ್ಮ ಅರ್ಥೈಸುವಿಕೆ ಪರಾನುಭೂತಿ ಮತ್ತು ಅದರ ಹಿಂದಿನ ನನ್ನ ಬಗೆಯ ಪ್ರೀತಿಯ ಆಳ ಅರ್ಥವಾಗಿತ್ತು. ಅದಕ್ಕೇ ನನ್ನ ಅಣ್ಣ ಯಾವಾಗಲೂ ಗ್ರೇಟ್ ಅನ್ನೋದು ನಾನು.
೮ – ೧೦ ವರ್ಷದವಳಿದ್ದಾಗ ಒಮ್ಮೆ ಕೈ ಮೇಲೆ ಕುದಿವ ಎಣ್ಣೆ ಬೀಳಿಸಿಕೊಂಡು ಬೊಬ್ಬೆ ಬಂದಿ ದ್ದಾಗ ಜೇನು ತುಪ್ಪ ಸವರುತ್ತಾ ರಾತ್ರಿಯೆಲ್ಲಾ ಗಾಳಿ ಬೀಸುತ್ತಾ “ತುಂಬಾ ನೋವಾ ಪುಟ್ಟಾ” ಎನ್ನುತ್ತಿದ್ದ ಧ್ವನಿ ಈಗಲೂ ಬಹಳ ನೋವಿನಲ್ಲಿ ರುವಾಗ ಜ್ವರದ ತಾಪದಲ್ಲಿ ಬೇಯುತ್ತಿರುವಾಗ ಕಿವಿಯ ತುಂಬ ಅನುರಣಿಸುತ್ತದೆ.

ಮತ್ತೊಂದು ಸಂದರ್ಭ ನನ್ನ ಮೊದಲನೆಯ ತಂಗಿಯ ಮದುವೆ ಆಗಷ್ಟೇ ಮುಗಿದಿತ್ತು. ನಾವು ಆಗ ಸಕಲೇಶಪುರದಲ್ಲಿ ಉದ್ಯೋಗ ನಿಮಿತ್ತ ಇದ್ದೆವು. ಮದುವೆಯಾಗಿ ೪-೫ ದಿನಗಳ ನಂತರ ಹಿಂದಿರುಗಿದ್ದು. ಮದುವೆಯ ತಿಂಡಿಗಳ ಒಂದು ದೊಡ್ಡ ಬ್ಯಾಗ್ ಅಣ್ಣನೇ ಪ್ಯಾಕ್ ಮಾಡಿದ್ದರು. ಬೆಳಗಿನ ಜಾವ ಹೊರಡು ವಾಗ ಆ ಬ್ಯಾಗ್ ಮರೆತುಹೋಯಿ ತು. ಕಚೇರಿಯಿಂದ ಸಂಜೆ ಮನೆಗೆ ಹಿಂದಿರುಗಿದಾಗಲೇ ನಮಗಿದು ತಿಳಿದದ್ದು. ತಕ್ಷಣ ಮನೆಗೆ ಮೈಸೂರಿಗೆ ಫೋನಾ ಯಿಸಿ “ಇನ್ನೆರಡು ದಿನದಲ್ಲಿ ಮತ್ತೆ ಬರಬೇಕು ಆಗ ಕೊಂಡೊಯ್ಯುವೆ”ಎಂದರೆ ಅಷ್ಟರಲ್ಲಾಗಲೇ ಬ್ಯಾಗ್ ನನಗೆ ತಲುಪಿಸಲು ಅಣ್ಣ ಸಕಲೇಶ ಪುರಕ್ಕೆ ಹೊರಟಾಗಿತ್ತು. ಮದುವೆಯ ಆಯಾಸ ಇನ್ನೂ ಕಡಿಮೆಯಾಗಿರಲಿಲ್ಲ. ಆದರೂ ನಾನು ತಿನ್ನಲಿ ಎಂಬ ಮಮತೆ ಈ ಕಾಳಜಿ ಕಕ್ಕುಲಾತಿ ಹೆಂಗರುಳಿನ ನನ್ನ ಅಣ್ಣನಿಗಲ್ಲದೆ ಇನ್ನಾರಿಗೆ ಇರಲು ಸಾಧ್ಯ? ಅದಕ್ಕೆ ಅಪ್ಪಾ ಅಪ್ಪಾ ನಂಗೆ ನೀನು ಬೇಕಪ್ಪಾ ಅನ್ನಿಸ್ತಾನೇ ಇರೋದು.
ಮೊಗೆಯುತ್ತಾ ಹೋದರೆ ಬತ್ತದ ಒರತೆ ಅಣ್ಣನೊ ಡನಿನ ಆ ಸವಿ ಮಧುರ ಗಳಿಗೆಗಳು. ಈಗ ಬರೀ ಮೆಲಕು ಹಾಕುವುದಷ್ಟೇ ನನಗೆ ಉಳಿದಿರುವುದು.
✍️ಸುಜಾತಾ ರವೀಶ್
ಮೈಸೂರು
ಪ್ರಕಟಣೆಗಾಗಿ ತುಂಬ ತುಂಬ ಧನ್ಯವಾದಗಳು
ಸುಜಾತಾ ರವೀಶ್
LikeLike