ಅಕ್ಷಿ ಪಟಲದ ಅನಂತದೊಳು ಲೀನವಾಗಿ
ದಿಗಂತದ ಮೇಲ್ಛಾವಣಿಯ ರೂಪವಾಗಿ

ಮರೆತು ಕಲೆತ ಮೋಹದ ಮೋಡಗಳು
ಏಕಾಏಕಿ ಕಾರ್ ಮೋಡವಾಗಿ ಬೆರೆತವನು

ದುತ್ತೆಂದು ಇಳೆಯ ಸೆರಗೊಳು ಕರಗಿದವನು
ಮುತ್ತಿನ ಹನಿಯ ಹನಿಸುವ ಕ್ಷಣಕೆ ಸೊರಗಿದವನು

ನಾನೆಂಬ ಅಸ್ತಿತ್ವ ನಿನ್ನೊಳು ಕಂಡಂತಾಗಿ
ಪ್ರೀತಿ ಹರಿಸಿ ರಕ್ಷಾಕವಚವಾಗಿ ನಿಂತವನು

ಅಪ್ಪನೆಂದರೆ ಜಗತ್ತೇ ಬೆಚ್ಚುವುದು ಅನು ಕ್ಷಣ
ಅವನೊಂದು ಅದಮ್ಯ ಶಕ್ತಿಯ ಪ್ರತಿರೂಪ

ಮೂರುಹೊತ್ತು ಹೆಗಲ ಸವಿಸಿದವನು
ರಟ್ಟೆ ಮುರಿದು ರೊಟ್ಟಿ ತುತ್ತ ನಿಟ್ಟವನು

ಹಸಿವ ನುಂಗಿ ಎಷ್ಟೋ ದಿನಕಳೆದವನು
ತನ್ನ ನೋವ ತಾನೆ ನುಂಗಿ ಮೆರೆದವನು

ಅಪ್ಪನೆಂದರೆ ಗುಮ್ಮನೆಂದು ಕುಣಿದವನು
ಮನೆಯಂಗಳದ ನಂದಾದೀಪವಾದವನು

ಅಪ್ಪ ನಿನ್ನೊರತು ಜಗದಲಿ ತ್ಯಾಗಿಗಳಾರಿಲ್ಲ
ಅಮ್ಮನ ತೋಳ ಬಂದಿ ನೀನು ಅನುಕಾಲ

ಕುಟುಂಬದ ಕೋಲ್ಕಂಬ ನೀನು
ನಿನ್ನ ಹೆಗಲೆರಿ ಜಗವ ಕಂಡವಳು ನಾನು

ಮೌನವಾಗಿ ದೂರ ನಿಂತು ನಕ್ಕವನು
ಕುಚುಮರಿಯಾಗಿ ಹೊತ್ತು ತಿರುಗಿದವನು

ಅಪ್ಪಾ ಲವ್ಯೂ ಅನುದಿನ ವೀರ ಧೀರನೀನು

✍️ಶ್ರೀಮತಿ ಶಿವಲೀಲಾ ಹುಣಸಗಿ
ಶಿಕ್ಷಕಿ, ಯಲ್ಲಾಪೂರ