ಕೇಶವ ನಿನ್ನೊಲವ
ಋಣಭಾರ ಹೊತ್ತುದಕೆ
ಕಣ್ಣುಗಳು ನಗುತಿವೆ
ಮುಖಕ್ಕೋ
ಗುಲಾಬಿ ರಂಗು.

ನಿನ್ನ ಕೊಳಲ ನಾದಕ್ಕೆ
ಲೋಕವೆಲ್ಲಾ ರಾಗಾವಾದಾಗ
ನನ್ನ ಹೃದಯದಂಗಳದಿ
ನೀನಿತ್ತ ಪ್ರತಿ ಹೆಜ್ಜೆಗೂ
ಝೆಂಕಾರದ ಸುಸ್ವರ.

ಮಾಧವ ನಿನ್ನ ಕಂಗಳು
ಉಸಿರದ ಮಾತು
ಎದೆಯ ರಾಗಕ್ಕೋ
ಹಾಡುವ ಹಠ
ನಮ್ಮೊಲವ ಚಿತ್ತಾರಕೆ
ಮಂದಹಾಸದ ಬಣ್ಣ.

ನಿನ್ನ ಮನದನ್ನೆ
ರಾಧೆಯಂಗಳದ ತುಳಸಿ.
ಕೃಷ್ಣ ವರ್ಣದ ಚಲುವ
ನಿನಗೆ ಮತ್ತದೆ
ಮುಗುಳ್ನಗೆಯೇ ಶೃಂಗಾರ.

ಇರಲಿ ಮಾಧವ
ನನಗೊಂದಿಷ್ಟು
ಪ್ರೀತಿ ಕಾರಂಜಿ.
ನೆನಪಾಗುತ್ತಾಳೆ
ಮತ್ತೆ ಮತ್ತೆ ರಾಧೆ

ರಾಧೆಯಂಗಳದಿ
ಅಚ್ಚೋತ್ತಿದ
ರಂಗವಲ್ಲಿಯ ನಿನ್ನ ಹೆಜ್ಜೆ
ಎಷ್ಟು ದೃಢವಾಗಿವೆಯಲ್ಲ?
ನನ್ನ ಹೃದಯದಂಗಳದಲ್ಲಿ
ನಿಂತ ಪಾದಕ್ಕಿಂತ.

ನಿನ್ನ ಕೊಳಲು ನಾದಕ್ಕೆ
ತುಟಿ ಕಚ್ಚಿ
ಕಳಿಚಿಬಿದ್ದ ಕಿವಿಯೋಲೆ.
ಕರುವಿನ ಗಂಟೆ ಶಬ್ದವು
ರುಜುಪಡಿಸಿದೆ
ನಿನ್ನ ಹಾಜರಾತಿ.

ಕೃಷ್ಣ ನಾನೆಂದೂ ಬಾಡಿಲ್ಲ
ನಿನ್ನ ವಿರಹಕ್ಕೆ
ಅದಕೆ ಇರಬೇಕು ಇಂದಿಗೂ
ನಳನಳಿಸುತ ನಾ
ನಿನ್ನ ಕೊರಳ ಬಳಿಸಿ

ಲೋಕವು ಸಾಕ್ಷೀ ಕರಿಸುತಿದೆ
ಪ್ರತಿ ವಸಂತಕ್ಕೆ
ಅಮರ ಪ್ರೇಮದ
ನಮ್ಮ ವಿವಾಹ.

 ✍️ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಬೆಳಗಾವಿ