ಕಾರ್ಯಕ್ರಮ ಇನ್ನೇನು
ಸ್ವಲ್ಪವೇ ಸಮಯದಲಿ
ಆರಂಭವಾಗುತ್ತದೆ
ಕಾಲುದ್ದು ಬಿಟ್ಟ
ಶಾಲು ಹೊದ್ದ
ಕುರ್ಚಿ ಖಾಲಿ ಇವೆ

ಮೈಕು ಗಂಟಲು
ಸರಿಪಡಿಸಿಕೊಳ್ಳುತ್ತಿದೆ
ನಿರೂಪಕರು ಸ್ವಾಗತಕ್ಕೆ
ಸಜ್ಜಾಗಿದ್ದಾರೆ
ಹೂಗಳ ತಾಜಾತನ
ಉಳಿಸಿಕೊಳುತ್ತ

ಕ್ಯಾಮರಾ ಕಣ್ಣು
ತೆರೆದ ಗೂಡು
ಆಯೋಜಕರು ತುದಿಗಾಲಲಿ

ಒಂದರ ನಂತರ
ಮತ್ತೊಂದು ಗೋಷ್ಠಿ
ಕುಳಿತವರು ಏಳುವಂತಿಲ್ಲ
ಎದ್ದರೆ ಸ್ಥಳ ಸಿಗಲಿಕ್ಕಿಲ್ಲ
ಚರ್ಚೆಗಳು ಶುರುವಾಗಲಿವೆ

ಘನವೇದಿಕೆಯ ಅತಿಥಿಗಳು
ಇನ್ನೇನು ಬಂದೇ ಬಿಡುತ್ತಾರೆ
ಬೇರೊಂದು ವೇದಿಕೆಯಲ್ಲಿ
ಅಧ್ಯಕ್ಷರ ಭಾಷಣಕ್ಕಾಗಿ
ಕಾಯುತ್ತಿದ್ದಾರೆ

ಚಹಾ ಪಾನೀಯ
ದಾರಿ ಕಾಯುತ್ತಿವೆ
ಸಮಾರಂಭದ ಸಾಕ್ಷಿಗೆ
ತಟಸ್ಥ ವೇದಿಕೆ ಮಾತಿಗಿಳಿದಿದೆ

ಆಸನಗಳು ಎದಿರು ನೋಡುತ್ತಿವೆ
ಇನ್ನೇನು ಕೆಲವೇ ಕ್ಷಣಗಳಲ್ಲಿ
ಕಾರ್ಯಕ್ರಮ ಆರಂಭವಾಗಲಿದೆ

✍️ಗಾಯತ್ರಿ ರವಿ, ಹುಬ್ಬಳ್ಳಿ