ಟಪಾಲಿಗೆ ಬಂದ
ರಸೀದಿಯನ್ನು ನೋಡಿದರೆ
ಅದರಲ್ಲಿದ್ದದ್ದು
ಮತ್ತಷ್ಟು ನೋಟದ ಬೇಡಿಕೆಗಳೇ
ಹೊರತು ಜುಲ್ಮಾನೆಗಳಲ್ಲ!
ಹೃದಯದಲ್ಲಿ ದಾಖಲಾಗಿರುವುದು
ದೂರುಗಳಲ್ಲ; ರಾಗಗಳು!
ಮತ್ತೊಮ್ಮೆ ಓದಿಕೋ..
ನಿನ್ನ ಹಣೆಗೆ ಕೆನ್ನೆಗೆ ಕತ್ತಿಗೆ
ಆಗಿರುವ ಗಾಯಕ್ಕೆ ಮುಲಾಮು
ಬೇಕೆಂದರೆ ದವಾಖಾನೆಯ ಮೆಟ್ಟಿಲು ಹತ್ತಬೇಡ!
ನನ್ನ ನೆನಪನ್ನೇ
ಮೆತ್ತಿಕೋ..
ನಿನ್ನ ಕೊಠಡಿಯ
ಕಿಟಕಿಯಿಂದ ಬೀಸುವ
ಪ್ರತಿ ತಂಗಾಳಿಯು
ನಿನ್ನ ಸಹಾಯಕ್ಕೆ ಬರಲಿದೆ
ಹೇಳುವ ಪ್ರಿಸ್ಕ್ರಿಪ್ಷನ್ ಅನ್ನು
ಸರಿಯಾಗಿ ಬರೆದುಕೊ..
ಉಭಯ ಕುಶಲೋಪರಿ
ಸಾಂಪ್ರತವನ್ನು
ನಿನ್ನದೊಂದು ಚಿತ್ರದಲ್ಲಿ ಕಳಿಸು
ಜೀವತಳೆದು ನನಗೆ ವರ್ಣಿಸಲಿ
ಮತ್ತೊಮ್ಮೆ
ಭೇಟಿಯಾಗಬೇಕಾದ
ದಿನಾಂಕ ಬರೆದು ಕಳಿಸುವೆ
ಇಳಿ ಒಮ್ಮೆ ನನ್ನ ಮನದ
ಬೀದಿಗೆ
ಐಸ್ ಕ್ರೀಮ್ ತಿನ್ನುತ್ತಾ
ನೆನಪುಗಳನ್ನು ಕೊಳ್ಳೋಣ
ನೋಟಗಳ ಬೆಲೆತೆತ್ತು!
ತಪ್ಪಾಯ್ತು ಕ್ಷಮಿಸು
ಅನ್ನುವುದಿಲ್ಲ ನಾನು!
ಕೈಗೆ – ಕೈ, ಕಾಲಿಗೆ – ಕಾಲು
ಹಾಗೆಯೇ
ನೋಟಕ್ಕೆ ನೋಟವೇ ಶಿಕ್ಷೆ
ಪಡೆಯಲು ಕ್ಷಣಗಳನ್ನು
ಗಣಿಸುವೆ
ಕಣ್ಣ ನೋಟದ
ಅಂಚಿನಲ್ಲೇ ತೇಲಿ
ಎದೆಯ ಕದ ತಟ್ಟಿದವ ನೀನು
ನಿನ್ನಲ್ಲೇ
ಮುಳುಗಿದವಳು ನಾನು
ಪರಿಹಾರಕ್ಕಾಗಿ
ದೂರು ಕೊಡುವ
ಜಾಗವಾದರೂ ಯಾವುದು?!

✍️ಸೌಮ್ಯ ದಯಾನಂದ ದಾವಣಗೆರೆ