ದಿನದಿನವೂ ಪ್ರಕೃತಿಯಲ್ಲಿ ನಡೆಯುವ ಆಟ ಸೂರ್ಯೋದಯ ಹಾಗೂ ಸೂರ್ಯಾಸ್ತ.  ಅದೇ ಆಗಸ, ಅದೇ ಸೂರ್ಯ, ಅದೇ ಮೂಡಣ ಅದೇ ಪಡುವಣ ಆದರೆ ಸೂರ್ಯೋದಯ ಮತ್ತು ಸೂರ್ಯಾಸ್ತ ಗಳು ಎಂದಿಗೂ ಬೇಸರ ತರುವು ದಿಲ್ಲ. ಬಾನ ಪರದೆ ಯಲ್ಲಿ ನಡೆಯುವ ಈ ದಿನ ದಿನದ ನಾಟಕ ನಿತ್ಯ ನೂತನ ನವನವೋನ್ಮೇಷ ಶಾಲಿನಿ. ಸಾಮಾನ್ಯರ ಕಣ್ಣಿಗೇ ಹಾಗಾದರೆ ರವಿ ಕಾಣದ್ದನ್ನು ಕಾಣುವ ಕವಿಯ ಕಣ್ಣಿಗೆ ಮನಸ್ಸಿಗೆ ಮತ್ತೆ ಇನ್ನು ಹೇಗೆ? ಅಂತೆಯೇ ಸೂರ್ಯೋದ ಯ ಸೂರ್ಯಾಸ್ತಗಳ ಬಗ್ಗೆ ಬರೆಯದ ಕವಿಯೇ ಇಲ್ಲ, ಕವಿ ಮನದಲಿ ಅದು ಪ್ರಭಾವ ಬೀರದೇ ಇರಲು ಸಾಧ್ಯವೇ ಇಲ್ಲ. 

ಈ ಶತಮಾನ ಕಂಡ ಅದ್ಭುತ ಕವಿ ಕುವೆಂಪು ಕನ್ನಡ ಓದುಗರಿಗೆ ಅವರನ್ನು ಪ್ರತ್ಯೇಕವಾಗಿ ಪರಿಚಯಿಸುವ ಅವಶ್ಯಕತೆಯೇ ಇಲ್ಲ. ಕುವೆಂಪು ಕನ್ನಡ ಸಾಹಿತ್ಯದ ಸ್ರಷ್ಟಾರ,ದ್ರಷ್ಟಾರ, ಹಾಗೂ ವಕ್ತಾರ. ತಾವು ಜೀವಿಸಿದ ತೊಂಬತ್ತು ವರ್ಷಗಳ ತುಂಬು ಬಾಳುವೆಯಲ್ಲಿ (೧೯೦೪_ ೧೯೯೪) ಎಪ್ಪತ್ತು ವರ್ಷಗಳ ಕಾಲ ಸಾಹಿತ್ಯ ರಚನೆಯಲ್ಲಿ ತೊಡಗಿ ರಚಿಸಿದ ಕವನಸಂಕಲ ನಗಳು, ಸಾಹಿತ್ಯ ವಿಮರ್ಶೆಯ ಗ್ರಂಥಗಳು, ಕಾದಂಬರಿಗಳು ಖಂಡ ಕಾವ್ಯಗಳು, ಜೀವನ ಚರಿತ್ರೆಗಳು, ಆತ್ಮಚರಿತ್ರೆ, ಮಹಾಕಾವ್ಯ, ಅನು ವಾದಗಳು, ನಾಟಕಗಳು, ಹಾಗೂ ಸಣ್ಣ ಕಥಾ ಸಂಕಲನಗಳು ಕನ್ನಡದ ಕೃತಿರತ್ನಗಳು. ಅವರು ರಚಿಸಿದ ಅವುಗಳನ್ನು ನಮ್ಮ ಜೀವಮಾನ ಕಾಲದಲ್ಲಿ ಓದಲಿಕ್ಕೆ ಸಾಧ್ಯವಾದರೆ ಅದೇ ಮಹಾ ಸೌಭಾಗ್ಯ. ಮೂಲತಃ ಕುವೆಂಪು ಅವರು ಮಲೆನಾಡಿನ ಪ್ರಕೃತಿಯ ಕೂಸು. ನಿಸರ್ಗವನ್ನು ಅವರು ಅನುಭವಿಸಿ, ಅನುಭಾವಿಸಿ ವರ್ಣಿ ಸಿದ್ದು ಹೆಚ್ಚು. ಸೂರ್ಯೋದಯದ ಬಗ್ಗೆಯೇ ಅವರು ಬರೆದ ಕವಿತೆಗಳು, ಅವರ ಕವನ ಸಂಕಲನಗಳ ಲ್ಲಿ ಇಪ್ಪತ್ತಕ್ಕಿಂತಲೂ ಹೆಚ್ಚು.  ಇನ್ನೂ ಕಾದಂಬರಿ ಗಳಲ್ಲಿ ವರ್ಣಿಸಿದಸೂರ್ಯೋ ದಯಗಳು ಕಾವ್ಯಗಳಲ್ಲಿ ಬರುವ ವರ್ಣನೆಗಳು ಮತ್ತಷ್ಟು. ಹಾಗಾಗಿ ಕವಿಯ ಕಣ್ಣಿನ ಸೂರ್ಯೋ ದಯದ ಬಗ್ಗೆ ಒಂದಷ್ಟು ತಿಳಿದು ಕೊಳ್ಳುವ ಪ್ರಯತ್ನ ಈ ಲೇಖನದಲ್ಲಿ. 

ಅವರ ಮೊಟ್ಟಮೊದಲ ಕವನ ಸಂಕಲನ ಕೊಳಲುನಲ್ಲಿನ ಉದಯ ಕವನದಲ್ಲಿ ಸೂರ್ಯೋದಯದ ಬಗ್ಗೆ ಉಲ್ಲೇಖವಿದೆ. ಅದರಲ್ಲಿ ಸೂರ್ಯನು ತಮ್ಮನ್ನು ಕರೆದ ಪರಿ 
ಹೀಗೆ ಹೇಳುತ್ತಾರೆ ನೋಡಿ: 

ನೋಡು ತಳಿತ ತಳಿರ ನಡುವೆ 
ಅರುಣ ಕಿರಣ ಸರಿಯ ಸುರಿಸಿ 
ಉದಯ ರವಿಯು ಮೆರೆವನು; 
ಕವಿಯ ಮನವ ಮೋಹಿಸುತ್ತ 
ಮೌನವಾಗಿ ಕರೆವನು;

ಹೀಗೆ ರವಿಯ ಆಹ್ವಾನವನ್ನು ಸ್ವೀಕರಿಸಿರುವ ಕವಿ ಮತ್ತೆ ಹಿಂತಿರುಗಿ ನೋಡುವುದೇ ಇಲ್ಲ. ಸೂರ್ಯೋದಯದ ಬಗ್ಗೆ ನಿರರ್ಗಳವಾಗಿ ಬರೆಯುತ್ತಲೇ ಹೋಗುತ್ತಾರೆ ತಮ್ಮ ಕವಿತೆಗಳ ಮೂಲಕ.

ಮುಂದೆ ತಮ್ಮ “ಕಲಾಸುಂದರಿ” ಕವನ ಸಂಕಲನದ “ಉಷೆಯು ನಿಶೆಯ ಚುಂಬಿಸೆ” ಕವಿತೆಯಲ್ಲಿ ನಿಶೆಯು ನಿರ್ಗಮಿಸುತ್ತಾ ಉಷೆ ಯು ಆಗಮಿಸುವ ಪರಿಯನ್ನು ವರ್ಣಿಸುತ್ತಾ ಕವಿ ಅರುಣೋದಯದ ಆ ಸುಂದರ ಕಾಲದಲ್ಲಿ ಸ್ಫೂರ್ತಿ ಸಿಂಧುವು ಓಂಕರಿಸಿ ಕವಿಯ ರಸಮತಿ ಯನ್ನು ಪ್ರಭಾವಿಸುವ ಪರಿಯನ್ನು  ಅವರ ಮಾತುಗಳಲ್ಲೇ ಓದಿ …

ಉದಯಿಸಿ ಬರೆ ಬಾಲರವಿ 
ಉದಯಗಿರಿ ಲಲಾಟದಿ 
ಧ್ಯಾನಲೀನನಾಗೆ ಕವಿ
ಶೈಲ ಶಿಲಾ ಪೀಠದಿ 
ರುಕ್ಮ ರುಚಿರ ಕಿರಣ ಜ್ಯೋತಿ 
ಸದ್ಯ ಬುದ್ದ ಪಕ್ಷಿ ರುತಿ 
ಕಾನನ ಗಿರಿ ಭುವನ ಕೃತಿ 
ಐದಲೆಲ್ಲ ವಿಸ್ಮೃತಿ;
ರೂಪರಹಿತ ಭಾವ ಬಿಂದು ವಿಶ್ವರೂಪಿಯಾಗಿ ಬಂದು 
ಓಂಕರಿಪುದು ಸ್ಫೂರ್ತಿ ಸಿಂಧು 
ಕಂಪಿಸೆ ಕವಿ ರಸಮತಿ!

ಓದಿದಾಗ ನಮ್ಮ ಮೈ ಝುಂ ಎನ್ನುತ್ತದೆ ತಾನೆ?

ಮುಂದೆ ಉಷೆ ಕವನದಲ್ಲಿ ಈ ಸಾಲುಗಳು ಎಷ್ಟು ಸೊಗಸಾಗಿವೆ: 

ತಮದೆವೆಗಳ ತೆರೆತೆರೆಯುತ ಹೊಂಬೆಳಕಿನ ಮಳೆಗರೆಯುತ 
ಚೈತನ್ಯದ ಸೌಂದರ್ಯದ ನವಜೀವನ ರಸವ ಚೆಲ್ಲಿ  

ಉಷೆ ರಾಣಿಯು ತಂದು ಮೊಗೆಮೊಗೆಯುವ ಚೈತನ್ಯ ಸುಧೆಯ ರಸದೌತಣದ ಬಣ್ಣನೆ ಇಲ್ಲಿದೆ.

ಹಾಗೆಯೇ ಅರುಣ ಗೀತೆಯಲ್ಲಿ ದೇವರ ಮಕ್ಕಳ ನ್ನು ಬೆಳಗಾಯಿತು ಏಳಿ ಎಂದು ಸುಪ್ರಭಾತ ಹಾಡಿ ಏಳಿಸುವ ಧಾಟಿಯಲ್ಲಿ ಬೆಳಗಿನ ಬಣ್ಣನೆ ಯೊಂದಿಗೆ ಕರ್ತವ್ಯದ ಕರೆಯೂ ಸೇರಿದ ಪರಿ ಅಂದ.  

ಹಾಗೆಯೇ ಪ್ರಾತಃ ಕಾಲ ಎಂಬ ಈ ಹನಿಗವಿತೆ ಯ ಅಂದವನ್ನಿಷ್ಟು ಸವಿಯುವ ಬನ್ನಿ: 

ಆಹ! ನಾಕವೆ ನಮ್ಮ ಲೋಕಕೆ 
ಕಳಚಿ ಬಿದ್ದಿದೆ ಬನ್ನಿರಿ! 
ತುಂಬಿಕೊಳ್ಳಲು ನಿಮ್ಮ ಹೃದಯದ 
ಹೊನ್ನ ಬಟ್ಟಲ ತನ್ನಿರಿ! 
ಬೇಗ ಬನ್ನಿ! ಬೇಗ ಬನ್ನಿ! 
ಕರಗಿ ಹೋಗುವ ಮುನ್ನ ಬನ್ನಿ! 
ತಡವ ಮಾಡದೆ ಓಡಿ ಬನ್ನಿ; 
ಸ್ವರ್ಗ ಹರಿಯುತಿದೆ; 
ಇಳೆಯ ಮಕ್ಕಳನೆಲ್ಲ, ಕೇಳಿರಿ 
ಕೂಗಿ ಕರೆಯುತಿದೆ!

ಆದರೆ ಇಂದಿನ ದಿನಗಳಲ್ಲಿ ಎಲ್ಲೋ ನಿಸರ್ಗದ ಮಡಿಲಿಗೆ ರೆಸಾರ್ಟುಗಳಿಗೆ ಗಿರಿಶಿಖರಗಳಿಗೆ ಹೋಗಿ ಸೂರ್ಯೋದಯವನ್ನು ವಿಶೇಷವಾಗಿ ನೋಡುವ ನಮಗೆ ದಿನದಿನದ ಪ್ರಕೃತಿ ಆಟ ವನ್ನು ನೋಡಲು”ಟೈಮಿಲ್ಲ”. ಕವಿವರ್ಯರೇ ಹೇಳಿದಂತೆ “ಸೊಬಗನಾಸ್ವಾದಿಸಲೆಮಗೆ ಸಮಯವಿಲ್ಲ”   

ಹಾಗೆಯೇ ಕವಿಗಳು ಗಮನಿಸಿದಂತೆ ಬಣ್ಣಿಸಿ ದಂತೆ ಪ್ರತಿಯೊಂದು ಋತುವಿನ ಸೂರ್ಯೋದ ಯವು ಅದರದೇ ರೀತಿಯ ವೈಶಿಷ್ಟ್ಯವನ್ನು ಹೊಂದಿರುತ್ತದೆ. 

ಫಾಲ್ಗುಣ ಮಾಸದ ಸೂರ್ಯೋದಯವನ್ನು ವರ್ಣಿಸಿರುವ ಫಾಲ್ಗುಣ ಸೂರ್ಯೋದಯ ದಲ್ಲಿ ಕವಿ ರವಿಯನ್ನು: 

“ಪ್ರಾಚೀ ದಿಗಂಗನೆಯ ಸುಂದರ ಲಲಾಟದಲಿ ಹೊನ್ನಿನುರಿಯನು ಕಡೆದು ಸಿಂಗರಿಸಿದಂತೆ ರವಿ”  

ಎಂಬಂತೆ ಕಾಣುತ್ತಾರೆ .ಆ ಸಮಯದ ಸಂತೋಷ ಭಾವವನ್ನು “ಭಾವ ನದಿಯುಕ್ಕಿ ಲಗ್ನವಾಗಿದೆ ಮಾನಸ ಮಹಾ ಸರಸ್ಸಿನಲಿ” ಎಂದು ಧ್ಯಾನಿಸುತ್ತಾರೆ.

ಅಂತೆಯೇ ಶರತ್ಕಾಲದ ಸೂರ್ಯೋದಯ ವನ್ನು ವರ್ಣಿಸುವ ಪರಿ ನೋಡಿ: 

ಹೊಂಗದಿರ್ಗಳ ಮಳೆ ಸುರಿಸುರಿದಿತ್ತು ಬಂಗಾರದ ಹೊಳೆ ಹರಿದಾಡಿತ್ತು 
ತಿರೆ ಸಗ್ಗವದಾಯಿತೊ ಎನಿಸೆ 

ಆ ಚೈತನ್ಯದ ಚೆಂಡಿನ ಕಣಕಣ ಈ ಪ್ರಕೃತಿಯ ಪ್ರತಿ ಅಂಶಗಳಲ್ಲಿ ಸೇರಿ ಜಡವೆಂಬುದೇ ಇಲ್ಲ ಪ್ರತಿಯೊಂದು ಚೇತನಮಯ ಎಂದೆನಿಸತೊಡ ಗುತ್ತದೆ ಕವಿಗೆ ..

“ಭಾದ್ರಪದದ ಸುಪ್ರಭಾತ” ದಲ್ಲಿ ತಮ್ಮನ್ನು ತಾವು ಕಂಡುಕೊಳ್ಳುವ ಪರಿ ಇಂತಿದೆ ನೋಡಿ:

ಜೇನುತುಪ್ಪದಲ್ಲಿ ತೊಯ್ದ 
ಹಣ್ಣಿನಂತೆ 
ಹೊಸ ಚೆಲ್ವಿನ ಬಲೆಯ ನೆಯ್ದ 
ಹೆಣ್ಣಿನಂತೆ 
ಸವಿಗೆ ಸವಿಯ ಪೇರಿಸಿತ್ತು 
ಭದ್ರಮಾಸಂ 
ಕವಿಗೆ ಕವಿಯ ತೋರಿಸಿತ್ತು 
ಸುಪ್ರಭಾತಂ  

ಗದ್ಯ-ಪದ್ಯದಂತೆ ಭಾಸವಾಗುವ ಆಷಾಢ ಸೂರ್ಯೋದಯದಲ್ಲಿ ಹೀಗಿದೆ:

ಹೊಳೆವ ಚಿನ್ನದ ಗಿಂಡಿಯನು ಕೈಲಾಂತು ಬಾನ ಕರೆಯಲಿ ನಿಂತು ನಲಿಯುವ ಮೂಡಣದ ದೆಸೆವೆಣ್ಣು, ಮೆಲ್ಲನೆಚ್ಚರುವ ತಿರೆವೆಣ್ಣಿನ ಹಸುರುಡೆಯ ಮೇಲೆ ಚಿಮುಕಿಸುತ್ತಿಹಳು ಹೊನ್ನೀರಿನೋಕುಳಿಯ. ಇಬ್ಬನಿಕೋದ ನೆಲದ ಹಸುರು ತಣ್ಣನೆ ತೀಡುವ ತಂಗಾಳಿಯಲ್ಲಿ ಅತ್ತ ಇತ್ತ ಒಲೆಯುತ್ತ ಹೊಂಬಿಸಿಲಲಿ ಜರತಾರಿಯಂತೆ ಮಿರುಗುತ್ತಿದೆ.

ಕಣ್ಣಿಗೆ ಎಂತಹ ಸುಂದರ ಚಿತ್ರಣ ಕಟ್ಟುತ್ತದೆ.

ವೈಶಾಖ ಸೂರ್ಯೋದಯ ಕವನದಲ್ಲಿ ಎತ್ತರದ ಬೆಟ್ಟವೊಂದನ್ನೇರಿ ಅಲ್ಲಿಂದ ಕೆಳಗೆ ಕಾಣುವ ದೃಶ್ಯವನ್ನು ಹೀಗೆ ಬಣ್ಣಿಸುತ್ತಾರೆ: 

ಕೆಳಗಡೆ ಕಣಿವೆ ಚೆಲುವಿನ ಕಣಿವೆ 
ನಾವಿಹ ಬೆಟ್ಟದ ತಪ್ಪಲಲಿ! 
ಕೊಯ್ದಿಹ ಗದ್ದೆಗಳು 
ಕೌಂಗಿನ ತೋಟಗಳು 
ಅಲ್ಲಿ ಇಲ್ಲಿ ತಲೆಯೆತ್ತಿವೆ ಬಡವರ 
ಬಿಂಕದ ಹುಲ್ಮನೆ ನೋಟಗಳು ಮನೆಮನೆಯಿಂದ ಸುನೀಲಾಕಾಶಕೆ
ಮೆಲ್ಲಗೇರ್ವ ಹೊಗೆವಳ್ಳಿಗಳು 
ನೀಲಿಯ ಕನಸಿನ ಬಳ್ಳಿಗಳು 
ಸುಸಿಲೆಳೆಬಿಸಿಲಲಿ ತಂಗಾಳಿಯಲಿ 
ಕಣ್ದೆರೆದೇಳುವ ಹಳ್ಳಿಗಳು 
ಸಿರಿಮಲೆನಾಡಿನ ಹಳ್ಳಿಗಳು

ಎಂತಹ ಸುಂದರ ಬಣ್ಣನೆ ಅಲ್ಲವೇ?

ಕವಿಗೆ ತುಂಬ ಪ್ರಿಯವಾದ ಜಾಗ ನವಿಲುಕಲ್ಲು ಎಂಬ ಶಿಖರ. ಅಲ್ಲಿಂದ ನೋಡಿದ ಸೂರ್ಯೋ ದಯದ ವರ್ಣನೆ ಎರಡು ಬಾರಿ ಮಾಡುತ್ತಾರೆ. ಮೊದಲ ಬಾರಿ ಆ ರಸಾನುಭೂತಿಯಲ್ಲಿ ಕರಗಿ ಕವಿ ಎನ್ನುವ ಮಾತು: 

ನೋಡು ಸುಮ್ಮನೆ ನೋಡು 
ದೃಶ್ಯದಲಿ ತಲ್ಲೀನನಪ್ಪನ್ನೆಗಂ ನೋಡು! ಅದರೊಳಗೊಂದಾಗುವುದೆ ಪರಮ ರಸಿಕತೆ; ಅದಕೆ 
ಮಿಗಿಲಹ ರಸಾನಂದ ಮತ್ತೆ ಬೇರೊಂದಿಲ್ಲ!

ಮತ್ತೊಮ್ಮೆ ಸಂಜೆ ನವಿಲು ಕಲ್ಲಿನ ಮೇಲಿನ ಸೂರ್ಯೋದಯವನ್ನು ನೋಡುವ ತಮ್ಮ ಸೌಭಾಗ್ಯದ ಬಗ್ಗೆ ತಮಗೇ ಹೆಮ್ಮೆ ಧನ್ಯತೆ. 

ಬಹುದಿನದ ಪ್ರಾರ್ಥನೆಗೆ ಬಹುದಿವ್ಯ ಫಲವಾಯ್ತು 
ಮನಕೆ ನೆಮ್ಮದಿಯಾಯ್ತು ಧೈರ್ಯವಾಯ್ತು
ದಿವ್ಯದರುಶನದಿಂದ ನವ್ಯಚೇತನವಾಯ್ತು
ಭವ್ಯಾನುಭವಕಮೃತಕಲಶವಾಯ್ತು 
ನಾ ಧನ್ಯ ನಾ ಧನ್ಯ ನಾ ಧನ್ಯನಿಂದು ಉಷಾರವಿಯ ದರುಶನಕೆ ಇಲ್ಲಿಗೈತಂದು!

ಪ್ರಾತಃಕಾಲ, ಒಂದು ಪ್ರಾತಃಕಾಲ ಇಂತಹ ಸುಂದರ ಪ್ರಾತಃಕಾಲದಿ ಎಂಬ ಎಂದು ಪ್ರಾತಃ ಕಾಲದ ಶೀರ್ಷಿಕೆಯನ್ನೇ ಕೊಟ್ಟು ಮೂರು ಕವಿತೆಗಳನ್ನು ಬರೆಯುತ್ತಾರೆ ಕವಿ. ಅಂದರೆ ಅವರ ಮನಸ್ಸಿ ನಲ್ಲಿ ಮುಂಜಾವದ ಬಗೆಗಿನ ಕಲ್ಪನೆಗಳು ಆಲೋಚನೆಗಳು ಕುಡಿಯೊಡೆದ ಪರಿಯ ನಾವರಿಯಬಹುದು. ಅವರ ಪಕ್ಷಿಕಾಶಿ ಕವನ ಸಂಕಲನ ಒಂದರಲ್ಲೇ ಆರಕ್ಕಿಂತಲೂ ಹೆಚ್ಚು ಬೆಳಗಿನ ಕವನಗಳಿವೆ ಎಂದರೆ ಅಚ್ಚರಿ ಯಾಗುತ್ತದೆ ಅಲ್ಲವೇ?

ಹೀಗೆ ಧನ್ಯತೆಯ ಸಂತೋಷದ ಅನುಭವವನ್ನ ಕೊಟ್ಟ ರವಿಯ ಜತೆ ಕವಿಯ ಸರಸದ ಜಗಳವೂ ನಡೆಯುತ್ತದೆ. ರವಿ ಬರುವುದು ಯಾರಿಗಿಷ್ಟ ವಿಲ್ಲ? ನವವಿವಾಹಿತರಿಗೆ ತಾನೆ ರಾತ್ರಿ ಹೆಚ್ಚಾಗಲಿ ಹಗಲು ನಿಧಾನವಾಗಲಿ ಎಂಬ ಬಯಕೆ. ಅದಕ್ಕೆ ಕವಿ ತಮ್ಮ ರವಿ ಎಂಬ ಮಿತ್ರ ನಿಗೆ ಹೀಗೆನ್ನು ತ್ತಾರೆ: 

ಬರಿ ಬಣಗು ಬ್ರಹ್ಮಚಾರಿಯೋ ನೀನು ಹಾಗಿದ್ದರೆ ಬುದ್ಧಿ ಹೇಳುವೆ ಕೇಳು ಬೇಗನೆ ಮದುವೆಯಾಗು ಉಷೆಯ ಊರೊಳು ಇನಿತು ತಳುವಿ ಬರಬಹುದಂತೆ 

ಕವಿಯ ಮಾತು ತುಟಿಯಂಚಿನಲ್ಲಿ ನಗು ತರಿಸದೆ ಇದ್ದೀತೆ?

ದಿನಕರನ ಆಗಮನದ ಬಾಹ್ಯ ಚೆಲುವು ಸೌಂದ ರ್ಯವನ್ನು ವರ್ಣಿಸುವ ಕವಿ ಶಿವರಾತ್ರಿಯ ಸೂರ್ಯೋದಯದಲ್ಲಿ ಆದಿವ್ಯ ಸೂರ್ಯೋದ ಯದ ಭಕ್ತಿಭಾವವನ್ನು ಮೇಳೈಸಿದ ಆಧ್ಯಾತ್ಮದ  ಸೊಗಡನ್ನು ಬಿತ್ತುತ್ತಾರೆ. ಆ ದಿವ್ಯ ದೃಶ್ಯವನ್ನು ಅವರು ಬಣ್ಣಿಸುವ ಪರಿ: 

ಏನಿದೀ ದಿವ್ಯದೃಶ್ಯ 
ಧನ್ಯ ಚತರ್ ಅಸ್ಯ 
ಸಾಧಕನಿಗೆ ಮಾತ್ರ ಸಾಧ್ಯ 
ಪ್ರತಿಭಾನಕೆ ಮಾತ್ರ ವೇದ್ಯ 
ಕೃಪೆಗಲ್ಲದೆ ತಾನ್ ಅಬೋಧ್ಯ 
ಈ ದೃಶ್ಯ ಸ್ವಾರಸ್ಯ 
ಉಪನಿಷದ್ ರಹಸ್ಯ 

ಎಂದು ಮಂಜು ತುಂಬಿದ ಆ ರಹಸ್ಯಮಯ ಸೊಬಗಿನ ಸ್ವಾರಸ್ಯವನ್ನು ಪದಗಳಲ್ಲಿ ಹಿಡಿದಿ ಡುತ್ತಾರೆ.

ಹಾಗೆ ಮಾಗಿಯ ಹೊತ್ತಾರೆ ಶ್ರೀಚಾಮುಂಡಿ ಕವನದಲ್ಲಿ ರವಿಯನ್ನು ಸ್ವಲ್ಪ ನಿಧಾನಿಸಿ ಬಾ ಎನ್ನುತ್ತಾರೆ. 

ತ್ರಿಜಗನ್ಮಾತೆ 
ತನ್ನ ಸುಖದಲಿ ಲೋಕತ್ರಯಸುಖಿ ತಾನಾಗಿ
ಮಲಗಿರುವಳೊ ಆನಂದಮಯೀ 

ಚಳಿ! ಚಳಿ! ಚಳಿ! ಹುಹುಹು! ಮಾಗಿಯ ಚಳಿ
ಅರುಣಿಮ ದಿಕ್ತಟಗತ ಓ ದ್ಯುಮಣಿ ಶೈಶಿರ ರವಿ, 
ಬಾ ತುಸು ತಳುವಿ 

ಶಬ್ದಗಳ ಸೊಬಗನ್ನು ಗಮನಿಸಬೇಕು!

ಹೀಗೆ ಕವಿ ತಮ್ಮ ಮಿತ್ರನಾಗಿ, ಮಾರ್ಗದರ್ಶಕನ ನ್ನಾಗಿ, ಸೊಬಗಿಗೆ ಚಕಿತರಾಗಿ ದಿವ್ಯ ದೃಷ್ಟಿಯ ಮಾರ್ಗದರ್ಶಕನನ್ನಾಗಿ,ರವಿಯನ್ನು ಸೂರ್ಯೋ ದಯವನ್ನು ಕಂಡಿದ್ದಾರೆ ಬಣ್ಣಿಸಿ ದ್ದಾರೆ. ಕವಿಯ ದೃಗ್ಗೋಚರ ಸೂರ್ಯೋದಯದ ಸೊಬಗನ್ನು  ಮೂಲಕ ಶಬ್ದ ಗಾರುಡಿಯಲ್ಲಿ ನಾವು ಕಂಡು ಅನುಭವಿಸಿದೆವು,ಧನ್ಯರಾದೆವು,ಹೊಸತೊಂದು ಲೋಕಕ್ಕೆ ಸಂಚಾರಿಗಳಾದೆವು  ಅಲ್ಲವೇ? 

✍️ಸುಜಾತಾ ರವೀಶ್, ಮೈಸೂರು