ಸ್ಪರ್ಧೆಗಿಳಿದ ಕಣ್ ಹೊಳಪು
ನಕ್ಷತ್ರದೊಂದಿಗೆ
ಅದರ ಮಿನುಗಿನೊಂದಿಗೆ
ಅದರ ಮಸುಕಿನೊಂದಿಗೆ
ಓರೆಗಣ್ಣಿನಲೂ ಅಲುಗಾಡದ
ಏಕಾಗ್ರತೆ
ಹೊತ್ತ ಹೊದಿಕೆಗೂ ಕಾತರ,ಗಾಬರಿ
ಕಣ್ಣರಳಿಸಿ ಕುಳಿತ ಜೀವಗಳು
ಮಳೆ ಗಾಳಿ ಚಳಿಗೆ ಸೋಲದ
ನಾಳೆಗಳು
ಮಮತೆಯ ಮುದ್ದುಗಳು
ತೆರೆದಿಟ್ಟ ಪುಟಗಳು
ಕುಳಿತಿವೆ ತಾಯ ಗುಟುಕಿಗಾಗಿ
ಒಡಲಿಗೆ ತಂಪೆರೆವ ಮಮತೆಗಾಗಿ
ಆಡಿ ನಲಿಯುವ ವಯಸು
ಹಾಡಿ ಕುಣಿಯುವ ಕನಸು
ಬರಿಹೊಟ್ಟೆ ಬಾಯಾರಿ
ಅರೆ ನಿದ್ರೆಯಲಿ ಜಾರಿ
ಹೊದ್ದು ಕೂತಿವೆ ಜೊತೆಯಲಿ
ಹೊಸ ಬೆಳಕಿನಾಸೆಯಲಿ
ಭೂತಾಯ ತೆಕ್ಕೆಯಲಿ
ಸೂರು ಜಾರಿದ ಗೂಡಿನಲಿ
ಕುಗ್ಗೀತೇ ಕಣ್ ಹೊಳಪು
ತಗ್ಗೀತೇ ಬದುಕ ಕನಸು
ಹಾದಿ ಬದಿ ಹಕ್ಕಿಗಳು
ಹೊಂಚು ಹಾಕಿವೆ ಬೆಕ್ಕುಗಳು
ಕಾಂಕ್ರೀಟು ಕಾಡಿನಲಿ
ಎಲೆಯಿರದ ಗಿಡದಲ್ಲಿ
ಚಿಗಿತು ಮೊಗ್ಗಾಗಿ
ಕುಳಿತಿವೆ ಕಾಯುತ್ತ ಆಹಾರಕ್ಕಾಗಿ
ದೃಷ್ಟಿ ನೆಟ್ಟಿವೆ ಭರವಸೆಯ ಬದುಕಿಗಾಗಿ………
✍️ಉಮಾ ಬಾಗಲಕೋಟ