ಕಾಡು ಮತ್ತು ಕಡಲಿನದು
ಸದಾ ಅನನ್ಯ ಪ್ರೀತಿ
ಕಾಲ ಕಳೆದರೂ
ಬದಲಾದರೂ
ಕಳೆಯಲಾರದು ಕರಗಲಾರದು

ಕಡಲಿಗೆ ಕಾಯುವಿಕೆ
ಸಾಕಾಗಿ
ಪ್ರೀತಿಯ ಬೆಚ್ಚನೆ
ಅಪ್ಪುಗೆ ಬೇಕಾಗಿ
ತಾನೇ ಖುದ್ದಾಗಿ ತೆರಳುವುದು
ಹಸುರಿನ ಪ್ರೇಯಸಿಯ ಭೇಟಿಗೆ

ಆವಿಯಾಗಿ ಹಾರಿ
ಮೋಡವಾಗಿ ತೇಲಿ
ಮಳೆಯಾಗಿ ಜಡಿದು
ಕಾಡಿನ ಮಡಿಲಿಗೆ ಇಳಿದು
ತಬ್ಬಿಕೊಂಡು ಸಂಭ್ರಮಿಸುವುದು
ಆಕಾಶದ ಮರೆಯಲಿ

ಕಾಡು ತನ್ನೊಡಲಿನಿಂದ
ಜನ್ಮತಾಳುವ ನದಿಯೊಳು
ಆಗಾಗ ಪ್ರೀತಿಯ ಗಂಧವ
ಬಸಿದು ಬೆರೆಸಿ
ಕಡಲಿಗೆ ಕಳಿಸಿ
ಖುಷಿಯಲಿ ಕುಣಿದಾಡುವುದು

ಕಾಡು ಮತ್ತು ಕಡಲಿನದು
ಕಲ್ಪನೆಗೂ ಮೀರಿದ ನೆಂಟು
ಒಲುಮೆ ತುಂಬಿದ ಬಿಗಿಗಂಟು

    ✍🏻ಶಿವಾನಂದ ಉಳ್ಳಿಗೇರಿ
ಶಿಕ್ಷಕರು,ಬೈಲುಹೊಂಗಲ