ಸಾರಾನಾಥದ ಸ್ತೂಪದ ಹೂದೋಟದಲ್ಲಿ, ದಮ್ಮನ ಪರಿಮಳ. ಜಗವ ಕಂಡರಿಯದ ಧನ್ಯತೆ, ಕಾಲಿರಿಸಿದ ನೆಲದಲ್ಲೆಲ್ಲ ಪುಳಕ.
ಯಾರದೋ ಧ್ವನಿ ನಿಶ್ಶಬ್ದದೊಳಗೆ, ಹೊರಳಿದೆ, ಹುಡುಕಿದೆ ,ಬೆಚ್ಚಿದೆ. ಅದು ಬಯಲೊಳಗಿನ ಆತ್ಮ.
ಜ್ಞಾನ ಭ್ರೂಣ ಹೊತ್ತ ಅದಕ್ಕೆ ನನ್ನೊಳಗೆ ಗರ್ಭೀಕರಿಸಿಕೊಳ್ಳುವ ಧಾವಂತ.
ಓ ಇದು ವ್ಯೋಮದ ಆತ್ಮವೇ . ಹಾ ಇವನು ಬುದ್ಧನೇ ಬದ್ಧನೇ ಸಿದ್ಧನೆ. ಕರುಣೆ, ಪ್ರೀತಿ, ಮಮತೆಗಳಿರುವಲ್ಲಿ ಮತ್ತೆ ಹುಟ್ಟಬೇಕೆಂಬ ಅವನ ಛಲ ಮೆಚ್ಚಿದೆ. ನಾನೀಗ ಗರ್ಭವತಿ, ಸಂಗಮದಲ್ಲಿ ನನ್ನ ಜೋಳಿಗೆ ಜೀಕುತ್ತಿದೆ. ಪ್ರಸವಿಸುವ ವೇದನೆ ಇಲ್ಲ, ಭಯವಿಲ್ಲ, ಅದು ತಾನೇ ಹುಟ್ಟ ಬಯಸಿದ ಭ್ರೂಣ ಆ ಕೂಸು ಯೋನಿಜವೂ ಅಲ್ಲ. ಜೋಗುಳದ ಗಾನ ಬಯಲ ತುಂಬಾ. ತೊಟ್ಟಿಲು ಸದಾ ತೂಗುತ್ತಲೇ ಇದೆ. ಶತಶತಮಾನಗಳಿಂದಲೂ ಬುದ್ಧ ಬಸವರಿಗೆ ಬಾಣಂತಿಯರು ಹಾಲುಣಿಸುತ್ತಲೇ ಇದ್ದಾರೆ.

 ✍️ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ             ಬೆಳಗಾವಿ