ಯಶೋಧರಾ ಆಲಾಪಿಸಿದರೇನು?
ಅವಳ ಮನದಾಳದ ಅಳಲನ್ನು ಅಳಿಸಲಾಗಲೇಯಿಲ್ಲವಲ್ಲ!!
ಅವಳ ಪ್ರಲಾಪ ಪರಂಪರೆ
ಇನ್ನೂ ಸಾಗುತ್ತಿದೆ, ಸಿದ್ಧಾಥ೯ನೇ 
ಬಂದು ಉತ್ತರಿಸಬೇಕಿನ್ನೂ,

ವ್ಯಾಕುಲ ಮನಸ್ಸಿಂದ ಸದ್ದಿಲ್ಲದೆ  ನೀ
ನಿನ್ನ ಅರಿವಿಗಾಗಿ,ಶಾಂತಿ ಶೋಧದ
ಗುರಿಯರಸಿ ಹೊರಟು ಹೋದೆ,
ಮುಗ್ಧ ಕಂದನ ನಿದ್ದೆಯ ಮೊಗವು
ಕೂಡ ನಿನ್ನ ತಡೆಯಲಿಲ್ಲ,

ಮನಃಶಾಂತಿ ಹುಡುಕಿಕೊಂಡೆ
ಮಡದಿಯ ಒಡಲಿಗೆ ಬೆಂಕಿಯಿರಿಸಿದೆ
ಹಸಿ ಹಸಿ ಆಸೆಗಳ ದೂರ ಸರಿಸಿ,
ಹುಸಿ ನಗೆಯ ತೋರುತ ತನ್ನ ತಾ ದಹಿಸಿಕೊಂಡು ಮುಸುಕಿನಲಿ ತನ್ನಂತರಂಗಕೆ ಸಂತೈಸಿ ಕೊಂಡಳಾಕೆ,

ಕಂಡ ಕನಸು ಒಡೆದು ನುಚ್ಚು
ನೂರಾಗಲು,ಭಂಡ ಹೆಂಡತಿಯವಳು,
ಈ ಮೊಂಡ ಜಗಕೆ ತ್ಯಾಗಿಯಾದಳು, ಗಂಡನಿರದ ಸಾಧ್ವಿ ,ಈ ಜೀವನ ಪರೀಕ್ಷೆಯಲಿ  ಪಾಸಾದ
ಯೋಗಿಯಾದಳು,

ಭಿಕ್ಷುವಾದ ನಿನ್ನ ನಡೆಯಿಂದ
ಅವಳ ಆ ಒಂದೊಂದು
ಇರುಳಿನ ಆಲಾಪಕೆ !!!
ಎಷ್ಟು ಹೃದಯಗಳು ಚೀರಿದವೋ?
ನೋವಲಿ,ವಿರಹ ಗೀತೆಆಲಿಸಿದ   ಜೀವಿಗಳು ಇನ್ನೂ ಬಿಕ್ಕುತ್ತಿವೆ ಶಿಕ್ಷೆಯಾಯಿತಲ್ಲ ?ಅವಳಿಗೆಂದು,

ರಕ್ಷಿಸುವ ಪತಿಯ ಕರಗಳು
ಕತ್ತಲಲಿ ಮಾಯವಾದವಲ್ಲವೆಂದು,
ನೀ ನಡೆದ ದಾರಿ ನಿನಗೆ ಸರಿಯೇ
ಪ್ರಶ್ನಿಸಲು ಅವಕಾಶ ಕೊಡಬೇಕಿತ್ತು?
ಕೊಡಲು ಸಮಯ ನೀ ನಿಡಲೇಯಿಲ್ಲ?
ಜಗವು ಸಹ ಒಪ್ಪಿತು, ಸತ್ಯವೂ ಕೂಡ

ಅವಳಿಗೆ ಹೇಳಿ ಹೋಗಬೇಕಿತ್ತು
ಹೋಗುವ ಮುನ್ನ ಕಾರಣವ!!
ನೀ ರಾಮನಾಗಬೇಕಿತ್ತು
ಸಂಸಾರದಲ್ಲಿದ್ದೇ ಧಮ೯ಹುಡುಕಬೇಕಿತ್ತು
ಶಾಂತಿ ದೂತನಾಗಬೇಕಿತ್ತು,
ಶಾಮನಾಗಿ ಗೀತೆ ಬೋಧಿಸಬೇಕಿತ್ತು
ಎಂದು

✍️ಶ್ರೀಮತಿ ಸವಿತಾ ಲಿಂಗಾರೆಡ್ಡಿ
ಹುಬ್ಬಳ್ಳಿ