ಗಂಡ ಹೆಂಡತಿ
ಮಗ್ಗುಲಲ್ಲಿ ಕಕ್ಕುಲಾತಿಗೆ
ಎರಡೆರಡು ಮಕ್ಕಳು
ಇದಿಷ್ಟೇ ಸಾಕು
ಜೀವ |ನದಿ ಜೇನಾಗಲು
ಹಾಲುಹಳ್ಳ ಹರಿಯಲು
ಮಸುಕು ತೋಳೆದ ಸೂರ್ಯ
ಅಂಬೆಗಾಲಿನಲಿ ಹೊಸ್ತಿಲ ದಾಟಿ
ಒಳಸುಳಿಯುತ್ತಾನೆ
ಎರೆದ ತಲೆ ಒರಿಸಿಕೊಂಡ
ಅವ್ವ ಬೇಳೆ ಕುದಿಸಲಿಟ್ಟು
ಅಟ್ಟುತ್ತಾಳೆ ಕಚೇರಿಗೆ ರಾತ್ರಿಯೆಲ್ಲ
ತುಟಿ ತಂಬಲಿರಿಸಿದ ಗಂಡನನು
ಬಗಲಲ್ಲಿ ಚಪಾತಿ ಡಬ್ಬಿಕಟ್ಟಿ
ಉಷೆ ಉದಯ ಅಯ್ಯೋ ಬಿಸಿಲು
ತಣಿವು ಬೇಕೆಂದ ಇಳೆಗೆ
ಆಗಸದಿಂದುರುದ ಹೊನಲು
ಛೇ ಚಳಿ ಕಂಬಳಿ
ಬೆಚ್ಚಗಿನ ಹೋದಿಕೆ
ಬಿಸಿಬಿಸಿ ಚಹದ ಅಮಲು
ಏರಿ ಇಳಿಯಿತು ಹೊತ್ತು
ಏಕತಾನದ ಬಣ್ಣಾ
ರಸಗವಳ ಎಲ್ಲಿದೆಯೋ ಅಣ್ಣಾ
ಆಗಾಗ ಕೆಮ್ಮು ದಮ್ಮು
ಯಾರಿಗಾಗೀ ಸೊತ್ತು ಸಂಪತ್ತು
ಆಸೆ ದುಃಖದ ಮೂಲ
ಸುಖದ ಮಾನ ದಂಡಗಳ
ಹೇಳಿ ಹೋದನೇ ಬುದ್ಧ
ಸುಖದಸೂದೆ ಆಸ್ವಾದಿಸಿದಾಗಲೇ
ಪಲಾಯನ ಪರಿಹಾರವೇ
ನನ್ನೊಳಗಿನ ಬುದ್ಧ
ಮಾಡುತ್ತಾನೆ ತಾಕೀತು
ಅವರವರ ಆಕಾಶಕ್ಕೆ
ಅವರವರದೇ ಸೂರ್ಯ
ನಕ್ಷತ್ರ ಚಂದ್ರಾಮ ಎಲ್ಲ
ಆ ಬುದ್ಧನಾಗಬೇಕಿಲ್ಲ
ಬದ್ಧನಾದರೇ ಸಾಕು
ಕಾರಣ ಅಸಂಸಾರಿ  ಬುದ್ಧ  ಈಗಿಲ್ಲ

✍️ಅವಧೂತ ………… (ಸುಶಿಲೇಂದ್ರ ಕುಂದರಗಿ) ಹುಬ್ಬಳ್ಳಿ