ನನಗೆ ಬಾಲ್ಯದ ಕನಸೊಂದಿತ್ತು….!
“ಹಿಮಾಲಯವನ್ನು ಹತ್ತಬೇಕು. ಹತ್ತಿಯಂತೆ ಮೃದುವಾದ ಹಿಮದಲ್ಲಿ ಒಂದೊಂದೇ ಹೆಜ್ಜೆ ಇಟ್ಟು ನಡೆಯಬೇಕು. ಆಕಾಶದಿಂದ ಸುರಿಯು ವ ಹಿಮದೊಂದಿಗೆ ಆಟವಾಡಬೇಕು..” ಅಂತ. ಆದರೆ,ಕರ್ನಾಟಕದ ಕರಾವಳಿಯಲ್ಲಿ, ಸಮುದ್ರದ ಅಲೆಗಳೊಂದಿಗೆ ಆಡಿ ಬೆಳೆದ ನನಗೆ ಹಿಮಾಲಯ ಕೇವಲ ಟಿವಿ, ಸಿನಿಮಾಗ ಳಲ್ಲಿ ಕಾಣುವ ದೃಶ್ಯವಾಗಿತ್ತು….!

ಹೀಗೇ.. ಸದ್ಯದಲ್ಲೇ ಒಂದಿನ ನನ್ನ ಕನಸು ಇದ್ದಕ್ಕಿ ದ್ದಂತೆಯೇ ನನಸಾಗುವ ಕಾಲ ಕೂಡಿ ಬಂತು.

೩-೪ ತಿಂಗಳ ಹಿಂದೆ ನನ್ನ ಡಿಪ್ಲೊಮಾ ಗೆಳೆಯ ಫೋನಾಯಿಸಿ “ಶೆಟ್ರೇ… Trekking (ಕನ್ನಡದಲ್ಲಿ ಚಾರಣ ) ಬರ್ತೀರಾ…? ಎಪ್ರಿಲ್ ನಲ್ಲಿ…! ಹಿಮಾಲಯದಲ್ಲಿ…!” ಅಂದ. ನಾನು ಹಿಂದೆ – ಮುಂದೆ ಯೋಚನೆ ಮಾಡದೇ ” ನಾನ್ ರೆಡೀ…ಹೋಗೋಣ” ಅಂದೆ.”ಹಾಗಾದ್ರೆ ಫ್ಲೈಟ್ ಬುಕ್ ಮಾಡಲಾ” ಅಂದ. ನಾನು ಸ್ವಲ್ಪ ಅನು ಮಾನದಿಂದಲೇ….” ಹಿಮಾಲಯಕ್ಕೆ Flight ಲ್ಲಾ..?” ಅಂದೆ.ಅವನು “ಹಾಗಲ್ಲಪ್ಪಾ… ದಿಲ್ಲಿವರೆಗೆ ಫ್ಲೈಟು, ಅಲ್ಲಿಂದ ಮನಾಲಿವರೆಗೆ ಬಸ್ಸು, ಅಲ್ಲಿಂದ Base camp ಗೆ ಸುಮೋ..! ಆಮೇಲೆ ೬ದಿನ ಟ್ರೆಕ್ಕಿಂಗು…ಬುಕ್ ಮಾಡಲಾ? ನಮ್ ಮನೆಯವರು ಬರ್ತಿದ್ದಾರೆ, ನೀನೂ ಕರ್ಕೊಂಬಾ…” ಅಂದ.

ಕಾರಣಾಂತರಗಳಿಂದ ಮನೆಯವರನ್ನು ಕರೆದು ಕೊಂಡು ಹೋಗಲಾಗಲಿಲ್ಲ. ನಾನೊಬ್ಬನೇ ರೆಡಿ ಯಾಗಿ ಬಿಟ್ಟೆ…! ಹಿಮಾಲಯದ ಚಾರಣಕ್ಕೆ ಬೇಕಾದ ಪರಿಕರಗಳನ್ನ ಖರೀದಿಸಿದ್ದಾಯಿತು..! ಹೊಸ ಶೂ, ಹೊಸ ಜರ್ಕಿನ್ ಗಳ ಜೊತೆ ಹೊಂದಿಕೊಂಡಿದ್ದಾಯಿತು…!

ಏಪ್ರಿಲ್ ೧೪ ರಂದು ಬೆಂಗಳೂರಿನಿಂದ ಹೊರಟು, ೧೫ರಂದು ಮನಾಲಿಯಲ್ಲಿದ್ದು, ೧೬ರ ಮಧ್ಯಾಹ್ನ Base camp ತಲುಪಿದ್ದಾ ಯಿತು.

Trekking ಬಗ್ಗೆ ಕೆಲವು ಮಾಹಿತಿಯನ್ನು ಕೊಡುತ್ತೇನೆ.

ಹಿಮಾಲಯದ ಅನೇಕ ಪರ್ವತ ಶ್ರೇಣಿಗಳಲ್ಲಿ ಹಲವಾರು ಚಾರಣದ ದಾರಿಗಳೂ (Trekking Rout) ಇವೆ. ಕೆಲವು ಚಾರಣಕ್ಕೆ ಯೋಗ್ಯವಾಗಿ ದ್ದರೆ… ಇನ್ನು ಕೆಲವು ತುಂಬಾ ದುರ್ಗಮ ರಸ್ತೆ ಗಳಾಗಿವೆ…! ಅವುಗಳಲ್ಲಿ ಚಾರಣಕ್ಕೆ ಯೋಗ್ಯ ವಾದ ರಸ್ತೆಗಳೆಂದರೆ,

SAR PASS TREK
HUMPTA PASS TREK
KHEER GANGA TREK
BHRIGU LAKE TREK
PIN PARVATI PASS TREK etc….

ನಾವು ಆರಿಸಿಕೊಂಡಿದ್ದು, ೬ ದಿನಗಳ SAR PASS TREK, ಏಪ್ರಿಲ್ ೧೭ ರಿಂದ ೨೨ ರ ವರೆಗೆ.ಅಲ್ಲಿನ ಸ್ಥಳೀಯ ಭಾಷೆಯಲ್ಲಿ SAR ಎಂದರೆ ಇಂಗ್ಲೀಷಿನ Lake ಅಂತ. ಆ lake ನ್ನು ಮುಟ್ಟಿ (ನೋಡಿ) ಬರುವ ಚಾರಣವೇ SAR PASS TREK. ಈ ಚಾರಣ ಶುರುವಾ ಗುವುದು KASOL ಎಂಬ ಪುಟ್ಟ ಊರಲ್ಲಿ ರುವ Base Camp ನಿಂದ. Kasol ಇರುವುದು ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ. ಪಾರ್ವತಿ ನದಿಯ ದಂಡೆಯ ಮೇಲೆ. ಈ ಚಾರಣ ಅತಿ ಸುಲಭವೂ ಅಲ್ಲ…ಅತೀ ದುರ್ಗಮವೂ ಅಲ್ಲ…!

ಇಂಥ ಟ್ರೆಕ್ ಗಳು ೪,೬,೮,೧೫ ದಿನಗಳ ವರೆಗೆ ಇರುತ್ತವೆ. ನಮ್ಮ ಅನುಕೂಲಕ್ಕೆ ತಕ್ಕಂತೆ ಯಾವುದಾದರೂ ಒಂದನ್ನು ನಾವು ಆಯ್ದು ಕೊಳ್ಳಬಹುದು.

ಹಿಮಾಲಯದ ಎಲ್ಲಾ ಚಾರಣಗಳನ್ನು ಸ್ಥಳೀಯ ಸರಕಾರ ಹದ್ದಿನ ಕಣ್ಣಿಟ್ಟು ಗಮನಿಸು ತ್ತಾ ಇರುತ್ತದೆ. ಮೇಲಿನ ಎಲ್ಲಾ ಚಾರಣಗ ಳನ್ನು ಅತೀ ವ್ಯವಸ್ಥಿತವಾಗಿ ನಡೆಸುವ ಹಲವಾರು ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಖಾಸಗೀ ಸಂಸ್ಥೆಗಳು ಹಿಮಾಚಲ ಪ್ರದೇಶ ರಾಜ್ಯಾದ್ಯಂತ ಇವೆ.YHAI (Youth Hostel Association of India)ಕೂಡ ಇಂಥ ಒಂದು ಸ್ವಯಂಸೇವಾ ಸಂಸ್ಥೆ. Google ನಲ್ಲಿ ಈ ವಿಷಯದ ಭಂಡಾರ ವೇ ಇದೆ. ಈ ಸಂಸ್ಥೆಗಳು ನೀಡುವ ಸೇವೆಗಳು, ಅವರ Rating ನ್ನು ನೋಡಿ, ಅವರ ಜೊತೆ ಮಾತನಾಡಿ ಬುಕ್ ಮಾಡುವುದು ಒಳ್ಳೆಯದು.

ನಾವು ಆರಿಸಿಕೊಂಡಿದ್ದು Kailashnath Treks ಎಂಬ ಖಾಸಗಿ ಸಂಸ್ಥೆಯನ್ನು.

ಚಾರಣಕ್ಕೆ ನಾವೊಬ್ಬರೇ Book ಮಾಡಬಹು ದು. ಅಥವಾ ನಮ್ಮವರೇ ಇರುವ ೧೫ ರಿಂದ ೩೦ ಜನರ ಒಂದು ಗುಂಪು ಮಾಡಿಕೊಂಡು ಬುಕ್ ಮಾಡಬಹುದು. ಚಾರಣಕ್ಕೆ ಮೊದಲು ಎಲ್ಲರೂ ವೈದ್ಯರಿಂದ ಸರ್ಟಿಫಿಕೇಟ್ ಪಡೆಯು ವುದು ಕಡ್ಡಾಯ ಹಾಗೂ ೪೫ ವರ್ಷ ಮೇಲ್ಪಟ್ಟ ವರಿಗೆ ಈ.ಸಿ.ಜಿ ಮತ್ತು ಬಿ.ಪಿ. ರಿಪೋರ್ಟ್ ಕೂಡ ಬೇಕು…! ನಾವು ಬೆಂಗಳೂರಿಂದ ೩೦ ಜನರ ಗುಂಪನ್ನು ಮೊದಲೇ ಮಾಡಿಕೊಂಡು ನಂತರ ಬುಕ್ ಮಾಡಿದ್ದೆವು. ಹೆಚ್ಚಿನವರು ನಮಗೆ ಪರಿಚಯದ ಸ್ನೇಹಿತರು ಮತ್ತು ಅವರ ಸಂಬಂಧಿ ಕರೇ ಆಗಿದ್ದು ವಿಶೇಷವಾಗಿತ್ತು…! ಅದರಲ್ಲೂ ಎಲ್ಲರೂ ಅಚ್ಚ ಕನ್ನಡಿಗರಾಗಿದ್ದು ಇನ್ನೂ ವಿಶೇಷ ವಾಗಿತ್ತು…!


ಕಸೋಲ್ ನಲ್ಲಿರುವ Base Camp ನ್ನು ನಾವು ದಿ; ೧೬ ರ ಮಧ್ಯಾಹ್ನ ತಲುಪಿದೆವು. ಊಟದ ನಂತರ ಅರ್ಧ ದಿನ ನಮಗೆ ತರಬೇತಿಯನ್ನು ನೀಡಲಾಯಿತು.ಇದನ್ನು Acclimatizasion ಎನ್ನುತ್ತಾರೆ. ಅಂದರೆ, ಸ್ಥಳೀಯ ವಾತಾವರಣ ದ ವೀಕ್ಷಣೆಗೆ ಹಾಗೂ ಸ್ವಲ್ಪ ಚಾರಣಕ್ಕೆ ನಾವು ನಮ್ಮನ್ನು ಹೊಂದಿಸಿಕೊಳ್ಳುವುದು ಎಂದರ್ಥ. Registation ಪ್ರಕ್ರಿಯೆಯ ನಂತರ ಚಾರಣದ ಬಗ್ಗೆ ವಿವರಗಳನ್ನು ಸಂಸ್ಥೆಯ ನಿರ್ವಾಹಕರು ತಿಳಿಸಿದರು.

ಮೊದಲ ದಿನ, ಅಂದರೆ, ದಿ; ೧೭ ರಂದು ಬೆಳಿಗ್ಗೆ ೮ ಗಂಟೆಗೆ, ಬೆನ್ನಿಗೆ ನಮ್ಮ ನಮ್ಮ ಲಗೇಜನ್ನು ಏರಿಸಿ ಕಾಸೋಲ್ ಕ್ಯಾಂಪ್ ನಿಂದ ನಮ್ಮ ಚಾರಣ ಪ್ರಾರಂಭಿಸಿದೆವು. ಕಾಸೋಲ್ ಇರುವುದು ಸಮುದ್ರ ಮಟ್ಟದಿಂದ ೫೧೮೩ ಫೂಟ್ ಗಳ ಎತ್ತರದಲ್ಲಿ. ಮೊದಲ ದಿನ ಅತೀ ಉತ್ಸಾಹದಲ್ಲಿ ನಮಗೆ ಅದರ ಕಷ್ಟ ಗೊತ್ತಾಗ ಲಿಲ್ಲ. ಕಾಡಿನಲ್ಲಿ ಸಮತಟ್ಟಾದ ರಸ್ತೆಯಲ್ಲಿ ನಡೆದು ಮಧ್ಯಾಹ್ನ ಊಟ ಮಾಡಿದ್ದಾಯಿತು. ಊಟದ ನಂತರ ಕಡಿದಾದ, ದುರ್ಗಮ ರಸ್ತೆ ಎದುರಾಯ್ತು…! ಲಗೇಜ್ ನೊಂದಿಗೆ ಚಾರಣ ಕಷ್ಟವೆನಿಸುತ್ತಿತ್ತು. ಆಗ ಎಲ್ಲರೂ Porter ನ ಸಹಾಯ ಪಡೆಯಲು ನಿರ್ಧರಿಸಿದರು…! ಪೋರ್ಟರ್ ಅಂದರೆ, ನಮ್ಮ ಲಗೇಜನ್ನು ಒಂದು ಕ್ಯಾಂಪ್ ನಿಂದ ಮುಂದಿನ ಕ್ಯಾಂಪಿಗೆ ಮುಟ್ಟಿಸು ವ ಸ್ಥಳೀಯ ಸಹಾಯಕರು..! ದಿನಕ್ಕೆ ಇಂತಿಸ್ಟ ರಂತೆ ಹಣ ಕೊಟ್ಟರೆ, ಎಲ್ಲಾ ದಿನಗಳೂ ಅವರ ಸಹಾಯ ನಾವು ಪಡೆಯ ಬಹುದು. ಊಟದ ಡಬ್ಬಿಯ ಜೊತೆ ಒಂದು ನೀರಿನ Bottle ಅಷ್ಟನ್ನೇ ನಾವು ಬೆನ್ನಿಗೇರಿಸಿ ನಡೆದರೆ ಚಾರಣ ಹೆಚ್ಚು ಆರಾಮದಾಯಕವಾ ಗಿರುತ್ತದೆ…! ಸಂಜೆ ಸುಮಾರು ೫.೦೦ ಗಂಟೆಗೆ, ೭-೮ ಕಿ.ಮೀ ಕ್ರಮಿಸಿ, ೭೭೦೦ ಫೂಟ್ ಎತ್ತರದಲ್ಲಿರುವ ಗ್ರಹಣ ಕ್ಯಾಂಪ್ ಸೈಟ್ ತಲುಪಿದೆವು.

ನಮ್ಮ ಚಾರಣದ ಬಗ್ಗೆ ವಿವರಣೆ ಕೊಡುವು ದಾದರೆ:

ಎರಡನೇ ದಿನ ಬೆಳಿಗ್ಗೆ ೮.೦೦ ಗಂಟೆಗೆ ಮತ್ತೆ ಚಾರಣ ಶುರು. ಈ ದಿನ ದಟ್ಟ ಕಾಡಿನಲ್ಲಿ, ರಸ್ತೆ ಯಿರದ ರಸ್ತೆಯಲ್ಲಿ, ದುರ್ಗಮ ಬೆಟ್ಟ ಹತ್ತುವ ಕಾಯಕ.ಸ್ವಲ್ಪ ದಣಿವಾದರೂ ಮಜವಾಗಿತ್ತು! ಆಗಾಗ ಅಲ್ಲಲ್ಲಿ ವಿಶ್ರಾಂತಿ ಪಡೆಯುತ್ತಾ ಖುಷಿ ಯಿಂದ ತಲುಪಿದೆವು ಪದ್ರಿ ಕ್ಯಾಂಪ್. ಆಗಲೇ ನಾವು ಸುಮಾರು ೬-೭ ಕಿಲೋಮೀಟರ್ ಕ್ರಮಿಸಿ ೯೩೦೦ ಫೂಟ್ ಎತ್ತರವನ್ನು ನಾವು ತಲುಪಿ ದ್ದೆವು.

ಮೂರನೇ ದಿನ ಮತ್ತೆ ದಟ್ಟ ಕಾಡನ್ನು ದಾಟುತ್ತ, ದುರ್ಗಮ ಪರ್ವತವನ್ನು ಏರಿದರೆ, ಆಗಾಗ ನೀರಿನ ಚಿಕ್ಕ ಚಿಕ್ಕ ತೊರೆಗಳನ್ನು ದಾಟುವುದು, ಆಗಾಗ ಹಿಮದ ಮೇಲೆ ನಡೆಯುವುದು ಎಲ್ಲರಿಗೂ ಹೊಸ ಅನುಭವವನ್ನು ನೀಡಿತು. ಮುಂದೆ ಮುಂದೆ ನಡೆಯುತ್ತಾ ಹಿಮದಲ್ಲೇ ನೆಟ್ಟ ಮಿನ್ ಥಾಚ್ ಕ್ಯಾಂಪ್ ನ್ನು ಸಂಜೆ ತಲುಪಿ ದೆವು.ಆಗ ನಾವು ತಲುಪಿದ್ದು ೧೧೧೫೦ ಫೂಟ್ ಎತ್ತರವನ್ನು…! ಕ್ಯಾಂಪ್ ನ ಸುತ್ತಲೂ ಕಣ್ಣು ಹಾಯಿಸಿದಷ್ಟೂ ದೂರ ಬರೀ ಹಿಮ…! ಶುಭ್ರ ಬಿಳಿ ಬಟ್ಟೆಯನ್ನು ಹೊದಿಸಿ ನಿಲ್ಲಿಸಿದಂತೆ ತೋರುವ ಗುಡ್ಡ…! ಕೊರೆಯುವ ಚಳಿಯಲ್ಲೂ ಮನ ಸೂರೆಗೊಳ್ಳುವ ದೃಶ್ಯ…!

ನಾಲ್ಕನೇ ದಿನ ಬೆಳಿಗ್ಗೆಯೇ ನಮ್ಮ ನಡಿಗೆ ಶುರು ಹಿಮದಲ್ಲಿ…! ಈದಿನ ನಿಜವಾದ ಹಿಮಾಲಯ ಚಾರಣದ ಅನುಭವವಾಯಿತು. ಮತ್ತೆ ಸುಮಾರು ೬ ಕಿಲೋಮೀಟರ್ ಕ್ರಮಿಸಿ ತುಸು ಬೇಗನೇ ಕ್ಯಾಂಪ್ ತಲುಪಿದಾಗ ನೆಮ್ಮದಿಯ ನಿಟ್ಟುಸಿರು…! ನಾವು ತಲುಪಿದ್ದು ೧೨೭೦೦ ಫೂಟ್ ಎತ್ತರದಲ್ಲಿರುವ ನಗಾರೂ ಕ್ಯಾಂಪ್
ಇದು ನಾವು ಅಂದು ಕೊಂಡಷ್ಟು ಸುಲಭವಾಗಿ ರಲಿಲ್ಲ. ಮೈನಸ್ ೫-೬ ಡಿಗ್ರೀ ತಾಪಮಾನ ನಮಗೆ ತುಂಬಾ ಹೊಸದು…! ಟಿಶ್ಯೂ ಪೇಪರ್ ನಲ್ಲಿ ಕೆಲಸ ಮುಗಿಸುವುದು, ಸ್ಲೀಪಿಂಗ್ ಬ್ಯಾಗ್ ನಲ್ಲಿ ಮಲಗಿ ರಾತ್ರಿ ಕಳೆಯುವುದು, ಇವೆಲ್ಲ ನಾವು ಕಂಡರಿಯದ್ದು…! ರಾತ್ರಿ ಮಂಜುಗಡ್ಡೆಯ ಮೇಲೆ ಹಾಕಿದ ಟೆಂಟ್ ಲ್ಲಿ Sleeping Bag ಲ್ಲಿ ತೂರಿಕೊಂಡರೂ ನಖ- ಶಿಖಾಂತ ನಡುಕ..!
ಕೆಲವರು ಯಾಕಾದರೂ ಬಂದೆನೋ… ಎಂದು ಕಣ್ಣೀರಾದರೆ, ಉಳಿದವರಿಂದ ಅಂತವರಿಗೆ ಧೈರ್ಯ ತುಂಬುವ ಸಾಂತ್ವನದ ನುಡಿಗಳು…!

ಇಂಥ ಚಾರಣಗಳಲ್ಲಿ, ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ, ಧೈರ್ಯ ತುಂಬುತ್ತಾ, ಹಿಂದಿನದನ್ನು ಮರೆತು, ಮುಂದಿನ ಗುರಿಯ ಕಡೆಗೆ ಲಕ್ಷ್ಯವಿಟ್ಟು ಸಾಗುವುದೇ ಒಂದು ಅಮೋಘ ಜೀವನಾನು ಭವ…! ಯಾವುದೇ ಲಿಂಗ, ಜಾತಿ, ಧರ್ಮಗಳ ಹಂಗಿಲ್ಲದೇ ಕೇವಲ ಪ್ರೀತಿಯನ್ನು ಮಾತ್ರ ಹಂಚುತ್ತಾ, ಕಷ್ಟಗಳನ್ನು ಸಹಿಸುತ್ತ, ಇತರರೊ ಡನೆ ಸಹಕರಿಸುತ್ತ ಮುಂದಿನ ಗುರಿಯೆಡೆಗೆ ಒಂದೊಂದೇ ಹೆಜ್ಜೆಯಿಟ್ಟು ನಡೆಯುವುದು ಚಾರಣ ನಮಗೆ ಕಲಿಸುವ ಅಮೂಲ್ಯವಾದ ಪಾಠ…!

೫ ನೇ ದಿನ ಬೆಳಿಗ್ಗೆ ೩ ಗಂಟೆಗೇ ಚಾರಣ ಶುರು…! ಸೂರ್ಯ ಮೂಡುವ ಮೊದಲೇ, ತಲೆಗೆ ಸಿಕ್ಕಿಸಿ ಕೊಂಡ ಟಾರ್ಚ್ ಬೆಳಕಲ್ಲಿ ಒಬ್ಬರ ಹಿಂದೆ ಒಬ್ಬರು, ನಿಧಾನವಾಗಿ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು , ದುರ್ಗಮ ಇಳಿಜಾರಿನ ಹಿಮ ಪರ್ವತ ವನ್ನು ಏರುವುದು ಒಂದು ಸವಾಲೇ ಸರಿ. ಅಷ್ಟು ಬೆಳಿಗ್ಗೆ ಚಾರಣ ಶುರು ಮಾಡಲು ಕಾರಣವೂ ಇದೆ. ಸೂರ್ಯೋದ ಯದ ನಂತರ ಬಿಸಿಲಿಗೆ ಹಿಮದ ಮೇಲ್ಪದರ ಕರಗಿ ನೀರಾಗುತ್ತದೆ. ಅದರ ಮೇಲೆ ಹೆಜ್ಜೆಯಿಟ್ಟರೆ ಜಾರುವ ಸಂಭವ ಹೆಚ್ಚು. ಬೆಳಗಿನ ಜಾವ ಹಿಮ ಗಟ್ಟಿಯಾಗಿದ್ದು ನಮ್ಮ ಹೆಜ್ಜೆಗಳು ಹೆಚ್ಚು ಧೃಡವಾಗಿ ಹಿಮದಲ್ಲಿ ಕೂರುತ್ತವೆ. ಇದು ಚಾರಣಿಗರ ಸುರಕ್ಷತೆಯ ದೃಷ್ಟಿಯಿಂದ ತುಂಬಾ ಮುಖ್ಯ. ಈ ದಿನ ಎದುರಾದದ್ದು ಅತೀ ಹೆಚ್ಚಿನ ಶ್ರಮ ಹಾಗೂ ಮಾನಸಿಕ ಸ್ಥೈರ್ಯವನ್ನು ಪರೀಕ್ಷಿಸುವ ಕ್ಷಣಗಳು.

ಸುಮಾರು ೬-೭ ತಾಸು, ಅತೀ ದುರ್ಗಮ ಪರ್ವತವನ್ನು ಏರಿ, ಕಡಿದಾದ ಪರ್ವತದ ತುದಿಯಲ್ಲಿ ನಖ- ಶಿಖಾಂತ ನಡುಗುತ್ತಾ ಸ್ವಲ್ಪ ದೂರ ನಡೆದು, ಮಧ್ಯಾಹ್ನ ಸುಮಾರು ೧೧ ಗಂಟೆಗೆ ತುದಿಯಲ್ಲಿರುವ ಸ್ವಲ್ಪ ಸಮತಟ್ಟಾದ ಜಾಗಕ್ಕೆ ಬಂದರೆ…. ಅದೇ SAR PASS…! ದೂರದಲ್ಲಿ ಹಿಮದಿಂದ ತುಂಬಿದ ಕೊಳ…!
ಅದನ್ನು ಕಣ್ತುಂಬಿಕೊಂಡರೆ, ಎಲ್ಲರಿಗೂ ಏನನ್ನೋ ಸಾಧಿಸಿದ ಸಂತೃಪ್ತಿ. ಕೆಲವರ ಕಣ್ಣಲ್ಲಿ ಆನಂದ ಭಾಷ್ಪ…! ಕೆಲವರು ಖುಷಿಯಿಂದ ಕುಣಿದು ಕುಪ್ಪಳಿಸಿದರೆ, ಕೆಲವರು ಫೋಟೋ, ಸೆಲ್ಫೀ ಯಲ್ಲಿ ಬ್ಯುಸಿ…! ಹಿರಿಯರು ಸ್ವಲ್ಪ ಬಿಗು ಮಾನ ತೋರಿದರೆ, ಕಿರಿಯ ಜೋಡಿಗಳಿಂದ ಕೇಕೇ…ಅಪ್ಪುಗೆ,ಮುತ್ತಿನ ಧಾರಾಕಾರ ಮಳೆ..!
ದೂರ ನಿಂತು ಇವೆಲ್ಲವನ್ನೂ ಖುಷಿಯಿಂದ ಕಣ್ತುಂಬಿಕೊಳ್ಳುತ್ತಿದ್ದ ನನಗೆ ಅನಿಸುತ್ತಿತ್ತು…” ನಾನೂ ಮನೆಯವರನ್ನು ಕರೆ ತರಬೇಕಿತ್ತು…! ಅವಳು ಮಿಸ್ ಮಾಡಿಕೊಂಡು ಬಿಟ್ಟಳಲ್ಲಾ…! ಇರಲಿ… ಮುಂದೊಮ್ಮೆ ಮತ್ತೆ ಬರೋಣ…!”
ಎಂಥ ವಿಹಂಗಮ ದೃಶ್ಯ..! ಸುತ್ತಲೂ ಕಣ್ಣು ಹಾಯಿಸಿದಷ್ಟೂ ದೂರ ಬರೀ ಹಿಮ. ಕೆಲವು ಪರ್ವತಗಳು ನಮಗಿಂತ ಮೇಲಿದ್ದರೆ, ಕೆಲವು ನಮಗಿಂತ ಕೆಳಗೆ…!”ಓಹೋ ಹಿಮಾಲಯ…” ಅಂತ ಕೆಲವರು ಹಾಡಿದರೆ,ಆಜ್ ಮೆ ಊಪರ್ ಆಸಮಾ ನೀಚೆ…! ಅಂತ ಕೆಲವರ ಹಿಂದಿ ಹಾಡು…! ಕೆಲವರು ಭಾರತದ ರಾಷ್ಟ್ರ ಧ್ವಜದ ಜೊತೆ ಫೋಟೋ, ಇನ್ನೂ ಕೆಲವರದು ನಮ್ಮ ಕನ್ನಡದ ಬಾವುಟದ ಜೊತೆ…ವಾಹ್…!!! ವಯಸ್ಸನ್ನು ಮರೆತು ಎಲ್ಲರೂ ಖುಷಿಯಿಂದ ಕುಣಿದು ಕುಪ್ಪಳಿಸಿದ್ದು ಮರೆಯಲಾಗದ ಕ್ಷಣ…!
ಆಗ ನಾವು ಇದ್ದಿದ್ದು ೧೩೮೦೦ ಅಡಿಗಳ ಎತ್ತರ ದಲ್ಲಿ…!

ಗ್ರೂಪ್ ಫೋಟೋ ತೆಗೆಯುವ ಸಂಭ್ರಮದ ನಂತರ, ಎಲ್ಲರದೂ ಈಗ ಪರ್ವತವನ್ನು ಇಳಿ ಯುವ ಕಾಯಕ. ಹಿಮಪರ್ವತವನ್ನು ಇಳಿಯು ವುದು ಹತ್ತುವುದಕ್ಕಿಂತ ಕಷ್ಟದ ಕೆಲಸ. ಸ್ವಲ್ಪ ಎಡವಿದರೂ ನೇರವಾಗಿ ಉರುಳುರುಳಿ ಪರ್ವ ತದ ಬುಡವನ್ನು ಸೇರುವ ಆತಂಕ…! ಕೆಲವರ ಏಳು- ಬೀಳುಗಳನ್ನೂ ಕಂಡಿದ್ದಾಯಿತು…!
ಸ್ವಲ್ಪದೂರ ಕಡಿದಾದ ಹಿಮಾಚ್ಛಾದಿತ ದಾರಿ ಯನ್ನು ಕ್ರಮಿಸಿ, ಚಾರಣದ ಇನ್ನೊಂದು ಮೈ ನವಿರೇಳಿಸುವ ಘಟ್ಟಕ್ಕೆ ತಲುಪಿದೆವು. ಅದೇ SLIDE ಅಂದರೆ, ಹಿಮದಲ್ಲಿ ಜಾರುಬಂಡೆ ಯಲ್ಲಿ ಜಾರು ವಂತೆ ಜಾರುವುದು…!! ಪರ್ವತ ದ ಒಂದು ಘಟ್ಟದಿಂದ, ಅದರ ಪಾದದೆಡೆ ನಡೆ ಯುವ ಬದಲು,ಕುಳಿತುಕೊಂಡು ಜಾರುವುದು. ಅದೂ ಒಂದು ಅಪೂರ್ವವಾದ ಅನುಭವ. ಇಂಥಹ ೨-೩ SLIDE ಗಳನ್ನು ಜಾರಿ, ಸ್ವಲ್ಪ ದೂರ ಹಿಮದಲ್ಲಿ ನಡೆದು, ಸಂಜೆ ೪-೫ ಗಂಟೆಗೆ ಟೆಂಟ್ ಸೇರಿಕೊಂಡರೆ ಸಂತೃಪ್ತಿಯ ಭಾವ…!

ಕೊನೆಯ ದಿನ, ಹಿಮದ ಗುಡ್ಡದ ಬದಲು ಒಣ ಗುಡ್ಡದ ಚಾರಣ… ಇಳಿತ…! KASOL Base camp ನಿಂದ ಶುರುವಾದ ನಮ್ಮ ಚಾರಣ,
GRAHAN Camp, PADRI Camp, MIN THACH Camp, NAGARU Camp ದಾಟಿ BISKARI Camp ನಲ್ಲಿ ಕೊನೆಗೊಳ್ಳುತ್ತದೆ. ಕೊನೆಯ Camp ನಿಂದ ಸ್ವಲ್ಪ ದೂರ ನಡೆದು ನಂತರ ಗಾಡಿಯಲ್ಲಿ KASOL Base Camp ಗೆ…!

ಅಲ್ಲಿಂದ ಮರಳಿ ಮನೆಗೆ….ಮರೆಯಲಾಗದ ಅನುಭವದೊಂದಿಗೆ….!!! “ನಾವೆಲ್ಲಾ ಸೇರಿ ಮತ್ತೆ ಟ್ರೆಕ್ಕೊ… ಪಿಕ್ನಿಕ್ಕೊ ಮಾಡೋಣ… ಏನಂತೀರಿ…?” ಅಂತ ಎಲ್ಲರಿಂದ ಉವಾಚ…! “ವೀಕೆಂಡಲ್ಲಿ ನಮ್ಮ ಮನೆಗೆ ನೀವು ಬರಲೇ ಬೇಕು…!” ಎಂಬ ಒತ್ತಾಯ…ಎಲ್ಲರಿಂದಲೂ…. ಎಲ್ಲರಿಗೂ….! ಜೀವನಾನುಭವದ ಜೊತೆಗೆ ಜೀವದ ಗೆಳೆಯರನ್ನು ಒದಗಿಸುವ ಇಂಥ ಸಾಮೂಹಿಕ ಒಡನಾಟಗಳನ್ನು ನಾವು ಹೆಚ್ಚು ಹೆಚ್ಚು ಮಾಡುವುದರಿಂದ ನಾವು ಜೀವನದಲ್ಲಿ ಹೆಚ್ಚು ಬೆಳೆಯುತ್ತೇವೆ ಎನ್ನುವುದು ಈ Trekking ನಿಂದ ನಾನು ಕಲಿತ ಪಾಠ.
ಸ್ನೇಹಿತರೇ, ನೀವೂ ಒಮ್ಮೆ ಪ್ರಯತ್ನ ಮಾಡಿ… ನಾವು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ!! ಅಲ್ಲವೇ….!
ನಮಸ್ಕಾರ🙏🙏

✍️ ಸುಭಾಸ‌ ಶೆಟ್ಟಿ, ಬೆಂಗಳೂರು