ಕಲಸಿ ಹದಗೊಳಿಸಿದ ಹಿಟ್ಟನು
ತಟ್ಟುತಲಿವೆ ಬೆರಳುಗಳು
ಒಪ್ಪ ಓರಣವಾಗಿ
ತಿದ್ದಿ ತೀಡುತ ಮಗದೊಮ್ಮೆ
ಅಂಚನ್ನು
ತಿದ್ದಲಾಗುತ್ತಿಲ್ಲವೆ ಬದುಕನ್ನು!
ನೆನೆಸಿ ಕುದಿಸಿದ ಕಾಳಿಗುಪ್ಪು
ಖಾರವ ಬೆರೆಸಿ
ಬಸಿದು ಮಾಡಿದ ಅನ್ನ
ಜೊತೆಗೂಡಿ ಹುಳಿಸಾರು
ಹಸಿದ ಹೊಟ್ಟೆಗೆ ಸೇರಿ
ಜೀವ ತುಂಬಿದರೂ
ತುಂಬುತ್ತಿಲ್ಲ ಮನ
ಬಾಯ್ಮಾತು, ಹುಸಿನಗೆಗೆ.
ಒಡಲನೇ ಬೇಯಿಸಿ
ಮೌನದಿ ಸುಡುಸುಡುವ
ಕಟ್ಟಿಗೆಯ ಒಲೆಯನ್ನು
ದಿಟ್ಟಿಸಲು ಭಯವಾಗಿ
ದೃಷ್ಟಿ ಹೊರಳಿ.
ಬೇಯುವ,ಬೇಯಿಸುವ
ತಾಕಲಾಟದ ಮಧ್ಯೆ
ರೊಟ್ಟಿ ಬೆಂದಿತ್ತು….
ಹೊಟ್ಟೆ ತುಂಬಿತ್ತು…..

✍️ಉಮಾ ಬಾಗಲಕೋಟ