ಅವ್ವ ಎನ್ನುವ ಪದ
ನನ್ನ ಪಾಲಿನ ವೇದ
ಅವ್ವ ಎನ್ನುವ ನಾದವೇ
ಅಗಾಧ ಅಭೇದ ಸ್ವಾದ
ಅವ್ವ ಎಂದರೆ ಕೋಟಿ
ಪುಣ್ಯದ ಪುಳಕ
ಅವ್ವ ಎಂದರೆ
ಪವಿತ್ರ ನದಿಗಳ ಜಳಕ.

ಅವ್ವ ಎಂದು
       ಅಂಗಲಾಚಿದರೆ ಸಾಕು
       ದನಿ ಬಂದಕಡೆ  ದೌಡಾಯಿಸಿ
       ಬಾಚಿ ತಬ್ಬುವ ಅವ್ವ
       ಹೋದ ಜೀವ ಬಂದಂತೆ
       ಅವಳ ಭಾವ

ಹಸಿದಾಗ ಹಾಲುಣಿಸಿ
ಬಿಸಿಲಿಗೆ ಸೀರೆ ಸೆರಗ.
ಹೊದಿಸಿ ಬೆಚ್ಚಗೆ ಬಗಲಲ್ಲಿ
ಕುಳ್ಳಿರಿಸಿ ಕರುಳ ಕರುಣಿ
ಉಕ್ಕಿಸಿದವಳು .
ಮುಗಿಲ ಬಾಗಿಲಿಗೆ
ಮುಖಮಾಡಿ ಹಕ್ಕಿ ಚುಕ್ಕಿ
ತೋರಿಸಿ ತುತ್ತು ಹಾಕಿ ಮುತ್ತಿಕ್ಕುವ
ಅವ್ವನ ತೋಳ ತೆಕ್ಕೆಯಲ್ಲಿ
ಉಕ್ಕುವ ಒಲವಿಗೆ ಸ್ವರ್ಗ ಲೋಕವು
ಸಮವಿಲ್ಲ,

       ಗುಡಿಸಲಿನ ಗುಡಿಯಲ್ಲಿಯೇ
       ಬಾಳ ಗೂಡಿನ ಹಾಡು ಹೊಸೆದ
       ನಮ್ಮವ್ವ ಬಾಗಿಲಲ್ಲಿದ್ದ ಬಡತನವನ್ನ
       ದುಡಿಮೆಯ ಬಡಿಗೆಯಿಂದ ಹೊಡೆದು
       ಗಡಿ ದಾಟಿಸಿದ ಗಡುಸುಗಾರ್ತಿ.

ಹರಿದ ಸೀರೆಗೆ ದಾರದ ದೀಕ್ಷೆ
ಕೊಟ್ಟು ಮೈ ತುಂಬಾ ಆ ನೂಲನುಟ್ಟು
ನೂರು ನೋವನ್ನೆಲ್ಲಾ
ಎದೆಯಲ್ಲಿ ಅಡಗಿಸಿಟ್ಟು
ಜೀವ ಹಿಂಡಿ ಜೇನು ಕುಡಿಸಿದ
ನಮ್ಮವ್ವ ಮೊಳಕೆಯಿಂದ
ಬೆಳಕು ಕಾಣುವವರೆಗೂ ಅಳುಕದೆ
ಮುನ್ನಡೆಸಿದ ಮುಕ್ಕೋಟಿ ದೈವ,

       ನಮ್ಮವ್ವನೆಂದರೆ ಬದುಕುವ
       ಛಲ ನಮ್ಮನೆಯ ಜೀವಜಲ
       ಸೋತಾಗ ಹತಾಶೆಯಾದಾಗ
       ಆತು ನಿಂತು ಗೆಲುವಿಗೆ
       ಹಾತೊರೆವ ಭೀಮಬಲ,

ಅವಳೆದೆಯ ಸ್ವರ್ಗದಲ್ಲಿ
ದೀರ್ಘ ನಿದ್ದೆಗೆ ಜಾರಿದಾಗ
ಸದ್ದಾಗದಂತೆ ಎದ್ದು
ಮಲ್ಲಿಗೆಯಂತೆ ಮುದ್ದಿಸಿದವಳು,
ನಾ ಏಳುವುದರೊಳಗೆ
ಹತ್ತಾಳಿನ ಕೆಲಸ ಹೊತ್ತೊಗೆದು
ಮತ್ತೆ ಕಣ್ಣು ಕಿತ್ತಾಗ ನಗುತ್ತಲೇ
ಎದೆ ಎತ್ತರಕ್ಕೆ ಹೊತ್ತು
ಮಮತೆ ಬಿತ್ತಿದವಳು.

       ಹೆತ್ತಾಗಿನಿಂದ ಹೆಗಲೆತ್ತರದವರೆಗೂ
       ಎಳೆ ಕೂಸಿನಂತೆ ಬೆಳೆಸಿದ
       ಅವ್ವ ಮಳೆ ಬಂದಾಗ
       ಇಳೆಗೊರಗಿದ ಬೆಳೆಯಂತೆ
       ಮೌನವಾದಳು
      “ಅವ್ವ ಯಾರಿಗೆ ಹೇಳಲಿ
       ನನ್ನೆದೆಯ ನೋವಾ
       ಎಲ್ಲಿದೆ ಈಗ ನನ್ನ ತಲೆ
       ನೇವರಿಸೋ ಜೀವಾ.”

  ✍️ಡಾ.ಶೇಖರ ಸಜ್ಜನ, ಹುಬ್ಬಳ್ಳಿ