ಜೀವನವಿದು ಎಂದಿಗೂ
ಜೀವವಿದು ಎಂದೆಂದಿಗೂ
ಅಮ್ಮನ ಮಡಿಲಿಗೆ ಋಣಿ
ಅಪ್ಪನ ಹೆಗಲಿಗೆ ಋಣಿ.!

ಕಲಿಸಿದ ಗುರುಗಳಿಗೆ ಋಣಿ
ಬೆಳೆಸಿದ ಬಂಧುಗಳಿಗೆ ಋಣಿ
ನಡೆಸಿದ ಕರಗಳಿಗೆ ಋಣಿ
ನುಡಿಸಿದ ಸ್ವರಗಳಿಗೆ ಋಣಿ.!

ಒಲಿದ ಜೀವಗಳಿಗೆ ಋಣಿ
ತಣಿಸಿದ ಭಾವಗಳಿಗೆ ಋಣಿ
ಒಡಹುಟ್ಟಿದವರಿಗೆ ನಿತ್ಯ ಋಣಿ
ಒಡನಾಡಿದವರಿಗೆ ಸದಾ ಋಣಿ.!

ಕಷ್ಟದಿ ಸ್ಪಂದಿಸಿದವರಿಗೆ ಋಣಿ
ದುಃಖದಿ ನಿಂದವರಿಗೆ ಋಣಿ
ನೋವ ಮರೆಸಿದವರಿಗೆ ಋಣಿ
ನಗೆ ಹಂಚಿದವರಿಗೆ ಋಣಿ.!

ಒಡಲಿನಾ ಉಸಿರಿಗೆ ಋಣಿ
ಬಯಲಿನಾ ಹಸಿರಿಗೆ ಋಣಿ
ದಾಹ ನೀಗುವ ಜಲಕೆ ಋಣಿ
ಹಸಿವಿಂಗಿಸುವ ನೆಲಕೆ ಋಣಿ.!

ನಿಸರ್ಗದ ಕಣಕಣಕು ಋಣಿ
ಮಾರ್ಗದ ಪ್ರತಿಕ್ಷಣಕು ಋಣಿ
ಹರಕೆ ಹಾರೈಕೆಗಳಿಗೆ ಋಣಿ
ಚೈತನ್ಯ ಕಾರುಣ್ಯಗಳಿಗೆ ಋಣಿ.!

ನನಗೆ ಪ್ರತಿವರ್ಷವೂ ಜನ್ಮದಿನ
ಋಣಾರಾಧನೆ ರಿಂಗಣಗಳ ದಿನ
ಬಾಳಬಂಡಿಗೆ ಬುತ್ತಿ ಬೆಳಕಾದವರ
ಸ್ಮರಿಸಿ ಸಾಷ್ಟಾಂಗ ನಮಿಪ ದಿನ.!

    ✍️ಎ.ಎನ್.ರಮೇಶ್. ಗುಬ್ಬಿ.