ಡಾ.ಕೆ.ಎನ್.ಲಾವಣ್ಯಪ್ರಭಾ ಎನ್ನುವ ಅಪ್ಪಟ ಕವಯತ್ರಿಯ ವ್ಯಕ್ತಿತ್ವದಂತೆ ಅವಳ ಕವಿತೆಗಳ ಆಳ ವಿಸ್ತಾರವೂ ಹಿರಿದು. ಅದಕ್ಕೇ ಅವು ಭೋರ್ಗರೆದು ಧುಮ್ಮಿಕ್ಕುವದಿಲ್ಲ. ತಣ್ಣಗೆ ಪ್ರಶಾಂತವಾಗಿ ತಾನೇ ತಾನಾಗಿ ಹರಿಯುತ್ತವೆ. ಇಲ್ಲಿಯ ಕವಿತೆಗಳು ಯಾವ ಬಂಧನಕ್ಕೂ ಒಳಗಾಗದ ಹಾಗಂತ ತನ್ನ ಎಲ್ಲೆಯನ್ನೂ ಮೀರದ ಒಂದು ಅನಿರ್ವಚನೀಯ, ಅನೂಹ್ಯ ಭಾವಸ್ಪುರಣೆ ಮಾಡುವ ಪರಿಯನ್ನು ಓದಿಯೇ ಅರಿಯಬೇಕು.

ಮುನ್ನಡಿ ಬರೆದ ಖ್ಯಾತ ಕವಿ ಎಚ್. ಎಸ್. ವೆಂಕಟೇಶ ಮೂರ್ತಿಯವರು ಕವಯತ್ರಿಯ ಈ ವಿಶಿಷ್ಟ ಶೈಲಿಯನ್ನು ಅತ್ಯಂತ ಸುಂದರ ಮತ್ತು ಸಮರ್ಪಕವಾಗಿ ‘ಆತ್ಮಾನುಸಂಧಾನ’ ಎನ್ನುತ್ತಾರೆ. ಇಲ್ಲಿಯ ಕವನಗಳು ಬದುಕಿನ ವೈವಿಧ್ಯಮಯ ಲಯಗಳಲ್ಲಿ ಅನಾಯಾಸ ವಾಗಿ ಅಭಿವ್ಯಕ್ತಿಗೊಳ್ಳುತ್ತವೆ. ನಮ್ಮೊಳಗಿನ ಅನಿಶ್ಚಿತತೆ, ಕೃತಕತೆ, ವಿರೋದಾಭಾಸಗಳನ್ನು ವರ್ಣಿಸುತ್ತ, ಖಂಡಿಸುತ್ತ ಕೊನೆಯಲ್ಲಿ ನಿರ್ಮಲ ಪ್ರೇಮದ ತಾದಾತ್ಮ್ಯದಲ್ಲಿ ಎಲ್ಲ ಮರೆಯಲು ಯತ್ನಿಸುವ ಶುದ್ಧಾಂತಃಕರಣದ ಸಹಜಯೋಗ ಅನ್ನಿಸುತ್ತದೆ.

‘ವೈರುಧ್ಯದ ಸಂತೆಯೊಳಗೆ ಕವಿ(ತೆ) ಕಂಗಾಲು’ ಅನ್ನುವ ಕವಿತೆ ಆರಂಭದಲ್ಲೇ ಕವಿಯ ಗೊಂದಲ, ತಾಕಲಾಟದ ಸ್ಪಷ್ಟ ಮುನ್ಸೂಚನೆ ನೀಡುತ್ತದೆ. ಈ ದ್ವಂದ್ವ ಮುಂದಿನ ಕವಿತೆಗಳಲ್ಲೂ ಮುಂದುವರಿಯು ತ್ತದೆ. ನದಿಯೆನ್ನುವುದು ಸತತ ಚಲನಶೀಲ ವಾದರೆ ಧ್ಯಾನ ಸ್ಥಿರವಾದ ಸ್ಥಿತಿಯನ್ನು ಬಯಸುತ್ತದೆ. ಬಾಹ್ಯವಾಗಿ ಸ್ಥಿರವೆನಿಸಿದರೂ ಗುಪ್ತಗಾಮಿನಿ ಯಾಗಿ ಧ್ಯಾನದಲ್ಲಿರುವ ನದಿಯೊಂದು ಕಡೆಯಾದರೆ ಇನ್ನೊಂದು ಕವನದಲ್ಲಿ ಇದ್ದಲ್ಲೇ ಇರುವ ದೀಪಗಳು ಚಲಿಸುತ್ತವೆ, ಪಿಸುಗುಡು ತ್ತವೆ, ನಗುತ್ತವೆ, ಕೆಲವೊಮ್ಮೆ ಯುಗದಿಂದ ಯುಗಕ್ಕೆ ಚಲಿಸುತ್ತವೆ.

‘ಕೂಡುವಾಟ’, ‘ಗುಲಾಬಿ ಗಿಡ’ ಗಳ ಕುಸುಮ ಕೋಮಲ ಭಾವನೆಗಳ ಆರ್ದ್ರತೆ ತಟ್ಟಿದರೆ ಇನ್ನು ಕೆಲವು ‘ಕಡೆಗೋಲಿನಿಂದ ಕಡೆಯೋ ನನ್ನನೇ’, ‘ಬೆಳಕಿಗೆ ಕುರುಡು ನೆಪವಲ್ಲ’ ದಂಥ ಕವನಗಳ ಸಮರ್ಪಣಾ ಭಾವ ಮನ ಮುಟ್ಟು ತ್ತದೆ. ‘ಉತ್ಸವ’, ‘ಮುಖದೊಳಗಣ ಮುಖ’, ‘ಮುಖವಾಡ ಕಳಚಿಟ್ಟ ಒಂದು ದಿನ’ ಹೀಗೆ ಕೆಲವು ಕವನಗಳು ಬಹಿರಾಡಂಬರವನ್ನು ಧಿಕ್ಕರಿಸಿ ಬೆತ್ತಲಾಗದೇ ಬಯಲಿಲ್ಲ ಎನ್ನುತ್ತವೆ.

ಕಾವ್ಯವನ್ನೇ ಉಸಿರಾಡುವ,ಭಾವಜೀವಿಯಾದ ಕವಯತ್ರಿಯೊಳಗೆ ಬಂಡಾಯದ ಎಳೆಯೂ ಅಲ್ಲಲ್ಲಿ ಇಣುಕುತ್ತದೆ. ಎಲ್ಲ ಮರೆತು ಶಬ್ದ, ರಸ, ರೂಪ, ಸ್ಪರ್ಶ, ಗಂಧಗಳಿಂದ ಮುಕ್ತವಾಗಿ ತನ್ನೊಳಗಿನ ಬೆಳಕಲ್ಲಿ ಲೀನವಾಗುವ ಅದಮ್ಯ ಅಲೌಕಿಕ ತುಡಿತವೂ ವ್ಯಕ್ತವಾಗುತ್ತದೆ.
ಈ ಸಾಲುಗಳಲ್ಲಿ ಹದವಾಗಿ ಮಿಳಿತಗೊಂಡ ಕಾವ್ಯಪ್ರಜ್ಞೆ ಮತ್ತು ಭಕ್ತಿಯೋಗದ ತಲ್ಲೀನತೆಯ ಚಮತ್ಕಾರ ನೋಡಿ.

ಹಿಂದಿರುಗಿ ನೋಡಿದೆ                  ಕನಕನಷ್ಟೇ ಆರ್ದ್ರ ಹೃದಯ ಹೊತ್ತು ತಿರುಗುವನೇ ಕಡೆಗೋಲ ಕೃಷ್ಣ            ತಿರುಗಿ ಎನ್ನ ಹೃದಯವನೊಮ್ಮೆ              ಕಡೆಯುವನೇ?
ಕಡೆದು ಮೇಲೆ ಬಂದ ಬೆಣ್ಣೆ
ಪ್ರೇಮದುನ್ಮತ್ತ ಕಾವ್ಯದ ಹಣ್ಣ ಮೆದ್ದು ತಿನ್ನುವನೇ?
ದಯಾಮೂರ್ತಿ ಎನ್ನವನೇ
ಕಡೆಗೋಲನಿಂದ ಕಡೆಯೋ ನನ್ನನ್ನೇ.

ಗುಲಾಬಿ ಗಿಡವೊಂದನ್ನು ಬೆಳೆಸುವ ಕಲೆಯನ್ನ ವರ್ಣಿಸುವ ಕವನವೊಂದು ಮುಗಿದ ನಂತರವೂ ಮುಂದುವರಿಯುವ ವೈಖರಿ ಹೀಗಿದೆ.

ಅದಕ್ಕೆ ಹೇಳುತ್ತೇನೆ ಕೇಳು
ಪ್ರೇಮವೆಂದರೆ ಏನೆಂದುಕೊಂಡೆ
ಗೆಳೆಯಾ?
ಬರೀ ಗುಲಾಬಿಯಾ?
ಊಹೂಂ, ಇಡೀ ಗುಲಾಬಿಗಿಡ.

ಪ್ರೀತಿ ವಾತ್ಸಲ್ಯಗಳ ಗಣಿಯಾದ ಕವಯತ್ರಿಯ ಕವಿತೆಗಳಷ್ಟೇ ಅಲ್ಲ ಕಣ್ಣುಗಳೂ ಮಾತನಾಡು ತ್ತವೆ. ಆ ಮೋಡಿಯಿಂದ ತಪ್ಪಸಿಕೊಳ್ಳುವುದು ಸುಲಭವಲ್ಲ.

ನಾನು ನಿನ್ನನ್ನು ಪ್ರೀತಿಸುತ್ತೇನೆ
ಎದೆಯ ಮಣ್ಣಿನಲ್ಲಿಟ್ಟು
ಕಣ್ಣಕಾಳಜಿಯಲ್ಲಿ ಬೆಳೆಸುತ್ತೇನೆ
ಮುಳ್ಳಿನ ಸಹಿತ ಇಡೀ ಗುಲಾಬಿಗಿಡ

ಇದೊಂದು ಕವನದಲ್ಲಿ ಪ್ರೀತಿ ಈ ಪರಿ ತುಂಬಿ ಹರಿದರೆ ಇನ್ನೊಂದು ಕವನದ ಸಾಲುಗಳಲ್ಲಿ ಆ ಪ್ರೇಮ ಪಕ್ವವಾಗಿ ಸಾಕ್ಷಾತ್ಕಾರಗೊಳ್ಳುವಲ್ಲಿ ಅಲೌಕಿಕವಾದ ಎತ್ತರಕ್ಕೇರುತ್ತದೆ.

ಭಯ, ಭ್ರಮೆ, ಮುಖವಾಡಗಳಿಲ್ಲದ
ಬೆಳಕು ವಿಜೃಂಭಿಸುತ್ತಿತ್ತು.
“ಮುಂದೇನು?” ಅವನು ಕೇಳಿದ
“ಬೆಳಕಾಗಬೇಕು”. ಎಂದಳು
ಕೊಂಚವೂ ತಡವರಿಸದೆಯೇ.
ಬೆಳಕೇ ಆಗಿಬಿಟ್ಟಳು.

ನನ್ನ ಆತ್ಮಸಖಿಯೇ ಅನ್ನಿಸುವ ಲಾವಣ್ಯಳನ್ನು ಮತ್ತು ಅವಳ ಕವನಗಳನ್ನು ಮ್ಯಾಕ್ಸ ಎರ್ಮನ್ ನ ಅದ್ಭುತವಾದ ಕವನ ‘ಡೆಟ್ಸೀಡರಾಟ’ ದ ಈ ಸಾಲುಗಳು ಸುಂದರವಾಗಿ ಬಣ್ಣಿಸುತ್ತದೆ ಎಂದು ನನಗನ್ನಿಸುತ್ತದೆ.

Go placidly amid the noise and haste,
and remember what peace there may be in silence.
As far as possible, without surrender, be on good terms with all persons.Speak your truth quietly and clearly; and listen to others,even to the dull and ignorant; they too have their story.

ಕಳೆದ ಮೂವತ್ತು ವರ್ಷಗಳಿಂದ ಕಾವ್ಯ ಕೃಷಿ ಯಲ್ಲಿ ತೊಡಗಿಯೂ ಮೂರೇ ಮೂರು ಸಂಕಲನ ಹೊರತಂದಿರುವದು ಲಾವಣ್ಯ ಕಾವ್ಯ ವನ್ನೆಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನುವದಕ್ಕೆೆ ಸಾಕ್ಷಿ. ಕವಿತೆ ಸಹಜವಾಗಿ ಒಲಿದಿ ದ್ದರೂ, ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿ ಕೊಂಡಿದ್ದರೂ, ಕಾವ್ಯ ಕ್ಷೇತ್ರದಲ್ಲಿ ಅಪಾರ ಸಾಧನೆಗೈದಿದ್ದರೂ ಹಾರ ತುರಾಯಿಗಳ ಲಾಲಸೆ ಯಿಲ್ಲದ ಸರಳ, ಸಹಜ, ಸುಂದರ ಮನಸ್ಸಿನ ಕವಯತ್ರಿಯಿಂದ ಇನ್ನಷ್ಟು ಕವನ ಸಂಕಲನಗಳು ಬರಲಿ. ಮತ್ತಷ್ಟು ಪ್ರಶಸ್ತಿಗಳು ಲಭಿಸಲಿ. ಶುಭವಾಗಲಿ.

   ✍️ಸುಚಿತ್ರಾ ಹೆಗಡೆ,ಮೈಸೂರು