ರಾಜ್ಯದ ದೇವಾಲಯಗಳ ಪರಂಪರೆಯಲ್ಲಿ ಕಲ್ಯಾಣ ಚಾಲುಕ್ಯರ ಕೊಡುಗೆ ದೊಡ್ಡ ಮಟ್ಟದ್ದು. ಅವರ ಹೆಚ್ಚಿನ ದೇವಾಲಯಗಳಲ್ಲಿ ಶಿವಲಿಂಗ ವಿದ್ದರೆ ಶಿವ ಮೂರ್ತಿ ಸ್ವರೂಪದಲ್ಲಿ ಆರಾಧನೆ ಅಪುರೂಪ. ಅಂತಹ ದೇವಾಲಯ ವೊಂದು ಗದಗ ಜಿಲ್ಲೆಯ ಲಕ್ಶ್ಮೇಶ್ವರದಲ್ಲಿದೆ. ಇತಿಹಾಸದಲ್ಲಿ ಪುಲಿಗೆರೆ ಎಂದೇ ಪ್ರಸಿದ್ದಿ ಪಡೆದಿದ್ದ ಇಲ್ಲಿ ಹಲವು ದೇವಾಲಯಗಳ ಸಂಕೀರ್ಣವೇ ಇದೆ.

ಇತಿಹಾಸ ಪುಟದಲ್ಲಿ ಪುಲಿಗೆರೆ, ಹುಲಿಗೆರೆ, ಪೋರಿಗೆರೆ, ಪುಲಿಕಾನಗರ ಎಂದೇ ಉಲ್ಲೇಖ ವಾಗಿರುವ ಇಲ್ಲಿ ಬಾದಾಮಿ ಚಾಲುಕ್ಯರ ಕಾಲ ದಿಂದ ವಿಜಯನಗರ ಅರಸರವರೆಗೂ ಪ್ರಮುಖ ಪಟ್ಟಣವಾಗಿತ್ತು. ಇನ್ನು ಕ್ರಿ.ಶ.686 ರ ಶಾಸನ ದಲ್ಲಿ ಬ್ರಹ್ಮೇಶ್ವರಗಿರಿ – ಘಟಿಕಸ್ಥಾನ ಎಂದೇ ಕರೆಯಲಾಗಿದೆ. 1074 ರಲ್ಲಿ ಲಕ್ಷ್ಮೇಶ್ವರ ಇಲ್ಲಿ ಲಕ್ಷ್ಮಣೇಶ್ವರ ದೇವಾಲಯ ನಿರ್ಮಾಣ ಮಾಡಿದ ನಂತರ ಇಲ್ಲಿನ ಹೆಸರು ಬದಲಾಯಿತು. ಇನ್ನು 1077 ರ ಶಾಸನದಲ್ಲಿ ಕಲ್ಯಾಣಿ ಚಾಲುಕ್ಯ ಅರಸರ ಆರನೇಯ ವಿಕ್ರಮಾದಿತ್ಯ ದತ್ತಿ ನೀಡಿದ ಉಲ್ಲೇಖ ನೋಡ ಬಹುದು. ಇನ್ನು 1107 ರಲ್ಲಿ ತೈಲದೇವ ದತ್ತಿ ನೀಡಿದ ಉಲ್ಲೇಖ ನೋಡ ಬಹುದು. ಇನ್ನು 1115, 1122, 1128 ರ ಶಾಸನಗಳು ಸಹ ದತ್ತಿಯ ಉಲ್ಲೇಖವಿದೆ. ಇನ್ನು 13 ನೇಯ ಶತಮಾನದಲ್ಲಿ ಗುರು ನಾಗೇಶ್ವರ ಇಲ್ಲಿನ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ ಉಲ್ಲೇಖ ಸಹ ನೋಡಬಹುದು.

ಸೋಮೇಶ್ವರ ದೇವಾಲಯ


ಈ ದೇವಾಲಯವನ್ನು ಆದಯ್ಯನೆಂಬ ಶೈವ ಸೋಮೇಶ್ವರನನ್ನು ಸ್ಥಾಪಿಸಿದ ಉಲ್ಲೇಖವನ್ನು ಹರಿಹರ ಕವಿಯ ರಗಳೆಯಲ್ಲಿ ನೋಡಬ ಹುದು. ರಾಘವಾಂಕ ಸೇರಿದಂತೆ ಹಲವು ಕವಿಗಳಲ್ಲಿ ಈ ದೇವಾಲಯದ ಉಲ್ಲೇಖ ನೋಡಬಹುದು. ಇನ್ನು ಈಗಿನ ದೇವಾಲಯ ಗರ್ಭಗುಡಿ, ಅಂತರಾಳ, ನವರಂಗ ಹಾಗು ಮುಖಮಂಟಪ ಹೊಂದಿದ್ದು ಗರ್ಭಗುಡಿಯಲ್ಲಿ ನಂದಿಯ ಮೇಲೆ ಕುಳಿತಿರುವ ಪಾರ್ವತಿ ಸಮೇತನಾದ ಶಿವ ಇರುವುದು ವಿಶೇಷ. ನಾಲ್ಕು ಕೈಗಳಿದ್ದು ಡಮರು ಹಾಗು ತ್ರಿಶೂಲ ಇದ್ದು, ಪಾರ್ವತಿಯ ಹಿಂದೆ ಇರುವಂತಿದೆ. ಇನ್ನು ಇಲ್ಲಿನ ಬಾಗಿಲುವಾಡದ ಜಾಲಂದ್ರಗಳು ಸುಂದರವಾಗಿದೆ.

ಇನ್ನು ನವರಂಗದಲ್ಲಿ ನಾಲ್ಕು ಕಂಭಗಳಿದ್ದು ದೇವ ಕೋಷ್ಟಕಗಳಲ್ಲಿ ಗಣಪತಿ ಹಾಗು ಶಿವಲಿಂಗವಿದೆ. ಇನ್ನು ಮೂರು ದಿಕ್ಕಿನಿಂದ ಪ್ರವೇಶ ದ್ವಾರವಿದ್ದು ಮುಂದೆ ವಿಶಾಲವಾದ ಮುಖ ಮಂಟಪವನ್ನು ಹೊಂದಿದೆ. ಇನ್ನು ಹೊರಭಿತ್ತಿಯಲ್ಲಿನ ಗಣಪತಿ, ಆರು ಕೈಗಳ ಶಿವ, ಅಷ್ಟದಿಕ್ಪಾಲಕರ ಕೆತ್ತೆನೆಗಳು ಗಮನ ಸೆಳೆಯುತ್ತದೆ. ಇನ್ನು ದೇವಾಲಯಕ್ಕೆ ಡ್ರಾವಿಡ ಶೈಲಿಯ ಶಿಖರವಿದೆ.

ದೇವಾಲಯದ ಆವರಣದಲ್ಲಿ ಹಲವು ಚಿಕ್ಕ ಚಿಕ್ಕ ದೇವಾಲಯಗಳಿದ್ದು ಶಿವಲಿಂಗಗಳಿವೆ. ಇನ್ನು ವಿಜಯನಗರ ಕಾಲದ ಅಯ್ಯಪ್ಪನ ಮೂರ್ತಿ ಇದೆ. ಇನ್ನು ಹಿಂಭಾಗದಲ್ಲಿ 11 ನೇ ಶತಮಾನ ದಲ್ಲಿ ನಿರ್ಮಾಣವಾದ ಸುಂದರ ಕಲ್ಯಾಣಿ ಇದೆ. ಗೌರಿ ಎಂಬವಳು ಕಟ್ಟಿಸಿದ ಈ ಕಲ್ಯಾಣಿ ಸುಮಾರು 100 ಆಡಿ ಆಳದಲ್ಲಿದೆ.

ಲಕ್ಷ್ಮಣೇಶ್ವರ ದೇವಾಲಯ (ಲಕ್ಷಣೇಶ್ವರ)


ಇಲ್ಲಿರುವ ಮತ್ತೊಂದು ಸುಂದರ ದೇವಾಲಯ ಲಕ್ಷ್ಮೇಶ್ವರ ದೇವಾಲಯ. ತ್ರಿಕೂಟಚಾಲ ದೇವಾ ಲಯವಾದ ಈದೇವಾಲಯವನ್ನು ಲಕ್ಷ್ಮರಸನು ನಿರ್ಮಿಸಿದ್ದು ಇದರಿಂದಲೇ ಊರಿಗೆ ಹೆಸರು ಬಂದಿದೆ. ದೇವಾಲಯ ಮೂರು ಗರ್ಭ ಗುಡಿ, ಅಂತರಾಳ ಹಾಗು ಒಂದು ನವರಂಗವಿದೆ. ಇನ್ನು ಮುಖ್ಯ ಗರ್ಭಗುಡಿ ಯಲ್ಲಿ ಶಿವಲಿಂಗ ವಿದ್ದು, ಬಾಗಿಲುವಾಡ ಸುಂದರವಾ ಗಿದ್ದು, ಲಲಾಟದಲ್ಲಿ ಗಜಲಕ್ಷ್ಮೀ ಹಾಗು ಎರಡೂ ಕಡೆ ಜಾಲಂದ್ರಗಳ ಕೆತ್ತೆನೆ ಇದೆ. ಇನ್ನು ನವರಂಗ ದಲ್ಲಿ ಸುಮಾರು 16 ಕಂಭಗಳಿದ್ದು ವಿತಾನದ ಕೆತ್ತೆನೆಗಳು ಗಮನ ಸೆಳೆಯುತ್ತದೆ. ದೇವಾಲಯಕ್ಕೆ ಶಿಖರದ ಭಾಗ ಕಾಣುವುದಿಲ್ಲ.

ಸಹಸ್ರಲಿಂಗ ದೇವಾಲಯ


ಗರ್ಭಗುಡಿ ಹಾಗು ಅಂತರಾಳ ಇರುವ ಈ ದೇವಾಲಯದಲ್ಲಿ ಗರ್ಭಗುಡಿಯಲಿ ಸುಮಾರು 999 ಕಿರು ಲಿಂಗಗಳಿರುವ ಶಿವಲಿಂಗವಿದೆ. ಹಾಗಾಗಿ ಈ ದೇವಾಲಯಕ್ಕೆ ಸಹಸ್ರಲಿಂಗ ಎಂಬ ಹೆಸರು ಬಂದಿದೆ. ಹೊರಭಿತ್ತಿಯಲ್ಲಿ ಅಲ್ಲಲ್ಲಿ ಉಬ್ಬು ಶಿಲ್ಪಗಳಿವೆ. ಇಲ್ಲಿಯೂ ಶಿಖರದ ಭಾಗ ಕಾಣ ಬರುವದಿಲ್ಲ.

ಶಂಖ ಬಸದಿ


ಇಲ್ಲಿನ ಮತ್ತೊಂದು ಅದ್ಭುತ ಕಲಾ ಕೊಡುಗೆ ಇದು. ಸುಮಾರು 8 ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣ ವಾದ ಈ ಬಸದಿಯಲ್ಲಿ ಹೊಸದಾಗಿ ಇರಿಸ ಲಾದ ನೇಮಿ ನಾಥನ ಶಿಲ್ಪವಿದೆ. ಇಲ್ಲಿ ಚಾಲುಕ್ಯ ಶೈಲಿಯ 16 ಕಂಭಗಳಿರುವ ಮುಖಮಂಟಪ ಇದ್ದು. ಇಲ್ಲಿಯೇ ಪಂಪ ಆದಿ ಪುರಾಣ ರಚಿಸಿದ್ದು ಎಂಬ ನಂಬಿಕೆ ಇದೆ.

ತಲುಪವ ಬಗ್ಗೆ : ಲಕ್ಶ್ಮೇಶ್ವರ ಗದಗದಿಂದ ಸುಮಾರು 40 ಕಿ ಮೀ ದೂರದಲ್ಲಿದ್ದು ಶಿರಹಟ್ಟಿ ಯಿಂದ ಸುಮಾರು 19 ಕಿ ಮೀ ದೂರದಲ್ಲಿದೆ.

ಇನ್ನು ಇಲ್ಲಿ ಬಾಳೇಶ್ವರ, ಬಸವಣ್ನ, ಅಗಸ್ತೇಶ್ವರ ದೇವಾಲಯಗಳು, ಶಂಕರ ತೀರ್ಥ, ಕಣ್ವ ತೀರ್ಥ, ಅಗಸ್ತ್ಯತೀರ್ಥ,ಲಕ್ಷಣತೀರ್ಥ ಹಾಗು ಖಡ್ಗತೀರ್ಥ ಎಂಬ ಐದು ತೀರ್ಥಗಳಿವೆ.

✍️ಶ್ರೀನಿವಾಸ ಮೂರ್ತಿ ಎನ್.ಎಸ್
ಬೆಂಗಳೂರು