ನನ್ನ ಅಕ್ಷರಗಳು
ಅಂಕುಡೊಂಕು
ಸೇದುವ ಬಾಯಿ
ಸೇರುವ ಊರಿಗೆ
ಇರುವ ಕಷ್ಟದ ದಾರಿಯ ಹಾಗೆ

ಏನೋ ಒಂದಿಷ್ಟು ಹರಿದಂಗಿಯ ಹಾಗೆ
ಚಿಂದಿ ಚಿಂದಿಯಾಗುವ ಹರಿದು ಹೋಗುವ ಅರ್ಥ
ಇನ್ನೊಮ್ಮೆ ಬರೀ ಭೂತ
ಗೊಡ್ಡು ವ್ಯಾಕರಣದ ಹಾಗೆ
ತಲೆ ಸಿಡಿಯುವಂತಹ
ಶತಮಾನದ ವರಾತ

ಅಚ್ಚರಿಯಾಗುವುದು
ಮಗದೊಮ್ಮೆ
ಕಣ್ತಪ್ಪಿ ದಾಟಿಬಂದ
ಹಾವಿನ ಹಾಗೆ…
ಸ್ವಾಗತಿಸುತ್ತವೆ
ಒಮ್ಮೊಮ್ಮೆ ಹೂಮಾಲೆಯಾಗಿ

ನಿಗೂಢ ಬಾವಿಯ ಆಳ‌ ನೋಡಲಾದೀತೆ…
ಹಿಡಿಯಲೂ ಆದೀತೆ…
ಒಂದೊಂದು ಚಹರೆಯ ಹಿಂದೆ
ನೂರಾರು ಅರ್ಥಗಳ ಪರಿಭಾಷೆ
ಕೋಶಾವಸ್ಥೆಯ ಮಗು ಬೆಳೆಯುವ ಪರಿ
ಅಮೋಘ ಅದ್ಭುತ ನವನೀತ…!!!

✍️ವೇಣು ಜಾಲಿಬೆಂಚಿ
ರಾಯಚೂರು.