ಪರಿಶ್ರಮ ಹಾಕಿ ಬೆವರು ಸುರಿಸಿ 
ದುಡಿದು ಹಿಡಿದ ಕೆಲಸ ಪೂರೈಸಿ 
ಶ್ರಮಿಪ  ಶ್ರಮಿಕ ನೀನಾಗಿಹೆ ಅನಾಮಿಕ 
ನಿನಗೆ ಸಹಸ್ರ ಅಭಿನಂದನೆ ಕಾರ್ಮಿಕ 

ಹೊಟ್ಟೆಪಾಡಿಗಾಗಿ ಹಿಡಿದೆ ವೃತ್ತಿ ನಿಜ 
ಕಾಯಕವೇ ಭೂಷಣವೂ ಮನುಜನಿಗೆ 
ನಿನ್ನ ಶ್ರಮಕ್ಕೆ ಬೆಲೆ ಕಟ್ಟುವರು ಎಂದು 
ಆದರದು ನ್ಯಾಯಯುತವೇ ಯೋಚಿಸಬೇಕಿಂದು

ಬಟ್ಟೆ ಹೊಲೆವ ಗಾರೆ ಕೆಲಸದ ಅಸಂಘಟಿತ ವರ್ಗ 
ನೀಲಿ ಕಾಲರಿನ ಸುಶಿಕ್ಷಿತ ನೌಕರ ವರ್ಗ 
ಮನೆ ಕೆಲಸ ಬೀದಿ ಗುಡಿಸುವವರ ಶೋಷಿತ ವರ್ಗ 
ಯಾರಾಗಲಿ  ಒಂದೇ ಅದು ಕಾರ್ಮಿಕ ಪ್ರವರ್ಗ

ದೇಶವೊಂದು ಬೃಹತ್ ಚಲಿಸುವ ವಾಹನ 
ಪ್ರತಿಯೊಂದು ಭಾಗವೂ ಪೂರಕವಿದ್ದರೆ ಚಲನ
ಯಾವುದೊಂದು ಮುಖ್ಯ ಅಮುಖ್ಯ ಎನಿಸದು 
ಕೂಡಿ ಕೆಲಸ ಮಾಡಿದರೆ ಯಶಸ್ಸು ಸಿಗುವುದು 

ಸುಗಮವಾಗಿ ಸಾಗುತ್ತಿರೆ ದೈನಂದಿನ ಗಾಲಿ 
ಪ್ರಾಮುಖ್ಯತೆ ಅರಿವಾಗದು ಎಂದೂ ಯಾರಿಗಾಗಲಿ
ನಿಂತು ಹೋದರೆ ವ್ಯವಸ್ಥೆಯಲ್ಲಿನ ಒಂದು ಸಣ್ಣ ಭಾಗ
ತಿಳಿವರು ಅಗತ್ಯತೆಯ ಅರಿಯುವುದು ಈ ಆಡಳಿತಾಂಗ

ಏನೇ ಇರಲಿ ಎಂದೇ ಬರಲಿ ಕಾರ್ಮಿಕರಲ್ಲಿ 
ಐಕ್ಯತೆ ಚಿರಾಯುವಾಗಲಿ ಎಂದೂ ಒಗ್ಗಟ್ಟಿರಲಿ 
ಸದಾ ಸ್ವಹಿತ ಸ್ವಾರ್ಥದಲ್ಲಿ ಮುಳುಗಿರೆ ಅಧಿಕಾರಶಾಹಿ
ಕಾರ್ಮಿಕರು ಜಾಗೃತರಾಗಿರಬೇಕು ಎಂದೂ ಒಂದಾಗಿ.

ಕಾರ್ಮಿಕ ದಿನದ ಶುಭಾಶಯಗಳು

 ✍️ಸುಜಾತ ರವೀಶ್,ಮೈಸೂರು