ಭಯವಿಲ್ಲ, ಭವವಿಲ್ಲದ ರೂಹಿಲ್ಲದ ಕೇಡಿಲ್ಲದ ಅಭವಂಗೆ ಒಲಿದ ಅಕ್ಕ ಅಲೌಕಿಕ ನಿಚ್ಚಳ ಬದುಕಿನ ಶ್ರೇಷ್ಟತೆಯನ್ನು ಮತ್ತು ಅರ್ಥವಿಲ್ಲದ ಭವದ ಬದುಕಿನ ನಿಸ್ಸತ್ವವನ್ನು ಸುಂದರ ಪ್ರತಿಮೆಗಳ ಮೂಲಕ ತೋರ್ಪಡಿಸುತ್ತ ಆತ್ಮ ಸಾಂಗತ್ಯಕ್ಕಿಂತ ಪರಿಶುದ್ಧವಾದ ಸಾಂಗತ್ಯ ಮತ್ತೊಂದಿಲ್ಲ ಎಂಬುದನ್ನು ಅಕ್ಕನ ಬದುಕಿನ ಮೂಲಕ ಅರಿತಿಕೊಳ್ಳಬಹುದು ಎಂಬುದನ್ನು “ಆತ್ಮ ಸಾಂಗತ್ಯದ ನಿರ್ಭಯತೆ “ ಎಂಬ ಕವಿತೆ ಧ್ವನಿಸುತ್ತದೆ.

ಅಕ್ಕನ ಭಾವಬಸಿರಿನ ಕೂಸಾದ ಚನ್ನಮಲ್ಲ’ ಎಂಬ ಪಂಕ್ತಿಯೊಂದಿಗೆ ಆರಂಭ ವಾಗುವ ಕವಿತೆ, ಅಕ್ಕನ ಬದುಕಿನ ಪರಿಯನ್ನು ಲೌಕಿಕ ಪ್ರತಿಮೆಗ ಳೊಂದಿಗೆ ಅವಳ ಅಲೌಕಿಕ ಬದುಕಿನ ಸಾಧನೆ ಯನ್ನು ಹೇಳುತ್ತ ಸಾಗುತ್ತದೆ.

‘ಸಖನ ಅರಸುವ ಪರಿ ಕತ್ತಲೆಯಲ್ಲೂ ಕಾಂತಿ, ಬೆತ್ತಲೆ ಜಗದ ಕಣ್ಣು ತೆರೆಸುವ ಪರಿ ಹಣ್ಣಾದ ಅರಿವು’

ಈ ಸಾಲುಗಳು ಅಕ್ಕ ಜಗದ ಕಣ್ಣಲ್ಲಿ ಲೌಕಿಕ ಗಂಡನನ್ನು ಮದುವೆಯಾಗಿದ್ದರೂ ಅವಳನ್ನು ವರಿಸುವ ಸಖನೆ ಬೇರೆ. ಭವದ ಜಂಜಡದಲ್ಲೂ ಅಭವನನ್ನು ಹುಡುಕುವ, ಕತ್ತಲೆಯಲ್ಲೂ ಕಾಂತಿಯನ್ನು ಅರಸುವ, ವಿಷಯಾಸಕ್ತಿಗಳಲ್ಲಿ ಮುಳುಗಿರುವ ಜಗತ್ತಿಗೆ ಜ್ಞಾನದ ಬೆಳಕನ್ನು ತೋರಿಸುವ ಅಕ್ಕನ ಬದುಕೆ ಒಂದು ರವಿತೇಜ ದ ಪ್ರಜ್ವಲಿಪ ನಂದಾದೀಪವಿದ್ದಂತೆ. ರೂಪದಲ್ಲಿ ಹೆಣ್ಣಾದರೂ ಅದರಲ್ಲಿ ಕಾಮಾದಿ ಬಯಕೆಗಳಿ ಗೆ ಅವಕಾಶವಿಲ್ಲ.ಅದು ಬೆಳದಿಂಗಳ ಬೆಳಕು, ಅದನ್ನು ಪ್ರಾಂಜಲ ಮನಸ್ಸಿನಿಂದ ಸವಿಯ. ಬೇಕಷ್ಟೆ. ಅವಳ ಅನುಭಾವದ ಕಾಂತಿಯ ತೇಜ ಕಾನನದ ಕತ್ತಲೆಗೆ ಸಾಲು ದೀಪದಂತೆ ಪ್ರಜ್ವಲಿಸಿ ಕಲ್ಯಾಣದ ಹಾದಿ-ಬೀದಿಗಳಲ್ಲಿ ಅವಳ ಮಹತಿ, ಅವಳ ವಚನಗಳ ಉಸಿರು, ಅವಳ ಪಾವನ ಬದುಕಿನ ಶ್ರೆಷ್ಠತೆಗೆ ಉದಾಹರ ಣೆಯಾಗಿದೆ.

ಅಕ್ಕನ ಬದುಕೇ ಒಂದು ಆಗಸ. ಅವಳು ಬಯ ಸಿದ್ದು ಚನ್ನಮಲ್ಲಿಕಾರ್ಜುನನ್ನು, ಶಯನಕ್ಕೆ ಹಾಳು ದೇಗುಲವನ್ನು, ಬಯಲನ್ನು ತನ್ನ ಬದುಕನ್ನು ನಿಚ್ಚಳತೆಯ ಪ್ರತೀಕಗಳನ್ನಾಗಿ ಮಾಡಿಕೊಂಡು ಬಯಲಿನಲ್ಲೆ ಬದುಕನ್ನು ಕಟ್ಟಿಕೊಳ್ಳುವವಳು. ಅಂದರೆ ಬಯಲು ಎಂದರೆ ತಾತ್ವಿಕದ ಪ್ರಕಾರ ಎಲ್ಲವನ್ನು ತುಂಬಿ ಕೊಂಡಿರುವಂತದ್ದು. ಅದರಲ್ಲೇ ಬದುಕನ್ನು ಕಟ್ಟಿಕೊಡುವ ಆ ಮೂಲಕ ತನ್ನ ಅಂತರಂಗ ವನ್ನು ಅರಿತುಕೊಂಡು ಸದಾ ಚೈತನ್ಯದಿಂದ ಬದುಕಬೇಕಿದೆ.

ಕಾರಣಾಂತರಗಳಿಂದ ಭವದ ಬದುಕಿಗೆ ಒಲ್ಲದ ಮನಸ್ಸಿನಿಂದ ಬಂದ ಅಕ್ಕ ತನ್ನ ಪ್ರಖರ ಸಾತ್ವಿಕ ಕಾಂತಿಯಿಂದ ಕೆಡುವ, ಸಾಯುವ ಗಂಡನನ್ನು ಬಿಟ್ಟು ದಿಗಂಬರೆಯಾಗಿ, ದಿವ್ಯಾಂಬರೆಯಾಗಿ, ಕೇಶಾಂಬರೆಯಾಗಿ, ತನ್ನೊ ಳಗಿನ ವಚನಕ್ಕೆ ತಾ ಕಿವಿಯಾಗಿ ಯಾರೂ ನಡೆಯದ ಭವದ ದಾರಿ ಯಲ್ಲದ, ಅಭವದ ದಾರಿ ಹಿಡಿದು ಸಾಗುವ ಪರಿ ಆತ್ಮಸಂಗಾತಿಯನ್ನು ಹುಡುಕಿ ಸಾಗಿದ ಹಾದಿ ಅರಮನೆಯ ಲೌಕಿಕದ ಹಂಗುತೊರೆದು ಮಹಾ ಮನೆಯೆಂಬ ಅರಿವಿನರಮನೆಯನ್ನು ಸೇರಿದ್ದು ಅವಳು ವೀರವೀರಾಗಿಣಿ ಎಂಬುದಕ್ಕೆ ಸಾಕ್ಷಿ ಯೊದಗಿಸಿದೆ. ಸ್ತ್ರೀ ಅಬಲೆ, ಅವಳು ಸದಾಕಾಲ ಪುರುಷನ ಅಧೀನದಲ್ಲೆ ಇರಬೇಕಾ ದವಳು ಎಂಬ ಕಟ್ಟುಪಾಡನ್ನು ಧೈರ್ಯದಿಂದ ವಿರೋಧಿಸಿ ಪತಿತ್ವ ಮತ್ತು ಪ್ರಭುತ್ವಗಳೆರಡನ್ನು ತೊಡೆದುಹಾಕಿ ಕಾಮಾದಿ ಬಯಕೆಗಳಿಗೊಂದು ಪಾರಮಾರ್ಥಿಕ ಅರ್ಥ ನೀಡಿ,”ಒಳಗೆ ಸುಳಿವ ಆತ್ಮ ಗಂಡು ಅಲ್ಲ ಹೆಣ್ಣು ಅಲ್ಲ” ಎಂಬ ಮಾತನ್ನು ಸಾಬೀತುಪಡಿಸಿ ದವಳು ಅಕ್ಕ ಎಂಬುದನ್ನು ಕವಿತೆ ತುಂಬಾ ತಾತ್ವಿಕವಾಗಿ ನಿರೂಪಿಸುತ್ತ ಸಾಗುತ್ತದೆ.

ಬದುಕು ಅನಿಶ್ಚಿತವಾದುದು ಅದರ ಬಗೆಗೆ ಯೋಚಿಸದೆ ಆತ್ಮಬಲವನ್ನು ಹೆಚ್ಚಿಸಿಕೊಳ್ಳಲು ಬೇಕೆಂದು ಅವಳು ತನ್ನ ಸಾಕಷ್ಟು ವಚನಗಳ ಮೂಲಕ ಹೇಳಿದ್ದಾಳೆ. ಬದುಕು ನಾವು ಬಯ ಸಿದಂತೆ ಎಂದಿಗೂ ಇರುವುದಿಲ್ಲ. ಆದ್ದರಿಂದ ಬದುಕಿನಲ್ಲಿ ಬರುವ ಸ್ತುತಿ ಚಿಂತನೆಗಳನ್ನು ಲೆಕ್ಕಿಸದೆ ಸಮಾಧಾನಿಯಾಗಿರಬೇಕು. ಸದಾಕಾಲ ಲಿಂಗಾಂಗ ಪೂಜೆಯಲ್ಲಿ ತೊಡಗಿ ಸಜ್ಜನಳಾಗಿ ವೇದನೆ, ರೋಧನೆಗಳಿಲ್ಲದೆ ಬದುಕು ಸಾಗಬೇಕು. ಅದಕ್ಕೆ ಸದಾಕಾಲ ಚನ್ನಮಲ್ಲಿಕಾರ್ಜುನನಲ್ಲಿ ಲೀನವಾಗಬೇಕು. ಆಗ ಮಾತ್ರ ಪರಿಶುದ್ಧ ಹೃದಯಿಯಾಗಬಲ್ಲ. ಅಂಗದಲ್ಲಿನ ವಾಂಛೆಗಳು ದೂರವಾಗಬಲ್ಲವು. ಆಗ ಅಂಗ ಲಿಂಗ (ಅಕ್ಕ ಮತ್ತು ಚನ್ನಮಲ್ಲಿಕಾ ರ್ಜುನ) ಸಾಮರಸ್ಯ ಹೊಂದಿ ಜ್ಞಾನದ ಜ್ಯೋತಿ ಅಂಕುರಿಸಿತ್ತು. ಲೋಕ ಕಲ್ಮಷ ಕರಗಿ ಶುದ್ದ ವಾಗಿತ್ತು.

ಅಂಗಲಿಂಗ ಸಾಮರಸ್ಯ, ಭವದ ಗಂಡನನ್ನು ತೊಡೆದು. ಅಭವನಲ್ಲಿ (ಚನ್ನಮಲ್ಲಿಕಾರ್ಜುನ ನಲ್ಲಿ) ಒಂದಾಗುವ ಮಹಾದೇವಿಯಕ್ಕನ ಬದುಕಿನ ದಾರಿ ನಿಜಕ್ಕೂ ಸಾಹಸಮಯವಾ ದುದು. ಪವಿತ್ರವಾದುದು, ಪಾರಮಾರ್ಥಿಕವಾ ದುದು, ಅದನ್ನು ಭವಿಗಳಾದವರು ಅರಿತು ಕೊಂಡಾಗ ಈ ಲೋಕ ಪಕ್ವಗೊಳ್ಳುತ್ತದೆ. ಜಗತ್ತಿ ನಲ್ಲಿ ಶಾಂತಿ ನೆಲೆಸುತ್ತದೆ ಎಂಬ ಭಾವವನ್ನು ಸ್ಪುರಿಸುವ ಅಕ್ಕನ ಕುರಿತಾದ “ಆತ್ಮ ಸಾಂಗತ್ಯ ದ ನಿರ್ಭಯತೆ” ಎಂಬ ಅತ್ಯಂತ ಅರ್ಥ- ಪೂರ್ಣ ಮತ್ತು ಭಾವಪೂರ್ಣ ಕವಿತೆಯನ್ನು ರಚಿಸಿರುವ ಕವಯಿತ್ರಿ ಡಾ.ಮೈತ್ರಾಯಿನಿ ಗದಿಗೆಪ್ಪಗೌಡರ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

✍️ ಶ್ರೀ ಸುರೇಶ ಮುದ್ದಾರ. 
ಅರಭಾವಿ