ಮಿನುಗು ಕಣ್ಣಿಂಚಿನಲಿ ಬಿಡಾರ ಹೂಡಿದ
ತಾರೆಗಳ ಲೋಕದ ಇಂದ್ರನೊಮ್ಮೆ
ಬರಿಗಾಲಿನ ಹುಡುಗಿಯ
ಸ್ವಪ್ನದಲಿ ಮೂಡಿ ಬಂದ
ದಾಳಿ ಇಟ್ಟಂತೆ ಹೂ ಮಳೆಗಳ ಕಾನು,
ಹೊಳೆವ ನವರತ್ನಗಳ ನಡುವಿನಿಂದಲೇ
ತೋಳು ತೆರೆದು ಬಾ ಎಂದ
ಎದುರುನಿಂತ ದೊರೆಗೆ
ನೆವ ಹೇಳಲು ಮಾತು ಸಾಲಲಿಲ್ಲ
ತಬ್ಬಿ ಕೂತಳು ಕ್ಷಣ ಮಾತ್ರದಲಿ
ಕನಸಿನ ಪಲ್ಲಕ್ಕಿಯ ಬಾಹುಗಳ
ಬಿರಿದ ಆಸೆಗಳ ತೋರಣ ಕಟ್ಟಿ
ವಧುವಾದಳು
ಲಕ್ಷದೀಪಗಳ ಲಜ್ಜೆಗೆನ್ನೆಗೆ ಹಚ್ಚಿ ಕೆಂಪಾದಳು
ಹೊತ್ತು ತಂದವನ ಸುಳಿವಿಲ್ಲ
“ದೊರೆ ಎಲ್ಲಿ “ ಅರಸಿ ಸೋತವು
ನಾಚಿಕೆಯ ಬಣ್ಣ ಹಚ್ಚಿಕೊಂಡ ಬೆರಳುಗಳು
ಇವಳ ಮರುಳು ಕಂಡ ಚಿಟ್ಟೆಗಳು
ಸುಮ್ಮನೆ ನಕ್ಕು ಹಾರಿದವು
ಕಾಲ ಹೆಬ್ಬೆರಳಿನಲಿ ಹರಿದಾಡಿತು ದಿಗಿಲಿನ
ಹುಡುಕಾಟ, ಹೊಯ್ದಾಡ ತೊಡಗಿತು
ಆತಂಕದ ಬಾಸಿಂಗ.
ಸಂಭ್ರಮದ ಸದ್ದು ದೂರಾಗತೊಡಗಿತು
ಮನಗೆದ್ದವನು ಮನಗಾಣಲಿಲ್ಲ
ಕತ್ತಲಾವರಿಸಿ ಮೈ ಸುಟ್ಟು ಕೊಳ್ಳತೊಡಗಿತು ಬೆಳಕು
“ಬರಬಾರದೇನು ಒಮ್ಮೆ”
ನಿರೀಕ್ಷೆಗಳ ಆದ್ರ ನುಡಿ
ನಿಟ್ಟುಸಿರುಗಳ ದಿಬ್ಬಣದ
ನಡುವಿನಿಂದ
ಕಿವಿಯಿಲ್ಲದ ದೊರೆಗೆ
ಯುಗಾಬ್ಧಗಳ ನಂತರ
ಮಧುವಿನರಮನೆಯ ಮತ್ತಿನಲಿ ಕೊನೆಗೂ
ನುಡಿದೇ ಬಿಟ್ಟ
“ನಿನ್ನ ಕನಸಿಗೂ ನನ್ನ ವಾಸ್ತವಕ್ಕೂ ಮೈಲಿಗಟ್ಟಲೆ ದೂರವೇ ಹುಡುಗಿ”

✍️ದೀಪ್ತಿ ಭದ್ರಾವತಿ