ಶಾಯಿಯುಂಡು ಲೇಖನಿ ಕಕ್ಕುತಿದೆ
ಬಣ್ಣದ ಚಿತ್ತಾರ ಮೂಡಿಸಿ
ನೀನು ಬರುವ ನಿರೀಕ್ಷೆ ಹೊತ್ತು
ಕಣ್ಣು ಹಾತೊರೆದು ಕಾಯುತ್ತಿದೆ
ತನ್ನ ತೆಕ್ಕೆಯೊಳಗೆ ಬಂಧಿಸಲು

ಎದೆಯಲುಕ್ಕಿದ ಭಾವಗಳು ಬಸಿರಾಗಿ
ಕಾವ್ಯದ ಪ್ರಸವಕ್ಕೆ ಅಣಿಯಾಗಿ
ಶಿಶುವಿನ ಜನನವಾಗಿದೆ ಬಿಳಿಹಾಳೆಯ ಮೇಲೆ

ಕಲ್ಪನೆಯ ಬಾನಿನಲ್ಲಿ
ಭ್ರಮಿಸುತ ತೇಲುತ್ತಿರುವೆ
ತಾರಾಮಂಡಲದಲ್ಲಿ ನಿನಗಾಗಿ
ಕಣ್ಣರಳಿಸಿ ಹುಡುಕುತ್ತಿರುವೆ

ನೋಡು ಗೆಳೆಯ
ಹೂತ ಶಾಸನಗಳಲ್ಲಿ
ಪ್ರೀತಿಯ ಕುರುಹುಗಳಿವೆ
ಚರಿತ್ರೆಯ ಪುಟಗಳಲ್ಲಿ ಅಮರ ಪ್ರೇಮಿಗಳ ಉಸಿರಿದೆ

ಹೇಳು ಸಖ
ಒಲವನು ತ್ಯಾಗ ಮಾಡಿ
ಇತಿಹಾಸವಾಗುವೆಯಾ
ಅನುರಾಗವನು ಅಪ್ಪಿ ಒಪ್ಪಿ
ವರ್ತಮಾನದಲ್ಲಿ ಜೀವಿಸುವೆಯಾ

ನೆನಪುಗಳು ದಹಿಸುವ ಅಗ್ನಿಯಂತೆ
ಹೃದಯವನ್ನು ಸುಟ್ಟು ಕಿಟ್ಟ ಕಾರುವ ಮುನ್ನ
ಕನಸುಗಳನ್ನು ನೇತುಹಾಕಿ
ಮನಸು ಖಾಲಿ ಕೊಡುವಾಗುವ ಮುನ್ನ
ನನಸು ಮಾಡಲು ಬರುವೆಯಾ
ಅನುರಾಗದ ಕೂಸನೆತ್ತಿ ಆಡಿಸಲು
ನನಗಾಗಿ ನಿನಗಾಗಿ

ಮನಸ್ಸಿನ ಕಲಾಪಗಳು ಕೇಳದಂತೆ
ಕರ್ಣ ಕೊಳಗಳ ಮುಚ್ಚಿರುವೆಯಾ
ನಿನ್ನೆಲ್ಲ ಆಶಯಗಳನ್ನು ಖಾಲಿ ಗೂಟಕೆ ಕಟ್ಟಿ
ವಿರಹ ತ್ಯಾಗದ ಜೋಳಿಗೆ ಧರಿಸಿ ಹೊರಟೆಯಾ

ಹೇಳು ಪ್ರಿಯ
ಮರುಗಟ್ಟಿದ ದುಃಖದಲ್ಲಿ
ಮೌನದ ಮದಿರೆಯ ಕುಡಿದು
ಹೃದಯ ಕಲ್ಲಾಗಿಸಿ ಕೂತೆಯಾ
ನಾನೇನು ಅಮರಶಿಲ್ಪಿಯಲ್ಲ
ಪ್ರೇಮದ ಶಾಲೆಯಲ್ಲಿ ಪಾಠ ಕಲಿತವಳಲ್ಲ
ನಿನ್ನನ್ನು ಶಿಲೆಯಾಗಿಸಿ ಪ್ರೇಮನಿವೇದನೆ ಮಾಡಲು

ನಾನೊಬ್ಬಳು ಅರಿಷಡ್ವರ್ಗಗಳಿಂದ
ಕೂಡಿದ ಹುಲುಮಾನವಳು
ನಿನ್ನಂತೆಯೆ ನನ್ನಲ್ಲೂ ಸಿಡುಕು ಬಿಗುಮಾನಗಳಿವೆ
ಯೋಚಿಸು ನಲ್ಲ
ಅವೆಲ್ಲವನ್ನು ಮೂಟೆಕಟ್ಟಿ ಬದಿಗಿರಿಸಿರುವೆ
ಅಸಹಾಯಕಳಾಗಿ ಅಲ್ಲ
ಪ್ರೇಮ ಪೂಜಾರಿಣಿಯಾಗಿ
ನಿನ್ನೊಲವಿನ ಆರಾಧಕಳಾಗಿ

ಬೇಗ ಬಾ ದೊರೆ
ನಿನಗಾಗಿ ಈ ಅರಸಿಯ
ಹೃದಯ ಅಣಿಯಾಗಿದೆ
ಎದೆಯ ಮೇಲೊತ್ತು ಜೀವಮಾನವೆಲ್ಲ
ಪ್ರೇಮೋತ್ಸವ ಮಾಡು
ಎದುರಾದ ದುರಿತಗಳ ಕಗ್ಗಂಟು ಬಿಡಿಸಿ
ನಲುಮೆಯ ತಿಳಿಗೊಳದಲ್ಲಿ ಸಂತಸದಲಿ ಈಜಿಸು

✍️ಅನುಸೂಯ ಯತೀಶ್ 
ಬೆಂಗಳೂರು