ನಾನೀಗ ಸತ್ಯವನು ಹೇಳುವ ನಾಲಿಗೆಯೊಂದರ ಮಹತ್ತರವಾದ ಹುಡುಕಾಟದಲಿದ್ದೇನೆ
ಸತ್ಯ ಹೇಳಿಯೂ ಸೀಳಿ ಹೋಗದಿರುವ ನಾಲಿಗೆಯೊಂದರ ಮಹತ್ತರವಾದ ಹುಡುಕಾಟದಲಿದ್ದೇನೆ

ಕಥೆ ಕಟ್ಟಿದ ನಾಲಿಗೆ ಕಥೆ ಹೇಳಿದ ನಾಲಿಗೆ ಚಿತ್ರ ವಿಚಿತ್ರ ನುಡಿದು ನಗೆಪಾಟಲಿಗೀಡಾದ ನಾಲಿಗೆ
ಮೊಟ್ಟ ಮೊದಲಿಗೆ ಕೋಮುದಳ್ಳುರಿ ಹಚ್ಚಿರುವ ನಾಲಿಗೆಯೊಂದರ ಮಹತ್ತರವಾದ ಹುಡುಕಾಟದಲಿದ್ದೇನೆ

ಬಹುಶಃ ಎಲುಬಿಲ್ಲದ ನಾಲಿಗೆ ಎಂಬ ಮಾತಿನ ಚಲಾವಣೆಯ ಹಿಂದೆ ಇದರದೇ ಹಿಕಮತ್ತಿರಬೇಕು
ಖಬರಿಲ್ಲದೆ ಆಡಿಸಿ ನೋಡಿಸಿ ತಮಾಷೆಗೆ ಬೀಳಿಸಿರುವ ನಾಲಿಗೆಯೊಂದರ ಮಹತ್ತರವಾದ ಹುಡುಕಾಟದಲಿದ್ದೇನೆ

ಇದ್ದಕಿದ್ದಂತೆ ಹಳೆ ರಾಮಾಯಣವನೇ ಹೊಸ ರಾಮಾಯಣದಂತೆ ಶುರು ಮಾಡುವ ಹುನ್ನಾರ
ಅದೆಷ್ಟೋ ಮುಗ್ಧ ಜೀವಗಳ ಬಲಿ ಪಡೆದಿರುವ ನಾಲಿಗೆಯೊಂದರ ಮಹತ್ತರವಾದ ಹುಡುಕಾಟದಲಿದ್ದೇನೆ

ಜಾಲಿ ನಾನು ಸತ್ಯವಂತ ಸತ್ಯವಂತ ಎಂದು ಹೇಳಿಕೊಂಡೇ ಅಸತ್ಯದ ಬಂಗಲೆಯಲಿ ನೂಕಿ ಅಂಧಭಕ್ತನ
ಮಾಡಿ ಕಪ್ಪೆಯಂತೆ ವಟವಟಗುಡುವ ನಾಲಿಗೆಯೊಂದರ ಮಹತ್ತರವಾದ ಹುಡುಕಾಟದಲಿದ್ದೇನೆ

✍️ ವೇಣು ಜಾಲಿಬೆಂಚಿ
ರಾಯಚೂರು.