ನೀವು ಟೀಚರ್ರಾ…?
ಎಂದಿತು ಪಕ್ಕದ ದನಿ..
ಹೌದು ಎನ್ನುವ ಮೊದಲು
ಮುಖ ನೋಡಬೇಕೆನ್ನಿಸಿತು..

ಕಣ್ಣುಗಳಲ್ಲಿ ಖಚಿತತೆಯಿತ್ತು;
ತನ್ನ ಊಹೆ ಸರಿಯಾಗಿದೆ
ಎಂದು ಮಾಸ್ಕಿನೊಳಗಿನ
ಮುಗುಳುನಗೆ ಬೀಗುತ್ತಿತ್ತು!
ಜೋಡಿ ಕಾಮನಬಿಲ್ಲು
ಮೇಲೆ ಜಿಗಿದು
ಅವಳ ಹದಿಹರೆಯದ
ಸೌಂದರ್ಯ ಇಮ್ಮಡಿಸಿದ್ದನ್ನು
ಮುಸುಕಿನ ಮರೆಯಲ್ಲೂ
ವೇದ್ಯವಾಗಿಸಿದವು!

ಕ್ಷಣಕಾಲ ಮೌನ..
ಪಕ್ಕದ ಮನದಲ್ಲಿ
ಏನೇನು ನಡೆದಿತ್ತೋ…
ನನ್ನ ಮನಸು ಜೋಕಾಲಿ..
ಒಮ್ಮೆ ಹೆಮ್ಮೆಯೆಡೆಗೆ
ಒಮ್ಮೆ ಕುತೂಹಲದೆಡೆಗೆ
ಜೀಕುತ್ತಿತ್ತು…

ಸಿಟಿ ಬಸ್ಸು ಕೂಡ
ಅವಸರವಿಲ್ಲದೆ
ಎಪ್ಪತ್ತರ ದಶಕದ
ಹಾಡಿನಂತೆ ಸಾಗುತ್ತಿತ್ತು!
ಮೆಲ್ಲುಸಿರೇ ಸಾವಿಗಾನ…

ಹೀಗೇ ಹಲವರು
ಹಿಂದೆ ಕೇಳಿದ್ದರು..!
ಪ್ರಶ್ನೆಯೊಂದು ಎದ್ದಿತು
ಈ ಬಾರಿ ಕೇಳಿಬಿಡಬೇಕು
ಅದು ಹೇಗೆ ಹೇಳುತ್ತಾರೆ?!
ಟೀಚರ್ ಎನ್ನಲು
ವಿಶೇಷ ಲಕ್ಷಣಗಳೇನಾದರೂ
ಇರುತ್ತವೆಯೇ?!

ತಡಮಾಡದೇ ಕೇಳಿದೆ
ಇಲ್ಲವಾದರೆ
ಅವಳ ಸ್ಟಾಪ್ ಬಂದೀತು!
ಅವಳೆಡೆಗೆ ತಿರುಗಿ,
ಕಣ್ಣಲ್ಲಿ ಕಣ್ಣಿಟ್ಟು.
ಮಾಸ್ಕ್ ನ ಹಿಂದಿನ
ದನಿಯನ್ನೆಲ್ಲಾ
ಪ್ರಶ್ನೆಯಾಗಿಸಿ.

ಮೊದಲ ಉತ್ತರ ನಗು
ಆದರೆ ನನ್ನದು
ವಿವರಣೆ ಬಯಸುವ ಪ್ರಶ್ನೆ..
ಕಾಟನ್ ಸೀರೆ;
ಸೀರೆಯುಟ್ಟ ರೀತಿ
ಅಚ್ಚುಕಟ್ಟು ನೆರಿಗೆ,
ತೊಟ್ಟ ವಾಚು,
ಕನ್ನಡಕ!

ಇದು ಅವಳ
ಟೀಚರ್ ಮಾನದಂಡ!
ಮುದಗೊಂಡಿತು ಮನ
ನಾನೂ ಹಾಗೇ
ಕಾಣಿಸ್ತೀನಾ..
ಮತ್ತೆ ಮತ್ತೆ
ಪುಳಕ!

   ✍️ ಸೌಮ್ಯ ದಯಾನಂದ
ಡಾವಣಗೆರೆ