ಹೃದಯ ಕಾಗದದ ದೋಣಿ ತೇಲಿ ಬಿಟ್ಟರೆ ಹೋಗುವುದು ಆ ಓಣಿ ಈ ಓಣಿ
ಮನ ಮಾಯಾಕುದುರಿ ಬಿಚ್ಚಿ ಬಿಟ್ಟರೆ ಓಡುವುದು ಆ ಓಣಿ ಈ ಓಣಿ

ಚಂಚಲವೀ ಸುಂದರ ನದಿ ಹರಿಯುವುದು ಗಿರಿಕಂದರಗಳ ನಡುವೆ
ಕೂಡುವ ಕಡಲಿದ್ದರೂ ಮರೆತು ಮನೆ ತಿರುಗುವುದು ಆ ಓಣಿ ಈ ಓಣಿ

ಮಾರುತ ಮಲಯವಾದರೂ ಹೊಮ್ಮುವುದು ಒಮ್ಮೊಮ್ಮೆ ಗಡಸು ಧ್ವನಿ
ಬೀಸುವ ರಬಸಕ್ಕೆ ದಿಕ್ಕಾಪಾಲು ಬದುಕು ಸೇರುವುದು ಆ ಓಣಿ ಈ ಓಣಿ

ಸಿರಿ ಸಂಪತ್ತುಗಳ ಬಗ್ಗೆ ಬಡಿದಾಡಿದರೂ ಯೋಚಿಸಬೇಕು ನೂರು ಬಾರಿ
ಶಾಶ್ವತವಲ್ಲ ಈ ಭೂಮಿ ಗುರಿಗೂ ಆತ್ಮ ಅಲೆಯುವುದು ಆ ಓಣಿ ಈ ಓಣಿ

ಬರುವ ಮೊದಲೇ ಸದಾ ಇಲ್ಲೇ ಇರುವ ಬಗ್ಗೆ ಮಾತಾಡುವೆಯಲ್ಲ ಪೀರ್
ಮಾವುತನ ಅಂಕುಶಕ್ಕೆ ಮಣಿಯದ ಮದಗಜ ಸಾಗುವುದು ಆ ಓಣಿ ಈ ಓಣಿ

✍️ಅಶ್ಫಾಕ್ ಪೀರಜಾದೆ