ನಾಡಿನ ದೇವಾಲಯಗಳ ಪರಂಪರೆಯಲ್ಲಿ ವಿವಿಧ ರಾಜರ ಅವಧಿಯಲ್ಲಿ ಶೈವ ಹಾಗು ವೈಷ್ಣವ ದೇವಾಲಯಗಳು ನಿರ್ಮಾಣವಾಗಿ ದ್ದು ಹೊಯ್ಸಳ ಹಾಗು ನಂತರ ಕಾಲಘಟ್ಟದಲ್ಲಿ ವಿವಿಧ ವೈಷ್ಣವ ದೇವಾಲಯಗಳು ಕರ್ನಾಟಕ ದಲ್ಲಿ ಅದರಲ್ಲೂ ದಕ್ಷಿಣ ಕರ್ನಾಟಕದಲ್ಲಿ ನೋಡ ಬಹುದು. ಅವುಗಳಲ್ಲಿ ಪ್ರಮುಖವಾಗಿ ಕಾಣುವ ದೇವಾಲಯ ಮೇಲುಕೋಟೆಯ ದೇವಾಲಯ ಗಳು. ದಕ್ಷಿಣ ಭಾರತದ 108 ಕ್ಷೇತ್ರಗಳಲ್ಲಿ ಇದು ಒಂದು.

ಇತಿಹಾಸ ಪುಟದಲ್ಲಿ ಪ್ರಮುಖವಾಗಿ ಕಾಣಿಸಿ ಕೊಂಡಿದ್ದ ಪುರಾಣದಲ್ಲಿ ನಾರಾಯಾಣಾದ್ರಿ, ವೇದಾದ್ರಿ,ಯಾದವಾದ್ರಿ ಎಂದೇ ಕರೆಯಲಾಗಿ ದ್ದು ಶಾಸನಗಳಲ್ಲಿ ಯದುಗಿರಿ,ತಿರುನಾರಾಯ ಣಪುರ,ಬದರಿಕಾಶ್ರಮ, ಮೇಲುಗೋಟೆ ಎಂದೇ ಕರೆಯಲಾಗಿದೆ. ಇನ್ನು ವಿಜಯನಗರ ಕಾಲದ ಶಾಸನಗಳಲ್ಲಿ ಘಟಿಕಸ್ಥಾನ ಮೇಲು ಕೋಟೆ ಎಂದೇ ಕರಯಲಾಗಿದೆ. ಹೊಯ್ಸಳರ ಕಾಲದಲ್ಲಿ ಪ್ರಮುಖವಾಗಿ ಕಾಣಿಸಿಕೊಂಡ ಇದು ನಂತರ ಮೈಸೂರು ಅರಸರ ಕಾಲದ ವರೆಗೂ ವೈಭವದಿಂದ ಮೆರೆದಿತ್ತು. ಇದರ ವೈಭವತೆಗೆ ಇಲ್ಲಿ ಸಿಕ್ಕ ಸುಮಾರು 100 ಶಾಸನ ಗಳೇ ಸಾಕ್ಷಿ.  ಕ್ರಿ.ಶ 1117 ರ ಶಾಸನದಲ್ಲಿ ಇಲ್ಲಿ ದತ್ತಿ ನೀಡಿದ ಉಲ್ಲೇಖವಿದ್ದರೆ 1219 ರ ಶಾಸನದಲ್ಲಿ ಮೇಲು ಕೋಟೆಯ ಉಲ್ಲೇಖವೇ ಇದೆ. ಇನ್ನು ಇಲ್ಲಿನ ಗವಿಗಳು ಇನ್ನು ಪುರಾತನ ಕಾಲಕ್ಕೆ ಕರೆದು ಕೊಂಡೂ ಹೋಗುತ್ತೆ. ಇಲ್ಲಿನ ಕೋಟೆಯಿಂದಲೇ ಮೇಲುಕೋಟೆ ಎಂಬ ಹೆಸರು ಬಂದಿದೆ. 

ಚೆಲುವನಾರಾಯಣ ದೇವಾಲಯ 

ಹೊಯ್ಸಳದಲ್ಲಿ ಕಾಲದಲ್ಲಿ ನಿರ್ಮಾಣಗೊಂಡು ವಿಜಯನಗರ, ಮೈಸೂರು ಹಾಗು ಪಾಳೇಗಾರ ರ ಕಾಲದಲ್ಲಿ ವಿಸ್ತರಣೆಗೊಂಡ ಈ ದೇವಾಲ ಯ ಗರ್ಭಗುಡಿ, ಅಂತರಾಳ, ನವರಂಗ, ಮುಖ ಮಂಟಪ ಹಾಗು ಪಾತಾಳಂಕಣವನ್ನು ಹೊಂದಿ ದೆ. ಗರ್ಭಗುಡಿಯಲ್ಲಿ ಸುಮಾರು ಆರು ಅಡಿ ಎತ್ತರದ ಚೆಲುವನಾರಾಯಣನ ಶಿಲ್ಪವಿದ್ದು ಚಕ್ರ, ಶಂಖ, ಗಧಾ ಹಾಗು ಅಭಯಹಸ್ತಧಾರಿ ಯಾಗಿ ದ್ದಾನೆ.ಗರ್ಭಗುಡಿಗೆ ಸಿಂಹ ಪ್ರನಾಳ ವಿದೆ. ಶಾಸನ ಗಳಲ್ಲಿ ನಾರಾಯಣ ದೇವರು, ತಿರುನಾರಾಯಣ ಸಂಪತ್ಕುಮಾರ ನಾರಾಯ ಣ,ಶೆಲ್ವಪಿಳ್ಳೈ ರಾಯ, ಚೆಲುವನಾರಾಯಣ ಎಂದೇ ಉಲ್ಲೇಖವಾಗಿದೆ. 

ಇನ್ನು ನವರಂಗದಲ್ಲಿ ಸುಮಾರು 36 ಕಂಬಗ ಳಿದ್ದು 25 ಅಂಕಣದಷ್ಟು ವಿಶಾಲವಾಗಿದೆ. ನವ ರಂಗದಲ್ಲಿ ಉತ್ಸವ ಮೂರ್ತಿ ಇರಿಸಲಾಗಿದ್ದು ಮೂರು ಪ್ರವೇಶದ್ವಾರವನ್ನು ಹೊಂದಿದೆ. ಇದಕ್ಕೆ ಹೊಂದಿಕೊಂಡಂತೆ ಮುಖಮಂಟಪ ವಿದೆ.  ದೇವಾಲಯಕ್ಕೆ ವಿಶಾಲವಾದ ಪ್ರಾಕಾರ ವಿದ್ದು ಇಲ್ಲಿ ಅಳ್ವಾರರು ಹಾಗು ಶ್ರೀಲಕ್ಷ್ಮೀಯ ಸನ್ನಿದಿ ಯಿದೆ. ಇಲ್ಲಿನ ಮಂಟಪದಲ್ಲಿನ ಶಿಲ್ಪಗಳು ಅತ್ಯಂತ ಸುಂದರವಾಗಿದೆ. ಇಲ್ಲಿ ವಿಷ್ಣುವಿಗೆ ಸಂಬಂಧಿಸಿದ ಹಲವು ಶಿಲ್ಪಗಳು, ರಾಮಾಯಣ, ಮಹಾಭಾರತದ ಕಥನ ಶಿಲ್ಪ ಗಳು ಗಮನ ಸೆಳೆಯುತ್ತದೆ. ದೇವಾಲಯದ ಮುಂದೆ ಗರುಡ ಗಂಭವಿದೆ. 

ಇಲ್ಲಿ ಸುಮಾರು 30 ಕೊಳಗಳಿದ್ದು ಬಹುತೇಕ ವಿಜಯನಗರ ಹಾಗು ಮೈಸೂರು ಕಾಲದಲ್ಲಿ ನಿರ್ಮಾಣವಾದಂತಹವು.ಇಲ್ಲಿನ ವಿಶಾಲವಾದ ಪಂಚಕಲ್ಯಾಣಿ ಹಾಗು ಭುವನೇಶ್ವರಿ ಮಂಟಪ ಅತ್ಯಂತ ಕಲಾತ್ಮಕವಾಗಿದೆ. ಸುಮಾರು 1817 ರಲ್ಲಿ ಮೈಸೂರು ಮುಮ್ಮುಡಿ ಅರಸರ ಕಾಲ ದಲ್ಲಿ ನಿರ್ಮಾಣವಾದ ಇಲ್ಲಿ ಹದಿನಾರು ಕಂಭ ಗಳಿದ್ದು ಇಲ್ಲಿನ ರಾಮಾಯಣ, ಮಹಾಭಾರತ ಹಾಗು ದಶಾವತಾರ ಕಥಾನಕಗಳ ಕೆತ್ತೆನೆ ಗಮನ ಸೆಳೆಯುತ್ತದೆ. ಕಲ್ಯಾಣಿಗೆ ಹೊಂದಿ ಕೊಂಡಂತೆ ವಿಜಯನಗರ ಕಾಲದ ವೆಂಕಟ ರಮಣ ದೇವಾಲಯ ಇದೆ.

ಚೆಲುವನಾರಾಯಣಸ್ವಾಮಿಗೆ ಮೀನಮಾಸದ ಹಸ್ತ ನಕ್ಷತ್ರದಲ್ಲಿ ನಡೆಯುವ ವೈರಮುಡಿ ಉತ್ಸವ ಅತ್ಯಂತ ಸುಂದರ ವೈಭವಯುತವಾ ದದ್ದು. ರಾತ್ರಿಯಿಂದ ಬೆಳಿಗ್ಗೆಯವರೆಗೆ ನಡೆ ಯುವ ಈ ಉತ್ಸವದಲ್ಲಿ ರತ್ನಖಚಿತ ಕಿರೀಟ ಧಾರಿಯಾದ ಸ್ವಾಮಿಯನ್ನು ನೋಡುವುದೇ ಅದ್ಭುತ. ಇನ್ನು ಶ್ರೀರಾಮಾನಾಜಾಚಾರ್ಯ ಜಯಂತಿಯ ಸಹ ಅಷ್ಟೇ ವೈಭವದಿಂದ ನಡೆಯಲಿದೆ.

ಸ್ಥಳೀಯ ಪುರಾಣದಂತೆ ಇಲ್ಲಿನ ಮೂರ್ತಿಯ ನ್ನು ಸನತ್ಕುಮಾರ ಕೃತಯುಗದಲ್ಲಿ, ರಾಮ ತ್ರೇತ್ರಾ ಯುಗದಲ್ಲಿ ಹಾಗು ಬಲರಾಮ ಮತ್ತು ಕೃಷ್ಣ ದ್ವಾಪರ ಯುಗದಲ್ಲಿ ಅರಾಧಿಸಿದರು ಎಂಬ ನಂಬಿಕೆ ಇದೆ. ಅಚಾರ್ಯ ರಾಮಾನುಜ ರಿಗೆ ಕನಸಿನಲ್ಲಿ ಕಾಣಿಸಿದ ಮೂರ್ತಿ ಯನ್ನು ಇಲ್ಲಿ ಹುಡುಕಿ ವಿಷ್ಣುವರ್ಧನನ ಸಹಾಯ ದಿಂದ ಸ್ಥಾಪಿಸಿದರು ಎನ್ನಲಾಗಿದೆ. ಇನ್ನು ಉತ್ಸವ ಮೂರ್ತಿ ದಿಲ್ಲಿಯ ಬಾದಷಹನ ಬಳಿ ಇದೆ ಎಂದು ತಿಳಿದ ಅವರು ಅಲ್ಲಿಗೆ ತೆರಳಿ ಅದನ್ನು ತರುವಲ್ಲಿ ಯಶಸನ್ನು ಸಾಧಿಸಿದರು ಎನ್ನಲಾಗಿದೆ.

ಯೋಗ ನರಸಿಂಹ ದೇವಾಲಯ 

ಬೆಟ್ಟದ ಮೇಲೆ ಇರುವ ಈ ದೇವಾಲಯ ತಲು ಪಲು ಸುಮಾರು 350 ಮೆಟ್ಟಿಲು ಹತ್ತಬೇಕಾ ಗಿದ್ದು ವಿಜಯನಗರ ಕಾಲದ ಈ ದೇವಾಲಯ ಗರ್ಭಗುಡಿ, ಸುಖನಾಸಿ, ನವರಂಗ, ಪ್ರದಕ್ಷಿಣಾ ಪಥ ಹೊಂದಿದೆ.  ದೇವಾಲಯದ ಗರ್ಭಗುಡಿ ಯಲ್ಲಿ ಹೊಯ್ಸಳರ ಕಾಲದ ಯೋಗ ನರಸಿಂಹ ಶಿಲ್ಪವಿದೆ. ಯೋಗ ಭಂಗಿಯಲ್ಲಿ ಇರುವ ಶಿಲ್ಪದ ಮೇಲಿನ ಕೈಗಳಲಿ ಚಕ್ರ ಹಾಗು ಶಂಖ ಇದ್ದರೆ ಉಳಿದ ಎರಡು ಕೈಗಳು ಯೋಗ ಭಂಗಿಯ ಲ್ಲಿದೆ. ದೇವಾಲಯಕ್ಕೆ 1528, 1727 ಹಾಗು 1842 ರಲ್ಲಿ ದತ್ತಿ ನೀಡಿದ ಉಲ್ಲೇಖ ಗಳು ಸಿಗುತ್ತದೆ. ವೈಶಾಖ ಮಾಸದ ನರಸಿಂಹ ಜಯಂತಿಯಲ್ಲಿ ಇಲ್ಲಿ ವಿಷೇಶ ಪೂಜೆಗಳು ನಡೆಯುತ್ತದೆ.   

ತಲುಪುವ ಬಗ್ಗೆ : ಮೇಲುಕೋಟೆಯು ಪಾಂಡವಪುರದಿಂದ ಸುಮಾರು 30 ಕಿ. ಮೀ ಹಾಗು ಮಂಡ್ಯದಿಂದ ಸುಮಾರು 39 ಕಿ ಮೀ ದೂರದಲ್ಲಿದೆ. 

✍️ಶ್ರೀನಿವಾಸ ಮೂರ್ತಿ ಎನ್.ಎಸ್.
ಬೆಂಗಳೂರು