ಯಕ್ಷಲೋಕದ ಕಿನ್ನರಿಯ
ಕನಸಿನ ತುಂಡಿನಿಂದ
ರೂಪುತಳೆದ
ಸುಂದರಿಯ ಕವಿತೆ
ಕರೆದೊಯ್ದಿತ್ತು
ಬೇರೆಯದೇ ಲೋಕಕ್ಕೆ!

ಬಸ್ಸಿಗಾಗಿ
ಮುಕ್ಕಾಲು ಗಂಟೆಯಿಂದ
ಕಾಯುತ್ತಾ ಕಾಯುತ್ತಾ
ಕವಿತೆಯಲ್ಲಿ
ಮುಳುಗಿದ್ದೆನೋ
ತೇಲುತ್ತಿದ್ದೆನೋ
ಹೇಳುವವರಾರು..?!

ಬಸ್ಸು ಬಂದಿತು
ನಿಂತಿತು ಹೋಯಿತು..!
ನೋಡುತ್ತಲೇ ಇದ್ದೆ!
ಕಿನ್ನರ ಲೋಕದ
ಪುಷ್ಪಕ ವಿಮಾನಕ್ಕೆ
ಬಹುಶಃ ರೆಕ್ಕೆಯಿಲ್ಲವೇನೋ..!
ಪುಟಿದು ಹಾರುವ
ಗಾಲಿಗಳಿವೆ!

ಸುಂದರಿಯ ಕಾವಲಿಗಿಬ್ಬರು!
ಸಮವಸ್ತ್ರಧಾರಿಗಳು!
ಸಖಸಖಿಯರೂ
ಅವಳೊಂದಿಗೆ ಸಂಗಾತಕ್ಕೆ!
ಹೊಳೆಯುವ
ಬೆಳಕಿನ ಅಕ್ಷರಗಳು
ಸ್ವರ್ಗಕ್ಕೆ ದಾರಿ ತೋರಿವೆ!!
ಸುಂದರಿಯ ಸುಳಿವಿಲ್ಲವಲ್ಲ?!

ಹಸಿರು ಬಣ್ಣದ
ಹಳದಿ ಗೆರೆಗಳ
ಈ ಮಾದರಿಯನ್ನೇ
ಭೂಲೋಕದ
ಸಿಟಿ ಬಸ್ಸಿಗೂ ಬಳಸಿದ್ದಾರೆ!!
ಮತ್ತು ಅದೇ ಅಂಕಿ…
೧೦೧.., ೧೦೮.! ಇತ್ಯಾದಿ
ನೂರೊಂದು ನೆನಪು!
ನೂರೆಂಟು ಸಮಸ್ಯೆ!

ಓಡಿ ಬಂದರೂ
ಮಿಸ್ಸಾದ ಬಸ್ಸಿಗೆ
ತನ್ನನ್ನೇ ಹಳಿದುಕೊಂಡ ಯುವಕ
ನನ್ನನ್ನೂ
ಭೂಲೋಕಕ್ಕೆ ಎಳೆದುಕೊಂಡ!
ಯಕ್ಷ ಲೋಕದಿಂದ
ವಾಸ್ತವಕ್ಕೆ ಧುಮುಕಿದ್ದೆ!!

ನಾನೂ ಅವನಿಗೆ
ಜೋಡಿಯಾಗಿದ್ದೆ!
ಹಳಿಯಲೋ; ಹೊಗಳಲೋ?!!
ಕವಿತೆಯನ್ನೋ..!?
ಬಸ್ಸನ್ನೋ..!? -

✍️ಸೌಮ್ಯ ದಯಾನಂದ
ಡಾವಣಗೆರೆ