ಎಲೆಯುದುರಿದ ಕಳಾಹೀನ ಮರಗಿಡಗಳಿಗೆ
ಋತುಗಳ ರಾಜ ವಸಂತನ ನವಿರು ಸ್ಪರ್ಶದಿ
ಚಿಗುರು ಮೂಡಿ ಜೀವಕಳೆ ಮಿನುಗುವ ದಿನ.!
ಯುಗಯುಗದಿಂದ ಜಗ ಝಗಮಗಿಸಿದ ದಿನ.!

ಮಾಮರದ ತಳಿರ ಮೆಲ್ಲನೆ ಮೆಲ್ಲುತ ಕೋಕಿಲ
ಮಧುರ ಇಂಚರದಿ ವಸಂತಗಾನ ಉಲಿವ ದಿನ.!
ಬೇವಿನಾ ಹೂಗಳ ಮಕರಂದ ಹೀರುತ ಭೃಂಗ
ಸಂತಸದಿ ಸುಸ್ವರದಿ ಝೇಂಕರಿಸಿ ಹಾರುವ ದಿನ.!

ತ್ರೇತಾಯುಗದಿ ಶ್ರೀರಾಮ ವಾಲಿಯ ವಧೆಮಾಡಿ
ಧರ್ಮ ಸಂಸ್ಥಾಪನೆಗೆ ಮುನ್ನುಡಿ ಬರೆದ ದಿನ.!
ಶಾಲಿವಾಹನ ಶೌರ್ಯದಿ ಅರಿಗಳಾ ನಿಗ್ರಹಗೈದು
ದಿಗ್ವಿಜಯದಾ ದುಂದುಭಿ ಮೊಳಗಿಸಿದಾ ದಿನ.!

ಚತುರ್ಮುಖ ಬ್ರಹ್ಮನಿಂದ ಸೃಷ್ಠಿ ಕಾರ್ಯವಾಗಿ
ಸತ್ಯಯುಗ ಆರಂಭವಾದ ಮಹೋನ್ನತ ದಿನ.!
ಪ್ರತಿಯುಗಕು ವರ್ಷದಾ ಮೊದಲ ದಿನವಾಗಿ
ಹಬ್ಬದಂತೆ ಸಗ್ಗದಂತೆ ಯುಗಾದಿ ಮೈದಳೆದ ದಿನ.!

ಪಂಚಾಂಗ ಬದಲಿಸಿ ಪಂಚೇಂದ್ರಿಯ ಅರಳಿಸಿ
ನವ ವರ್ಷಕೆ ಸ್ವಾಗತ ಕೋರುವ ಪವಿತ್ರ ದಿನ.!
ಅಭ್ಯಂಜನ ಮಾಡಿ ಕುಲದೈವ ಇಷ್ಟದೈವ ಪೂಜಿಸಿ
ಅಣುತೃಣಕಾಷ್ಟಗಳಿಗೂ ಒಳಿತ ಬೇಡುವ ಪುಣ್ಯದಿನ.!

ಬೇವು-ಬೆಲ್ಲಗಳ ಹಂಚುತಾ ಜೊತೆಗೂಡಿ ತಿಂದು
ಸಕಲರಿಗೂ ಮಂಗಳವ ಬಯಸುವ ಶುಭದಿನ.!
ಕಹಿ ಮರೆತು ಸಿಹಿ ನೆನೆದು ಬರುವ ಕಷ್ಟಸುಖಗಳ
ಸಮಚಿತ್ತದಿ ಎದುರಿಸಲು ಮನಮಾಡುವ ದಿನ.!

ಹೊಸ ವರ್ಷದ ಹೊಸ ಹರ್ಷದ ಸಂಭ್ರಮಗಳ
ಹರಿಸಿ ನಿಂದ ವರ್ಷದಾ ಮೊಟ್ಟಮೊದಲ ದಿನ
ನವ ಕನಸು ನವ ಭರವಸೆ ನವ ಸಂಕಲ್ಪಗಳ
ಸ್ಫುರಿಸಿ ಸುರಿಸಿ ನಿಂದ ಯುಗಾದಿ ಹಬ್ಬದಾ ದಿನ.!

✍️ಎ.ಎನ್.ರಮೇಶ್. ಗುಬ್ಬಿ.