ಹೊಸ ದಿಗಂತದ ಅಂಚಿನಲಿ ಭರವಸೆಯ ಜ್ಯೋತಿಯಾಗಿ ಬರಲಿ ಯುಗಾದಿ 
ನಸು ಹಾಸವನು ಮೊಗದಲಿ ತರುತಲಿ ಮನಕೆ ಪ್ರೀತಿಯಾಗಿ ಬರಲಿ ಯುಗಾದಿ

ಹರಿತ ಮಾತುಗಳ ಮೊನಚ ಅಳಿಸುತ ಮಾರ್ದವತೆ ಮೂಡುತಿರಲಿ 
ದುರಿತ ಕಾಲಗಳ ದುಗುಡವ ಮರೆಸುತ ಶಾಂತಿಯಾಗಿ ಬರಲಿ ಯುಗಾದಿ

ಮನೆಯ ಅಂಗಳದ ಕಸವ ಗುಡಿಸುತ ಶುದ್ಧತೆಯ ತರುತಲಿರಲಿ
ಮನದ ಅಂಗಣದ ತಮವ ದೂಡುತಲಿ ಕಾಂತಿಯಾಗಿ ಬರಲಿ ಯುಗಾದಿ 

ಸಂಸ್ಕೃತಿಯು ಅಚ್ಚಳಿಯದೆ ಜನಮಾನಸದಲಿ ಸದಾ ಉಳಿಯುತಿರಲಿ 
ಸಂಸ್ಕಾರದ ಬಲದಲಿ ಗೆಲುವ ಪಡೆಯುತ ನೀತಿಯಾಗಿ ಬರಲಿ ಯುಗಾದಿ

ಬದುಕ ಬವಣೆಯದು ಮುಳ್ಳ ನಡುವಿನ ಹೂವಂತೆ ಬಲ್ಲಳು ಸುಜಿಯು 
ಬೆಳಕ ಬೆಳಗುತ ಬುವಿಗೆ ಆಧ್ಯಾತ್ಮದ ಕ್ರಾಂತಿಯಾಗಿ ಬರಲಿ ಯುಗಾದಿ 

  ✍️ ಸುಜಾತಾ ರವೀಶ್  
ಮೈಸೂರು