ಸುಡುವ ಮರುಭೂಮಿಯೊಳು ಒರತೆ ಝಲ್ಲೆಂದಂತೆ ನೀನೊಲಿದು ಬಾ/
ಭೃಂಗಗಾನದ ಲಯಕೆ ಯುಗಾದಿ ಶ್ರುತಿಗೊಂಡಂತೆ ನೀನೊಲಿದು ಬಾ//

ಒಬ್ಬಟ್ಟಿನೊಡನೆ ತುಪ್ಪ ಬೆರೆಸಿದ ಘಮಲು ನಿನ್ನೊಡನಿದ್ದ ಅಮಲು!
ಹಬ್ಬದೂಟದ ನಡುವೆ ಹಿಗ್ಗೊಂದು ಬಿರಿದಂತೆ ನೀನೊಲಿದು ಬಾ//

ಈ ಯುಗಾದಿಗೆ ಕಟ್ಟಿಹೆ ತಳಿರುತೋರಣದಂತೆ ನಿನ್ನೊಲವ ನೆನಪ!
ಮಧುಶಾಲೆಯೇ ಜಾರಿ ಕಣ್ಣೊಳಗಿಳಿದು ಹರಿದಂತೆ ನೀನೊಲಿದು ಬಾ//

ಬೇವೆಲ್ಲ ನಾನುಂಡು ಬೆಲ್ಲವನೆ ಮೆಲ್ಲಿಸುವೆ ಓ ಆತ್ಮ ಸಖಿಯೇ..
ಮರದಂಚಲ್ಲಿ ಮಿನುಗಿದ ಮಳೆಹನಿಯ ಮುತ್ತಾಗಿ ನೀನೊಲಿದು ಬಾ//

ಅರುಣನುದಯಕೆ ಕಾದ ಸೂರ್ಯಕಾಂತಿಯ ಪಕಳೆ ನನ್ನ ಹೃದಯವಿದೀಗ/
ಹಳದಿ ಹೂವಿನ ತರುವು ಹೊನ್ನ ಮಳೆ ಕರೆದಂತೆ ನೀನೊಲಿದು ಬಾ//

ಪ್ರಕೃತಿಯೊಡನೆ ದೇಹ- ಪ್ರಕೃತಿಗೂ ಸಿಂಚನ ನವನವೀನತೆಯ ಲಾಸ್ಯ/
ಕಾವಳದ ಕೂಪವನು ಬೆಳಕು ಚುಂಬಿಸಿದಂತೆ ನೀನೊಲಿದು ಬಾ//

ಬಣ್ಣಬಣ್ಣದ ರಂಗವಲ್ಲಿಯ ಲಜ್ಜೆಯಲೂ ಮೂಡಿಹುದು ನಿನ್ನದೇ ಪದುಮ ಬಿಂಬ!
ಫಲಗುಣನ ಒಡಲಿಂದ ಚೈತ್ರಿಕೆಯರಳರಳಿ ಬಂದಂತೆ ನೀನೊಲಿದು ಬಾ//

ಜಗದ ಆದಿಯ ಪರ್ವ ಸಾರುತ್ತಲಿದೆ ಸತತ ಪ್ರಣಯವೊಂದೇ ಅನಂತ/
ಅನುರಾಗದಮೃತವ ಮೊಗೆಮೊಗೆದು ಸುರಿವಂತೆ ನೀನೊಲಿದು ಬಾ//

ಸಮಭಾವ ಸಮಚಿತ್ತ ‘ಸೌಮ್ಯ ‘ ನವ್ಯೋತ್ಸವಕೆ ಆದಿ ಯುಗಾದಿ/
ವಜ್ಜೆಹೃದಯವ ಹೊತ್ತ ಕಣ್ಣಲಗು ಸೆಳೆದಂತೆ ನೀನೊಲಿದು ಬಾ//

✍️ಡಾ.ಸೌಮ್ಯ ಕೆ.ವಿ.
ಯಲ್ಲಾಪೂರ