ಬಂಗಾರದ ಹಣತೆಯಲ್ಲೂ ಕತ್ತಲು ಕಾಡತೂಸಿನ ರಕ್ತದ ಕಲೆಗಳ ಚಿತ್ತಾರ. ಕಣ್ಣಂಚಿನ ದುಃಖಾಶ್ರವಗಳು
ಸೂರ್ಯನಿಲ್ಲದೆ ನೇತಾಡುತ್ತಿರುವ ರಾತ್ರಿಗಳ ಚಿತ್ಕಾರ.
ಅಹಂಕಾರದ ಆವಿಸ್ನಾನಕ್ಕೆ ಬೆರಳು ತುದಿಯ ತುಪಾಕಿ.
ಹಸಿರ ಬಸಿರನ್ನೆ ಹೊಸಕಿ ಹಾಕುವ ರಕ್ತ ಬಿಂದುಗಳು ಅಗ್ನಿಕೆಂಡದ ಮಳೆ .
ಕೋವಿ ತುದಿಯಲ್ಲಿ ಕುಲಾವಿಗಳ ಜೋತು, ಹೊಕ್ಕಳು ಬಳ್ಳಿ ಹರಿದ ಪ್ರಸವ ವೇದನೆ.
ಮೊಲೆಯ ತುಂಡೊಂದು ಕತ್ತರಿಸಿ ಬಿದ್ದಿದೆ, ಜೋಗುಳದ ಕಂದಮ್ಮಗಳಿಗೀಗ ಉಳಿದಿರುವುದು ಕಳ್ಳಿಹಾಲು.
ಸೂರ್ಯಪಾನದ ಬೀಜ ಬೂದಿಯಾಗುವ ಮುನ್ನ, ಮೊಳೆಕೆಯೊಡೆಯಲಿ ಬೀಡು ಬದುಕ ಬಸಿರು.
ಶಾಂತಿ ಬೀಜಗಳನ್ನೇ ರಕ್ತದೊಕಳಿಗೆ ಬಳಿಸಿದ ನಿನಗೆ ಯಾವ ಬುದ್ದನ ನಿರೀಕ್ಷೆಯಿದೆ.
ನಿನ್ನ ಬೆರಳು ತುದಿಯ ಅಣ್ವಸ್ತ್ರವೇ ಅಹಂ,ಕತ್ತರಿಸಿ ಬೀಡು ಅಂಗುಲಿಮಾಲನಂತೆ ಸರಣಿಯಾಗಿ.
ಅಗೋ ಅಲ್ಲಿ ನೋಡು ತೊಗಲಚೀಲದ ಶಾಂತಿಧೂತ ಮುಗುಳ್ನಗುತ್ತಿದ್ದಾನೆ.
ಅವನ ಬೆವರ ಹನಿ ತೀರಲಾರದ ಶತಮಾನಗಳ ದಾಹಕ್ಕೆ ತೊಟ್ಟಿಕ್ಕುತ್ತಿದೆ. ಮನುಜರೆಲ್ಲರೆದೆಯ ಶಿವ ನೀನೇ ಆಗಿದ್ದರೆ ,
ಮುಖದ ನಗುವಿನಲ್ಲೇಕೆ
ವಿಷದ ಬೀಜ.
ಬಿಳಿಹಸುಗಳ ಹಯನಕ್ಕೆ ಕೀಲವಿಲ್ಲದ ಚಕ್ರ ನೊಗವಿಲ್ಲದ ಬಂಡಿ, ಪ್ರಾರ್ಥನೆಗಳೆಲ್ಲಾ ಮುಗಿದ ಮೇಲೇ ಗುಂಡು ತುಪಾಕಿಗಳ ಗಂಟೆ ಸದ್ದೇ?
ನೆಲದ ಬಸಿರಿಗೆ ಅದೇ ಬೆರಳು ಗುಂಡಿಗಳೇ ನಿನ್ನ ಕಾಣಿಕೆಗಳಾದರೆ, ನಿನ್ನ ಗಾಡ ಮೌನಕ್ಕೊಂದು ಇರಲಿ ಧಿಕ್ಕಾರ. ಶಾಂತಿ ಬೋಧಿಸಿದ ಆ ಕರುಣಾಮೂರ್ತಿಗಳು ಎಲ್ಲಿದ್ದಾರೋ ಏನೋ ? ತಿರದ ದಾಹ ಮುಗಿಯದ ಯುದ್ದಕ್ಕೆ, ಶತ ಶತಮಾನಗಳಿಂದಲೂ ರೋಧಿಸುತ್ತಿರುವ ಸಮಾಧಿಗಳೇ ಸಾಕ್ಷಿ .
✍️ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ
ಬೆಳಗಾವಿ
I think this is one of the most important information for me. And i’m glad reading your article. But want to remark on few general things, The website style is perfect, the articles is really great : D. Good job, cheers
LikeLike