ಕ್ರೌರ್ಯತೆ ತುಂಬಿದ ಜಾತ್ರೆಯಲ್ಲಿ
ನಡೆಯುತ್ತಿದೆ ನರಮೇಧ
ಜೀವಗಳ ರಕ್ತದೋಕುಳಿಯಲ್ಲಿ
ಅರಳುತ್ತಿದೆ ಕ್ರೋಧ.
ಘನಘೋರವಿದು! ಮಹಾಯಾಗವಿದು ನಿಗೂಡ ಭಾವ? //೧//

ಒಡಮೂಡಿದ ಪರಿ ಅಚ್ಚರಿಯಾಗಿದೆ
ಒತ್ತೊತ್ತಿ ಬರುತ್ತಲಿದೆ ಬತ್ತಿಹೋಗದೆ ಉಳಿದಿದೆ
ಸಮಸ್ಥಿತಿ ಪರಿಸ್ಥಿತಿ ನೆಮ್ಮದಿ ಕೊಲೆಯಾಗುತ್ತಿದೆ
ಜೀವನಾಡಿಯ ಶಕ್ತಿ ಕುಗ್ಗಿ ಹೋಗುತ್ತಿದೆ
ಘನಘೋರವಿದು! ಮಹಾಯಾಗವಿದು ನಿಗೂಢ ಭಾವ? //೨//

ಮಹಾಯಾಗದಲ್ಲಿ ದಹಿಸುತ್ತಿದೆ ಸಮಿತೆಯಾಗಿ
ಮಾನವೀಯತೆ ಪ್ರೀತಿ-ವಾತ್ಸಲ್ಯ ಮಮಕಾರ
ಸುಟ್ಟು ಕರಕಲಾದರೂ ಬಯಸುತ್ತಿದೆ ಬೂದಿ-ಬಸ್ಮ!
ಜೀವಗಳನ್ನು ಬಿಸಿನೆತ್ತರನು ಹಸು ಮಕ್ಕಳನು
ಬಲಿಪಡೆದ ದಿವ್ಯಾಸ್ತ್ರ ಸ್ವಾರ್ಥದ ಮರ್ಮ ದಿಗ್ದರ್ಶನ, ದಿಙ್ಮೂಡ !
ಘನಘೋರವಿದು! ಮಹಾಯಾಗವಿದು ನಿಗೂಡಭಾವ? //೩//

ಬಣ್ಣನೆಯ ಬಡಿವಾರ ಮೆಲ್ನುಡಿಯ ಉಪಕಾರ
ಅಪೂರ್ವ! ಕರಗತ ಪ್ರವೃತ್ತಿಗೆ ಸಾಹುಕಾರ
ಆಧಿಪತ್ಯದಿ ತ್ರಿವಿಕ್ರಮ ಕಾಲಚಕ್ರಾಧಿಪತಿ
ಮುಖವಾಡ ಹೊತ್ತ ಬುದ್ಧ ಬಸವಾದಿ ಸಂತತಿ
ಘನಘೋರ! ಮಹಾಯಾಗವಿದು ನಿಗೂಡ ಭಾವ? //೪//

ಡಾ.ನವೀನ್ ಕುಮಾರ್

ಶಿಕ್ಷಕರು,ಯಲ್ಲಾಪುರ